ಕನೆಕ್ಟ್ ಆಗುವುದರಿಂದ…

ಕನೆಕ್ಟ್ ಆಗುವುದು ಕಾರ್ಯಸಾಧನೆಗೆ ಸಹಕಾರಿಯೆಂಬ ನನ್ನ ಲೇಖನವನ್ನು ಮುಂದುವರಿಸಿ, ಕನೆಕ್ಟ್ ಆಗುವುದರಿಂದ ಆಗುವ ಪ್ರಯೋಜನಗಳನ್ನು ಮತ್ತಷ್ಟು ವಿಸ್ತರಿಸುವ ಯೋಚನೆಯ ಫಲವೇ ಈ ಲೇಖನ. ಬೆಂಗಳೂರಿನ ಓದುಗರೂ, ಅಲ್ಲಿ ಲೆಕ್ಕ ಪರಿಶೋಧಕರಾಗಿ ಸೇವೆ ಮಾಡುತ್ತಿರುವವರೂ ಆದ ಶ್ರೀಯುತ ರಾಜುರವರ ಮೊಬೈಲ್ ಕರೆಯೇ ಈ ಲೇಖನಕ್ಕೆ ಪ್ರೇರಣೆ. ಈ ವಿಚಾರವನ್ನು ಅನ್ವಯಿಸಬಹುದಾದ ಅನ್ಯ ಕ್ಷೇತ್ರಗಳಾವುವುದಾದರೂ ಇದ್ದರೆ ತಿಳಿಸಿ ಎಂದಿದ್ದಾರೆ ಮಿತ್ರ ರಾಜು. ಅವರ ಕುತೂಹಲಕ್ಕೆ ಶಿರಬಾಗುತ್ತಾ ನನ್ನ ನಿಕಟ ಪೂರ್ವ ಲೇಖನಕ್ಕೆ ಕೆಲವು ಸಮರ್ಥನೆಗಳನ್ನು ಬರೆಯುತ್ತಿದ್ದೇನೆ.
ಗರ್ಭಾವಸ್ಥೆಯಿಂದಲೇ ಕನೆಕ್ಟ್ ಆಗುವ ಪ್ರಕ್ರಿಯೆಗಳು ನಡೆಯುತ್ತಲಿರುತ್ತವೆ ಎಂಬುದನ್ನು ಆಧ್ಯಾತ್ಮಿಕ ಜಗತ್ತು ಸಾಧಾರಣ ಒಪ್ಪುತ್ತದೆ.. ಮಹಾಭಾರತದಲ್ಲಿ ಅಭಿಮನ್ಯುವು ಚಕ್ರವ್ಯೂಹ ವಿದ್ಯೆಯನ್ನು ಗರ್ಭಸ್ಥಾವಸ್ಥೆಯಲ್ಲಿ ಕಲಿತನೆಂದು ಹೇಳಲಾಗಿದೆ. ವರ್ತಮಾನ ಪ್ರಪಂಚದಲ್ಲಿ ಇಂತಹ ವಿಚಾರಗಳನ್ನೂ ಒಪ್ಪುವ ಅನೇಕ ಘಟನೆಗಳು ನಮ್ಮ ಮುಂದಿವೆ. ಗೋವರ್ಧನದ ಬಾಲಕ ಐದರ ಹರೆಯದ ಭಾಗವತ ದಾಸ್ ಬ್ರಹ್ಮಚಾರಿ ಮತ್ತು ಅವನ ಸಹೋದರ ಹರಿವಂಶ ದಾಸ್ ಬ್ರಹ್ಮಚಾರಿ ಎಳೆಯ ವಯೋಮಾನದಲ್ಲಿಯೇ ಶ್ರೀಕೃಷ್ಣನ ಉಪದೇಶ, ತತ್ವ ಮತ್ತು ಕಥಾನಕಗಳನ್ನು ಶ್ಲೋಕ ಹಾಗೂ ಉದಾಹರಣೆಯೊಂದಿಗೆ ನಿಖರವಾಗಿ ಜನರ ಮುಂದಿಡುತ್ತಾರೆ. ಭಾಗವತ್‌ದಾಸ್‌ಗೆ ಈಗಾಗಲೇ ಕೋಟ್ಯಾಂತರ ಭಕ್ತರಿದ್ದಾರೆ. ಈ ಭಕ್ತರೊಂದಿಗೆ ಅವನು ಹೇಗೆ ಕನೆಕ್ಟ್ ಆದ. ಗರ್ಭಸ್ಥರಾಗಿದ್ದಾಗಲೇ ಶ್ರೀಮದ್ಭಾಗವತವನ್ನು ಮಕ್ಕಳು ಆಲಿಸಿದ್ದಾರೆ ಎನ್ನುವರು ಭಾಗವತ್‌ನ ಹೆತ್ತವರು. ಭಾಗವತ್‌ನ ಮುದ್ದು ಮಾತು, ಮುಗ್ಧ ನಗು, ತೊದಲು ಸಂದೇಶಕ್ಕೆ ಭಕ್ತಕೋಟಿ “ಫಿದಾ” ಆಗಿದೆ. ಸಂಸ್ಕಾರ ಪಾಠವನ್ನು ಗರ್ಭಸ್ಥರಾಗಿದ್ದಾಗಲೇ ಕನೆಕ್ಟ್ ಮಾಡಿದರೆ ಅವರು ಹೊರ ಜಗತ್ತಿಗೆ ಬಂದೊಡನೆ ಅತ್ಯಂತ ಹೆಚ್ಚು ಮಹಾತ್ಮ್ಯೆ ಹೊಂದುತ್ತಾರೆ.
