ಕನ್ನಡದ ಮೊದಲ ವಾಕ್ಚಿತ್ರ 'ಸತಿ ಸುಲೋಚನ' ಬಗ್ಗೆ ಒಂದಿಷ್ಟು…
ಮೂಕಿ ಚಿತ್ರಗಳ ಕಾಲ ಕಳೆದು ಹೊರ ಬಂದ ಮೊದಲ ಕನ್ನಡ ವಾಕ್ ಚಿತ್ರ ‘ಸತಿ ಸುಲೋಚನ'. ಆದರೆ ವಾಸ್ತವವಾಗಿ ಮೊದಲಿಗೆ ಚಿತ್ರೀಕರಣ ಪ್ರಾರಂಭಿಸಿದ ಚಿತ್ರ ‘ಭಕ್ತ ಧ್ರುವ'. ಆದರೆ ಆ ಚಿತ್ರದ ಅದೃಷ್ಟ ಸರಿಯಾಗಿರಲಿಲ್ಲ ಎಂದು ತೋರುತ್ತದೆ. ಏಕೆಂದರೆ ಮೊದಲು ಬಿಡುಗಡೆ ಆದ ಚಿತ್ರ ‘ಸತಿ ಸುಲೋಚನ'. ಈ ಕಾರಣದಿಂದ ಕನ್ನಡದ ಮೊದಲ ವಾಕ್ಚಿತ್ರ ಎಂಬ ಹಿರಿಮೆಗೆ ಪಾತ್ರವಾಗಿ ಇತಿಹಾಸದ ಪುಟವನ್ನು ಸೇರಿಕೊಂಡಿತು. ಇದು ನಡೆದದ್ದು ೧೯೩೪ರಲ್ಲಿ. ಚಿತ್ರ ಬಿಡುಗಡೆಯಾಗಿ ಈಗಾಗಲೇ ಸುಮಾರು ೯ ದಶಕಗಳು ಸಂದು ಹೋದವು. ಇನ್ನು ೧೧ ವರ್ಷಗಳು ಕಳೆದರೆ ಮೊದಲ ಕನ್ನಡದ ವಾಕ್ಚಿತ್ರದ ಶತಮಾನೋತ್ಸವವನ್ನು ಆಚರಿಸುವ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬಹುದು.
೧೯೩೪ರ ಸಮಯದಲ್ಲಿ ಚಿತ್ರರಂಗದಲ್ಲಿ ಈಗಿನಂತೆ ಆಧುನಿಕ ಸೌಲಭ್ಯಗಳಿರಲಿಲ್ಲ. ಕರ್ನಾಟಕದಲ್ಲಿ ಒಳಾಂಗಣ ಚಿತ್ರೀಕರಣ ನಡೆಸಲು ಅಗತ್ಯವಾದ ಸ್ಟುಡಿಯೋಗಳ ಕೊರತೆ ಇತ್ತು. ಮದ್ರಾಸ್ (ಚೆನ್ನೈ) ಅಥವಾ ಮಹಾರಾಷ್ಟ್ರಕ್ಕೆ ಹೋಗಿ ಚಿತ್ರೀಕರಣ ಮಾಡಿಕೊಳ್ಳಬೇಕಾಗಿತ್ತು. ಅದೇ ಕಾರಣದಿಂದ ಸತಿ ಸುಲೋಚನ ಚಿತ್ರ ತಂಡ ೧೯೩೩ರಲ್ಲಿ ಕೊಲ್ಲಾಪುರದ ‘ಛತ್ರಪತಿ ಸಿನಿಟೋನ್' ಎಂಬ ಸ್ಟುಡಿಯೋದಲ್ಲಿ ಚಿತ್ರೀಕರಣ ಪ್ರಾರಂಭಿಸಿತು. ಪೌರಾಣಿಕ ಚಿತ್ರವಾದುದರಿಂದ ಅದಕ್ಕೆ ತಕ್ಕುದಾದ ಸೆಟ್ ಅನ್ನು ಹಾಕಲಾಗಿತ್ತು.
