ಕನ್ನಡದ ಹೆಸರಲ್ಲಿ ಇಂಗ್ಲೀಷ್ ಕಲಿಕೆ... ಮಾನ್ಯತೆ ರದ್ದು! ಈ ಪರಿಸ್ಥಿತಿಗೆ ಯಾರು ಹೊಣೆ?

ಕನ್ನಡದ ಹೆಸರಲ್ಲಿ ಇಂಗ್ಲೀಷ್ ಕಲಿಕೆ... ಮಾನ್ಯತೆ ರದ್ದು! ಈ ಪರಿಸ್ಥಿತಿಗೆ ಯಾರು ಹೊಣೆ?

ಬರಹ

ಕಳೆದ ಕೆಲವು ದಿನಗಳಿಂದ ಯಾವ ಪತ್ರಿಕೆಯನ್ನು ನೋಡಿದರೂ ಇದೇ ಸುದ್ದಿ - ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುವುದಾಗಿ ಸರ್ಕಾರದಿಂದ ಅನುಮತಿ ಪಡೆದ ರಾಜ್ಯದ ಸಾವಿರಾರು ಶಾಲೆಗಳು ಇಂಗ್ಲೀಷ್ ಮಾಧ್ಯಮದಲ್ಲಿ ಬೋಧಿಸುವ ಮೂಲಕ ವಿವಾದದ ಮೂಲಬಿಂದುಗಳಾದದ್ದು; ಸರ್ಕಾರ ಮತ್ತು ಇಂತಹ ಶಾಲೆಗಳ ಆಡಳಿತ ಮಂಡಳಿಗಳ ನಡುವಣ ಕಾನೂನು ಸಮರ; ಭಾಷಾ ನೀತಿ ಉಲ್ಲಂಘನೆ ಮಾಡಿದ ತಪ್ಪಿಗೆ ಸರ್ಕಾರದಿಂದ ಇಂತಹ ಶಾಲೆಗಳ ಮಾನ್ಯತೆ ರದ್ದು; ಸರ್ಕಾರದ ಈ ನಿರ್ಧಾರವನ್ನು ಎತ್ತಿ ಹಿಡಿದ ರಾಜ್ಯದ ಉಚ್ಚ ನ್ಯಾಯಾಲಯ; ಕನ್ನಡದಲ್ಲಿಯೇ ಬೋಧಿಸುವುದಾಗಿ ಪ್ರಮಾಣ ಪತ್ರ ಸಲ್ಲಿಸಿದರೆ ಉಳಿಗಾಲ ಇಲ್ಲವಾದರೆ ಶಾಶ್ವತವಾಗಿ ಮಾನ್ಯತೆ ರದ್ದು ಎಂಬ ಮಹತ್ವದ ತೀರ್ಪು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗೆ ಒಮ್ಮೊಮ್ಮೆ ಅನಿಸುತ್ತದೆ; ಯಾಕೆ ಹೀಗೆಲ್ಲಾ ಆಯಿತು. ಸಮಸ್ಯೆಯ ಮೂಲ ಕಾರಣವೇನು. ಯಾರದೋ ತಪ್ಪಿಗೆ ಈಗ ಅಮಾಯಕ ಪುಟಾಣಿಗಳು ಶಿಕ್ಷೆ ಅನುಭವಿಸಬೇಕೇ ಎಂದು.

 ಈ ಎಲ್ಲಾ ಸಮಸ್ಯೆಗಳಿಗೆ ಯಾರು ಹೊಣೆ?

