ಕನ್ನಡಿಗರ ಒಳಧ್ವನಿ...

ತಮನ್ನಾ ಭಾಟಿಯಾ ವಿರುದ್ಧದ ಅಸಹನೆ ಕನ್ನಡಿಗರ ಆಳದ ನೋವಿನ ಕೂಗು. ತಮನ್ನಾ ಭಾಟಿಯಾ ಎಂಬ ಸಿನಿಮಾ ನಟಿಯನ್ನು ಕರ್ನಾಟಕದ ಪಾರಂಪರಿಕ ಉದ್ಯಮ ಸಂಸ್ಥೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಸಂಸ್ಥೆ ಮೈಸೂರ್ ಸ್ಯಾಂಡಲ್ ಸೋಪಿನ ಅಧಿಕೃತ ರಾಯಭಾರಿಯಾಗಿ ಆರು ಕೋಟಿಗೂ ಹೆಚ್ಚು ಹಣ ನೀಡಿ ಒಪ್ಪಂದ ಮಾಡಿಕೊಂಡಿದ್ದು, ಅದು ಬಹಿರಂಗವಾದ ತಕ್ಷಣವೇ ಬಹುತೇಕ ಕನ್ನಡ ನಾಡಿನ ಹೋರಾಟದ ಮನಸ್ಸುಗಳು ತೀಕ್ಷ್ಣ ಪ್ರತಿಕ್ರಿಯೆ ನೀಡಿ ಅದಕ್ಕೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದವು.
ಸಂಸ್ಥೆಯ ಪರವಾಗಿ ಕೈಗಾರಿಕಾ ಸಚಿವರು ತಮನ್ನಾ ಭಾಟಿಯಾ ಎಂಬ ಖ್ಯಾತ ನಟಿಯನ್ನು ಆಯ್ಕೆ ಮಾಡಿಕೊಳ್ಳಲು ಅವರಿಗಿದ್ದ ಕೆಲವು ಕಾರಣಗಳು, ವ್ಯಾವಹಾರಿಕ ಉದ್ದೇಶಗಳು, ಅನಿವಾರ್ಯತೆ ಮತ್ತು ಅನುಕೂಲತೆಗಳನ್ನು ವಿಧವಿಧವಾಗಿ ಬಿಡಿಸಿ ಹೇಳಿದರು. ಆದರೂ ಜನರ ಅಸಮಾಧಾನ, ಆಕ್ರೋಶ ತಗ್ಗಲಿಲ್ಲ. ಇನ್ನೂ ಸಹ ಚರ್ಚೆಗಳು ನಡೆಯುತ್ತಲೇ ಇದೆ.
ಇದಕ್ಕೆ ಈ ಕ್ಷಣದಲ್ಲಿ ತಮನ್ನಾ ಭಾಟಿಯ ಎಂಬ ಪರಭಾಷಾ ನಟಿ ತತ್ ಕ್ಷಣದ ಕಾರಣವಾದರೂ ಅದರ ಹಿಂದೆ ಕನ್ನಡಿಗರ ಈ ಅಸಹನೆ ಸ್ಫೋಟಗೊಳ್ಳಲು ಹಲವಾರು ಕಾರಣಗಳಿವೆ. ನನಗಿರುವ ಸ್ವಲ್ಪಮಟ್ಟಿನ ಮಾಹಿತಿಯಂತೆ ಇಡೀ ಭಾರತದಲ್ಲಿ ಪ್ರಾದೇಶಿಕ ಭಾಷೆಗಾಗಿ ಹೋರಾಟ ಮಾಡಬೇಕಾದ ಮತ್ತು ಮಾಡುತ್ತಿರುವ ಅತಿ ಹೆಚ್ಚು ಸಂಘಟನೆಗಳಿರುವುದು ಕರ್ನಾಟಕದಲ್ಲಿ. ಬಹುಶಃ ಕನ್ನಡ ಭಾಷೆಯ, ಕನ್ನಡ ಸಂಸ್ಕೃತಿಯ ಅಸ್ಮಿತೆಯನ್ನು ಉಳಿಸಲು ಭಾಷಾವಾರು ಪ್ರಾಂತ ರಚನೆಯಾದ ದಿನದಿಂದಲೂ, ಕರ್ನಾಟಕ ಏಕೀಕರಣದ ನಂತರವೂ ಸಾಕಷ್ಟು ಹೋರಾಟಗಳು ನಡೆಯುತ್ತಲೇ ಇವೆ.
