ಕನ್ನಡವೆಂದರೆ ಬರಿನುಡಿಯಲ್ಲ…

ಕನ್ನಡವೆಂದರೆ ಬರಿನುಡಿಯಲ್ಲ…

'ಜೋಗದ ಸಿರಿ ಬೆಳಕಿನಲ್ಲಿ' ಕೇಳದವರು, ಮೆಚ್ಚದವರು ಯಾರೂ ಇರಲಾರರು. 'ಕುರಿಗಳು ಸಾರ್ ಕುರಿಗಳು ಸಾಗಿದ್ದೇ ಗುರಿಗಳು ಮಂದೆಯಲ್ಲಿ ಒಂದಾಗಿ,ಸ್ವಂತತೆಯೇ ಬರಿದಾಗಿ,ಇದರ ಬಾಲ ಅದು ಮತ್ತೆ...' 'ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅರ್ಥ, ನೀರೆಂದರೆ ಬರಿ ಜಲವಲ್ಲ ಅದು ಪಾವನ ತೀರ್ಥ' 

'ಜೋಗದ ಸಿರಿ ಬೆಳಕಿನಲ್ಲಿ

ತುಂಗೆಯ ತೆನೆ ಬಳುಕಿನಲ್ಲಿ

ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ

ನಿತ್ಯಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ

ನಿತ್ಯೋತ್ಸವ ತಾಯೆ ನಿತ್ಯೋತ್ಸವ

ಎಲ್ಲಾ ಹಾಡುಗಳನ್ನು ಕೇಳಿದಾಗ ಕರ್ಣಾನಂದವಲ್ಲವೇ?

ಫೆಬ್ರವರಿ ೫, ೧೯೩೬ರಂದು ಷೇಕ್ ಹೈದರ್ ಹಮೀದಾ ಬೇಗಂ ದಂಪತಿಗಳಿಗೆ ಬೆಂಗಳೂರಿನ ದೇವನಹಳ್ಳಿಯಲ್ಲಿ ಜನಿಸಿದ ಕರ್ನಾಟಕದ ಹೆಮ್ಮೆಯ ಕವಿಸಾಹಿತಿಗಳಾದ ಕೆ .ಎಸ್.ನಿಸಾರ್ ಅಹಮದ್ ರವರು. ಇವರಿಗೆ 'ನಿತ್ಯೋತ್ಸವ' ಕವಿಯೆಂಬ ಹೆಸರಿದೆ. ಭೂರಚನಾಶಾಸ್ತ್ರ, ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದವರು. ಮುಂದೆ ಶನವಾಜ್ ಬೇಗಂ ಅವರನ್ನು ಬಾಳಸಂಗಾತಿಯಾಗಿ ಮಾಡಿಕೊಂಡರು.

ನವ್ಯತೆಯ ಸೊಗಡಿನೊಂದಿಗೆ ತಾಳ, ಲಯ, ಯತಿ, ಗತಿಗಳ, ಗೇಯತೆಯೊಂದಿಗೆ ಹಾಡಲು ಯೋಗ್ಯವಾದ ಅನೇಕ ಕವನಗಳನ್ನು ಬರೆದರು. ಸಂವೇದನಾಶೀಲತೆಯ ಭಾವ ಹೆಚ್ಚಿನ ರಚನೆಗಳಲ್ಲಿ ಕಾಣಬಹುದು. 'ಕಾವ್ಯ, ವಿಮರ್ಶೆ, ಕವನ ಸಂಕಲನಗಳನ್ನು ಹೊರತಂದರು. ಮನಸು ಗಾಂಧಿ, ಬಜಾರು, ನಿತ್ಯೋತ್ಸವ, ನವೋಲ್ಲಾಸ, ಸಂಜೆ ಐದರ ವೇಳೆ, ಅನಾಮಿಕ ಆಂಗ್ಲರು ಕೆಲವು ಪ್ರಸಿದ್ಧವಾದವುಗಳು. ತನ್ನ ೧೦ನೇ ವಯಸ್ಸಿನಲ್ಲಿಯೇ 'ಜಲಪಾತ'ಎಂಬ ಕವನ ಸಂಕಲನ ಬರೆದವರು. ಒಟ್ಟು ೨೧ ಕವನ ಸಂಕಲನ, ೧೪ ವೈಚಾರಿಕ ಕೃತಿಗಳು, ೫ ಅನುವಾದಗಳು, ೧೩ ಸಂಪಾದಿತ ಕೃತಿಗಳು, ಬರೆದಿದ್ದಾರೆಂದು ತಿಳಿದು ಬರುತ್ತದೆ. ೨೦೦೮ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು.

೨೦೦೬ರಲ್ಲಿ ಮಾಸ್ತಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ಕೆಂಪೇಗೌಡ ಪ್ರಶಸ್ತಿ, ಡಾ. ಗೊರೂರು ಪ್ರಶಸ್ತಿ, ಕರ್ನಾಟಕ ನಾಟಕ ಫೆಲೋಶಿಪ್, ಮಂಗಳೂರಿನ ಸಂದೇಶ ಪುರಸ್ಕಾರ, ಕರ್ನಾಟಕ ವಿ.ವಿಯ ಗೌರವ ಡಾಕ್ಟರೇಟ್, ನಾಡೋಜ ಪ್ರಶಸ್ತಿ, ಸಂಗೀತ ಗಂಗಾ ಪುರಸ್ಕಾರ ಹೀಗೆ ಹಲವಾರು ಪ್ರಶಸ್ತಿಗಳ ಗರಿ ಮುಡಿಗೇರಿದ ನವೋದಯ ಹಾಗೂ ನವ್ಯ ಸಾಹಿತ್ಯದ ಅಪ್ರತಿಮ ಕವಿವರ್ಯರು.

