ಕನ್ನಡದ ಉಳಿವು – ಕನ್ನಡ ಚಳುವಳಿ

ಕನ್ನಡದ ಉಳಿವು – ಕನ್ನಡ ಚಳುವಳಿ

 
 
"ಕನ್ನಡದ ಉಳಿವಿಗೆ ಕನ್ನಡ ಚಳುವಳಿಯು ಹೊಸದಾಗಿ  ಆವಿಷ್ಕರಿಸಿಕೊಳ್ಳಬೇಕಾಗಿದೆ" –
 
ನಿಜ, ಇದು ಇಂದಿನ ಅತ್ಯಗತ್ಯ.  ಇದರ ಅಗತ್ಯತೆ ಬಗ್ಗೆ ಹೇಳಲು ಕಾರಣಗಳಿವೆ –
 
ಸುಮಾರು ಅರ್ಧವರ್ಷದ ಹಿಂದೆ `ನಮ್ಮ ಮೆಟ್ರೋ'- ನಲ್ಲಿ  ಹಿಂದೀ ಅತಿಕ್ರಮಣದ  ಬಗ್ಗೆ ದೊಡ್ಡ ಮಟ್ಟದಲ್ಲಿ  ಹೋರಾಟ ನಡೆಯಿತು.  ಕನ್ನಡ ಚಳುವಳಿಯ  ಉತ್ತುಂಗವಿದೆಂದು  ಜನರು ಭಾವಿಸಲೆಂದು ಕ.ರ.ವೇ. ಮತ್ತಿತರ  ಕನ್ನಡ ಪರ  ಚಳುವಳಿಗಾರರು ಈ ಸುಸಂದರ್ಭವನ್ನು ಸರಿಯಾಗಿಯೇ  ಬಳಸಿಕೊಂಡರು.  ಇದರಲ್ಲಿ ರಾಜಕೀಯ ಬೆರತಿದ್ದೇ ಜಾಸ್ತಿ ಎನ್ನುವುದು ಹಲವರ ಅಂಬೋಣ.  ಅದೇನೇ ಇರಲಿ, ಮುಖ್ಯ ಪ್ರಶ್ನೆ ಅದಲ್ಲ.  ಮುಖ್ಯ ಪ್ರಶ್ನೆ,  ಹಿಂದಿಯಿಂದ  ಕನ್ನಡದ ಮೇಲೆ ನಿಜವಾಗಿಯೂ ಆಕ್ರಮಣವಾಗಿತ್ತೇ ಅನ್ನುವುದು.  ನಮ್ಮ ಮೆಟ್ರೋವಿನಲ್ಲಿ ಕನ್ನಡವೇ ಪ್ರಥಮ ಸ್ಥಾನದಲ್ಲಿದ್ದು ನಂತರ ಹಿಂದಿ ಹಾಗೂ ಇಂಗ್ಲೀಷ್  ಇದೆ.  ಇದನ್ನು ಕನ್ನಡಕ್ಕಾದ ಅವಮಾನವೆಂದು ಪರಿಭಾವಿಸಬೇಕೇ? ನಿಜ, ಕನ್ನಡಕ್ಕೆ ಸ್ಥಾನವಿಲ್ಲದೇ ಇದ್ದಲ್ಲಿ ಹೋರಾಟ ಮಾಡಿದರೆ  ಅರ್ಥವಿರುತ್ತಿತ್ತು.  ಆದರೀಗ? ಈ ಹೋರಾಟಕ್ಕೆ ಅರ್ಥವಿತ್ತೇ ಎಂಬುದೇ ನನ್ನ ಮುಂದೆ ಧುತ್ತೆಂದು ಬಂದು ನಿಂತ ಪ್ರಶ್ನೆ.  ಆಗಲೇ ನನಗನಿಸಿದ್ದು, ನಮ್ಮ ಕನ್ನಡ ಚಳುವಳಿ ಸರಿಯಾದ ದಿಕ್ಕಿನಲ್ಲಿ  ಚಲಿಸುತ್ತಿದೆಯೇ? ಇಂಥಹ ರೂಪುರೇಷೆಗಳನ್ನು ಇಟ್ಟುಕೊಂಡು ನಾವು ಕನ್ನಡ ಚಳುವಳಿ ಮಾಡಿದರೆ, ನಾವು ನಿಜವಾಗಿಯೂ  ಕನ್ನಡ ಉಳಿಸುತ್ತೀವಾ? ನನ್ನಭಿಪ್ರಾಯದಲ್ಲಂತೂ  ಖಂಡಿತಾ ಇಲ್ಲ. 
 