ಈ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣಕ್ಕೆ ಕೈಹಾಕಿದವರು ಆಂಧ್ರದ ನೆಲ್ಲೂರಿನ ವೈ ವಿ ರಾವ್ (ಯರ್ರಾಗುಡಿಪಾಟಿ ವರದ ರಾವ್). ಹೀಗೆಂದರೆ ನಿಮಗೆ ಇವರು ಯಾರು ಎಂದು ತಿಳಿಯಲಾರದು. 'ಜ್ಯೂಲಿ' ಲಕ್ಷ್ಮಿ ಇವರ ತಂದೆ ಎಂದು ಹೇಳಿದರೆ ಗೊತ್ತಾದೀತು ಅಲ್ಲವೇ? ಲಕ್ಷ್ಮಿ ಅವರ ತಂದೆ ಹಾಗೂ ತಾಯಿ ರುಕ್ಮಿಣಿ ಇಬ್ಬರೂ ಈ ಚಿತ್ರದಲ್ಲಿ ನಟಿಸಿದ್ದಾರೆ. ರಾವಣನಾಗಿ ನಟಿಸಿದವರು ಆರ್ ನಾಗೇಂದ್ರ ರಾಯರು. ಇವರೇ ಕೊಲ್ಲಾಪುರದಲ್ಲಿನ ಚಿತ್ರೀಕರಣದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು. ಇವರು ಈ ಚಿತ್ರದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರು ಮೊದಲಿಗೆ ಮಾಡಲು ಹೋದ ಸಿನೆಮಾ ಬೇರೆಯೇ ಆಗಿತ್ತು. ಆದರೆ ಅದರ ಬಜೆಟ್ ತುಂಬಾ ಹೆಚ್ಚಾಗುವುದನ್ನು ಅಂದಾಜಿಸಿದ ನಾಗೇಂದ್ರರಾಯರು ರಂಗಭೂಮಿಯಲ್ಲಿ ಬಹಳ ಖ್ಯಾತಿಯನ್ನು ಪಡೆದ, ಸ್ವತಃ ತಾವೇ ಅಭಿನಯಿಸುತ್ತಿದ್ದ ಸತಿ ಸುಲೋಚನದ ಕಥೆಯನ್ನು ಬಳಸಿ ಚಲನ ಚಿತ್ರ ಮಾಡಿದರು.
ಚಿತ್ರಕ್ಕೆ ತಗುಲಿದ ವೆಚ್ಚ ೪೦ ಸಾವಿರ ರೂಪಾಯಿಗಳು. ಈಗಿನ ಸಮಯವಾದಲ್ಲಿ ಇಷ್ಟು ಹಣಕ್ಕೆ ಸಹ ನಟರು ಸಹಾ ಸಿಗಲಾರರು. ಈಗ ಏನಿದ್ರೂ ಕೋಟಿ ಕೋಟಿ... ಅಂದಿನ ೪೦ ಸಾವಿರವೂ ಆ ಕಾಲಕ್ಕೆ ದೊಡ್ದ ಬಜೆಟ್ ಆಗಿತ್ತು. ಇದರಲ್ಲಿ ೨೫ ಸಾವಿರ ರೂಪಾಯಿಗಳನ್ನು ರಾಜಸ್ಥಾನಿ ವ್ಯಾಪಾರಿಗಳಾದ ಚಮನ್ ಲಾಲ್ ಡುಂಗಾಜಿ ಅವರು ನೀಡಿದ್ದರು. ಉಳಿದ ಹಣವನ್ನು ಸ್ವತಃ ನಾಗೇಂದ್ರರಾಯರೇ ಹೊಂದಿಸಿಕೊಂಡರು. ಆ ಸಮಯದಲ್ಲಿ ಕರ್ನಾಟಕದಲ್ಲಿ ಕನ್ನಡ ಭಾಷೆಯ ಚಿತ್ರಗಳೇ ತಯಾರಾಗುತ್ತಿರಲಿಲ್ಲ. ಏನಿದ್ದರೂ ತೆಲುಗು, ತಮಿಳು ಚಿತ್ರಗಳದ್ದೇ ಕಾರುಬಾರು. ಇದಕ್ಕೆ ಕಡಿವಾಣ ಹಾಕಲು ಈ ತ್ರಿಮೂರ್ತಿಗಳು (ವೈ ವಿ ರಾವ್, ನಾಗೇಂದ್ರರಾಯರು ಮತ್ತು ಡುಂಗಾಜಿ) ಸೇರಿ ಸತಿ ಸುಲೋಚನ ಚಿತ್ರ ನಿರ್ಮಿಸಿದರು.
