ಕನ್ನಡಿಗರ ಹಾಡು

ಕನ್ನಡಿಗರ ಹಾಡು

*ಹೊಂಗೆಯ ನಾಡು, ಹುಣಸೆಯ ಬೀಡು, ನಮ್ಮ ಕನ್ನಡ ನಾಡು*.

ಕನ್ನಡದ ಮಣ್ಣಿನಲಿ ಅದೇನೋ ಕಂಪು, ತಂಪು, ಕನ್ನಡಿಗರ ಮನದಲ್ಲಿ ನೆಮ್ಮದಿಯ ನೆಲೆ-ಸೆಲೆ, ಸಂಸ್ಕೃತಿಗೆ ಹೆಸರೇ ನಮ್ಮ ಕನ್ನಡ, ಕನ್ನಡದ ನೆಲದಿ ಹರಿಯುವ ಜಲದಿ ಕನ್ನಡ, ವನಸ್ಪತಿಯ ತೌರೂರು ನಮ್ಮ ಕನ್ನಡ ಎಂಬುದಾಗಿ ಕನ್ನಡದ ಮೇಲಿನ, ಭಾಷೆಯ ಮೇಲಿನ ಅಭಿಮಾನವನ್ನು ಕವನಗಳ ಮೂಲಕ ಬರೆದು, ಹಂಚಿ, ಓದುಗರಿಗೆ ನೀಡಿದ ಬಹಳಷ್ಟು ಹಿರಿಯ ಕವಿಗಳಿದ್ದಾರೆ, ಆಗಿ ಹೋದವರಿದ್ದಾರೆ.

*ಕನ್ನಡಿಗರಿಗ್ಯಾಕೆ ಮುತ್ತುರತ್ನದ ಚಿಂತೆ*ಉಣಲು ಉಡಲು ಇದ್ದರೆ ಸಾಕಲ್ಲವೇ? ಇಡಿಯ ಬದುಕಿನ ಚಿತ್ರಣವೇ ಈ ಸಾಲಿನಲ್ಲಿ ಅಡಗಿದೆಯಲ್ಲವೇ? ಕನ್ನಡ ಒಡಲ ಭಾಷೆ, ಕಡಲ ಭಾಷೆ, ನಮ್ಮ ಭಾಷೆ ಮಗು ಎಂದು  ಬರೆದು, ಮಗುವನ್ನು ಎಚ್ಚರಿಸಿದ್ದಾರೆ. ಪಂಪರನ್ನ ಹರಿಹರರು, ಜನ್ನ ಪೊನ್ನರು, ಅಕ್ಕಮಹಾದೇವಿ, ಬಸವಣ್ಣನವರು, ಹದಿಬದೆಯ ಧರ್ಮ ಸಾರವದು, ಕುಮಾರವ್ಯಾಸರ, ಆಡೊಂಬಲದ ಬೀಡು, ರಾಘವಾಂಕನು ಮೆರೆದ ನಾಡು ನಮ್ಮ ಕನ್ನಡ ನಾಡು. ಸರ್ವಜ್ಞನ ವಚನಗಳ ಸಾರ *ತುಂಬಿದ ಕೊಡ*.

ದಾಸವರೇಣ್ಯರ*ದಾಸ ಕೀರ್ತನೆಗಳ ಸಾರ ಅಜರಾಮರ* ಪಂಜೆಯವರು, ದ.ರಾ.ಬೇಂದ್ರೆಯವರು, ಕುವೆಂಪುರವರು, ಬೆನಗಲ್ ರಾಮರಾವ್, ಬಿ.ಎಂ.ಶ್ರೀಯವರು, ಮಾಸ್ತಿಯವರು, ಬೆಟಗೇರಿಯವರು, ಕಡೆಂಗೋಡ್ಲು ಶಂಕರ ಭಟ್, ದೊಡ್ಡ ರಂಗೇಗೌಡರವರು, ಬರಗೂರುರವರು, ಸಿದ್ಧಲಿಂಗಯ್ಯರವರು, ಕಯ್ಯಾರರವರು, ದಿನಕರ ದೇಸಾಯಿ, ಕೆ.ಎಸ್.ನರಸಿಂಹ ಸ್ವಾಮಿ, ನಿಸಾರ್ ರವರು ಅಬ್ಬಾ! ಒಬ್ಬೊಬ್ಬರ ಕವನಗಳ ಸಾರವ ಅರಿಯಲು ಸಾಧ್ಯವೇ? ನರನಾಡಿಯಲೂ ಪ್ರವಹಿಸುತಿದೆ *ಕನ್ನಡ*.