ಅದಕ್ಕೆ ಹಲವಾರು ಕಾರಣಗಳು ಇವೆ. ನಮ್ಮೊಳಗಿನ ಭಾಷಾಭಿಮಾನ ಒಂದಷ್ಟು ಕಡಿಮೆ ಇರುವ ಮೂಲ ಕಾರಣ ಮಾತ್ರವಲ್ಲದೆ, ಪರಭಾಷಿಕರ ಹಾವಳಿಗೆ ದಕ್ಷಿಣ ಭಾರತದ ದ್ರಾವಿಡ ಭಾಷೆಗಳಲ್ಲಿ ಅತಿ ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಕನ್ನಡವೇ. ಭೌಗೋಳಿಕವಾಗಿ ಕರ್ನಾಟಕ ಭಾರತ ದೇಶದಲ್ಲಿಯೇ ಇರುವುದರಲ್ಲಿ ಅತ್ಯಂತ ಸುರಕ್ಷಿತ ಪ್ರದೇಶ ಎಂಬ ಭಾವನೆ ಉತ್ತರ ಭಾರತೀಯರಲ್ಲಿದೆ. ಜೊತೆಗೆ ಕರ್ನಾಟಕ ಪ್ರಾಕೃತಿಕವಾಗಿಯೂ ಒಳ್ಳೆಯ ಸಂಪನ್ಮೂಲಭರಿತ ರಾಜ್ಯವಾಗಿದೆ. ಇಲ್ಲಿನ ವಾತಾವರಣ ಅತ್ಯುತ್ತಮ ಸ್ಥಿತಿಯಲ್ಲಿದೆ. ಪ್ರಾಕೃತಿಕ ವಿಕೋಪಗಳು ತುಂಬಾ ಕಡಿಮೆ. ಭದ್ರತೆ ಮತ್ತು ರಕ್ಷಣೆ ಉತ್ತಮವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕರ್ನಾಟಕದ ಜನ ಉದಾರವಾದಿಗಳು, ಆತ್ಮೀಯರು. ತೀರಾ ಒರಟಾಗಿ ನಡೆದುಕೊಳ್ಳುವುದಿಲ್ಲ. ಇರುವುದರಲ್ಲಿ ಒಂದಷ್ಟು ಸಂಸ್ಕಾರವಂತರಾಗಿ ಇತರ ರಾಜ್ಯಗಳ ಜನರಿಗೂ ಗೌರವ ಕೊಡುತ್ತಾರೆ. ಹೆಚ್ಚು ತಂಟೆತಕರಾರು ಮಾಡುವುದಿಲ್ಲ. ವೈವಿಧ್ಯಮಯ ಆಹಾರ ಪದ್ಧತಿಯೂ ಇಲ್ಲಿದೆ.
