ಕನ್ನಡನಾಡಿನ ಖ್ಯಾತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ

ಕನ್ನಡನಾಡಿನ ಖ್ಯಾತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ

ನಮ್ಮ ದೇಶದಲ್ಲಿ ಸಾಮಾನ್ಯ ಜನರಿಗೆ ವಿಜ್ಞಾನಿಗಳ ಪರಿಚಯವಿರುವುದೇ ಇಲ್ಲ. ವಿಜ್ಞಾನಿಗಳೂ ಅಷ್ಟೇ ತಮ್ಮದೇ ಆದ ‘ದಂತ ಗೋಪುರ'ದಲ್ಲಿ ಬದುಕುತ್ತಾರೆ. ತಾವಾಯಿತು, ತಮ್ಮ ಸಂಶೋಧನೆಗಳಾಯಿತು ಎಂದು ಅವರದ್ದೇ ಲೋಕದಲ್ಲಿ ಖುಷಿಯಾಗಿರುತ್ತಾರೆ. ಅಪರೂಪಕ್ಕೊಮ್ಮೆ ವಿಜ್ಞಾನಿಗಳ ಹೆಸರು ಪತ್ರಿಕೆಯಲ್ಲಿ ಅಥವಾ ದೂರದರ್ಶನದಲ್ಲಿ ಬರುತ್ತದೆ. ನಾವು ಬಳಸುವ ಅಥವಾ ದೇಶದಲ್ಲಿ ಬಳಕೆಯಾಗುವ ಹಲವಾರು ವಸ್ತುಗಳಲ್ಲಿ ವಿಜ್ಞಾನಿಗಳ ಸಹಾಯ ಹಸ್ತ ಇದ್ದೇ ಇರುತ್ತದೆ. ರಕ್ಷಣಾ ಕ್ಷೇತ್ರ, ವೈಮಾನಿಕ ಕ್ಷೇತ್ರ ಅಥವಾ ಉಪಗ್ರಹಗಳ ಉಡ್ಡಯನ ಕಾರ್ಯಕ್ರಮಗಳಲ್ಲೆಲ್ಲಾ ವಿಜ್ಞಾನಿಗಳ ಸಹಯೋಗ ಇರುತ್ತದೆ.

ಇತ್ತೀಚೆಗೆ ನಿಧನರಾದ ವೈಮಾನಿಕ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹ ಅವರ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಾರದು.  ರೊದ್ದಂ ಅಪ್ಪಟ ಕನ್ನಡಿಗರು. ಅವರು ಬೆಂಗಳೂರಿನಲ್ಲಿ ೧೯೩೩ ಜುಲೈ ೨೦ರಂದು ಜನಿಸಿದರು. ಭಾರತೀಯ ವಿಜ್ಞಾನ ಸಂಸ್ಥೆ (IISc) ಇವರ ಅಜ್ಜನ ಮನೆಯ ಪಕ್ಕದಲ್ಲೇ ಇತ್ತು. ಬಾಲ್ಯದಲ್ಲಿ ಬೇಸಗೆ ರಜೆಯಲ್ಲಿ ಈ ಪರಿಸರದಲ್ಲೇ ಓಡಾಡಿಕೊಂಡಿದ್ದುದು ಅವರನ್ನು ವಿಜ್ಞಾನಿಯನ್ನಾಗಲು ಪ್ರೇರೇಪಿಸಿರಬಹುದು. ಇವರ ತಂದೆ ಆರ್.ಎಲ್.ನರಸಿಂಹಯ್ಯನವರು ವಿಜ್ಞಾನದ ಪ್ರಾಧ್ಯಾಪಕರಾಗಿದ್ದರು. ಆ ಕಾಲದಲ್ಲೇ (೧೯೩೦) ಅವರು ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರವನ್ನು ಬೋಧಿಸುತ್ತಿದ್ದರು. ವಿಜ್ಞಾನ ಕುರಿತಾದ ಲೇಖನಗಳನ್ನು ಕನ್ನಡದಲ್ಲೇ ಬರೆಯುತ್ತಿದ್ದರು. ಈ ವಾತಾವರಣದಲ್ಲಿ ಬೆಳೆದ ರೊದ್ದಂರವರಲ್ಲಿ ವಿಜ್ಞಾನಿಯಾಗುವ ಆಶೆ ಚಿಗುರಿತ್ತು. ಆದರೆ ತಂದೆಯವರಿಂದ ವಿಜ್ಞಾನದ ಕಲಿಕೆಗೆ ಬಹಳವೇನೂ ಬೆಂಬಲ ಸಿಗಲಿಲ್ಲ. ಆದರೆ ತಾಯಿ ಆರ್.ಎನ್.ಲೀಲಾ ದೇವಿಯವರು ಮಾತ್ರ ರೊದ್ದಂ ಅವರಲ್ಲಿ ಆಧ್ಯಾತ್ಮದ ಬಗ್ಗೆ ಒಲವನ್ನು ಮೂಡಿಸಿದರು.