ಇತ್ತೀಚೆಗೆ ಬಹಳಷ್ಟು ಬದಲಾವಣೆಗಳನ್ನು ಭಾಷಾ ಬರಹದಲ್ಲಿ, ಆಡು ಮಾತಿನಲ್ಲೂ ನಾವು ಕಾಣುತ್ತಿದ್ದೇವೆ. ನವ್ಯ ಸಾಹಿತ್ಯ ಲೋಕದಲ್ಲಿ ಹೊಸತನದ ಉದಯವಾಗಿದೆ. ಬರಹದಲ್ಲೂ ವ್ಯಕ್ತವಾಗುತ್ತಿದೆ. *ತಾಳ, ರಾಗ, ಶ್ರುತಿ ಬದ್ಧವಾಗಿ ಹಾಡುವ ಕವನಗಳು ಒಂದೆಡೆಯಾದರೆ, ಓದಿಸಿಕೊಂಡು ಹೋಗುವ ನವ್ಯರಚನೆಗಳು ಇನ್ನೊಂದೆಡೆ. ನಾವು ಹೃದಯ ವೈಶಾಲ್ಯತೆಯಿರುವವರು. ಎಲ್ಲವನ್ನೂ ಪ್ರೀತಿ, ಗೌರವದಿಂದ ಸ್ವೀಕರಿಸಿ ಮನ್ನಣೆ ನೀಡುವವರು. ಇದೇ ಕನ್ನಡಿಗರಾದ ನಮ್ಮ ವೈಶಿಷ್ಟ್ಯ.

ಹಳೆಗನ್ನಡ, ನಡುಗನ್ನಡ, ಹೊಸಗನ್ನಡ, ಕಾಲಕ್ಕೆ ತಕ್ಕಂತೆ ಬದಲಾವಣೆ ಸಹಜ. ಹೊಸಗನ್ನಡದಲ್ಲೂ ಅನೇಕ ಉಪಭಾಷೆಗಳು, ಪ್ರಭೇದಗಳನ್ನು, ಸಾಹಿತ್ಯ ರಚನೆಗಳನ್ನು ಕಾಣುತ್ತಿದ್ದೇವೆ. ಭಾಷೆ *ಜೀವನದಿ* ಇದ್ದಂತೆ, ಹರಿಯುತ್ತಿದೆ, ನಿಂತಲ್ಲೇ ಇದ್ದರೆ ಭವಿಷ್ಯ ಎಲ್ಲಿದೆ? ಬದಲಾವಣೆಗಳಿಗೆ ತನ್ನನ್ನು ಒಡ್ಡಿಕೊಳ್ಳಲೇ ಬೇಕು.

ಇಂದಿನ ಈ ಕಾಲಘಟ್ಟದಲ್ಲಿ *ಕನ್ನಡ* ಉಳಿಸಿ ಬೆಳೆಸಬೇಕಾದರೆ, ಕನ್ನಡ ಸಾಹಿತ್ಯ ರಚನೆಕಾರರ ಕೊಡುಗೆ ಅಮೂಲ್ಯ. ಇಂದಿನ ಈ ಕಠೋರತೆಗಳಿಗೆ ಬರವಣಿಗೆಗಳು ತೆರೆದು ಕೊಳ್ಳಬೇಕು. ನಮ್ಮ ಯುವ ಜನರು, ಹಿಂದಿನವರ ಕೊಡುಗೆಗಳನ್ನು ದೃಷ್ಟಿಯಲಿಟ್ಟು ವ್ಯವಹರಿಸಿದರೆ ಮಾತ್ರ ಕನ್ನಡಕೆ ನೆಲೆ ಬೆಲೆ ಎರಡೂ ಸಿಗಬಹುದೆಂಬ ಆಶಾಭಾವನೆ. ಈ ರೀತಿಯಲ್ಲಿಯಾದರೂ ಕನ್ನಡನಾಡಿನ ಋಣವನ್ನು ಸಲ್ಲಿಸೋಣ.

ಜೈ ಕನ್ನಡಾಂಬೆ

(ವಿವಿಧ ಮೂಲಗಳಿಂದ)

-ರತ್ನಾಭಟ್ ತಲಂಜೇರಿ

ಚಿತ್ರದಲ್ಲಿ ಅಕ್ಕಮಹಾದೇವಿ ಮತ್ತು ಬಸವಣ್ಣನವರು (ಕೃಪೆ: ಇಂಟರ್ನೆಟ್)