ಚಿತ್ರಕ್ಕೆ ಪಾತ್ರಧಾರಿಗಳ ಆಯ್ಕೆ ಅಷ್ಟೇನೂ ಕಷ್ಟಕರವಾಗಿರಲಿಲ್ಲ. ಆರ್ ನಾಗೇಂದ್ರರಾಯರು ರಾವಣನಾಗಿ, ಇಂದ್ರಜಿತುವಾಗಿ ಸುಬ್ಬಯ್ಯ ನಾಯ್ಡು, ಮಂಡೋದರಿಯಾಗಿ ಆ ಕಾಲದ ಸ್ಟಾರ್ ನಟಿ ಲಕ್ಷ್ಮೀಬಾಯಿ, ಸುಲೋಚನ ಪಾತ್ರಕ್ಕೆ ತ್ರಿಪುರಾಂಭ ಆಯ್ಕೆಯಾದರು. ಬೆಳ್ಳಾವೆ ನರಹರಿ ಶಾಸ್ತ್ರಿಗಳು ಈ ಚಿತ್ರದ ಸಂಭಾಷಣೆ ಮತ್ತು ಹಾಡುಗಳ ಜವಾಬ್ದಾರಿಯನ್ನು ಹೊತ್ತುಕೊಂಡು ಈ ಹೊಣೆಯನ್ನು ಬಹಳ ಸೊಗಸಾಗಿ ನಿರ್ವಹಿಸಿದರು. ಕನ್ನಡ ಸಿನೆಮಾದ ಪ್ರಥಮ ಸಂಭಾಷಣಾಗಾರರು ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಆ ಸಮಯದಲ್ಲಿ ಚಿತ್ರವೊಂದರ ಹಾಡಿನ ಚಿತ್ರೀಕರಣದ ಸಮಯದಲ್ಲಿ ನಟಿಸುತ್ತಿದ್ದ ನಟಿಯರೇ ಹಾಡುಗಳನ್ನು ಹಾಡಬೇಕಾಗಿತ್ತು. ಏಕೆಂದರೆ ತುಟಿ ಚಲನೆಗೆ ರೀ ಡಬ್ ಮಾಡುವ ತಂತ್ರಜ್ಞಾನ ಬಳಕೆಯಲ್ಲಿರಲಿಲ್ಲ. ಆಗ ಉತ್ತಮ ಹಾಡುಗಾರ್ತಿಯರನ್ನೇ ನಟಿಯರನ್ನಾಗಿ ಬಳಸಿಕೊಳ್ಳುತ್ತಿದ್ದರು. ಸತಿ ಸುಲೋಚನ ಚಿತ್ರದಲ್ಲಿ ಸುಮಾರು ೧೬ ಹಾಡುಗಳಿದ್ದವು. ಇದರ ರೆಕಾರ್ಡಿಂಗ್ ನಿರ್ದೇಶಕರಿಗೆ ದೊಡ್ದ ಸವಾಲಾಗಿತ್ತು. ಆಗಿನ್ನೂ ವಿದ್ಯುತ್ ಬಳಕೆ ಸರಿಯಾಗಿ ಪ್ರಾರಂಭವಾಗಿರಲಿಲ್ಲ. ಈ ಕಾರಣದಿಂದ ಹಗಲಿನಲ್ಲೇ ಸೂರ್ಯನ ಬೆಳಕನ್ನು ಬಳಸಿ (ಕನ್ನಡಿಯಿಂದ ಪ್ರತಿಫಲನೆ ಮಾಡಿ) ಚಿತ್ರೀಕರಣ ಮಾಡಬೇಕಾಗಿತ್ತು. ಎರಡು ತಿಂಗಳ ಕಾಲ ನಡೆದ ಚಿತ್ರೀಕರಣಕ್ಕೆ ಸಂಕಷ್ಟದ ಪರಿಸ್ಥಿತಿ ಎದುರಾದದ್ದು ಯುದ್ಧದ ದೃಶ್ಯದ ಸಮಯದಲ್ಲಿ.