ಈ ಹಿನ್ನೆಲೆಯಲ್ಲಿ  ಯೋಚಿಸಿದಾಗ, ನಮ್ಮ ಕನ್ನಡ ಚಳುವಳಿಗೆ ಹೊಸ ಕಾಯಕಲ್ಪ, ರೂಪುರೇಷೆ ಹಾಗೂ ಸ್ಪಷ್ಟ ದಿಕ್ಕುಗಳ ಆವಶ್ಯಕತೆಯಿದೆಯೆಂಬ ತೀರ್ಮಾನಕ್ಕೆ  ನಾವು ಬರಬಹುದು.  ನಮ್ಮ ಚಳುವಳಿ ಹೊಸದಾಗಿ  ಹಾಗೂ ಅರ್ಥವತ್ತಾಗಿ ಬದಲಾಗಬೇಕಿದೆ – ಚಳುವಳಿಯನ್ನು ಹೊಸದಾಗಿ  ಆವಿಷ್ಕರಿಸಿಕೊಳ್ಳಬೇಕಾಗಿದೆ.
 
ಇದೇ ನಿಟ್ಟಿನಲ್ಲಿ, ನನಗೆ ಹೇಳಲು ಬೇಸರವಾಗುವ, ಆದರೆ ಹೇಳಲೇಬೇಕಾದ  ಇನ್ನೊಂದು ಸಂಗತಿಯೆಂದರೆ  ನಮ್ಮ ಕನ್ನಡ ಚಳುವಳಿಯ  ನಾಯಕತ್ವ.  ಕನ್ನಡ ಚಳುವಳಿಯ  ಆರಂಭದಲ್ಲಿ  ನಮಗೆ ದೊರಕಿದ್ದು ಮ.ರಾಮಮೂರ್ತಿ, ಅ.ನ.ಕೃ.  ಅಂಥವರ ನಾಯಕತ್ವ.  ಆದರಿಂದು, ಕನ್ನಡ ಚಳುವಳಿಯು  ಹೊಳಪು ಕಳೆದುಕೊಂಡು, ಕ.ರ.ವೇ. ಹಾಗೂ ಇತರ ವಿವಿಧ ಬಣಗಳಲ್ಲಿ  ಕಳೆದುಹೋಗಿದೆ.  ಕನ್ನಡ ಚಳುವಳಿಯಲ್ಲಿ ರಾಜಕೀಯವೆಂಬ ನಿಧಾನವಿಷ (ಪ್ರಧಾನ ವಿಷ?!) ಬೆರೆತು,  ಕೆಲವೆಡೆ ಅವು ಹಫ್ತಾ ವಸೂಲಿ ಸಂಘಟನೆಗಳಾಗಿಬಿಟ್ಟಿವೆ -  ಮುಂಬೈನಲ್ಲಿ  ಶಿವಸೇನೆ ಆದಂತೆ.  ನಮ್ಮ ಕನ್ನಡ ಚಳುವಳಿ ದಾರಿ ತಪ್ಪಿದ್ದೇ ಇಲ್ಲಿ.
 
ಇಷ್ಟರ ಜೊತೆಗೆ, ಈ ಸಂಘಟನೆಗಳ `ಉಟ್ಟು' `ಓರಾಟಗಾರ' ರಿಂದ ಕನ್ನಡವನ್ನು ರಕ್ಷಿಸುವುದು ಇಂದಿನ ಜರೂರಿನ ತುರ್ತು!  ಸರಿಯಾದ ಉಚ್ಚಾರ, ವ್ಯಾಕರಣಗಳನ್ನು ಬೀದಿಪಾಲು  ಮಾಡಿ ನಾವು  ಕನ್ನಡವನ್ನು ಉಳಿಸಲು  ಸಾಧ್ಯವೇ? ಕನ್ನಡವನ್ನು ಹೇಗೆ ಬೇಕೆಂದರೆ ಹಾಗೆ ಆಡುತ್ತೇವೆ ಎಂದರೆ  ಅದನ್ನು ಕನ್ನಡವೆಂದೇಕೆ ತಾನೇ ಕರೆಯಬೇಕು? ಅದನ್ನೂ ಒಂದು ಭಾಷೆ ಎನ್ನಲು ಬರುತ್ತದೆಯೇ? ಕನ್ನಡ ಭಾಷೆಯು `ಸುಲಿದ ಬಾಳೆಹಣ್ಣಿನಂದದಿ' ಎಂದದ್ದನ್ನು  ವಿರೋಧಿಸಿ,  ಕನ್ನಡ ಭಾಷೆಯ `ಸರಳೀಕರಣ(?)'ಕ್ಕಾಗಿ  ವಿದ್ವಾನ್ (!) ಶಂಕರಭಟ್ ಮತ್ತವರ  ಹಿಂಬಾಲಕರು  ಅಹೋರಾತ್ರಿ  ಶ್ರಮಿಸುತ್ತಿದ್ದಾರೆ! ವ್ಯಾಕರಣ, ಅ-ಕಾರ ಹ-ಕಾರ, ಶ-ಕಾರ ಸ-ಕಾರಗಳ ಭಾರದಿಂದ ಕನ್ನಡ ಭಾಷೆಯನ್ನು ಮುಕ್ತಗೊಳಿಸುವುದೇ  ಈ ಆಧುನಿಕ ಶಕಾರನ  ಜೀವನ ಧ್ಯೇಯ.  ಈ `ಶಕಾರ', ಮೃಚ್ಛಕಟಿಕದ ವಿಲನ್ ಅನ್ನುವುದು ಕೇವಲ ಕಾಕತಾಳೀಯ (?!). ಶ್ರೀ ಶಂಕರ ಭಟ್‍ರವರು, ಭಟ್ ಅಂತ ಉಚ್ಚರಿಸಲು ‘ಸ್ಯಾನೇ ತ್ರಾಸಾಗ್ತೈತಿ’  ಅಂತ ಬಟ್ ಅಂತ್ಲೇ ಇಟ್ಕೊಂಡಿದಾರೆ.  But, ಬಟ್ ಅನ್ನೋದು  ಇಂಗ್ಲೀಷಿನಲ್ಲಿ  ಪೃಷ್ಠವೆಂಬುದಕ್ಕೆ  ಆಡುಪದವೆಂದರೆ,  ಆಡಿಕೊಂಡಂತಾಗದಷ್ಟೇ?! ಕನ್ನಡದ ಉದ್ಧಾರ ಕಾರ್ಯದ ಕಾರಣವಾಗಿ,  ಇವರು ಜಾತೀಯತೆ  ಎಂಬ ವಿಷವನ್ನು ಬಿತ್ತಿದ್ದರಾದರೂ,  ಇವರ  ಸಂಕುಚಿತ  ಮಹಾಪಾತಕಕ್ಕೆ  ಸಮಗ್ರ ಕನ್ನಡಿಗರು  ಬಲಿ ಬಿದ್ದಿಲ್ಲವೆಂಬುದೇ ನನಗೆ ಸಂತಸ ತರುವ ವಿಷಯ.
 
