ಕನ್ನಡದ entrepreneur

ಕನ್ನಡದ entrepreneur

ಬರಹ

ಕರ್ನಾಟಕದಲ್ಲಿ ಉದ್ಯಮಶೀಲತೆ ಮೆರೆದ ಕನ್ನಡಿಗ ಯಾರು ಎಂದಾಗ ಸಾಮಾನ್ಯ ಕೇಳಿ ಬರುವ ಹೆಸರು ನಾರಾಯಣ ಮೂರ್ತಿ. ಆದರೆ ಕನ್ನಡ ನಾಡಿನಲ್ಲೇ ಬದಲಾವಣೆಗೆ ಕಾರಣವಾದ ಕನ್ನಡ ಉದ್ಯಮಿ ಯಾರು ಎಂಬುದಕ್ಕೆ ಬಹುಶಃ ವಿಜಯ ಸಂಕೇಶ್ವರರನ್ನು ಹೆಸರಿಸಬಹುದೇನೊ. ಇವರ ಉದ್ಯಮಗಳು NYSEವರೆಗೆ ಹೋಗದಿದ್ದರೂ ಕರ್ನಾಟಕದಲ್ಲಿ ಒಂದು ರೀತಿಯ ಕ್ರಾಂತಿಯನ್ನೇ ಮಾಡಿತು ಎಂಬ ವಿಷಯವನ್ನು ಕರ್ನಾಟಕದಲ್ಲಿ ಈ ಬದಲಾವಣೆಗಳನ್ನು ಕಂಡವರು ಒಪ್ಪಿಕೊಳ್ಳದೆ ಇರುವುದಿಲ್ಲ.

ವಿಜಯ ಕರ್ನಾಟಕದ ಇಂದಿನ ಸಂಚಿಕೆಯ ಅತಿಥಿ ಸಂಪಾದಕ (guest editor) ಸಂಸ್ಥೆಯ ಸಂಸ್ಥಾಪಕರೇ ಆದ ವಿಜಯ ಸಂಕೇಶ್ವರರು ಎಂಬುದನ್ನ ಕೇಳಿ "ಅವರೇನು ಬರೆದಿರಬಹುದು?" ಎಂಬ ಕುತೂಹಲದಿಂದ ಬೆಳಗಿನ ಪೇಪರ್ ಎಂದಿಗಿಂತ ಹೆಚ್ಚಿನ ಉತ್ಸಾಹದಲ್ಲಿ ಕೈಗೆತ್ತಿಕೊಂಡಿದ್ದೆ. ಮುಖಪುಟದಲ್ಲೇ ಅವರು ಬರೆದಿರುವ ಈ ನುಡಿಮುತ್ತು ಕಣ್ಣಿಗೆ ಬಿತ್ತು:

ಈ ಸ್ಥಿತಿ (ಸ್ಪರ್ಧಾಶೂನ್ಯ ಮನೋಭಾವ) ಬದಲಾಗಬೇಕೆಂದರೆ ನಾವು ಹಾಗೂ ನಮ್ಮ ವ್ಯವಸ್ಥೆ ಎರಡೂ ಬದಲಾಗಬೇಕು. ವಿಶ್ವದ ಎಲ್ಲೆಡೆಯಿಂದ ಎಲ್ಲ ಕ್ಷೇತ್ರಗಳ ದೊಡ್ಡ ದೊಡ್ಡ ಕಂಪೆನಿಗಳು, ಸಂಸ್ಥೆಗಳು ಭಾರತಕ್ಕೆ ದೊಡ್ಡದಾಗಿಯೇ ಕಾಲಿಟ್ಟಿವೆ, ಕಾಲಿಡುತ್ತಿವೆ. ಭಾರತ ಅತಿದೊಡ್ಡ ಮಾರುಕಟ್ಟೆ ಎಂಬುದು ಅವುಗಳಿಗೆ ಚೆನ್ನಾಗಿ ಗೊತ್ತು. ಆದರೆ ದುರದೃಷ್ಟವಶಾತ್ ನಾವೇನೆಂಬುದು ನಮಗೇ ಗೊತ್ತಿಲ್ಲ. ನಮ್ಮಲ್ಲಿ ಶಕ್ತಿ, ಸಾಮರ್ಥ್ಯ ಇದೆ. ಆದರೆ ಉದ್ಯಮಶೀಲತೆ, ಸಾಹಸ ಪ್ರವೃತ್ತಿ ಅಷ್ಟಾಗಿ ಇಲ್ಲ.

ಈ ಮಾತು ಕರ್ನಾಟಕ ಹಾಗೂ ಒಟ್ಟಾರೆ ಭಾರತದ ಸದ್ಯದ ಸ್ಥಿತಿಯನ್ನು ಕೆಲವೇ ವಾಕ್ಯಗಳಲ್ಲಿ ತಿಳಿಸಿದಂತಿದೆ.