  • ಆಂಗ್ಲ ಮಾಧ್ಯಮದಲ್ಲಿ ಬೋಧಿಸಿದರೆ ಪೋಷಕರಿಂದ ಹೆಚ್ಚಿನ ಹಣ ಕಿತ್ತುಕೊಳ್ಳಬಹುದೆಂಬ ದುರಾಸೆಗೆ ಬಿದ್ದ ಶಾಲಾ ಆಡಳಿತ ಮಂಡಳಿಯವರೇ?
  • ಹತ್ತಾರು ವರ್ಷಗಳಿಂದಲೇ ಅವ್ಯಾಹತವಾಗಿ ನಡೆಯುತ್ತಿದ್ದ ಭಾಷಾ ನೀತಿಯ ಉಲ್ಲಂಘನೆಯನ್ನು ಹಣದ ಆಮಿಷಕ್ಕೊಳಗಾಗಿಯೋ ಅಥವಾ ದಿವ್ಯ ನಿರ್ಲಕ್ಷದಿಂದಲೋ ಕಡೆಗಣಿಸಿ ಸುಮ್ಮನೇ ಕುಳಿತ ಕ್ಷೇತ್ರ ಶಿಕ್ಷಣಾಧಿಕಾರಿಗಳೇ?
  • ಇವೆಲ್ಲಾ ಗೊತ್ತಿದ್ದೂ ಜಾಣ ಕಿವುಡರಂತೆ ವರ್ತಿಸುತ್ತಿದ್ದ ರಾಜಕಾರಣಿಗಳೇ?
  • ಇಷ್ಟು ವರ್ಷಗಳ ಕಾಲ ಏನೇನೂ ಕ್ರಮ ಕೈಗೊಳ್ಳದೇ ಈಗ ಧಿಡೀರನೆ ಭೀಕರ ಕಾನೂನು ಸಮರಕ್ಕಿಳಿದ ಸರ್ಕಾರವೇ?
  • ಆಂಗ್ಲ ಮಾಧ್ಯಮದಲ್ಲಿ ಓದಿದರೇನೇ ಹೆಚ್ಚು ಪ್ರತಿಷ್ಠೆ ಹಾಗೂ ಅನುಕೂಲ, ಕನ್ನಡಮಾಧ್ಯಮದಲ್ಲಿ ಕಲಿಯುವುದು ಅವಮಾನ, ನಿಷ್ಪ್ರಯೋಜಕವೆಂದು ತಿಳಿದು ಡೊನೇಷನ್ ಎಷ್ಟಾದರೂ ಸರಿ ಕಲಿಸಿದರೆ ಆಂಗ್ಲ ಮಾಧ್ಯಮದಲ್ಲೇ ಕಲಿಸಬೇಕೆಂದು ಪಟ್ಟು ಹಿಡಿಯುವ ಪೋಷಕವರ್ಗವೇ?
  • ಕನ್ನಡ ಮಾಧ್ಯಮ ಶಾಲೆಗಳ ಅದರಲ್ಲೂ ಸರ್ಕಾರೀ ಕನ್ನಡ ಶಾಲೆಗಳ ಗುಣಮಟ್ಟದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೇ ಅವುಗಳನ್ನು ದೊಡ್ಡಿಗಳ ಮಟ್ಟಕ್ಕೆ ತಂದಿರುವ ಸರ್ಕಾರವೇ?
  • ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ದುಬಾರಿ ಆಂಗ್ಲ ಶಾಲೆಗಳಿಗೆ  ಕಳುಹಿಸಿ ಹೊರಗಿನಿಂದ ಕನ್ನಡವೇ ಬೇಕು, ಕನ್ನಡವೇ ಸರ್ವಸ್ವವೆಂದು ಒಣ ಭಾಷಣ ಬಿಗಿದು ಉರಿಯುವ ಬೆಂಕಿಕೆ ಇನ್ನಷ್ಟು ತುಪ್ಪ ಸುರಿಯುವ "ಬುದ್ಧಿ ಜೀವಿ"ಗಳೇ?

ಪರಿಹಾರವಿದೆಯೇ?