ಇಂತಿಪ್ಪ ಸಂದರ್ಭದಲ್ಲಿ, ಕನ್ನಡ ಹಾಗೂ ಕನ್ನಡತನವನ್ನು ಉಳಿಸಲು  ಕನ್ನಡ ಚಳುವಳಿಯು ಯಾವ ದಿಕ್ಕಿನಲ್ಲಿ  ಸಾಗಬೇಕು, ಏನು ಮಾಡಬೇಕು, ಚಳುವಳಿಯ  ರೂಪುರೇಷೆ ಹೇಗಿರಬೇಕು ಅನ್ನುವುದು ಬಹುಮುಖ್ಯವಾಗುತ್ತದೆ.  ನಮ್ಮ ಕನ್ನಡ ಚಳುವಳಿಯು ಈಗಿರುವ `ಉಡುಗೆ' ಬಿಚ್ಚಿಟ್ಟು, ಹೊಸ ರೂಪಾಂತರ ಹೊಂದಬೇಕು.  ಮಾಡಬೇಕಾದ ಕೆಲಸ ಹಾಗೂ  ಸಾಗಬೇಕಾದ ದಾರಿಗಳ ಬಗ್ಗೆ  ಕೆಲ ಪ್ರಮುಖ ಸಂಗತಿಗಳನ್ನಿಲ್ಲಿ ಪ್ರಸ್ತಾಪಿಸ ಬಯಸುತ್ತೇನೆ. 
 
ಮೊದಲಿಗೆ,  ಶಾಲೆಗಳಲ್ಲಿ  ಕನ್ನಡ ಮಾಧ್ಯಮ.  ಸುಪ್ರೀಂ ಕೋರ್ಟ್ ತೀರ್ಪಿನ ಗುಮ್ಮ ತೋರಿಸಿ, ನಮ್ಮ ಸರ್ಕಾರಗಳು ಈ ಬಗ್ಗೆ ನಿರ್ಲಕ್ಷ್ಯ  ತೋರಿರುವುದರ ವಿರುದ್ಧ ನಮ್ಮ ಹೋರಾಟ ಸಾಗಬೇಕು.  ಮಗುವಿಗೆ  ಕರ್ನಾಟಕದಲ್ಲಿ  ಪ್ರಾಥಮಿಕ ಶಿಕ್ಷಣ ಕನ್ನಡದಲ್ಲಿಯೇ ದೊರೆಯಬೇಕು.   ಗಡಿ ಭಾಗದಲ್ಲಿ, ಆಯಾಯಾ ಮಾತೃಭಾಷೆಯಲ್ಲಿಯೇ  ಕನ್ನಡವನ್ನು ಕಲಿಸಿದರೂ  ತಪ್ಪಲ್ಲವಷ್ಟೇ.  ಆಗ ಕನ್ನಡ `ಹೇರಿಕೆ'ಯಾಗದೇ  ಸುಪ್ರೀಂಕೋರ್ಟ್‍ನ ತೀರ್ಪು ಪಾಲಿಸಿದಂತಾಗುತ್ತದೆ.  ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆಯವರೇ ಬಹುಸಂಖ್ಯಾತರಾದಾಗ,  ಸುಪ್ರೀಂಕೋರ್ಟ್ ತೀರ್ಪಿನನ್ವಯವೇ,  ಪ್ರಾಥಮಿಕ  ಶಿಕ್ಷಣದಲ್ಲಿ  ಕನ್ನಡ ಮಾಧ್ಯಮವನ್ನು  ಜಾರಿಗೆ ತರುವುದು ಕಷ್ಟದ ಕೆಲಸವಲ್ಲ.  ಅನುಷ್ಠಾನಕ್ಕೆ  ಮನಸ್ಸಿರಬೇಕಷ್ಟೇ – ರಾಜಕೀಯ ಇಚ್ಛಾಶಕ್ತಿ  ಇರಬೇಕು.  ಇರದಿದ್ದಾಗ,  ಅದನ್ನು ತರುವಲ್ಲಿ ನಮ್ಮ ಕನ್ನಡ ಚಳುವಳಿಯು ಜಾಗೃತವಾಗಬೇಕಾಗುತ್ತದೆ.
 