ಗೋಪಾಕರಿಗೆ, ಎಂದರೆ ಹಸುಗಳನ್ನು ಸಾಕುವವರಿಗೆ ಕನೆಕ್ಟ್ ಆಗುವುದರ ಬಗ್ಗೆ ವಿಶೇಷ ಮತ್ತು ರೋಚಕ ಅನುಭವಗಳಿವೆ. ಐದಾರು ಜನರಿರುವ ಒಂದು ಮನೆಯನ್ನು ಗಮನಿಸಿ ಹೇಳುವುದಾದರೆ; ಆ ಮನೆಯ ಎಲ್ಲ ಗೋವುಗಳೂ ಮನೆಯ ಪ್ರತಿಯೊಬ್ಬರಲ್ಲೂ ಒಂದೇ ತೆರನಾಗಿ ಸ್ಪಂದಿಸುವುದಿಲ್ಲ. ಮನೆಯ ಕೆಲವರು ಬಂದಾಗ ದನ ಎದ್ದು ನಿಲ್ಲುತ್ತದೆ, ಕಿವಿ ನೆಟ್ಟಗೆ ಮಾಡಿ ಪ್ರೀತಿಯಿಂದ ನೋಡುತ್ತದೆ. ಆ ವ್ಯಕ್ತಿಗಳು ಆ ಪಶುಗಳ ಜೊತೆಗೆ ಕನೆಕ್ಟ್ ಆಗಿದ್ದಾರೆಂದು ಇದರ ಅರ್ಥ. ಹಟ್ಟಿಯ ಪಕ್ಕದಲ್ಲೇ ಹೋದರೂ ಹಟ್ಟಿಯನ್ನೂ ನೋಡದೆ, ದನಗಳ ಹತ್ತಿರದಿಂದ ಸುಳಿದರೂ ಅದನ್ನು ಸ್ಪರ್ಶಿಸದ ಮನೆ ಮಂದಿ ಬಂದಾಗ ದನಗಳು ಕಿವಿ ನಿಮಿರಿಸುವುದಿರಲಿ, ಎದ್ದು ಕೂಡಾ ನಿಲ್ಲವು. ಹಾಲು ಕರೆಯುವಾಗ ತನ್ನೊಂದಿಗೆ ಕನೆಕ್ಟ್ ಆದ ವ್ಯಕ್ತಿಗೆ ಸರಿಯಾಗಿಯೇ ದನ ಹಾಲು ಇಳಿಸುತ್ತದೆ ಎಂಬುದು ಹಗುರದ ವಿಚಾರವಲ್ಲ. ಕನೆಕ್ಟ್ ಆಗದೇ ಇದ್ದರೆ ತುಳಿಯುವುದು, ಹಾಯುವುದು, ಕಾಲು ಜಾಡಿಸುವುದು, ಬುಸುಗುಟ್ಟುವುದೂ ಸೇರಿದಂತೆ ವಿಕಾರ ವರ್ತನೆಗಳನ್ನು ದನಗಳು ತೋರಿಸುತ್ತವೆ. ಕರುವಾದರೂ ಅಷ್ಟೆ, ಅದನ್ನು ಮುದ್ದು ಮಾಡಿದವರ ಹತ್ತಿರಕ್ಕೆ ಬಂದು ಬಾಲ ನಿಮಿರಿಸಿಕೊಂಡು ಆಟವಾಡಲು ತೊಡಗುತ್ತದೆ. ಕನೆಕ್ಟ್ ಆಗುವುದರಿಂದ ಆಗುವ ಒಳಿತುಗಳು ಒಂದೇ ಎರಡೇ!
ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಇತ್ಯಾದಿಗಳು, ಮನೆಯವರು ಹೊರಗಡೆ ಹೋಗುವಾಗ ಜೊತೆಗೂಡಿ ಬರುತ್ತವೆಯೆಂದಾರೆ ಅದು ಅವರು ಆ ಪ್ರಾಣಿಗಳೊಂದಿಗೆ ಕನೆಕ್ಟ್ ಆಗಿರುವುದರ ಪ್ರಭಾವ. ಹೊರಗೆ ಹೋದವರು ಮರಳಿದಾಗ ಅವು ಅವರ ಹತ್ತಿರ ಬಂದು ಸಂತಸ ಪಡುವ ವರ್ತನೆ ತೋರಿದರೆ ಅದೂ ಕನೆಕ್ಟ್ ಆದುದರ ಪ್ರಭಾವ, ಪ್ರಾಣಿಗಳನ್ನು ಮಿದುವಾಗಿ ಮುಟ್ಟಿದರೂ ಅವು ನಮ್ಮ ಜೊತೆ ಕನೆಕ್ಟ್ ಆಗುತ್ತವೆ. ಮಾವುತನ ಜೊತೆ ಆನೆಗಳು ಕನೆಕ್ಟ್ ಆಗುತ್ತವೆ. ಮಾವುತನ ವಶವಿರುವ ಆನೆಗೆ ಒಂದು ಹಣ್ಣು ಕೊಡೋಣ. ಅದು ತನ್ನ ಸೊಂಡಿಲೆತ್ತಿ ಅಭಿಮಾನ ವ್ಯಕ್ತ ಪಡಿಸುತ್ತದೆ. ಕನೆಕ್ಟ್ ಆಗಲು ನಮ್ಮಲ್ಲಿ ಸಕಾರಾತ್ಮಕ ವರ್ತನೆಗಳು ಇರಲೇ ಬೇಕು.
ಅಯ್ಯಪ್ಪ ಸ್ವಾಮಿಯು ಅಮ್ಮನ ಕಾಯಿಲೆಗೆ ಔಷಧಿಗಾಗಿ ಹುಲಿ ಹಾಲನ್ನು ಹುಲಿಯ ಬೆನ್ನೇರಿಯೇ ತಂದನೆಂಬ ಕಥೆ ಕ್ರೂರ ಮೃಗಗಳೂ ಕನೆಕ್ಟ್ ಆಗುತ್ತವೆಂಬುದನ್ನು ಸಾಬೀತು ಪಡಿಸುತ್ತದೆ. ಎಂಡ್ರೋಕ್ಲ್ ಎಂಬ ಯುವಕನಿಗೆ ಸಿಂಹದ ಬಾಯಿಗೆ ತಳ್ಳುವ ಶಿಕ್ಷೆಯನ್ನು ರಾಜ ನೀಡಿದ ಕಥೆಯನ್ನು ನೀವು ಓದಿರಲೂ ಬಹುದು. ರಾಜಭಟರು ಹಸಿದ ಸಿಂಹದ ಬೋನಿನೊಳಗೆ ಎಂಡ್ರೋಕ್ಲ್‌ನನ್ನು ತಳ್ಳಿ ಬಾಗಿಲು ಜಡಿದರೆ ಎಂಡ್ರೋಕ್ಲನ ಪಾದದ ಬಳಿ ಸಿಂಹವು ಮಲಗುತ್ತದೆ. ಸಿಂಹದ ಕಷ್ಟಕಾಲದಲ್ಲಿ ಎಂಡ್ರೋಕ್ಲ್ ಮೆರೆದ ಮಾನವೀಯತೆಗೆ ಸಿಂಹವು ಕನೆಕ್ಟ್ ಆಗಿತ್ತು.
ಪ್ರತಿಯೊಂದು ಜೀವಿಗೂ ಆತ್ಮವಿದೆ. ಜೀವಾತ್ಮ ಎಂದೂ ಹೇಳುತ್ತೇವೆ. ಜೀವಾತ್ಮ ಎಂದರೆ ಭಗವದಂಶವೆಂದು ನಮ್ಮ ನಂಬಿಕೆ. ನಮಗೆ ಜೀವಿಗಳೆಲ್ಲವನ್ನೂ ಕನೆಕ್ಟ್ ಆಗಲು ಸಾಧ್ಯವಿದೆ. ಕನೆಕ್ಟ್ ಆಗುವುದರಿಂದ ಪ್ರಯೋಜನವೇ ಹೇರಳ. ಗಿಡ ನೆಟ್ಟ ಮಾತ್ರಕ್ಕೆ ಅದು ಫಲನೀಡುವ ಹೆಮ್ಮರವಾಗದು. ಮಾಲಿಯು ಅದರ ಎಲ್ಲ ಅಗತ್ಯಗಳನ್ನೂ ಪೂರೈಸುತ್ತಾ ಅದರ ಬಳಿಗೆಹೋಗಿ ಅವುಗಳನ್ನು ಮುಟ್ಟುತ್ತಾ, ಖುಷಿಯಿಂದ ಗಮನಿಸುತ್ತಾ ಕನೆಕ್ಟ್ ಆಗಿದ್ದರೆ ಮಾತ್ರ ಆ ಗಿಡ ಬಲವಾಗಿ ಬೆಳೆದು ಎಲ್ಲವನ್ನೂ ನೀಡುತ್ತದೆ.
