ಕನ್ನಡದಲ್ಲಿ ಸುಪ್ರೀಂ ಕೋರ್ಟ್ ತೀರ್ಪು : ಉತ್ತಮ ನಿರ್ಧಾರ

ಕನ್ನಡದಲ್ಲಿ ಸುಪ್ರೀಂ ಕೋರ್ಟ್ ತೀರ್ಪು : ಉತ್ತಮ ನಿರ್ಧಾರ

ಕಕ್ಷಿದಾರರು, ಭಾಷಾ ಹೋರಾಟಗಾರರು, ಆಡಳಿತಗಾರರು, ಶ್ರೀಸಾಮಾನ್ಯರ ಬಹುವರ್ಷಗಳ ಬೇಡಿಕೆಗೆ ಸ್ಪಂದಿಸಿರುವ ಸುಪ್ರೀಂಕೋರ್ಟ್, ಕನ್ನಡ ಸೇರಿ ಹಲವು ಭಾಷೆಗಳಲ್ಲಿ ತನ್ನ ತೀರ್ಪುಗಳನ್ನು ಒದಗಿಸುವುದಕ್ಕೆ ಚಾಲನೆ ನೀಡಿದೆ. ಇದರ ಭಾಗವಾಗಿ, ಕನ್ನಡ ಸೇರಿ ೧೭ ವಿವಿಧ ಭಾಷೆಗಳ ಆಯ್ದ, ತರ್ಜುಮೆಯಾದ ೧೦೯೧ ತೀರ್ಪುಗಳನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಲಾಗಿದೆ. ಈ ಕಾರ್ಯಕ್ಕೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೇ ಚಾಲನೆ ಕೊಟ್ಟಿದ್ದಾರೆ. ಹೈಕೋರ್ಟ್, ಸುಪ್ರೀಂಕೋರ್ಟ್ ಸೇರಿ ದೇಶದ ಹಲವು ನ್ಯಾಯಾಲಯಗಳು ಶ್ರೀಸಾಮಾನ್ಯರಿಗೂ ಅರ್ಥವಾಗುವ ರೀತಿ ಸ್ಥಳೀಯ ಭಾಷೆಯಲ್ಲಿ ತೀರ್ಪು ನೀಡುವುದಿಲ್ಲ ಎಂಬುದು ಹಳೆಯ ಕೂಗು. ನ್ಯಾಯಾಧೀಶರು ವಿವಿಧ ರಾಜ್ಯಗಳ ಮೂಲದಿಂದ ಬಂದವರಾದುದರಿಂದ ಅವರು ಸ್ಥಳೀಯವಾಗಿಯೇ ತೀರ್ಪು ನೀಡಲು ಕಷ್ಟವಾಗುತ್ತದೆ ಎಂಬುದು ನಿಜ. ಆದರೆ ಅವರು ನೀಡಿದ ತೀರ್ಪನ್ನು ಸ್ಥಳೀಯ ಭಾಷೆಗಳಿಗೆ ಅನುವಾದ ಮಾಡಬಹುದು. ಅದು ಈಗ ಸಾಕಾರಗೊಂಡಿದೆ. ಕಕ್ಷಿದಾರನಿಗೆ ತನ್ನ ಪ್ರಕರಣದಲ್ಲಿ ಏನೆಲ್ಲಾ ವಾದವಾಗಿದೆ. ಕೋರ್ಟ್ ಏನು ಹೇಳಿದೆ ಎಂಬುದು ಸುಲಭವಾಗಿ ಅರ್ಥವಾಗಬೇಕೆಂದರೆ ಆತನಿಗೆ ಆತನದ್ದೇ ಭಾಷೆಯಲ್ಲಿ ತೀರ್ಪು ಒದಗಿಸಿದಾಗ ಮಾತ್ರ ಸಾಧ್ಯ. ಇದರಿಂದ ಆತನಿಗೆ ನ್ಯಾಯ ಸಿಕ್ಕಿದೆಯೇ? ಮುಂದಿನ ಸುತ್ತಿನ ಕಾನೂನು ಹೋರಾಟ ಕೈಗೊಳ್ಳಬೇಕೇ ಎಂದು ಸ್ಪಷ್ಟ ನಿಲುವು ಲಭಿಸುತ್ತದೆ. ಹೀಗಾಗಿ ಇದೊಂದು ಉತ್ತಮ ನಿರ್ಧಾರ.

ಆರಂಭಿಕವಾಗಿ ಅಲ್ಪ ಪ್ರಮಾಣದ ತೀರ್ಪುಗಳನ್ನು ಅನುವಾದಿಸಲಾಗಿದೆ. ಸುಪ್ರೀಂಕೋರ್ಟ್ ನಲ್ಲಿ ಪ್ರಕಟವಾಗುವ, ಈಗಾಗಲೇ ಹೊರಬಿದ್ದಿರುವ ತೀರ್ಪುಗಳನ್ನೆಲ್ಲಾ ಅನುವಾದಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ಸಮಯ ಹಿಡಿಯುತ್ತದೆ. ಜನಸಾಮಾನ್ಯರಿಗೆ ಕಾನೂನು ಎಂಬುದು ಇವತ್ತಿಗೂ ಕಬ್ಬಿಣದ ಕಡಲೆಯಂತಿದೆ. ತೀರ್ಪನ್ನು ಕನ್ನಡದಲ್ಲಿ ನೀಡುವುದರಿಂದ ಕಾನೂನನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ. ಆದರೆ ಪೂರ್ಣ ಪ್ರಮಾಣದಲ್ಲಿ ಗ್ರಹಿಸಲು ಆಗುವುದಿಲ್ಲ ಎಂಬ ವಾದವೂ ಇದೆ. ಹೀಗಾಗಿ ತೀರ್ಪಿನ ಅನುವಾದ ಮಾಡಿ ವೆಬ್ ಸೈಟ್ ನಲ್ಲಿ ಉಚಿತವಾಗಿ ಲಭ್ಯವಾಗುವಂತೆ ನ್ಯಾಯಾಂಗ ಮಾಡಿರುವುದು ಸ್ತುತ್ಯಾರ್ಹ. ತೀರ್ಪಿನ ತರ್ಜುಮೆಯು ಶ್ರೀಸಾಮಾನ್ಯರು ಓದಿದ ತಕ್ಷಣ ಅರ್ಥವಾಗುವ ರೀತಿಯಲ್ಲಿ ಇದ್ದರೆ ಅನುಕೂಲ. ಇದಕ್ಕಾಗಿ ನೈಪುಣ್ಯರನ್ನು ಬಳಸಿಕೊಳ್ಳಬಹುದು. ಕನ್ನಡದಲ್ಲೇ ತೀರ್ಪು ನೀಡುವ ವ್ಯವಸ್ಥೆ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲೂ ಜಾರಿಯಾದರೆ ಹೆಚ್ಚು ಜನರಿಗೆ ಉಪಯೋಗವಾಗಲಿದೆ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೨೭-೦೧-೨೦೨೩