 
ಕನ್ನಡ ಮಾಧ್ಯಮದ ಇನ್ನೊಂದು ಆಯಾಮ ನಮ್ಮ ಇಂಗ್ಲೀಷ್ ವ್ಯಾಮೋಹ.  ಇಂಗ್ಲೀಷ್ ಇಲ್ಲದೇ ನಮ್ಮ ಜೀವನಾಧಾರವೇ  ಇಲ್ಲದು ಎಂಬುದು ಈಗಿನ ಧೋರಣೆ. ಈಗಿನ ಸನ್ನಿವೇಶಗಳೂ ಇದಕ್ಕೆ  ಪೂರಕವಾಗಿರುವುದೇ ಈ ತಪ್ಪು ಧೋರಣೆಗೆ  ಕಾರಣ.  ಕರ್ನಾಟಕದ ಸಾಕಷ್ಟು ಮೇಧಾವಿಗಳು – ಉದಾ:  ವಿಶ್ವೇಶ್ವರಯ್ಯ, ಸಿ.ವಿ. ರಾಮನ್, ಯು. ಆರ್.ರಾವ್ -  ಕನ್ನಡ ಮಾಧ್ಯಮದಲ್ಲಿ  ಓದಿಯೇ ಮೇರು ವ್ಯಕ್ತಿತ್ವ  ಹೊಂದಿದವರು – ಅವರುಗಳ ವ್ಯವಹಾರವೂ ಕನ್ನಡದಲ್ಲಿಯೇ ಇತ್ತು. ಅವರು ಇಂಗ್ಲೀಷನ್ನು ಒಂದು  ಸಂವಹನ  ಭಾಷೆಯಾಗಿ  ಬಳಸಿದರೇ ಹೊರತು,  ವ್ಯಾಮೋಹದಿಂದ  ಅದಕ್ಕೆ ಜೋತು ಬೀಳಲಿಲ್ಲ. ಚೀನಾ, ರಷ್ಯಾ ಮತ್ತು ಕೆಲ ಯೂರೋಪ್ ದೇಶಗಳಲ್ಲಿ ಇಂಗ್ಲೀಷ್ ಬಳಸುವುದಿಲ್ಲ.  ಮಾತೃಭಾಷೆಯಲ್ಲಿಯೇ ವ್ಯವಹಾರ.  ಹಾಗಂತ, ಆ ದೇಶಗಳ ಗರಿಮೆ ಕುಂಠಿತವಾಗಿದೆಯೇ? ನಿಜ,  ಎಲ್ಲರೂ ಹಾಗಾಗಲು ಸಾಧ್ಯವಿಲ್ಲ. ಆದರೆ ಈ ಪಾಟಿ ವ್ಯಾಮೋಹ ಬಿಡಲು ಖಂಡಿತಾ ಸಾಧ್ಯ.  ಇಂಗ್ಲೀಷ್ ಇಲ್ಲದೆಯೇ ನಾವು ಬಾಳಬಲ್ಲೆವಾದರೂ, ಇಂದಿನ ಪರಿಸ್ಥಿತಿಯಲ್ಲಿ ಅದು ಕಷ್ಟಸಾಧ್ಯವಾದ್ದರಿಂದ, ನಾನು ಇಂಗ್ಲೀಷ್ ವಿರೋಧಿಯೇನಲ್ಲ.  ನಮ್ಮ ಕನ್ನಡ ಚಳವಳಿಯ  ಮುಖಂಡರು  ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗಳಿಗೆ ಸೇರಿಸಿ, ಉಳಿದವರಿಗೆ ಕನ್ನಡ ಮಾಧ್ಯಮ  ಶಾಲೆಗಳಿಗೆ ಸೇರಿಸಲು ಉಪದೇಶಿಸುತ್ತಿರುವುದು – ಆಚಾರ ಹೇಳೋಕೆ, ಬದನೆಕಾಯಿ ತಿನ್ನೋಕೆ ಅನ್ನುವಂತಾಗಿದೆ.  ತಾಂತ್ರಿಕ ಶಿಕ್ಷಣಗಳಿಗೆ ಇಂಗ್ಲೀಷ್  ಅತ್ಯಗತ್ಯವಾದ್ದರಿಂದ ಪ್ರಾಥಮಿಕ ಶಿಕ್ಷಣದಿಂದಲೇ ನಮ್ಮ ಮಕ್ಕಳು ಇಂಗ್ಲೀಷ್ ಕಲಿತು `ಮೇಧಾವಿ'ಗಳಾಗಲಿ ಅನ್ನುವ ಹಠಕ್ಕೆ ಎಲ್ಲರೂ ಬಿದ್ದಿದ್ದಾರೆ.  ಹಾಗೆ ಕಲಿತು ಸಾಫ್ಟ್‍ವೇರ್  ಇಂಜಿನಿಯರಾಗಿ  ಕೈತುಂಬಾ ಸಂಬಳ ಎಣಿಸಲಿ ಅನ್ನುವ ಸದಾಶಯ.  ಈ ಆಶಯವೇನೂ ತಪ್ಪಿಲ್ಲ, ಆದರೆ  ಅದಕ್ಕಾಗಿ ಕನ್ನಡ ಮಾಧ್ಯಮವನ್ನು ದೂರೀಕರಿಸಬೇಕಿಲ್ಲ ಅನ್ನುವುದಷ್ಟೇ ನನ್ನ ಕಳಕಳಿಯ ಮಂಡನೆ.
 