ಕಚೇರಿಯೊಂದಕ್ಕೆ ಯಾವುದೋ ಫಲಾಪೇಕ್ಷೆಯನ್ನಿಟ್ಟು ಸಾರ್ವಜನಿಕರು ಬರುತ್ತಾರೆ. ಆಗ ಕಛೇರಿಯವರು ಬಿಗುಮಾನ ತೋರಿದರೆ, ಅಸಡ್ಡೆ ತೋರಿದರೆ, ಕೆಲಸ ಮಾಡಿಕೊಡಲು ಲಂಚದ ಒಪ್ಪಂದ ಮಾಡಿದರೆ ಅವರು ಯಾರೊಂದಿಗೂ ಕನೆಕ್ಟ್ ಆಗುವುದಿಲ್ಲ. ಕನೆಕ್ಟ್ ಆಗದೆ ಪೀಡಿಸಿದರೆ; ಆಗ ಬಾ, ಈಗ ಬಾ, ಮತ್ತೆ ಬಾ, ನಾಳೆ ಬಾ, ಹೋಗಿ ಬಾ ಎಂದು ಹಿಂಸಿಸಿದರೆ ಅವರು ಮಾಡುವ ಕೆಲಸ ಅಥವಾ ಸೇವೆ ಗ್ರಾಹಕರ ಮನಸೇರದು. ಮರುದಿನ ಕಚೇರಿಯ ಆ ವ್ಯಕ್ತಿಯನ್ನು, ಆತ ಎದುರು ಬದುರಾದರೂ ವಂದನೆ ಅಥವಾ ನಗುಭರಿತ ನಮನ ಕೂಡಾ ಮಾಡುವುದಿಲ್ಲ. ಅಧ್ಯಾಪಕರೊಬ್ಬರನ್ನು ವಿದ್ಯಾರ್ಥಿಗಳು ಅಭಿಮಾನದಿಂದ ಕಾಣುತ್ತಾರೆ. ಇದು ಅವರು ಮಕ್ಕಳೊಂದಿಗೆ ಕನೆಕ್ಟ್ ಆಗಿರುವ, ಮನೆಯವರು ಕನೆಕ್ಟ್ ಅಗಿರುವ ಅಂಶಗಳನ್ನು ಅವಲಂಬಿಸಿರುತ್ತದೆ. ಕನೆಕ್ಟ್ ಆಗದ ಕೆಲವು ಅಧ್ಯಾಪಕರು ಇದ್ದಾರೆ. ಅವರು ತರಗತಿಯಲ್ಲಿ ತೋರಿದ ಪ್ರತಾಪ, ಅಸಂಬದ್ಧ ವೃತ್ತಿ ಕೌಶಲ ಕಾರಣದಿಂದ ಮಕ್ಕಳೊಂದಿಗೆ ಕನೆಕ್ಟ್ ಆಗಿರದೇ ಇರಬಹುದು. ಕನೆಕ್ಟ್ ಆಗಲು ಮಾನವೀಯತೆಯೇ ಮೊದಲ ಹೆಜ್ಜೆಯಾಗುತ್ತದೆ. ವ್ಯಾಪಾರಿಗಳಿರಲಿ, ಉದ್ಯಮಿಗಳಿರಲಿ, ಯಜಮಾನನಿರಲಿ, ರಾಜಕೀಯ ನೇತಾರನಿರಲಿ… ಯಾರೇ ಆದರೂ ಕನ್ನಕ್ಟ್ ಆಗದೇ ಉನ್ನತಿಗೇರುವುದು ಅಸಾಧ್ಯ. ಕನೆಕ್ಟ್ ಆಗಲು ತಡವೇಕೆ? ಈಗಿನಿಂದಲೇ ನಾವು ಎಲ್ಲರೊಂದಿಗೆ, ಎಲ್ಲದರೊಂದಿಗೆ ಕನೆಕ್ಟ್ ಆಗಲು ಶುದ್ಧರಾಗೋಣ, ಸಿದ್ಧರಾಗೋಣ.
-ರಮೇಶ ಎಂ. ಬಾಯಾರು, ಬಂಟ್ವಾಳ
ಚಿತ್ರ ಕೃಪೆ: ಇಂಟರ್ನೆಟ್ ತಾಣ