ಇದು ಚಿಂತನಾರ್ಹ ವಿಷಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯ ಜ್ಞಾನ ಅವಶ್ಯಕವೆಂಬುದರಲ್ಲಿ ಎರಡು ಮಾತಿಲ್ಲ. ಸರ್ಕಾರವು ಒಂದನೇಯ ತರಗತಿಯಿಂದಲೇ ಕನ್ನಡ ಮಾಧ್ಯಮ ಶಾಲೆಗಳಲ್ಲೂ ಇಂಗ್ಲೀಷನ್ನು ಒಂದು ವಿಷಯವಾಗಿ ಬೋಧಿಸುವ ನಿರ್ಧಾರಕ್ಕೆ ಬಂದದ್ದು ಶ್ಲಾಘನಾರ್ಹ. ಆದರೆ ಇದೊಂದೇ ಸಾಲದು. ಕನ್ನಡ ಮಾಧ್ಯಮ ಶಾಲೆಗಳ ಅದರಲ್ಲೂ ಸರ್ಕಾರೀ ಶಾಲೆಗಳ ಮೂಲಭೂತ ಸೌಕರ್ಯಗಳ, ಕಲಿಕಾ ಗುಣಮಟ್ಟದ ಸುಧಾರಣೆಯಾಗಬೇಕು. ಖಾಸಗೀ ಆಂಗ್ಲ ಮಾಧ್ಯಮದ ಶಾಲೆಗಳಿಗೆ ತಾವೇನೂ ಕಡಿಮೆಯಿಲ್ಲ. ಅಲ್ಲಿ ಸಿಗುವ ಎಲ್ಲ ಉತ್ಕೃಷ್ಠ ಗುಣಮಟ್ಟದ ಶಿಕ್ಷಣ ಸರ್ಕಾರೀ ಶಾಲೆಗಳಲ್ಲೂ ಲಭ್ಯವೆಂಬುದನ್ನು ಪೋಷಕರಿಗೆ ಮನದಟ್ಟಾಗುವಂತೆ ಶಾಲೆಗಳ ಅಭಿವೃದ್ಧಿಯಾಗಬೇಕಿದೆ. ಹಾಗಾದಾಗ ಕೇವಲ ಕೆವವೊಂದೇ ಶಾಲೆಗಳಿಗೆ ಅಂಟಿಕೊಂಡಿರುವ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ಸೇರಿಸಲು ಹಿಂಜರಿಯುವುದಿಲ್ಲ. ಇದರಿಂದ ದುಬಾರಿ ಡೊನೇಷನ್ ಹಾವಳಿಯನ್ನೂ ತಪ್ಪಿಸಬಹುದು. ಅಲ್ಲದೇ ಗುಣಮಟ್ಟದ ಶಿಕ್ಷಣದ ಹೆಸರಲ್ಲಿ ಹೆಚ್ಚಿಗೆ ಹಣವನ್ನು ಕಿತ್ತುಕೊಳ್ಳುವ ಧನ ದಾಹೀ ಆಡಳಿತ ಮಂಡಳಿಯವರಿಗೂ ಕಡಿವಾಣಹಾಕಬಹುದು. ಎಲ್ಲಿ ಬೇಡಿಕೆ ಕುಸಿಯುತ್ತದೋ, ಆವಾಗ ತನ್ನಿಂತಾನೇ ಭಾಷಾ ನೀತಿಯ ಪಾಲನೆಯೂ ಆಗುತ್ತದೆ.

ನನ್ನ ಪ್ರಕಾರ ಪ್ರಸಕ್ತ ಸಮಸ್ಯೆಗೆ ಸರ್ಕಾರ, ಪೋಷಕರು, ಶಿಕ್ಷಣಾಧಿಕಾರಿಗಳು, ರಾಜ ಕಾರಣಿಗಳು, ಶಾಲಾ ಆಡಳಿತ ವರ್ಗದವರೆಲ್ಲರೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹೊಣೆಯಾಗುತ್ತಾರೆ. ಅವರೆಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನರಿತು ಸೂಕ್ತವಾದ ಕ್ರಮ ಕೈಗೊಂಡರೆ ಮುಗ್ಧ ಕಂದಮ್ಮಗಳ ಭವಿಷ್ಯದ ಮೇಲಾಗುವ ಪರಿಣಾಮಗಳನ್ನು ತಪ್ಪಿಸಬಹುದು.

 ತಾವು ಏನಂತೀರಿ??...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet