ಕನ್ನಡಿ

ಕನ್ನಡಿ

 

ಭಾಗ - ಒಂದು

 

ನಾನೊಬ್ಬ ಮಾಂಸ ಮಾರುವವ.  ನನ್ನ ಮಾಂಸದಂಗಡಿ ಓಖಲಾ ರೈಲ್ವೇ ಸ್ಟೇಷನ್‌ನ ಮುಂದುಗಡೆಯೇ ಇದೆ.  ಸಬ್ಜಿ ಮಂಡಿಯ ಬಲಕ್ಕಿರುವ ಮಾರುತಿ ಸರ್ವೀಸ್ ಸೆಂಟರಿನ ಹಿಂಭಾಗದಲ್ಲಿ.  ಅಂಗಡಿಗೆ ಹೊಂದಿಕೊಂಡಂತೆ ಇರುವ ಒಂದು ಶೆಡ್ ನನ್ನ ಕಸಾಯಿಖಾನೆ.  ನೀವೇನಾದರೂ ಬೆಳಗಿನ ಐದು ಗಂಟೆಯಿಂದ ಎಂಟು ಗಂಟೆಯವರೆಗೆ ಪಕ್ಕದ ಕ್ಯಾಪ್ಟನ್ ಗೌರ್ ಮಾರ್ಗದಲ್ಲಿ ಕಾಲಾಡಿಸುತ್ತಿದ್ದರೆ ಅಥವಾ ಆ ವಿಶಾಲ ರಸ್ತೆಯ ಎರಡೂ ಪಕ್ಕಗಳಿಗೆ ಆತುಕೊಂಡಿರುವ ಈಸ್ಟ್ ಆಫ್ ಕೈಲಾಶ್‌ನ "ಜಿ" ಬ್ಲಾಕಿನ ಬಸ್ ಸ್ಟಾಪುಗಳಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತುಕೊಂಡಿದ್ದರೆ ನನ್ನ ಕಸಾಯಿಖಾನೆಯಿಂದ ಹೊರಡುವ "ಧಚ್ ಧಚ್" ಶಬ್ಧ ಖಂಡಿತಾ ನಿಮ್ಮ ಕಿವಿಗೆ ಬಿದ್ದೇ ಬೀಳುತ್ತದೆ.  ಎಂಟು ಗಂಟೆಯ ನಂತರವೂ ನನ್ನ ವ್ಯಾಪಾರ ನಡೆದೇ ಇರುತ್ತದೆ.  ಆದರೆ ರಸ್ತೆಯಲ್ಲಿ ನೆರೆಯ ನೀರಿನಂತೆ ಏರುವ ವಾಹನಗಳ ಹರಿದಾಟ ಹಾಗೂ ಮಾರುತಿ ಸರ್ವೀಸ್ ಸೆಂಟರಿನಲ್ಲಿ ರಿಪೇರಿಗೊಳಗಾತ್ತಿರುವ ಕಾರುಗಳ ಆಕ್ರಂದನದಲ್ಲಿ ನನ್ನ ಕಸಾಯಿಖಾನೆಯ ಎಲ್ಲ ಸದ್ದುಗಳೂ ಅಡಗಿಹೋಗುತ್ತವೆ.  ಒಮ್ಮೊಮ್ಮೆಯಂತೂ ಗಿರಾಕಿಗಳು ಕೇಳುತ್ತಿರುವುದು ಅರ್ಧ ಕಿಲೋ ಮಾಂಸವೋ ಅಥವಾ ಪೂರ್ತಿ ಎರಡೂ ಕಿಲೋಗಳೋ ಎಂದೇ ನನಗೆ ತಿಳಿಯುವುದಿಲ್ಲ.  ಶುಕ್ರವಾರ ಮತ್ತು ಭಾನುವಾರಗಳಲ್ಲಿ ನನ್ನ ವ್ಯಾಪಾರ ಬಲು ಜೋರು.  ಶನಿವಾರ ಅಷ್ಟಕ್ಕಷ್ಟೇ.  ಇತ್ತೀಚೆಗೆ ಗುರುವಾರಗಳಂದೂ ಹಾಗೇ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ.

ನನ್ನ ಬಾಪಾಜಿ ಆರಂಭಿಸಿದ ಕಸಾಯಿಖಾನೆ ಇದು.  ನಲವತ್ತೇಳರಲ್ಲಿ ಲಾಹೋರಿನಲ್ಲಿ ತನ್ನ ತಂದೆಯನ್ನು ಕೊಚ್ಚಿಹಾಕಿದ್ದನ್ನು ನಿಸ್ಸಹಾಯಕನಾಗಿ ನೋಡಿ ದಿಕ್ಕೆಟ್ಟು ತಾಯಿ, ಹೆಂಡತಿ ಮತ್ತು ಆ ಗಳಿಗೆಯಲ್ಲಿ ಕೈಗೆ ಸಿಕ್ಕಿದ ನಾಲ್ಕು ಮಕ್ಕಳನ್ನು ಎಳೆದುಕೊಂಡು ಬಾಪಾಜಿ ಇಲ್ಲಿಗೆ ಓಡಿಬಂದರಂತೆ.  ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದ ಮತೀಯ ಮಾರಣಹೋಮದ ಕಿಂಚಿತ್ತೂ ಸುಳಿವಿಲ್ಲದ ಆ ಮುಗ್ಧ ಬೆಳಗಿನಲ್ಲಿ ದೇವರ ಪೂಜೆಗೆಂದು ಹೂಗಳನ್ನು ತರಲು ಹತ್ತಿರದ ಅನಾರ್ಕಲಿ ಬಝಾರಿಗೆ ಹೋದ ನನ್ನ ಇಬ್ಬರು ಅಕ್ಕಂದಿರು ಹಿಂತಿರುಗಿ ಬರಲೇ ಇಲ್ಲವಂತೆ.  ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತನಾಗಿ ಇಲ್ಲಿಗೆ ಓಡಿಬಂದಾಗ ಹೆಂಡತಿ ಮಕ್ಕಳ ಹೊಟ್ಟೆ ಬೆಚ್ಚಗೆ ಮಾಡಿ ಅವರನ್ನು ಜೀವದಿಂದ ಉಳಿಸಿಕೊಳ್ಳಲು ಬಾಪಾಜಿಗೆ ಕಂಡ ಮಾರ್ಗ ಈ ಕಸಾಯಿಖಾನೆಯನ್ನು ತೆರೆಯುವುದೊಂದೇ ಅಂತೆ.  ಅವರಿಗೀಗ ವಯಸ್ಸಾಗಿದೆ.  ಎಂಭತ್ತರ ಹಣ್ಣು ಮುದುಕ.  ಹೆಚ್ಚಿನ ಸಮಯ ಚಾರಪಾಯಿಯಲ್ಲಿ ಕಣ್ಣು ಮುಚ್ಚಿಕೊಂಡು ಮಲಗಿರುತ್ತಾರೆ.  ಈ ಕಸಾಯಿಖಾನೆಯನ್ನು ನಾನು ವಹಿಸಿಕೊಂಡು ಇಪ್ಪತ್ತು ವರುಷಗಳೇ ಆಗುತ್ತಾ ಬಂದಿವೆ.  ವ್ಯಾಪಾರದ ಅನುಭವ ನನಗೆ ಹದಿನೈದು ವರ್ಷದವನಾಗಿದ್ದಾಗಿನಿಂದಲೂ ಇದೆ.  ನಿಜ ಹೇಳಬೇಕೆಂದರೆ ಒಬ್ಬ ಡಾಕ್ಟರ್ ಆಗಬೇಕೆಂದು ನನ್ನ ಆಸೆಯಾಗಿತ್ತು.  ಅದನ್ನು ಮಣ್ಣುಗೂಡಿಸಿದವರು ನನ್ನ ಶಾಲೆಯ ಚರಿತ್ರೆಯ ಮಾಸ್ತರರು.  ವಾರದಲ್ಲಿ ಕನಿಷ್ಟ ಮೂರು ದಿನವಾದರೂ ಅವರು ನಮ್ಮ ಅಂಗಡಿಯಿಂದ ಮಾಂಸ ತರುವಂತೆ ನನಗೆ ಹೇಳಿ ತರಗತಿಯಿಂದ ಅಟ್ಟುತ್ತಿದ್ದರು.  ಒಂದು ದಿನವೂ ದುಡ್ಡು ಕೊಡಲೇ ಇಲ್ಲ.  ಅವರನ್ನು ದುಡ್ಡು ಕೇಳಬಾರದು ಎಂದು ಬಾಪಾಜಿ ನನಗೆ ಹೇಳಿದ್ದರು.  ದುಡ್ಡಿನ ಬಗ್ಗೆ ನನಗೆ ಅಂತರ ಕಾಳಜಿಯೇನೂ ಇರಲಿಲ್ಲ.  ಪಾಠಗಳು ನಡೆಯುತ್ತಿರುವಾಗ ಮಾಂಸದಿಂದ ಭಾರವಾಗಿ ಕೆಳಗೆ ಜಗ್ಗುತ್ತಿದ್ದ ಕಪ್ಪು ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ತರಗತಿಯೊಳಗೆ ಪ್ರವೇಶಿಸುವುದು ನನಗೆ ತುಂಬಾ ಮುಜುಗರದ ಸಂಗತಿಯಾಗಿತ್ತು.  ನನ್ನ ಸಹಪಾಠಿಗಳೆಲ್ಲರೂ ನನ್ನತ್ತ ವಿಚಿತ್ರವಾಗಿ ನೋಡುತ್ತಿದ್ದರು.  ಮಾಸ್ತರೇನೋ ನನ್ನ ಕೈಯಿಂದ ಚೀಲವನ್ನು ಸೆಳೆದುಕೊಂಡು ಆತುರಾತುರವಾಗಿ ತಮ್ಮ ಚರ್ಮದ ಚೀಲದೊಳಕ್ಕೆ ಸೇರಿಸಿ "...ಕಳಿಂಗ ಯುದ್ಧದ ಭೀಕರತೆ ಸಾಮ್ರಾಟ್ ಅಶೋಕನನ್ನು ಕಂಗೆಡಿಸಿಬಿಟ್ಟಿತು..." ಎಂದು ನೆಮ್ಮದಿಯಿಂದ ಪಾಠ ಮುಂದುವರೆಸುತ್ತಿದ್ದರು.  ಆದರೆ ನನ್ನ ಪರಿಸ್ಥಿತಿ ಮಾತ್ರ ಶೋಚನೀಯವಾಗಿರುತ್ತಿತ್ತು.  ಬೆಂಚುಗಳ ನಡುವೆ ನಾನು ನಡೆಯುತ್ತಿದ್ದಂತೆ ಅವುಗಳಲ್ಲಿ ಕೂತ ನನ್ನ ಸಹಪಾಠಿಗಳು ನನ್ನಿಂದ ದೂರಕ್ಕೆ ವಾಲಿಕೊಂಡುಬಿಡುತ್ತಿದ್ದರು.  ಆತುರದಲ್ಲಿ ಹಾಗೆ ಮಾಡುವಾಗ ಒಬ್ಬರ ಮೇಲೊಬ್ಬರು ಉರುಳಿಕೊಳ್ಳುತ್ತಿದ್ದರು.  ನಾನು ನನ್ನ ಸ್ಥಳದಲ್ಲಿ ಹೋಗಿ ಕೂತೊಡನೇ ಅಲ್ಲಿದ್ದವರು ತಮ್ಮ ಪುಸ್ತಕದ ಚೀಲಗಳನ್ನೆತ್ತಿಕೊಂಡು ಅಕ್ಕಪಕ್ಕದ ಬೆಂಚುಗಳಿಗೆ ಜಿಗಿದುಬಿಡುತ್ತಿದ್ದರು.  ಮಾಸ್ತರರು ಮಾತ್ರ ಕಣ್ಣುಗಳನ್ನು ಅರೆಮುಚ್ಚಿಕೊಂಡು "...ಅರಮನೆಯ ಪಾಕಶಾಲೆಯಲ್ಲಿ ಮಾಂಸದಡಿಗೆಯನ್ನು ಸಂಪೂರ್ಣವಾಗಿ ನಿಷೇದಿಸಿದನು..." ಎಂದೇನೋ ಹೇಳುತ್ತಿರುತಿದ್ದರು.  ಹೀಗೆ ನನ್ನ ಕಿವಿಗೆ ಬಿದ್ದದ್ದೆಲ್ಲಾ ಚರಿತ್ರೆಯ ತುಣುಕುಗಳೇ.  ಒಂದಕ್ಕೊಂದು ಸಂಬಂಧವಿಲ್ಲದ ಬಿಡಿಬಿಡಿ ಚಿತ್ರಗಳು.  ನಮ್ಮ ನಾಡಿನ ಚರಿತ್ರೆ ಇಡಿಯಾಗಿ ನನಗಿನ್ನೂ ನಿಲುಕೇ ಇಲ್ಲ.

ನಾನು ಶಾಲೆ ಬಿಟ್ಟ ದಿನ ನನಗೆ ಚೆನ್ನಾಗಿ ನೆನಪಿದೆ.  ನಾನಾಗ ಒಂಬತ್ತನೆಯ ತರಗತಿಯಲ್ಲಿದ್ದೆ.  ಚರಿತ್ರೆಯ ಮಾಸ್ತರರು ಅರಬ್ ದಂಡನಾಯಕ ಮಹಮದ್ ಬಿನ್ ಖಾಸಿಂನ ಸಿಂಧ್ ಮೇಲಿನ ಆಕ್ರಮಣವನ್ನು ವಿವರಿಸಿ ಹೇಳುತ್ತಿದ್ದರು.  ನಾನು ಆಸಕ್ತಿಯಿಂದ ಕೇಳುತ್ತಿದ್ದೆ.  "...ಖಾಸಿಮನು ಸೋತ ರಾಜನ ಇಬ್ಬರು ಹೆಣ್ಣು ಮಕ್ಕಳಾದ ಸೂರ್ಯದೇವಿ ಮತ್ತು ಪರಮಾಲ್‌ದೇವಿಯನ್ನು ದಮಾಸ್ಕಸ್‌ನಲ್ಲಿದ್ದ ಖಲೀಫರಿಗೆ ಕಾಣಿಕೆಯಾಗಿ ಕಳುಹಿಸಿಕೊಟ್ಟನು" ಎಂದು ಹೇಳಿದಾಗ ನಾನು ವೇದನೆಗೊಳಗಾದೆ.  ಲಾಹೋರಿನಲ್ಲಿ ಮನೆಗೆ ಹಿಂತಿರುಗಲಾರದೇ ಹೋದ ನನ್ನ ಇಬ್ಬರು ಅಕ್ಕಂದಿರ ಹೆಸರುಗಳು ಸೂರ್ಯದೇವಿ ಮತ್ತು ಪರಮಾಲ್‌ದೇವಿ ಎಂದು.  ಅದು ನಮ್ಮ ಚರಿತ್ರೆಯ ಮಾಸ್ತರರಿಗೆ ಗೊತ್ತಿರಲೇ ಇಲ್ಲ.  ಅವರು ಹೇಳುತ್ತಲೇ ಇದ್ದರು: "...ದಮಾಸ್ಕಸ್‌ಗೆ ಕಳುಹಿಸಿಕೊಡುವ ಮೊದಲು ಖಾಸಿಮನು ಆ ಇಬ್ಬರು ರಾಜಕುಮಾರಿಯರನ್ನು ಎಂಜಲು ಮಾಡಿದ್ದನು ಎಂದು ಅವನ ವಿರೋಧಿಗಳು ಖಲೀಫರಿಗೆ ಚಾಡಿ ಹೇಳಿದರು..."  ನನಗೆ ಅಳು ಬಂತು.  ತಲೆತಗ್ಗಿಸಿ ಕಣ್ಣೀರೊರೆಸಿಕೊಂಡೆ.  ಮಾಸ್ತರರು ಥಟಕ್ಕನೆ ಪಾಠ ನಿಲ್ಲಿಸಿ ನನ್ನ ಹೆಸರಿಡಿದು ಕೂಗಿದರು.  ತಲೆಯೆತ್ತಿ ಅವರತ್ತ ನೋಡಿದೆ.  ನನ್ನ ಕಣ್ಣುಗಳಲ್ಲಿನ್ನೂ ನೀರಾಡುತ್ತಿತ್ತು.  "ನೋಡು ನನಗೆ ಮರೆತೇಹೋಗಿತ್ತು.  ಬೇಗ ಹೋಗಿ ಒಂದು ಕಿಲೋ ತಂದುಬಿಡು.  ಮಧ್ಯಾಹ್ನ ನನ್ನ ಅಕ್ಕ ಭಾವ ಬರುತ್ತಿದ್ದಾರೆ.  ಬೇಗ ಓಡು."  ಮಾಸ್ತರರು ಅವಸರಿಸಿದರು.  ನಾನು ಏಳಲಿಲ್ಲ.  "ನಾನು ಹೇಳಿದ್ದು ಕೇಳಿಸಲಿಲ್ಲವೇನು?  ಎದ್ದು ಓಡು.  ಹ್ಞುಂ!"  ಮಾಸ್ತರರು ಗದರಿದರು.  ನಾನು ಮೆಲ್ಲಗೆ ಮೇಲೆದ್ದೆ.  ತಲೆ ತಗ್ಗಿಸಿ ಮಾತಿಲ್ಲದೇ ಹೊರನಡೆದೆ.  ಬಾಗಿಲು ದಾಟುವಾಗ ಮಾಸ್ತರರು ಹಿಂದಿನಿಂದ ಕೂಗಿ ಹೇಳಿದರು: "ಸಾಕಷ್ಟು ಚರ್ಬಿ ಹಾಕಿಸಿಕೊಂಡು ಬಾ.  ಒಂದೆರಡು ನಲ್ಲಿಗಳೂ ಇರಲಿ.  ನಮ್ಮಕ್ಕನಿಗೆ ಅವು ತುಂಬಾ ಇಷ್ಟ."