ಇದರಿಂದಾಗಿ ಪರಭಾಷಿಕರ ವಲಸೆ ಒಂದು ಹಂತದವರೆಗೆ ಯಾವುದೇ ಸಮಸ್ಯೆ ಉಂಟುಮಾಡಲಿಲ್ಲ. 70/80/90 ರ ದಶಕದಲ್ಲಿ ತಮಿಳು ಭಾಷಿಕರಿಂದ ಒಂದಷ್ಟು ಸಮಸ್ಯೆ ಉಂಟಾಗಿ, ಅಸಮಾಧಾನ ಜಾಸ್ತಿಯಾಗಿ ಕಾವೇರಿ ಗಲಾಟೆಯಲ್ಲಿ ಅದು ಉತ್ತುಂಗಕ್ಕೇರಿ, ಒಂದಷ್ಟು ಘರ್ಷಣೆಗಳು ನಡೆದು, ಇತ್ತೀಚಿನ ವರ್ಷಗಳಲ್ಲಿ ಅದು ತಹಬಂಧಿಗೆ ಬಂದಿದೆ. ಆದರೆ ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಉತ್ತರ ಭಾರತೀಯರು ತೀರಾ ತೀರಾ ಅತಿಯಾಗಿ ಕರ್ನಾಟಕದ ಎಲ್ಲ ಭಾಗಗಳ ಮೇಲೆ ಬಹುತೇಕ ದಾಳಿ ಎನ್ನುವಂತೆ ಬಂದು ಸೇರತೊಡಗಿದ್ದಾರೆ. ಅದು ಕೇವಲ ರೈಲ್ವೆ ಇಲಾಖೆ, ಬ್ಯಾಂಕಿಂಗ್, ಆಡಳಿತ ಮಾತ್ರವಲ್ಲದೆ ಕಟ್ಟಡ ಕಾರ್ಮಿಕರು, ವ್ಯಾಪಾರಿಗಳು, ಹೋಟೆಲ್ ಕೆಲಸಗಾರರು ಮುಂತಾದ ಇತರ ಎಲ್ಲಾ ಸ್ಥಳೀಯ ಕೆಲಸಗಳಿಗೂ ಕೂಡ ಬಹಳಷ್ಟು ಉತ್ತರ ಭಾರತೀಯರು ಬಂದು ಸೇರಿಕೊಂಡಿದ್ದಾರೆ.
ಆ ಸಂಖ್ಯೆ ಕನ್ನಡಿಗರ ದಿನನಿತ್ಯದ ಚಟುವಟಿಕೆಗಳಲ್ಲಿಯೇ ಎದ್ದು ಕಾಣುತ್ತಿದೆ. ಯಾವ ಹೋಟೆಲ್ ಗೆ ಹೋದರು, ಯಾವ ಅಂಗಡಿಗೆ ಹೋದರು, ಯಾವ ಮನರಂಜನಾ ಸ್ಥಳಕ್ಕೆ ಹೋದರು ಬಹುತೇಕ ಹಿಂದಿ ಭಾಷಿಕರು ಕಾಣಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲೂ ಅವರೇ ತುಂಬುತ್ತಿದ್ದಾರೆ. ಆ ಸಂಖ್ಯೆ ಹೆಚ್ಚಾದಾಗ ಸ್ಥಳೀಯ ಸಂಸ್ಕೃತಿ, ಭಾಷೆ, ಉಡುಗೆ ತೊಡುಗೆ, ಆಹಾರ ಮುಂತಾದವುಗಳ ವಿಷಯದ ಮೇಲೆ ಅನಧಿಕೃತವಾಗಿ ದಾಳಿಯಂತ ಒತ್ತಡ ಹೆಚ್ಚಾಗುತ್ತಿದೆ. ಅದು ಸ್ಥಳೀಯರ ಗಮನಕ್ಕೂ ಬರುತ್ತಿದೆ.
