ಕನ್ನಡವೆಂದರೆ ಬರಿ ನುಡಿಯಲ್ಲ ಮುತ್ತಿನ ಮಣಿ ಸಾಲು...
ಫೆಬ್ರವರಿ ೨೧ ಅಂತರಾಷ್ಟ್ರೀಯ ಮಾತೃ ಭಾಷಾ ದಿನ. ಆ ಸಂದರ್ಭದಲ್ಲಿ ನನ್ನ ಮಾತೃ ಭಾಷೆಯಾದ ಕನ್ನಡ ಭಾಷೆಯ ಬಗ್ಗೆ ನನ್ನ ಅನಿಸಿಕೆ. ‘ಕನ್ನಡ’ ಎಂಬ ಪದವೇ ರೋಮಾಂಚನ. ಅಷ್ಟೂ ಸುಲಲಿತ, ಸುಂದರ, ಸುಶೋಭಿತ, ಸರ್ವಾಲಂಕಾರ ಭೂಷಿತ. ನಮ್ಮ ಕನ್ನಡ ನಾಡಿನ ನುಡಿ ಕನ್ನಡ ಭಾಷೆ. ಬಹಳ ಪ್ರಾಚೀನ ಭಾಷೆ ಹಳೆ, ನಡು ಮತ್ತು ನವ್ಯ ಕನ್ನಡವೆಂದು ನಾವು ಕಾಣಬಹುದು. ‘ಕುರಿತೋದದೆಯಿಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’. ಕನ್ನಡದ ಬಗ್ಗೆ, ಹೆಮ್ಮೆಯಿಂದ ಆದಿ ಕವಿ ಪಂಪ ಹೇಳಿದ್ದಾನೆ. ನಮ್ಮ ಮಾತೃಭಾಷೆ ಅಷ್ಟೂ ಆಕರ್ಷಣೆ.
ಹೊರ ನಾಡಿನ ಜನರಿಗೂ ಕನ್ನಡ ಭಾಷೆ ಇಷ್ಟ ಆಗುವುದನ್ನು ನಾವು ಎಷ್ಟೋ ಸಲ ನೋಡಿದ್ದೇವೆ, ಅನುಭವ ವೇದ್ಯ ಸಹ. ನಮ್ಮ ಪರಿಸರದಲ್ಲಿ ಇತರ ನಾಡಿನವರೂ ವಾಸವಿದ್ದಾರೆ. ಅವರ ಮಾತು ಕೇಳಿದಾಗ ನನಗೊಮ್ಮೆಮ್ಮೆ ಅನಿಸುವುದು, 'ನಮ್ಮವರು ಆಂಗ್ಲ ಭಾಷೆಯಲ್ಲಿ'ಮಾತನಾಡುವರು. ಆದರೆ ಅವರು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುವರು. ಯಾಕೆ? ಎಂದು ಕೇಳಿದಾಗ 'ಕನ್ನಡ ಹೇಳುವ ಹೆಸರೇ ಚಂದ. ಮಾತನಾಡಲು ಇನ್ನೂ ಸೊಗಸು, ಸರಳ ಸುಂದರ ಅಕ್ಷರಗಳು, ಪದಗಳು ಇಷ್ಟ ಎಂಬುದಾಗಿ. ಕನ್ನಡದಲ್ಲಿರುವ ಸಾಹಿತ್ಯ, ಕನ್ನಡ ಸಿನಿಮಾ ಹಾಡುಗಳು, ಭಾವಗೀತೆ ಎಲ್ಲವೂ ಇಂಪು ಕರ್ಣಾನಂದ. ಕರ್ನಾಟಕ ಶಾಸ್ತ್ರೀಯ ಸಂಗೀತ, ನಾಟ್ಯ ವಿಶೇಷ ಎಲ್ಲದರ ಸೊಗಡು ಊಹಿಸಲಸಾಧ್ಯ. ಜನಪದ ಸಾಹಿತ್ಯವಂತೂ ಹೋಳಿಗೆಯೊಳಗಿನ ಹೂರಣವಿದ್ದಂತೆ. ಸಿಡಿಲಬ್ಬರದ ಯಕ್ಷಗಾನ ವೇಷಭೂಷಣ, ಮಾತು ಎಲ್ಲವೂ ಮನಮೋಹಕ. ಆಕರ್ಷಣೀಯ. ನಮ್ಮ ದೇವರು, ದೈವಾರಾಧನೆ ಕನ್ನಡ ನೆಲ, ಜಲ, ಇಲ್ಲಿಯ ಜನರ ಮಾನವೀಯತೆ ಎಲ್ಲವು ಹೊರನಾಡಿನ ಜನರನ್ನು ಇಲ್ಲಿಗೆ ಬರುವಂತೆ,ಮಾತನಾಡುವಂತೆ ಮಾಡುತ್ತದೆ.
ಕನ್ನಡಿಗರ ಮನಸ್ಸು ವಿಶಾಲವಾದ್ದು. ಯಾರು ಬಂದರೂ ಆತ್ಮೀಯವಾಗಿ ಸ್ವಾಗತಿಸುವ ಮನೋಭಾವದವರು. ಹೊರನಾಡಿನವರು ನಮ್ಮ ನಾಡಲ್ಲಿ ಬಂದು ನಿಂತು ‘ಸಂಶೋಧನೆ’ ಮಾಡಿ ಹಲವಾರು ಪ್ರಬಂಧಗಳನ್ನು ಮಂಡಿಸಿ ಡಾಕ್ಟರೇಟ್ ಪಡೆದವರೂ ಇದ್ದಾರೆ. ಇದೆಲ್ಲ ಹೆಮ್ಮೆಯ ವಿಷಯವಲ್ಲವೇ? ಕನ್ನಡ ನಾಡಿನಲ್ಲಿ ಆಳಿದ ರಾಜ ವಂಶಗಳು, ಅಪ್ರತಿಮ ಸಾಹಸಿಗರು, ಶಿಲ್ಪಕಲಾ ವೈಭವಗಳು ಹಿಂದಿನ ಕೋಟೆಗಳು, ಐತಿಹಾಸಿಕ ಸ್ಥಳಗಳು ಇವುಗಳನ್ನೆಲ್ಲ ಅವಲೋಕಿಸಿದರೆ ಅತ್ಯಂತ ಧೀಮಂತ, ಶ್ರೀಮಂತ ನಾಡು ಕನ್ನಡನಾಡು. ಇಲ್ಲಿಯ ಐತಿಹಾಸಿಕ ಪರಂಪರೆ ಹೊರನಾಡಿನ ಕನ್ನಡಿಗರ ಮನವನ್ನು ಸೂರೆಗೊಂಡಿದೆ ಎಂದರೆ ತಪ್ಪಾಗಲಾರದು. ಕಾಡು, ಬೆಟ್ಟ, ಗುಡ್ಡ, ಅರಣ್ಯ ಸಂಪತ್ತು ಹೊಳೆ, ನದಿ, ಝರಿ, ಜಲಪಾತಗಳು ರಮಣೀಯ.
ಯಾವ ನಾಡಿನಲ್ಲಿದ್ದರೂ ಭಾಷೆ ಎನ್ನುವುದು ಎಲ್ಲರನ್ನೂ ಒಗ್ಗೂಡಿಸಿ ಹೊಂದಾಣಿಕೆಯ ಬದುಕು ನಡೆಸಲು ಅನುವು ಮಾಡಿ ಕೊಟ್ಟಿದೆ. ಎಲ್ಲೆಲ್ಲಿದ್ದವರೆಲ್ಲ ನಮ್ಮ ಕನ್ನಡ ನಾಡಿಗೆ ಬಂದು ಜೀವನ ಮಾಡುತ್ತಿದ್ದಾರೆ. ನಮ್ಮ ಆತ್ಮೀಯತೆ ಅವರನ್ನು ಇಲ್ಲಿಯೇ ನಿಲ್ಲುವಂತೆ ಮಾಡಿದೆ. ನಮ್ಮ ಮಾತು ಸರಳವಾದ ಕಾರಣ ಮತ್ತು ಬರೆಯಲು ಸುಲಭ. ಹಾಗಾಗಿ ಬೇಗ ಕಲಿತುಕೊಂಡು ಕನ್ನಡ ಮಾತನ್ನು ಪ್ರೀತಿಯಿಂದ ಒಪ್ಪಿ ಅಪ್ಪಿ ಕೊಂಡರು. ಇದು ನಮಗೆ ಹೆಮ್ಮೆಯ ವಿಷಯ ಸಹ. ಜ್ಞಾನ ಭಂಡಾರವೇ ಅಡಗಿದೆ.
‘ಕನ್ನಡವೆಂದರೆ ಬರಿ ನುಡಿಯಲ್ಲ ಮುತ್ತಿನ ಮಣಿ ಸಾಲು’ ಮುತ್ತು ಪೋಣಿಸಿದಂತಿರುವ ಭಾಷೆ ನಮ್ಮದು. ರಾಷ್ಟ್ರಕವಿ ಕುವೆಂಪು ಅವರು ‘ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡವೆಂದರೆ ಕಿವಿ ನಿಮಿರುವುದು’ ಎಂದರು. ‘ಕನ್ನಡಕೆ ಹೋರಾಡು ಕನ್ನಡದ ಕಂದ ಕನ್ನಡವ ಕಾಪಾಡು ನನ್ನ ಆನಂದ’, ಎಷ್ಟೊಂದು ಸೊಗಸು ಅಲ್ಲವೇ? ‘ಏರಿಸಿ ಹಾರಿಸಿ ಕನ್ನಡದ ಬಾವುಟ’ ಹಾಡಿದವರು ಬಿ.ಎಂ. ಶ್ರೀಕಂಠಯ್ಯನವರು.
‘ಕನ್ನಡ ನುಡಿ ನಮ್ಮ ಹೆಣ್ಣು ಮಗಳು’ ಎಂದರು ಸಾಹಿತಿಗಳು. ಸಾಹಿತಿಗಳು ಭಾಷೆಯ ಬಗ್ಗೆ ಬಹಳಷ್ಟು ಅಭಿಮಾನ ಬೆಳೆಸಿ, ಮಹಾಗ್ರಂಥಗಳನ್ನು ಸಹ ಕನ್ನಡ ಭಾಷೆಯಲ್ಲಿ ರಚಿಸಿದ್ದಾರೆ. ಕನ್ನಡ ನಾಡಿನಿಂದ ಹೊರ ನಾಡಿಗೆ ಸಂಬಂಧಗಳನ್ನು ಬೆಸೆಯುವುದರಿಂದಲೂ ಭಾಷಾಭಿಮಾನ ಮೂಡಲು ಕಾರಣವಾಯಿತು. ನಮ್ಮ ಭಾಷೆ ನಮಗೆ ಹೆಮ್ಮೆ.
‘ಜೈ ಕನ್ನಡಾಂಬೆ, ಕನ್ನಡ ಭಾಷೆಗೆ ಕೈಯೆತ್ತೋಣ, ಕನ್ನಡ ಭಾಷೆಯನ್ನು ಪ್ರೀತಿಸೋಣ’
-ರತ್ನಾ ಕೆ.ಭಟ್,ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