ನಾನು ಅಂಗಡಿಗೆ ಹೋಗಲಿಲ್ಲ.  ಹತ್ತಿರದ ಕಾಲಿಕಾ ಮಂದಿರಕ್ಕೆ ಹೋಗಿ ಪಾಗಾರದ ಮೂಲೆಯಲ್ಲಿ ಸಂಜೆಯವರೆಗೆ ಸುಮ್ಮನೆ ಕೂತುಬಿಟ್ಟೆ.  ಕತ್ತಲಾಗುತ್ತಿದ್ದಂತೇ ಎದ್ದು ಕಾಲೆಳೆಯುತ್ತಾ ಮನೆಗೆ ಹೋದೆ.  ಮನೆಯಲ್ಲಿ ಎಲ್ಲರೂ ಗಾಬರಿಯಾಗಿದ್ದರು.  ಮಾಜೀ ಅಳುತ್ತಿದ್ದಳು.  ಅವಳಿಗೆ ತನ್ನ ಕಳೆದುಹೋದ ಇಬ್ಬರು ಹೆಣ್ಣುಮಕ್ಕಳ ನೆನಪಾಗಿತ್ತು.  ನನ್ನನ್ನು ಹುಡುಕಿಕೊಂಡು ಶಾಲೆಗೆ ಹೋದ ಬಾಪಾಜಿ ನನ್ನ ಪುಸ್ತಕದ ಚೀಲವನ್ನು ಮನೆಗೆ ತಂದಿದ್ದರು.  ನಾನು ನೇರವಾಗಿ ಅವರ ಬಳಿ ಹೋಗಿ ನಿಂತೆ.  "ಇನ್ನು ಮೇಲೆ ನಾನು ಶಾಲೆಗೆ ಹೋಗುವುದಿಲ್ಲ" ಅಂದೆ.  ಅವರು ಏನೂ ಪ್ರಶ್ನೆ ಕೇಳಲಿಲ್ಲ.  ಕೈ ಹಿಡಿದು ಪಕ್ಕ ಕೂರಿಸಿಕೊಂಡರು.  ನನ್ನ ಹೊಟ್ಟೆ ಮೇಲೆ ಕೈಯಾಡಿಸಿದರು.  "ಮಧ್ಯಾಹ್ನ ಏನಾದರೂ ತಿಂದೆಯಾ?"  ಕೇಳಿದರು.  ನಾನು ತಲೆ ತಗ್ಗಿಸಿದೆ.  ಮಾಜೀ ತಟ್ಟೆಯಲ್ಲಿ ಊಟ ತಂದಳು.  ಎಲ್ಲರೂ ತಂತಮ್ಮ ತಟ್ಟೆಗಳನ್ನು ಹಿಡಿದು ನನ್ನ ಸುತ್ತಲೂ ಕುಳಿತರು.  ಬೆಳಗಿನ ಉಪಾಹಾರದ ನಂತರ ಅದು ಆ ದಿನದ ಎಲ್ಲರ ಮೊದಲ ಊಟ.

ಊಟ ಮುಗಿಯುವ ಹೊತ್ತಿಗೆ ಅಬ್ದುಲ್ಲಾ ಬಂದ.  ಅವನು ಬಾಪಾಜಿಯ ಬಲಗೈ ಬಂಟ.  ಕುರಿಗಳನ್ನು ಕೊಂಡು ತರಲು ಬಾಪಾಜಿ ಅವನ ಜತೆ ಬದರ್‌ಪುರಕ್ಕೆ ಹೋಗಬೇಕಾಗಿತ್ತು.  ಬಾಪಾಜಿ ಅವನ ಕೈಯಲ್ಲಿ ದುಡ್ಡಿಟ್ಟು ನನ್ನನ್ನು ಜೊತೆ ಮಾಡಿ ಕಳುಹಿಸಿದರು.  "ಎಲ್ಲ ವ್ಯವಹಾರವನ್ನೂ ಅಬ್ದುಲ್ಲಾ ಮಾಡುತ್ತಾನೆ.  ನೀನು ಸುಮ್ಮನೆ ಮೌನವಾಗಿ ಎಲ್ಲವನ್ನೂ ನೋಡು" ಎಂದು ನನಗೆ ಹೇಳಿದರು.