ಈ ನಡುವೆ ಕೇಂದ್ರ ಸರ್ಕಾರದಿಂದ ಹಿಂದಿ ಭಾಷೆಯ ಒತ್ತಾಯದ ಹೇರಿಕೆ, ಅಲ್ಲಲ್ಲಿ ಕಿಡಿಗೇಡಿ ಉತ್ತರ ಭಾರತೀಯರ ಕೆಲವು ಸಣ್ಣಪುಟ್ಟ ಘಟನೆಗಳು ಮಾಧ್ಯಮದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಅದು ಕನ್ನಡಿಗರಲ್ಲಿ ಹೆಚ್ಚು ಹೆಚ್ಚು ಆಕ್ರೋಶವನ್ನುಂಟು ಮಾಡುತ್ತಿದೆ. ಇದು ಮುಂದಿನ ಹಂತಕ್ಕೆ ಹೋಗುವ ಅಪಾಯಕಾರಿ ಹಂತ ತಲುಪುವ ಮೊದಲೇ ಸರ್ಕಾರ ಏನಾದರೂ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
ಹೀಗೇ ಅತಿಯಾದ ವಲಸೆ ಮುಂದುವರಿದರೆ ಇಲ್ಲಿನ ಸ್ಥಳೀಯ ಸಾಂಸ್ಕೃತಿಕ ವ್ಯವಸ್ಥೆಗೆ ಧಕ್ಕೆಯಾಗುವುದು ಶತಸಿದ್ಧ. ಭಾರತ ಒಂದು ಒಕ್ಕೂಟ ವ್ಯವಸ್ಥೆ. ಇಲ್ಲಿ ರಾಜ್ಯಗಳ ಮಧ್ಯೆ ವಲಸೆಗೆ ಯಾವುದೇ ನೀತಿ ನಿಯಮ ಅಥವಾ ಮಿತಿ ಇಲ್ಲ. ಆದರೆ ವಲಸೆಗೆ ಒಂದು ಮಿತಿ ಖಂಡಿತ ಇರಲೇಬೇಕು. ಗರಿಷ್ಠ ಶೇಕಡ 20 ರಷ್ಟು ವಲಸೆಯನ್ನು ಯಾವುದೇ ಸಂಸ್ಕೃತಿ ಸಾಮಾನ್ಯವಾಗಿ ತಡೆದುಕೊಳ್ಳಬಹುದು. ಅದಕ್ಕಿಂತ ಹೆಚ್ಚಾಗಿ ಯಾವುದೇ ಕಾರಣದಿಂದಾದರೂ ವಲಸೆ ಹೆಚ್ಚಾಗಿ ಸ್ಥಳೀಯ ಜನಸಂಖ್ಯೆಯ ಮೇಲೆ, ಸಂಸ್ಕೃತಿಯ ಮೇಲೆ ಒತ್ತಡ ಹೆಚ್ಚಾದರೆ ಆಗ ಘರ್ಷಣೆ ಪ್ರಾರಂಭವಾಗುತ್ತದೆ.
ಅದರಲ್ಲೂ ಉದ್ದೇಶಪೂರ್ವಕವಾಗಿ ಭಾಷೆ ಮೇಲೆ, ಧರ್ಮದ ಮೇಲೆ ರಾಜಕೀಯವಾಗಿ ಒತ್ತಾಯ ಹೇರಿದರೆ, ಪರೋಕ್ಷ ಪ್ರೋತ್ಸಾಹ ದೊರೆತರೆ, ಆಗ ಪರಿಣಾಮ ಮತ್ತಷ್ಟು ಭೀಕರವಾಗಲಿದೆ. ಕರ್ನಾಟಕದಲ್ಲಿ ಆ ಪರಿಸ್ಥಿತಿ ನಿಧಾನವಾಗಿ ಉದ್ಭವವಾಗುತ್ತಿದೆ. ದಯವಿಟ್ಟು ಆಡಳಿತ ಮಾಡುತ್ತಿರುವ ಎಲ್ಲಾ ರಾಜಕೀಯ ನೇತಾರರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಜೊತೆಗೆ ಹೋರಾಟಗಾರರು ಸಹ ಕೇವಲ ಘಟನೆಗಳ ವಿರುದ್ಧ ಹೋರಾಟ ಮಾತ್ರ ಮಾಡದೆ ಆಡಳಿತದ ಮೇಲೆ ಈ ವಿಷಯದಲ್ಲಿ ಗಮನಹರಿಸಿರುವಂತೆ ಸರ್ಕಾರದ ಮೇಲೆಯೇ ಹೆಚ್ಚು ಒತ್ತಡ ತರಬೇಕಾಗಿದೆ. ಎಲ್ಲೋ ಕೆಲವು ಘಟನೆಗಳನ್ನು ನಮ್ಮ ವೈಯಕ್ತಿಕ ನೆಲೆಯಲ್ಲಿ ತಡೆಗಟ್ಟಿ ಪ್ರತಿಭಟಿಸುವುದು ಸಾಕಾಗುವುದಿಲ್ಲ.