ಇವರ ಅನೇಕ ಕವನಗಳು ಸುಗಮ ಸಂಗೀತ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿದೆ. ಕನ್ನಡದ ಹಬ್ಬದ ಕವಿ, ನಿತ್ಯೋತ್ಸವ ಕವಿಯೆಂದೇ ಜನಜನಿತರು.ಹಲವಾರು ಧ್ವನಿಸುರುಳಿಗಳು ಸಹ ಹೊರಬಂದು, ನಿಸಾರ್ ಸರ್ ಅವರು ಸರ್ವರ ಗೌರವಾದರಗಳಿಗೆ ಪಾತ್ರರಾಗಿದ್ದಾರೆ.

'ಆಸೆ ಅನ್ವರ್ಥಕ್ಕೆ ಆಹ್ವಾನ ನೀಡಿದಂತೆ' ಹೇಳುತ್ತಿದ್ದರಂತೆ. ಮಾನವನ ನಡೆ-ನುಡಿ, ವೇಷಭೂಷಣ, ಹಾವ ಭಾವಗಳಲ್ಲಿ ನಾಡ ಅಭಿಮಾನ ಕಾಣಬೇಕೆಂದವರು. ಸತ್ಯವನ್ನು ಸುಂದರವಾಗಿ ಬಿಂಬಿಸುವುದೊಂದು ಕಲೆ. ಅನುಭವ ಸಾಧ್ಯತೆಗಳು ವ್ಯಕ್ತವಾದಾಗ ಜನರ ಹೃದಯ ತಟ್ಟುತ್ತದೆ. ಆತ್ಮಾವಲೋಕನ ಮನುಷ್ಯನಲ್ಲಿ ಹಾಸುಹೊಕ್ಕಾಗಿರಬೇಕು, ಅದೇ ಬದುಕು. ತನಗೆಲ್ಲರೂ ಸಹಕರಿಸಬೇಕು, ತನ್ನನ್ನು ಎಲ್ಲರೂ ಮೆಚ್ಚಬೇಕು ಎಂಬುದು ಸರಿ, ಆದರೆ ನಾನು ಸಹ ಹಾಗೇ ಇರಬೇಕಲ್ಲವೇ ಎನ್ನುತ್ತಿದ್ದರಂತೆ. ಆಧುನಿಕ ಜೀವನಕ್ಕೆ ಬೇಕಾದ ಮನ:ಸಂಸ್ಕಾರ, ಹಳತು ಹೊಸತುಗಳ ಸಂಗಮ, ಆತ್ಮವೃದ್ಧಿ ಬರಹಗಾರನಲ್ಲಿರುವ ತುಡಿತ, ಸಾಮಾಜಿಕ ಸಂದೇಶ ಎಲ್ಲದರ ಸಮ್ಮಿಶ್ರ ಕಲೆ ಸಾಹಿತ್ಯ ಪ್ರಕಾರಗಳಲ್ಲಿರಲಿ. ವೈಜ್ಞಾನಿಕ ಮನೋಭಾವದಡಿಯಲ್ಲಿ ವಿಮರ್ಶೆಗಳಿರಲಿ. ಕೊನೆಗೊಂದು ಮಾತು ಹೇಳಿದರಂತೆ 'ವೃದ್ಧಾಪ್ಯ ಸ್ವಾಭಾವಿಕ, ಕಾಲನು ಯಾರನ್ನೂ ಬಿಟ್ಟಿಲ್ಲ. ಕಾಲ ಬಂದಾಗ ಕಾಲನ ಕರೆಯ ಧಿಕ್ಕರಿಸುವ ಅಧಿಕಾರ ನಮಗಿಲ್ಲ, ಹೋಗಲೇಬೇಕು.ಇರುವಾಗ ಚೆನ್ನಾಗಿರೋಣ. ತುಳಿದು ಬದುಕದೆ, ಕೈಯೆತ್ತಿ ಸಹಕರಿಸಿ ಮುನ್ನಡೆಯೋಣ’ ಹೊನ್ನಿನ ನುಡಿಗಳಲ್ಲವೇ? ಮೇ ೩, ೨೦೨೦ರಂದು ಕಾಲನ ಕರೆಗೆ ಓಗೊಟ್ಟು ನಮ್ಮನ್ನು ಅಗಲಿದರು. ಕನ್ನಡದ ನಿತ್ಯೋತ್ಸವ ಕವಿ ಸಾಹಿತಿ ಕೆ.ಎಸ್.ನಿಸಾರ್ ಅಹಮದ್ ರವರ ಜನ್ಮ ದಿನಕ್ಕೊಂದು ನುಡಿ ಬರಹ. ತಮ್ಮನ್ನು ಪಡೆದ ಕನ್ನಡಾಂಬೆ ಧನ್ಯಳು ಸರ್.

-ರತ್ನಾ ಕೆ ಭಟ್, ತಲಂಜೇರಿ

(ಆಕರ ಪುಸ್ತಕ: ಕವಿ ಸಾಹಿತಿಗಳ ಪರಿಚಯ)

ಚಿತ್ರ ಕೃಪೆ: ಇಂಟರ್ನೆಟ್ ತಾಣ