`ನೀರಿಳಿಯದ ಗಂಟಲೊಳ್ ಕಡುಬು ತುರುಕಿದಂತೆ', ಮಾತೃಭಾಷೆಯಾದ  ಕನ್ನಡವನ್ನು ಕಡೆಗಣಿಸಿ, ಇಂಗ್ಲೀಷ್  ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮಗುವಿಗೆ ನೀಡುವ ಬದಲು, ಅದಕ್ಕೆ ಸುಲಭವಾದ ಕನ್ನಡ ಮಾಧ್ಯಮದಲ್ಲಿಯೇ ಇಂಗ್ಲೀಷನ್ನೂ ಕಲಿಸೋಣ.  ಆಗ ಮಗುವಿಗೆ ಪ್ರಾಥಮಿಕ ಶಿಕ್ಷಣವೂ ಕನ್ನಡದಲ್ಲಿ ಸರಳವಾಗಿ ಆಗಿ, ಕನ್ನಡದಲ್ಲಿಯೇ ಇಂಗ್ಲೀಷನ್ನೂ ಕಲಿಯುವುದರಿಂದ  ಇಂಗ್ಲೀಷ್ ಭಾಷೆಯ ಮೇಲೆ ಹಿಡಿತವೂ ಸಿಕ್ಕುತ್ತದೆ.  ಹೀಗೆ ಇಂಗ್ಲೀಷ್  ಭಾಷಾ ಪ್ರೌಢಿಮೆಗೆ, ಗಟ್ಟಿ ತಳಹದಿ ಸಿಕ್ಕಾಗ, ಕನ್ನಡ ಮಾಧ್ಯಮ ಬೇಕಾ ಇಲ್ಲವೇ ಇಂಗ್ಲೀಷ್ ಮಾಧ್ಯಮ ಬೇಕಾ ಅನ್ನುವ ಪ್ರಶ್ನೆ ಗೌಣವಾಗಿ ಬಿಡುತ್ತದೆ.  ಇದರಿಂದ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತರೂ, ಇಂಗ್ಲೀಷ್  ಮೇಲಿನ ಹಿಡಿತದಿಂದಾಗಿ, ತಾಂತ್ರಿಕ ಶಿಕ್ಷಣದಲ್ಲಿ ಕಷ್ಟಪಡುವ  ಸನ್ನಿವೇಶ ಬಾರದು.  ತಾಂತ್ರಿಕ ಶಿಕ್ಷಣ ಮುಗಿಸಿ, ತಂದೆ ತಾಯಿಯರ ಆಶಯದಂತೆ  ಸಾಫ್ಟ್‍ವೇರ್ ಇಂಜಿನಿಯರಾಗಿ ಕೈ ತುಂಬಾ ಸಂಬಳವೆಣಿಸಲು ಕಷ್ಟವೇನೂ ಇರದು.  ಈಗ ಹೇಳಿ ನಮಗೆ,  ಇಂಗ್ಲೀಷ್ ಮಾಧ್ಯಮ ಅನಿವಾರ್ಯವೇ? ಈ ನಿಟ್ಟಿನಲ್ಲಿ  ನಮ್ಮ ಕನ್ನಡ ಚಳುವಳಿ, ಕೇವಲ ಸರ್ಕಾರವನ್ನು ಅನುಷ್ಠಾನಕ್ಕೆ  ಒತ್ತಾಯ ಮಾಡುವುದಷ್ಟೇ ಅಲ್ಲ, ಇಂಗ್ಲೀಷ್ ವ್ಯಾಮೋಹೀ ಜನಗಳ ಮನಃಪರಿವರ್ತನೆಗೆ ಕೂಡಾ ಜಾಗೃತಿ  ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ.
 