ಈ ವಲಸೆಯನ್ನು ನಿಯಂತ್ರಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಪರ್ಯಾಯ ಮಾರ್ಗಗಳನ್ನು ತಿಳಿದುಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಲೇಬೇಕಾಗಿದೆ. ವಲಸೆಯು ಯಾವುದೇ ಕಾರಣದಿಂದ ದೊಡ್ಡ ಪ್ರಮಾಣದಲ್ಲಿಯಾದರೆ ವಿಶ್ವದ ಯಾವುದೇ ನಾಗರಿಕತೆಯು ಉಳಿಯುವುದು ಕಷ್ಟ. ಕರ್ನಾಟಕ ಸಾಬೂನು ಸಂಸ್ಥೆ ಬೇರೆ ಭಾಷೆಯ ಇತರರನ್ನು ರಾಯಭಾರಿಯಾಗಿ ಸಾಕಷ್ಟು ಸಲ ಆಯ್ಕೆ ಮಾಡಿದೆ. ಆದರೆ ಇತ್ತೀಚಿನ ಅನೇಕ ಈ ಕನ್ನಡದ ಮೇಲಿನ ದೌರ್ಜನ್ಯದ ಅಸಹನೆ ಒಟ್ಟಾಗಿ ಸೇರಿ ತಮನ್ನಾ ಭಾಟಿಯಾ ವಿಷಯದಲ್ಲಿ ಸ್ಪೋಟಗೊಂಡಿದೆಯಷ್ಟೇ...
ಕುವೆಂಪು ಅವರ " ವಿಶ್ವಮಾನವ ಪ್ರಜ್ಞೆ " ಬಸವಣ್ಣನವರ " ಇವ ನಮ್ಮವ ಇವ ನಮ್ಮವ " ಎನ್ನುವ ಭಾವನೆ ಎಲ್ಲವೂ ನಮ್ಮ ರಕ್ಷಣೆಯ ಮೊದಲ ಆದ್ಯತೆಯ ನಿಬಂಧನೆಗೆ ಒಳಪಟ್ಟಿರುತ್ತದೆ. ನಾವು ಯಾರನ್ನೂ ದ್ವೇಷಿಸಬಾರದು, ಹಿಂಸಿಸಬಾರದು. ಆದರೆ ನಮ್ಮ ಅಸ್ಮಿತೆಗೆ, ಸ್ವಾಭಿಮಾನಕ್ಕೆ ಸಂಸ್ಕೃತಿಗೆ, ಸಹಜ ಜೀವನಶೈಲಿಗೆ ಹೊರಗಿನಿಂದ ಧಕ್ಕೆ ಉಂಟಾಗ ಅದನ್ನು ರಕ್ಷಿಸಿಕೊಳ್ಳುವುದು ನಮ್ಮ ಕರ್ತವ್ಯ, ಜವಾಬ್ದಾರಿ ಮತ್ತು ನಾಗರಿಕ ಸಾಮಾನ್ಯ ಪ್ರಜ್ಞೆ.
ಇಲ್ಲಿನ ನೀತಿ ನಿಯಮಗಳು, ಕಾನೂನು ಸುವ್ಯವಸ್ಥೆ ಮತ್ತು ನಮ್ಮ ಸಂಪೂರ್ಣ ರಕ್ಷಣೆಯ ಮಿತಿಯಲ್ಲಿ ವಲಸೆ ಇದ್ದಾಗ ಅವರನ್ನು ಅತಿಥಿಗಳಂತೆ ಸತ್ಕರಿಸುವುದು ಸಹ ನಮ್ಮ ಕರ್ತವ್ಯ. ಇದು ಈಗ ಮಿತಿ ಮೀರುತ್ತಿರುವುದರಿಂದ ನಮ್ಮ ಪ್ರತಿಭಟನೆ ಅವಶ್ಯ. ತಮನ್ನಾ ಭಾಟಿಯಾ ವಿರುದ್ಧದ ಅಸಹನೆ ಕೇವಲ ಸಾಂಕೇತಿಕ ಮಾತ್ರ. ಆಳದಲ್ಲಿ ಕನ್ನಡಿಗರಲ್ಲಿ ಸಾಕಷ್ಟು ನೋವಿದೆ.
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