ರೊದ್ದಂ ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ತಮ್ಮ ಶಿಕ್ಷಣವನ್ನು ಪಡೆದರು. ಆ ಸಮಯ ಅದೇ ಶಾಲೆಯಲ್ಲಿ ಭಾರತ ಕಂಡ ಮತ್ತೊಬ್ಬ ಶ್ರೇಷ್ಟ ವಿಜ್ಞಾನಿ ಸಿ.ಎನ್. ಆರ್. ರಾವ್ ಸಹ ಓದುತ್ತಿದ್ದರು. ಆದರೆ ಇವರಿಬ್ಬರ ವಿಭಾಗ ಮಾತ್ರ ಬೇರೆ ಬೇರೆಯಾಗಿತ್ತು. ಆ ಸಮಯ ಶಾಲೆಯಲ್ಲಿದ್ದ ಅಧ್ಯಾಪಕರು ವಿಜ್ಞಾನದ ಬಗ್ಗೆ ಬಹಳಷ್ಟು ವಿಷಯಗಳನ್ನು ರೊದ್ದಂ ಅವರಿಗೆ ತಿಳಿಸಿ ಅವರಲ್ಲಿ ಕುತೂಹಲ ಮೂಡಿಸಿದ್ದರು. ಅಶ್ವಥ ನಾರಾಯಣ ಎಂಬ ಶಿಕ್ಷಕರು ನೀಡಿದ ‘ಲೈವ್ಸ್ ಆಫ್ ಗ್ರೇಟ್ ಸೈಂಟಿಸ್ಟ್' ಪುಸ್ತಕವು ರೊದ್ದಂ ಅವರಲ್ಲಿ ಬಹಳ ಪ್ರಭಾವ ಬೀರಿತು. ಅವರ ಶಾಲೆಗೆ ಭೇಟಿ ನೀಡಿದ ಸರ್ ಸಿ.ವಿ. ರಾಮನ್ ಅವರ ಉಪನ್ಯಾಸ ಕೇಳಿದ ಬಳಿಕವಂತೂ ರೊದ್ದಂ ವಿಜ್ಞಾನಿಯಾಗಲು ಸಂಪೂರ್ಣವಾಗಿ ಮನಸ್ಸು ಮಾಡಿದರು. 

ಶಾಲಾ ಶಿಕ್ಷಣದ ಬಳಿಕ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಲಿಯಲು ಪ್ರವೇಶ ಪಡೆದರು. ಓಪನ್ ಡೇಸ್ ಸಮಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡುತ್ತಿದ್ದ ರೊದ್ದಂ ಅಲ್ಲಿಯ ಪ್ರಯೋಗಾಲಯಗಳಲ್ಲಿ ನಡೆಯುತ್ತಿದ್ದ ಸಂಶೋಧನೆಗಳ ಬಗೆ ಗಮನಹರಿಸುತ್ತಿದ್ದರು. ಎರಡನೇ ಮಹಾಯುದ್ಧದ ಕಾಲದಲ್ಲಿ ಉಪಯೋಗಿಸಿದ್ದ ಒಂದು ಯುದ್ಧ ವಿಮಾನವನ್ನು ಎರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ಎದುರು ನಿಲ್ಲಿಸಲಾಗಿತ್ತು. ಆ ಯುದ್ಧ ವಿಮಾನದ ಆಕಾರ, ವಿನ್ಯಾಸಗಳು ರೊದ್ದಂ ಆವರ ಮನಸ್ಸಲ್ಲಿ ನಾನಾ ರೀತಿಯ ಕುತೂಹಲಕಾರಿ ಯೋಜನೆಗಳಿಗೆ ದಾರಿಮಾಡಿಕೊಟ್ಟವು. ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಿಂದ ಎರೋನಾಟಿಕಲ್ ಇಂಜಿನಿಯರಿಂಗ್ ಸೇರಿಕೊಳ್ಳಲು ನಿರ್ಧಾರ ಮಾಡಿದರು. ಅವರ ನಿರ್ಧಾರಕ್ಕೆ ತಂದೆಯವರ ಬೆಂಬಲವೂ ದೊರೆಯಿತು. ಹೀಗಾಗಿ ಭಾರತಕ್ಕೆ ಓರ್ವ ಶ್ರೇಷ್ಟ ವೈಮಾನಿಕ ವಿಜ್ಞಾನಿ ದೊರೆತರು. ಇಂಜಿನಿಯರಿಂಗ್ ಮುಗಿಸಿ ಕ್ಯಾಲಿಫೋರ್ನಿಯಾದ ಕಾಲ್ ಟೆಕ್ ನಲ್ಲಿ ಪಿ ಹೆಚ್ ಡಿ ಪದವಿಯನ್ನು ಪಡೆದರು. ೧೯೬೨ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿಗೆ ಸೇರಿಕೊಳ್ಳುತ್ತಾರೆ.

ಬಹಳಷ್ಟು ಜನರಿಗೆ ರೊದ್ದಂ ಅವರ ಸಾಧನೆ ಏನು? ಎಂಬ ಕುತೂಹಲವಿರಬಹುದು. ಜನ ಸಾಮಾನ್ಯರ ಜ್ಞಾನ ಮಟ್ಟಕ್ಕೆ ಮೀರಿದ ಪ್ರಯೋಗಗಳಾಗಿರುವುದರಿಂದ ಅವೆಲ್ಲಾ ನಮ್ಮ ಗಮನಕ್ಕೆ ಬರುವುದಿಲ್ಲ. ಆದರೂ ಅವರ ಕಲ್ಪನೆಯ ಕೂಸೇ ‘ತೇಜಸ್' ಎಂಬ ಯುದ್ಧ ವಿಮಾನ. ಯುದ್ಧ ವಿಮಾನಗಳು ಹಾಗೂ ನಾಗರಿಕ ವಿಮಾನಯಾನಗಳಲ್ಲಿ ಆರಂಭಿಕ ದಿನಗಳಲ್ಲಿದ್ದ ಹಲವಾರು ಸಮಸ್ಯೆಗಳನ್ನು ರೊದ್ದಂ ಅವರು ಪರಿಹರಿಸಿದ್ದರು. ಎರೋಸ್ಪೇಸ್ ಮತ್ತು ಅತ್ಮಾಸ್ಪೆರಿಕ್ ಫ್ಲೂಯಿಡ್ ಡೈನಮಿಕ್ಸ್ ನತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು. ಹಾಗೆಯೇ ಯಾವುದೇ ದಿಕ್ಕಿನಲ್ಲಿ ಸಲೀಸಾಗಿ ಚಲಿಸಲು ಸಾಧ್ಯವಾಗುವಂತಹ ವಿಮಾನ, ಆಘಾತ ಅಲೆಗಳ ರಚನೆ, ಮೋಡಗಳ ಫ್ಲೂಯಿಡ್ ಡೈನಾಮಿಕ್, ಮೋಡಗಳ ಚಲನೆ, ಹವಾಮಾನ ಬದಲಾವಣೆ ಮತ್ತು ಮುಂಗಾರುವಿನ ಪ್ರಭಾವಗಳ ಬಗ್ಗೆ ಬಹಳಷ್ಟು ಅಧ್ಯಯನ ನಡೆಸಿ ಪರಿಹಾರಗಳನ್ನು ಕಂಡುಕೊಂಡಿದ್ದಾರೆ.  ಇವರು ಪ್ರಾರಂಭಿಸಿದ ಹಲವಾರು ಸಂಶೋಧನೆಗಳು ಯುವ ವಿಜ್ಞಾನಿಗಳಿಗೆ ಪ್ರೇರಣೆಯಾಗಿದೆ. 

ಯುದ್ಧ ವಿಮಾನ ತಯಾರಿಕಾ ಕ್ಷೇತ್ರದಲ್ಲಿ ಭಾರತ ಆ ಸಮಯದಲ್ಲಿ ಅಂಬೆಗಾಲಿಡುತ್ತಿದ್ದ ದಿನಗಳಾಗಿದ್ದವು. ಯುದ್ಧ ವಿಮಾನಗಳ ವೇಗ ಹೆಚ್ಚಿಸುವ ಬಗ್ಗೆ ರೊದ್ದಂ ಅವರು ಬಹಳಷ್ಟು ಪ್ರಯೋಗಗಳನ್ನು ಮಾಡಿದ್ದರು. ಅವರ ಪ್ರಯೋಗಗಳ ಫಲವೇ ನಮ್ಮ ‘ತೇಜಸ್' ಯುದ್ಧ ವಿಮಾನ. ರೊದ್ದಂ ಅವರ ಸಾಧನೆಗಳು ಹಲವಾರು. ಇವುಗಳನ್ನು ಗುರುತಿಸಿದ ಭಾರತ ಸರಕಾರ ಅವರಿಗೆ ೧೯೮೭ ರಲ್ಲಿ ಪದ್ಮಭೂಷಣ, ೨೦೧೩ರಲ್ಲಿ ಪದ್ಮವಿಭೂಷಣ ಪುರಸ್ಕಾರ ನೀಡಿ ಗೌರವಿಸಿದೆ. ೧೯೮೬ರಲ್ಲಿ ಕರ್ನಾಟಕ ರಾಜ್ಯೋತ್ಸವ ಗೌರವ, ೧೯೮೫ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಭಟ್ನಾಗರ್ ಪದಕ, ೧೯೯೨ರಲ್ಲಿ ಲಂಡನ್ ನ ರಾಯಲ್ ಸೊಸೈಟಿಯ ಫೆಲೊಶಿಪ್, ೨೦೧೨ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ನೀಡುವ ಸರ್.ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ಹೀಗೆ ಸುಮಾರು ೬೦ಕ್ಕೂ ಅಧಿಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳು ಇವರಿಗೆ ಸಂದಿವೆ. 

ರೊದ್ದಂ ನರಸಿಂಹ ಅವರು ತಮ್ಮ ೮೮ನೇ ವಯಸ್ಸಿನಲ್ಲಿ ಡಿಸೆಂಬರ್ ೧೪, ೨೦೨೦ರಂದು ನಿಧನ ಹೊಂದಿದರು. ರೊದ್ದಂ ಅವರು ಬಹಳ ಸರಳ ಹಾಗೂ ಸಹೃದಯ ವ್ಯಕ್ತಿತ್ವದವರಾಗಿದ್ದರು. ಪ್ರಚಾರದಿಂದ ಇವರು ದೂರವೇ ಇದ್ದರು. ಇವರ ಸಂಶೋಧನೆ ಹಾಗೂ ವೈಮಾನಿಕ ಕ್ಷೇತ್ರದಲ್ಲಿನ ಸಾಧನೆಗಳು ಮುಂದಿನ ಯುವ ವಿಜ್ಞಾನಿಗಳಿಗೆ ಖಂಡಿತವಾಗಿಯೂ ದಾರಿದೀಪವಾಗಲಿವೆ. ಅಗಲಿದ ಖ್ಯಾತ ವಿಜ್ಞಾನಿಗೆ ಮತ್ತು ಅವರ ಸಾಧನೆಗಳಿಗೆ ನಮನಗಳು. 

ಚಿತ್ರ ಕೃಪೆ: ಬೆಂಗಳೂರು ಸಯನ್ಸ್ ಗ್ಯಾಲರಿ ಜಾಲ ತಾಣ