ಅಷ್ಟೇ ಅಲ್ಲ, ಭವಿಷ್ಯತ್ತಿನಲ್ಲೂ ಕನ್ನಡದ ಉಳಿವಿಗೆ ಭಂಗ ಬಾರದಿರಲು, ಈಗಲೇ ನಾವು ಕೆಲವೊಂದು  ಕೆಲಸಗಳಲ್ಲಿ ಉದ್ಯುಕ್ತರಾಗಬೇಕಿದೆ.  ಈ ತಾಂತ್ರಿಕ ಶಿಕ್ಷಣದ ಪಠ್ಯಗಳನ್ನು ನಾವು ಕನ್ನಡದಲ್ಲಿ ತರಬೇಕಾಗಿದೆ.  ‘ಕನ್ನಡ ಪೀಠ’ಗಳು ಜರೂರಾಗಿ ಮಾಡಬೇಕಾದ ಕೆಲಸ ಇದು.  ತಾಂತ್ರಿಕ ಶಿಕ್ಷಣದ ತಾಂತ್ರಿಕ ಶಬ್ದಗಳು -  Technical terms – ಇವಕ್ಕೆ ಕನ್ನಡದಲ್ಲಿ ಪರ್ಯಾಯವಾಚಿಗಳನ್ನು  ಹುಟ್ಟಿಸಲೇ ಬೇಕೆಂಬ ಹಠದಲ್ಲಿ ಬೀಳುವುದಕ್ಕಿಂತ, ಅವುಗಳನ್ನೇ ಉಳಿಸಿಕೊಂಡು,  ತಾಂತ್ರಿಕ ಶಿಕ್ಷಣದ ಪಠ್ಯಗಳನ್ನು  ಸಮರ್ಥವಾಗಿ  ಕನ್ನಡಕ್ಕೆ ಅನುವಾದ ಮಾಡಬೇಕಿದೆ.  ಈ ಕಾರ್ಯ ಆದಲ್ಲಿ  ನಮಗೆ ಇಂಗ್ಲೀಷ್‍ನ ಅನಿವಾರ್ಯತೆ ಇರದು.  ತನ್ಮೂಲಕ  ಇಂಗ್ಲೀಷ್ ವ್ಯಾಮೋಹ ತಪ್ಪುತ್ತದೆ.   ಎಲ್ಲಕ್ಕಿಂತ ಹೆಚ್ಚಾಗಿ, ಇಂಗ್ಲೀಷ್  ವ್ಯಾಮೋಹ /ಅನಿವಾರ್ಯತೆ ತಪ್ಪಿದಲ್ಲಿ, ಇವುಗಳು  ಕನ್ನಡ ಭಾಷೆಯ ಉಳಿವಿನ ಮೇಲೆ ತೂಗುಗತ್ತಿಯಂತೆ ತೂಗಾಡುವುದು ತಪ್ಪುತ್ತದೆ. ನಮ್ಮ ಕನ್ನಡ ಭಾಷೆ, ಅನ್ನ ಕೊಡುವ ಭಾಷೆಯಾಗಿಯೂ ಉಳಿಯುತ್ತದೆ.  ಈಗಿನ ಸಂದರ್ಭದಲ್ಲಿ ಅನ್ನ ಕೊಡುವ ಭಾಷೆಯಷ್ಟೇ  ಉಳಿವಿಗೆ ಅರ್ಹತೆ ಗಿಟ್ಟಿಸುತ್ತದೆ.  ಅದಕ್ಕೇ 
ಸಂಸ್ಕ್ಱ‌ತದಲ್ಲಿ ಮಾತಿದೆ – "ಸರ್ವಾರಂಭಾಃ ತಂಡುಲಪ್ರಸ್ಥಮೂಲಾಃ||" ಇದು ನಮ್ಮ ಚಳುವಳಿಯ ಮುಖ್ಯ ಗುರಿಯಾಗಬೇಕು.
 
ನಮ್ಮ ಮುಂದಿನ ಗುರಿ – ಆಡಳಿತದಲ್ಲಿ ಸರಳಗನ್ನಡ  ಹಾಗೂ ಸರಳ ವ್ಯವಹಾರ.  ಕರ್ನಾಟಕದ ಎಲ್ಲೆಡೆ ಇದರ  ಅನುಷ್ಠಾನಕ್ಕೆ  ನಮ್ಮ ಕನ್ನಡ ಚಳುವಳಿ ಸದಾ ಕಾಲ  ಹದ್ದುಗಣ್ಣಿನಲ್ಲಿರಬೇಕಾಗುತ್ತದೆ.  ಆಡಳಿತದಲ್ಲಿ  ಅಧಿಕಾರಿ ವರ್ಗ  ಯಾವಾಗಲೂ ಕುಂಟು ನೆಪಗಳನ್ನೊಡ್ಡಿ ಅಡ್ಡಿಯಾಗುತ್ತಲೇ ಇರುತ್ತದೆ.  ಸಂಘರ್ಷವಿಲ್ಲದೇ ಆ ಅಡ್ಡಿಗಳ ನಿವಾರಣೆಗೆ ನಮ್ಮ ಚಳುವಳಿ ಸದಾ ನಿರತವಾಗಿರಬೇಕಾಗುತ್ತದೆ.
 
ಆಡಳಿತದಲ್ಲಿ ಅನುಷ್ಠಾನಕ್ಕೆ ಬಂದಿರುವ ಕಡೆಗಳಲ್ಲೂ ಅಡ್ಡಿ ಇಲ್ಲವೆಂದಲ್ಲ.  ಸರ್ಕಾರದ  `ಆಡಳಿತ ಕನ್ನಡ'ವೇ  ನಮ್ಮ ಆಡು ಕನ್ನಡಕ್ಕಿಂತ ಭಿನ್ನವಾಗಿದ್ದು ಕಠಿಣವಾಗಿದೆ.  ಜೊತೆಗೆ ಭರ್ತಿ ಮಾಡಬೇಕಿರುವ ಫಾರಂಗಳೂ ಸಂಕೀರ್ಣವಾಗಿರುತ್ತವೆ.  ಉದಾಹರಣೆಗೆ ಹೇಳುವುದಾದರೆ, ಬ್ಯಾಂಕರನಾಗಿ ನಮ್ಮಲ್ಲಿ, ಒಂದು ಖಾತೆ ತೆರೆಯಲು  ಅರ್ಜಿ ಭರ್ತಿ ಮಾಡಲು ಒಬ್ಬ Post graduate ಗೇ ಕಷ್ಟ  ಆಗುತ್ತಿದೆಯೆಂದರೆ,  ಸಾಮಾನ್ಯರ ಪಾಡೇನು? ಈ ಸಂಕೀರ್ಣತೆ ಜನರನ್ನು ಅನಿವಾರ್ಯವಾಗಿ ದಳ್ಳಾಳಿಗಳತ್ತ ದೂಡುತ್ತದೆ.  ಅರ್ಜಿ ಫಾರಂಗಳ ಸಂಕೀರ್ಣತೆಯನ್ನು  ಕೊನೆಗಾಣಿಸಿದಲ್ಲಿ, ನಾವು ಅರ್ಧ ಜಯಗಳಿಸಿದಂತೆಯೇ  ಸೈ. ಈ ನಿಟ್ಟಿನಲ್ಲಿ  ನಮ್ಮ ಪ್ರಾಮಾಣಿಕ ಪ್ರಯತ್ನ ಇರಬೇಕು.
 
 
 
ಮೇಲ್ಕಂಡವು ಕನ್ನಡದ ಉಳಿವಿಗಾಗಿ ಆದರೆ, ನಾವು ಕನ್ನಡತನದ ಉಳಿವಿಗಾಗಿಯೂ  ಶ್ರಮಿಸಬೇಕಾಗಿರುತ್ತದೆ.  ನಮ್ಮ ಕನ್ನಡ  ಸಂಸ್ಕ್ಱ‌ತಿಯ ಕುರುಹುಗಳಾದ ಕೊಡವ ವೇಷಭೂಷಣಗಳು, ಆಚರಣೆಗಳು, ಹಾಗೆಯೇ ಮಂಗಳೂರು, ಉತ್ತರ ಕರ್ನಾಟಕ,  ಕರ್ನಾಟಕದ ಎಲ್ಲ ಭಾಗಗಳಲ್ಲಿನ  ನೆಲದ ಅಸ್ಮಿತೆಯನ್ನು ಗುರುತಿಸಿ  ಬೆಳೆಸಬೇಕಾದ  ಕರ್ತವ್ಯ ನಮ್ಮದು.  ಈ ಸಂಸ್ಕ್ಱ‌ತಿಯ ಉಳಿವಿಗಾಗಿ ಪ್ರದರ್ಶನಗಳು,  ಜಾಗೃತಿ ಸಮ್ಮೇಳನಗಳನ್ನು ಆಯೋಜಿಸಬೇಕು.
 