ಅವಲೋಕಿಸಿ ನೋಡಿದರೆ ಉತ್ತರ ಭಾರತದಲ್ಲಿ ದಕ್ಷಿಣಕ್ಕಿಂತ ಉದ್ಯಮಶೀಲತೆ ಹೆಚ್ಚು - ಪಂಜಾಬ್, ಗುಜರಾತ್, ಯು ಪಿ ಮುಂತಾದ ರಾಜ್ಯಗಳಿಂದಲೇ ಭಾರತದ ಪ್ರಮುಖ ಉದ್ಯಮಗಳ ರೂವಾರಿಗಳು ಹೆಚ್ಚಾಗಿ ಬಂದದ್ದು ಕಾಣುತ್ತೇವೆ. ದಕ್ಷಿಣದಲ್ಲಿ ಹೆಚ್ಚಾಗಿ ಜೀವನದಲ್ಲಿ ರಿಸ್ಕ್ ಫ್ರೀ ಆಯ್ಕೆಯಾದ ಸಂಬಳದ ಕೆಲಸವನ್ನು ತೆಗೆದುಕೊಳ್ಳುವವರೇ ಹೆಚ್ಚು ಮಂದಿ. ಹೀಗಾಗಿ ಇಲ್ಲಿರುವ ಉದ್ಯಮಗಳ ರೂವಾರಿಗಳೂ ಹೆಚ್ಚು ಕಡಿಮೆ ಉತ್ತರದ ಮಂದಿಯೇ ಆಗಿರುವುದು ಹೆಚ್ಚು ಎಂಬುದು ಕಂಡುಬರುತ್ತದೆ. ಒಟ್ಟಾರೆ ಒಂದೊಮ್ಮೆ ಕಣ್ಣು ಹಾಯಿಸಿದರೆ ಕನ್ನಡಿಗರು ಉದ್ಯಮಗಳನ್ನು ಉಳಿದವರಿಗೆ ಬಿಟ್ಟುಕೊಟ್ಟು ಅವರಡಿ ಕೆಲಸ ಮಾಡುವಲ್ಲಿ ಹೆಚ್ಚು ನಿರತರು ಎಂದೂ ಅನ್ನಿಸದೇ ಇರುವುದಿಲ್ಲ. ಎಲ್ಲೋ ಎಂ ಟಿ ಆರ್ ನಂತಹ ಹೆಸರುಗಳು ಅಲ್ಲಿಲ್ಲಿ ಕೇಳಿಸುವುದ ಬಿಟ್ಟರೆ ಭಾರತದ ಸುಮಾರು ಪಾಲು ಉದ್ಯಮಗಳು ಪ್ರಾರಂಭವಾಗುವುದರಲ್ಲಿ ಇರುವ ಕನ್ನಡದವರ ಪಾಲು ಬಹಳ ಕಡಿಮೆ ಎಂಬುದು ಕಂಡುಬರುತ್ತದೆ.

ಇನ್ನು ವಿಜಯ ಸಂಕೇಶ್ವರರು ಮಾಡಿದ ಬದಲಾವಣೆ ನಾರಾಯಣಮೂರ್ತಿ ಎಂಡ್ ಕೋ ಮಾಡಿದ್ದಕ್ಕಿಂತ ತೂಕದಲ್ಲಿ ಹೆಚ್ಚು ಎಂಬ argument ಕೂಡ ನಾವು ಮುಂದಿಡಬಹುದು. ವಿ. ಸ. ನಡೆಸಿದ, ನಡೆಸಿರುವ ಉದ್ಯಮ ಕರ್ನಾಟಕದಲ್ಲಿ, ಕನ್ನಡದ ನಾಡಿನಲ್ಲಿ ನೇರ ಬದಲಾವಣೆಗಳನ್ನು ತಂದವು. ವಿಜಯ ಕರ್ನಾಟಕ ಪತ್ರಿಕೆಯೇ ಅದರಲ್ಲಿ ಒಂದು ಪ್ರಮುಖವಾದುದು. ಉದ್ಯಮಶೀಲತೆ ಕೊಡುವುದು ತೆಗೆದುಕೊಳ್ಳುವುದರ ಮಿಶ್ರ ಪೇಡ ಅಥವ ಕಹಿಯಾದ ಚೂಡಾ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಅದರಲ್ಲಿ ಎಷ್ಟರಮಟ್ಟಿಗೆ ನೆಲೆಕೊಟ್ಟ ನೆಲದಲ್ಲಿ ಪಾಸಿಟಿವ್ ಬದಲಾವಣೆಗೆ ಕಾರಣರಾಗಿದ್ದಾರೆ ಎಂಬುದರ ಅಳತೆಯಲ್ಲಿ ಬಹುಶಃ ತೂಗಿಸಿ ನೋಡಬೇಕು ಎಂದು ಕೂಡ ಆರ್ಗ್ಯುಮೆಂಟ್ ಮುಂದಿಡಬಹುದು. ಕೊನೆಯಲ್ಲಿ ಹರಿದ ಹಣದಲ್ಲಿ ಏನೇನು ಬದಲಾವಣೆಗಳಾದುವು ಎಂಬುದು ಮುಖ್ಯ ಎಂದನ್ನಿಸದೇ ಇರುವುದಿಲ್ಲ.
ವಿಜಯ ಸಂಕೇಶ್ವರರು ನಾರಾಯಣಮೂರ್ತಿ, ನೀಲೇಕಣಿಗಳಂತವರ ಎದುರು "ದಿ ಕನ್ನಡ entrepreneur" ಎನ್ನಿಸದೇ ಇರುವುದಿಲ್ಲ.