ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?
ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ಒದಗಿಸಿದ ಕೀರ್ತಿ ಕಿಟೆಲರದೆಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದಕ್ಕಾಗಿ ಕಿಟೆಲರು ಕನ್ನಡದ ಎಲ್ಲ ಪ್ರಾಚೀನ ಗ್ರಂಥಗಳ, ಕಡತಗಳ, ಶಾಸನಗಳ, ಜನಸಾಮಾನ್ಯರ ಆಡುನುಡಿಗಳ ಅಧ್ಯಯನ ಮಾಡಿದರು. ಅವರ ದುರದೃಷ್ಟವೆಂದರೆ ಅವರಿಗೆ ಪಂಪನು ಬರೆದ 'ವಿಕ್ರಮಾರ್ಜುನ ವಿಜಯ' ಸಿಗದೇ ಹೋದದ್ದು. ಸಿಗಲಿಲ್ಲ ಎಂದರೆ ಏನರ್ಥ? ಆ ಸಮಯದಲ್ಲಿ ಅಂಥದೊಂದು ನಿಜವಾಗಿ ಇರಲಿಲ್ಲವೆಂದೇ? ಅಥವಾ ಲಂಡನ್, ಪ್ಯಾರಿಸ್, ಜರ್ಮನಿಯ ಲೈಬ್ರರಿಗಳಿಗೆ ಯಾರಾದರೂ ಹೊತ್ತೊಯ್ದರೆಂದೇ? ಎಂಥದೂ ಇಲ್ಲ. ಅದು ನಮ್ಮವರೇ ಆದ ಮಡಿವಂತರ ಮನೆ ಮಠಗಳ ಅಟ್ಟದಲ್ಲಿ, ಬಟ್ಟೆಯಲ್ಲಿ ಸುತ್ತಿಟ್ಟದ್ದು ತಾಳೆಗ್ರಂಥಗಳ ರೂಪದಲ್ಲೇ ಅಡಗಿತ್ತು. ಅಂಥ ಎಷ್ಟೋ ಪ್ರಾಚೀನ ಗ್ರಂಥಗಳನ್ನು ಬೇಡಿ ಪಡೆದು ಕಣ್ಣಲ್ಲಿ ಕಣ್ಣಿಟ್ಟು ಓದಿ ಅರ್ಥೈಸಿ ಇತರ ಪ್ರತಿಗಳೊಂದಿಗೆ ತುಲನೆ ಮಾಡಿ ಶುದ್ಧ ಪ್ರತಿ ತಯಾರಿಸಿ ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಿದ್ದರಿಂದಾಗಿಯೇ ಇಂದು ನಾವೆಲ್ಲ ಕನ್ನಡದ ಸಾಹಿತ್ಯ ಶ್ರೀಮಂತಿಕೆಯನ್ನು ಹೆಮ್ಮೆಯಿಂದ ಹಾಡಿ ಜಗತ್ತಿಗೆ ತೋರಿಸುತ್ತಿದ್ದೇವೆ.
ಹಾಗೆ ನೋಡಿದರೆ ಅಟ್ಟಗಳಲ್ಲಿ ಇಲ್ಲವೇ ಕಣಜಗಳಲ್ಲಿ ಉಳಿದುಹೋಗಿ ಗೆದ್ದಲುಗಳಿಗೆ ಆಹಾರವಾದ ಗ್ರಂಥಗಳೆಷ್ಟೋ ನಮ್ಮ ಗಮನಕ್ಕೇ ಬಂದಿಲ್ಲ. ಕವಿರಾಜಮಾರ್ಗಕಾರ ಹೇಳುವ ಅಸಗ ಮತ್ತು ಗುಣನಂದಿ ಕವಿಗಳ ಕೃತಿಗಳನ್ನು ನಾವು ಇನ್ನೂ ನೋಡಲಾಗಿಲ್ಲ. ಪೊನ್ನನು ಬರೆದಿರುವ ಭುವನೈಕರಾಮಾಭ್ಯುದಯ, ರನ್ನನದೇ ಆದ ಚಕ್ರೇಶ್ವರಚರಿತೆ, ಪರಶುರಾಮಚರಿತೆಗಳನ್ನೂ ನೋಡಲಾಗಿಲ್ಲ. ಕೆಲವು ಶಾಸನಗಳಲ್ಲಿ ಕಂಡುಬರುವ ವಿದ್ವತ್ಪೂರ್ಣ ಬರಹಗಳಿಗೆ ಪ್ರೇರಣೆಯಿತ್ತ ಕವಿಗಳಾರು ಅಥವಾ ಕೃತಿಗಳಾವುವು ಎಂಬ ಸಂದೇಹಕ್ಕೂ ಪರಿಹಾರ ಸಿಕ್ಕಿಲ್ಲ.
ಶಾಸನಗಳ ಮೂಲಕ ಕರ್ನಾಟಕ ಇತಿಹಾಸದ ಪುನರ್ರಚನೆ ಮಾಡಿದ ರೈಸ್, ಫ್ಲೀಟರಾಗಲೀ, ಪ್ರಾಚೀನ ಗ್ರಂಥಗಳನ್ನು ಪರಿಶೀಲಿಸಿ ತಿದ್ದಿ ಗ್ರಂಥಸಂಪಾದನೆಯ ಹೊಳಹು ತೋರಿಸಿಕೊಟ್ಟ ಕಿಟೆಲರಾಗಲೀ, ಹಳೆಯ ಹಸ್ತಪ್ರತಿಗಳನ್ನು ಮುದ್ರಣರೂಪಕ್ಕೆ ತಂದು ಚಿರಸ್ಥಾಯಿಯಾಗಿಸಿದ ಅಸಂಖ್ಯ ವಿದೇಶೀಯರಾಗಲೀ ನಮಗೆಲ್ಲ ಸದಾ ಪೂಜನೀಯರೇ. ತಮ್ಮ ದಿನನಿತ್ಯದ ಕರ್ತವ್ಯದ ಜೊತೆಜೊತೆಗೇ ಅವರು ಕನ್ನಡದ ಕೆಲಸವನ್ನು ಹವ್ಯಾಸದಂತಲ್ಲದೆ ವ್ರತದಂತೆ ಸಾಧಿಸಿದರು. ಅದಕ್ಕಾಗಿ ಅವರು ತಮ್ಮ ಕನ್ನಡ ಒಡನಾಡಿಗಳ ಹಾಗೂ ಪಂಡಿತರ ನೆರವನ್ನು ಪಡೆದಿದ್ದರೆಂಬುದೂ ಸತ್ಯಸ್ಯಸತ್ಯ. ಕನ್ನಡಿಗರು ತಮ್ಮನ್ನು ಹಾಡಿ ಕೊಂಡಾಡಲಿ ಎಂದೇನೂ ಅವರು ಈ ಕೆಲಸಗಳನ್ನು ಮಾಡಲಿಲ್ಲ.
ವಿದೇಶೀಯರೆಂದರೆ ಫರಂಗಿಯವರು, ಮ್ಲೇಚ್ಛರು ಎಂದು ತುಚ್ಛೀಕರಿಸುತ್ತಿದ್ದ ಅಂದಿನ ದಿನಗಳಲ್ಲಿ ಇಂಥ ಘನಕಾರ್ಯಗಳನ್ನು ಮಾಡಲು ಅವರಲ್ಲಿದ್ದುದು ಹೊಸತನವನ್ನು ಅರಿಯಬೇಕೆನ್ನುವ ಸಾಹಸೀ ಮನೋವೃತ್ತಿ. ಅಂಥ ಸಾಹಸ ಗುಣವನ್ನು ಮೈಗೂಡಿಸಿಕೊಂಡು ಜಾಗತಿಕ ಮಟ್ಟದಲ್ಲಿ ಪ್ರಕಾಂಡವಾಗಿ ಬೆಳಗಬೇಕಿದ್ದ ಕನ್ನಡಿಗರು ಇಂದು ಕಾಮಾಲೆಯ ಕನ್ನಡಕ ಧರಿಸಿಕೊಂಡು ಜಾತಿ ಪಂಗಡಗಳೆಂಬ ಹೊಲಸು ನೀರು ಎರಚಾಡುತ್ತಾ 'ಬಿರುದು ಗಳಿಸಲಿಕೆಸೆಪ ಹೆಸರು ಪಸರಿಸಲೆಸೆಪ ದುರಿತಗಳ್ಗೆಣೆಯುಂಟೇ?' ಎಂಬಂತೆ ರಾಡಿ ಎಬ್ಬಿಸುತ್ತಾ ಇರುವುದನ್ನು ನೋಡುತ್ತಿದ್ದೇವೆ.
ಜರ್ಮನ್ ಸಂಜಾತರಾದ ಫರ್ಡಿನೆಂಡ್ ಕಿಟೆಲ್ ಅವರು ಕಳೆದ ಶತಮಾನದಲ್ಲಿ ನಮ್ಮ ಕನ್ನಡನಾಡಿಗೆ ಬಂದು ಕ್ರಿಸ್ತಸಂದೇಶ ಪ್ರಚಾರದ ಜೊತೆಗೇ ಕನ್ನಡ ನುಡಿಯ ಕೈಂಕರ್ಯವನ್ನೂ ಶ್ರದ್ಧೆಯಿಂದ ಮಾಡಿದರು. ಕಾವ್ಯಗಳೇ ತುಂಬಿದ್ದ ಅಂದಿನ ಕಾಲಘಟ್ಟದಲ್ಲಿ ಅವರು ಯೇಸುಜೀವನದ ಆಖ್ಯಾಯಿಕೆಗಳನ್ನು ಕಾವ್ಯದಲ್ಲೇ ಕೊಡುವ ಪ್ರಯತ್ನ ಮಾಡಿದರು. ಛಂದಸ್ಸಿಗೆ ಬದ್ದರಾಗುವ ಇಬ್ಬಂದಿತನದಲ್ಲಿ ಕಾವ್ಯಸೌಂದರ್ಯ ಕುಂಠಿತವಾದರೂ ಈ ನಿಟ್ಟಿನ ಅವರ ಪ್ರಯತ್ನ ಶ್ಲಾಘನೀಯ. ದುರದೃಷ್ಟವೆಂದರೆ ಅವರು ಬರೆದ ಆ ಕಾವ್ಯದ ಪೂರ್ಣಪಾಠ ಇಂದು ಲಭ್ಯವಿಲ್ಲ. ಕಾವ್ಯಾಸಕ್ತರು ಕಿಟೆಲ್ ಕಾವ್ಯದ ಸೊಬಗನ್ನು ಸವಿಯಲೆಂದು ಭಾಮಿನೀ ಷಟ್ಪದಿಯಲ್ಲಿರುವ ಕೆಲ ಲಭ್ಯ ಪದ್ಯಗಳನ್ನು ನೀಡಲಾಗಿದೆ. ಯಾರಾದರೂ ಆಸಕ್ತಿವಹಿಸಿ ಇದರಪೂರ್ಣಪಠ್ಯವನ್ನು ಹುಡುಕಿ ಕೊಟ್ಟರೆ ಒಳ್ಳೆಯದು.
(ಸಮುದ್ರದಲ್ಲಿ ಬಿರುಗಾಳಿ ಬೀಸಿದ ಸಂದರ್ಭ)
(ರಾಗ: ಕಲ್ಯಾಣಿ)
ಒಂದು ದಿನದಲ್ಲೇಸು ತನ್ನೊಡ
ಬಂದ ಶಿಷ್ಯರ ಸಹಿತ ಹಡಗವ
ನೆಂದಿನಂದದಿಯೇರಿ ಹೋಗಲಕಾಸಮಯದೊಳಗೇ
ಸುಂದರಾನಿಲ ಶಾಂತಿಯಿದ್ದೆಡೆ
ಮುಂದಘೋರದ ಕಂಪವೇಳಲ್
ಕಂದನಂದದಿ ನಿದ್ದೆ ಮಾಡುತಲೇಸು ಮಲಗಿಹನೂ
(ರಾಗ: ಅಠಾಣ)
ಜ್ಯೋತಿ -ಮಂಡಲವಡಗಿ ಬಿರ್ರನೆ
ವಾತ ಬೀಸಲು ಕಡಲಿನಲ್ಲಲೆ
ಘಾತವಾಗುತ ಥೋರಥೋರದ ತೆರೆಗಳುಕ್ಕುತಲೆ
ಘಾತ ಪೊದಗುವ ಹಾಗೆ ಹಡಗವ
ಜಾತಕಾತರದಲೆಗಳದರಿಸ-
ಲಾತನಡಿಗಡೆ ಶಿಷ್ಯರೋಡುತ ಬಂದು ಕೂಗಿದರೂ
(ರಾಗ: ಭೈರವಿ)
ಒಡೆಯ ಈ ಪರಿ ತೆರೆಯು ಹಡಗವ
ಹೊಡೆಯೆ ಚಿಂತೆಯು ನಿಂಗೆ ಹತ್ತದೆ
ಯೊಡೆದು ಹೋದೀತೀಗ ಯೆಲ್ಲರು ನಶಿಸಿಯೇವೆನ್ನೇ
ಮಡಿವ ಭಯದವರನ್ನು ತನ್ನಯ
ದಡಿಯಲೆಚ್ಚತ್ತೀಕ್ಷಿಸೇಸುವು
ನುಡಿದ ಪವನವ ಕಡಲ ಬೆದರಿಸಿ ಸುಮ್ಮನಿರಿಸಿದನೂ
(ರಾಗ: ಮೋಹನ)
ಶಾಂತಿಯಾಯಿತು ಘಾಳಿ ನಿಂತುವಿ
ಕಾಂತಿ ಪಸರಿಸಿತೆಳೆಯ ಬಿಸಿಲಿಂ
ಕ್ರಾಂತಿ ಕರ್ತನು ಬಳಿಕ ಶಿಷ್ಯರಿಗೊರೆದನಿಂತೆಂದೂ
ಭ್ರಾಂತರಾದಿರಿ ಹೇಡಿಗಳೆ ಯಾ
ಕಾಂತುಕೊಳ್ಳದೆ ನನ್ನ ಶಕ್ತಿ
ಕ್ಷಾಂತಿ ಮಾಡುವದೆಷ್ಟೊ ಸತ್ಯಾವೆ ನಿಮ್ಮಪನಂಬಿಕೆಯಾ
(ರಾಗ:ಹಿಂದೋಳ)
ಪಾಪಸಾಗರ ದಾಟಿ ಸಗ್ಗಕೆ
ಪೋಪ ಹಡಗವನೇಸುವೊಡೆಯನು
ಕಾಪು ಕಾಯ್ವುದು; ಕಾಯದಿದ್ದರೆ ಕೇಳಿರಾಳುಗಳೇ
ದೀಪವಿಲ್ಲದ ಗಾಢದಿರುಳಲಿ
ಶಾಪದಲೆಗಳು ಹೊಡೆದು ಬಡೆಯಲು
ತಾಪದಿಂ ನೀವಲೆಗಳೊಳ್ ಮುಳುಮುಳುಗಿ ಹೋಗುವಿರಿ
Comments
ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?
In reply to ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? by muralihr
ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?
In reply to ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? by anantha.p
ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?
In reply to ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? by ASHOKKUMAR
ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?
In reply to ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ? by muralihr
ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?
ಉ: ಕನ್ನಡಕ್ಕೆ ವಿದೇಶೀಯರ ಸೇವೆಯು ಮತಾಂತರದ ಹುನ್ನಾರವೇ?