ಈಗಿನ ಡಿಜಿಟಲ್ ಯುಗದಲ್ಲಿ, ಕನ್ನಡದಲ್ಲಿನ ಎಲ್ಲ ಸಾಹಿತ್ಯ ಕೃತಿಗಳೂ ಗಣಕೀಕರಣಗೊಂಡು, ಎಲ್ಲರಿಗೂ ಸುಲಭವಾಗಿ ಸಿಗುವಂತಾಗಬೇಕು.  ಕನ್ನಡತನವನ್ನು ಸಾರುವ ನಮ್ಮ ಪ್ರವಾಸೀ ತಾಣಗಳಾದ ಹಂಪಿ, ಬೇಲೂರು, ಬಾದಾಮಿ ಮುಂತಾದವುಗಳನ್ನು ಸಮಗ್ರ ರೀತಿಯಲ್ಲಿ  ಅಭಿವೃದ್ಧಿಪಡಿಸಬೇಕು.  ರಸ್ತೆ, ವಸತಿ ವ್ಯವಸ್ಥೆಯಂಥ  ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಿದಲ್ಲಿ, ಈ ಪ್ರವಾಸೀ ತಾಣಗಳು ಜಗತ್ತಿಗೆ ಕನ್ನಡತನದ  ರಾಯಭಾರಿಗಳಾಗುವುದರಲ್ಲಿ ಸಂಶಯವಿಲ್ಲ.  ನಮ್ಮ ಸರ್ಕಾರಗಳು  ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ  ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ.  ಈ ಜವಾಬ್ದಾರಿಯನ್ನು ನಮ್ಮ ಕನ್ನಡ ಚಳುವಳಿ ಸಮರ್ಥವಾಗಿ ನಿಭಾಯಿಸಬೇಕಿದೆ.
 
ಕೊನೆಯದಾಗಿ, ತಲುಪಬೇಕಾದ  ಗುರಿ, ಸಾಗಬೇಕಾದ ಹಾದಿ ತೀರ್ಮಾನವಾದ ನಂತರ, ನಮ್ಮ ಚಳುವಳಿಯನ್ನು ನಡೆಸುವವರು ಯಾರೆಂಬ  ಬೃಹತ್ ಪ್ರಶ್ನೆ ಪೆಡಂಭೂತದಂತೆ ನಮ್ಮೆದುರು ನಿಲ್ಲುತ್ತದೆ. ಯಾವುದೇ ಚಳುವಳಿಯ ಗೆಲುವು, ಜನರ ಪಾಲ್ಗೊಳ್ಳುವಿಕೆಯ ಮೇಲೆ ನಿರ್ಧಾರವಾಗುತ್ತದೆ. ಕನ್ನಡ ಕಾರ್ಯಕರ್ತರ ಪಡೆ ಹೆಚ್ಚಾದಂತೆ, ಚಳುವಳಿಯ ಯಶಸ್ಸೂ  ಹೆಚ್ಚಾಗುವುದು ಸಹಜ.
 
ನಾವು `ನವೆಂಬರ್ ಕನ್ನಡಿಗ'ರಾಗದೇ ಪ್ರಾಮಾಣಿಕವಾಗಿ ನಮ್ಮ ಕೈಲಾದಷ್ಟು  ಸಮಯವನ್ನು, ಕನ್ನಡ ಚಳುವಳಿಗೆ ಮೀಸಲಿಟ್ಟರೆ, ಅದೇ ಸಾಕಾಗುತ್ತದೆ. ಹನಿಹನಿ ಕೂಡಿದರೆ ಹಳ್ಳವಷ್ಟೇ.  ನಾವಷ್ಟೇ  ಜಾಗೃತರಾದರೆ ಸಾಲದು, ನಮ್ಮ ಸುತ್ತಮುತ್ತಲಿನವರನ್ನೂ ಈ ನಿಟ್ಟಿನಲ್ಲಿ ಜಾಗೃತಗೊಳಿಸಿದಲ್ಲಿ, ನಮ್ಮ ಕರ್ತವ್ಯ ಮಾಡಿದಂತೆ. ಇಂಥ ಪ್ರಾಮಾಣಿಕ ಪಾಲ್ಗೊಳ್ಳುವಿಕೆ, ದೊಡ್ಡ ಚಳುವಳಿಯಾಗುವುದರಲ್ಲಿ ಅನುಮಾನವಿಲ್ಲ. ಜನರ  ಭಾಗೀದಾರಿಕೆಯಿಂದ ನಮ್ಮ ಕನ್ನಡ ಚಳುವಳಿ ಹೊಸದಾಗಿ  ಆವಿಷ್ಕರಿಸಿಕೊಳ್ಳಬೇಕಾಗಿದೆ. ಹೊಸ ದಿಕ್ಕು, ಹೊಸ ದಾರಿ ಹಾಗೂ ಸಮರ್ಥ ನಾಯಕತ್ವ ನಮ್ಮ ಕನ್ನಡ ಚಳುವಳಿಯನ್ನು ನಿಜವಾಗಿ ಮೇಲೆತ್ತುತ್ತ್ತದೆಯೆಂಬುದು  ನನ್ನ ಖಚಿತ ಅಭಿಪ್ರಾಯ. ಅಲ್ಲವೇ?
 
-------