ನೂರಾರು ಜನರ ಅವಶ್ಯಕತೆ ಇದ್ದುದರಿಂದ ಗ್ರಾಮದಲ್ಲಿ ತುತ್ತೂರಿ ಊದಿ ಜನರನ್ನು ಬರುವಂತೆ ಹೇಳಲಾಯಿತು. ಅಷ್ಟು ಮಂದಿಗೆ ಬಟ್ಟೆಯನ್ನು ಪೂರೈಸುವುದು ಹೇಗೆ ಎನ್ನುವ ಚಿಂತೆಗೆ ಗೋಣಿ ಚೀಲವನ್ನು ಬಳಸಿ ಅದನ್ನು ಬಟ್ಟೆಯಂತೆ ಉಪಯೋಗಿಸಲಾಯಿತು. ಚಿತ್ರ ಕಪ್ಪು ಬಿಳುಪೇ ಆಗಿದ್ದರೂ ಚಿತ್ರೀಕರಣದ ಸಮಯದಲ್ಲಿ ಗೊಂದಲವಾಗಬಾರದೆಂದು ಕಪಿ ಸೈನ್ಯ ಮತ್ತು ರಾವಣ ಸೈನ್ಯದ ಸೈನಿಕ ಪಾತ್ರಧಾರಿಗಳ ಗೋಣಿಚೀಲಗಳಿಗೆ ಬೇರೆ ಬೇರೆ ಬಣ್ಣ ಬಳಿಯಲಾಯಿತು. ಯುದ್ಧದ ಸಮಯದಲ್ಲಿ ಬಳಸಲಾಗಿದ್ದ ಕುದುರೆಗಳು ಹಿಡಿತಕ್ಕೆ ಸಿಗದೇ ಓಡಾಡಿದ ಪರಿಣಾಮ ಸುಮಾರು ಮಂದಿ ಕಲಾವಿದರು ಆಸ್ಪತ್ರೆಯ ಮುಖ ಕಾಣುವಂತಾಯಿತು. ಈ ಸಮಯದ ಚಿತ್ರೀಕರಣ ಒಂದು ರೀತಿಯಲ್ಲಿ ಹಾಸ್ಯ ಪ್ರಹಸನದಂತೆ ಇತ್ತು.
ಕಡೆಗೂ ೧೬ ಸಾವಿರ ಅಡಿ ಉದ್ದದ ‘ಸತಿ ಸುಲೋಚನ' ಚಿತ್ರವು ತನ್ನ ಚಿತ್ರೀಕರಣವನ್ನು ಪೂರೈಸಿತು. ಕಲಾಸಿಪಾಳ್ಯದ ‘ಪ್ಯಾರಾಮೌಂಟ್' ಚಿತ್ರ ಮಂದಿರದಲ್ಲಿ ಮಾರ್ಚ್ ೩, ೧೯೩೪ರಂದು ಬಿಡುಗಡೆಯಾಗಿ ಸುಮಾರು ಆರು ವಾರಗಳ ವರೆಗೆ ಹೌಸ್ ಫುಲ್ ಪ್ರದರ್ಶನ ಕಂಡಿತು. ಹೀಗೆ ಆರಂಭವಾದ ಪ್ರಥಮ ವಾಕ್ಚಿತ್ರದ ಪ್ರಯಾಣ ಮುಂದಿನ ದಿನಗಳಲ್ಲಿ ಹೊಸ ಹೊಸ ತಂತ್ರಜ್ಞಾನ ಬಳಸಿ ಇನ್ನಷ್ಟು ಹೊಸತನವನ್ನು ಕಂಡುಕೊಂಡಿತು. ಏನೇ ಆದರೂ ಆ ಸಮಯದಲ್ಲಿ ಸೀಮಿತ ತಂತ್ರಜ್ಞಾನವನ್ನು ಬಳಸಿ ‘ಟಾಕಿ' ಚಿತ್ರವೊಂದನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ ಆ ತ್ರಿಮೂರ್ತಿಗಳಿಗೆ ವಂದಿಸಲೇ ಬೇಕು. ಅಲ್ಲವೇ?
(ಆಧಾರ) ಚಿತ್ರ ಕೃಪೆ: ಅಂತರ್ಜಾಲ ತಾಣ