ಮಾರನೆಯ ಬೆಳಿಗ್ಗೆ ಐದು ಗಂಟೆಗೆ ಬಾಪಾಜಿ ಕಸಾಯಿಖಾನೆಗೆ ಹೋಗುವಾಗ ನಾನೂ ಹೊರಟೆ.  ಅದಾಗಿ ಇಪ್ಪತ್ತಾರು ವರ್ಷಗಳೇ ಕಳೆದುಹೋದವು.  ಅಂದಿನಿಂದ ಇಂದಿನವರೆಗೂ ನನ್ನದು ಅದೇ ದಿನಚರಿ.  ನನ್ನ ತಮ್ಮ ಜಂಗ್‌ಪುರದಲ್ಲಿ ದಿನಸಿ ವ್ಯಾಪಾರ ಮಾಡುತ್ತಾನೆ.  ತಂಗಿಯರಿಬ್ಬರೂ ಮದುವೆಯಾಗಿ ತಂತಮ್ಮ ಗಂಡ ಮಕ್ಕಳೊಡನೆ ನೆಮ್ಮದಿಯಾಗಿದ್ದಾರೆ.  ನನಗೊಬ್ಬ ಮಗನಿದ್ದಾನೆ.  ಹೈಸ್ಕೂಲಿನಲ್ಲಿ ಓದುತ್ತಿದ್ದಾನೆ.  ಅವನ ಚರಿತ್ರೆಯ ಮಾಸ್ತರರು ಮಾಂಸ ತರುವಂತೆ ಅವನನ್ನು ಪೀಡಿಸುವುದಿಲ್ಲ.  ಮಾಸ್ತರರನ್ನು ನಾನೂ ನೋಡಿದ್ದೇನೆ.  ಇನ್ನೂ ಯುವಕ.  ಜೀನ್ಸ್ ಪ್ಯಾಂಟ್, ದೊಗಳೆ ಕುರ್ತಾ ಹಾಕಿಕೊಂಡು ಹೋತದ ಗಡ್ಡವನ್ನು ಹಾರಾಡಿಸುತ್ತಾ ಕನಸಿನಲ್ಲೆಂಬಂತೆ ತಿರುಗಾಡುತ್ತಿರುತ್ತಾನೆ.  ಅವನು ತರಗತಿಯಲ್ಲಿ ಬರೀ ಆಷ್‌ವಿಟ್ಜ್, ಬುಶೆನ್‌ವಾಲ್ಡ್, ಡಕಾವ್ ಮುಂತಾದ ಮನುಷ್ಯರ ಕಸಾಯಿಖಾನೆಗಳ ಬಗ್ಗೆ ಮಾತಾಡುತ್ತಾನೆ ಎಂದು ನನ್ನ ಮಗ ಹೇಳುತ್ತಾನೆ.  ಅಪ್ಪಿತಪ್ಪಿಯೂ ನನ್ನ ಕಸಾಯಿಖಾನೆಯ ಬಗ್ಗೆ, ತನ್ನ ಹೊಟ್ಟೆಯ ಬಗ್ಗೆ ಹೇಳುವುದಿಲ್ಲವಂತೆ.  ಅವನು ಹೆಚ್ಚಾಗಿ ಸಮಯ ಕಳೆಯುವುದು ವಿಜ್ಞಾನದ ಮೇಡಂ ಜತೆ ಅಂತೆ.  ಅವರಿಬ್ಬರೂ ಮದುವೆಯಾಗಬಹುದು ಎಂದು ತನ್ನ ಸಹಪಾಠಿಗಳು ಹೇಳುತ್ತಾರೆ ಎಂದು ನನ್ನ ಮಗ ಹೇಳುತ್ತಾನೆ.  ಅವರಿಬ್ಬರಿಗೂ ಮದುವೆ ಆಗಿಹೋಗಿದೆ, ಅದನ್ನು ಎಲ್ಲರಿಗೂ ಹೇಳಲು ಸಮಯ ಸನ್ನಿಹಿತವಾಗಿಲ್ಲ ಅಂದುಕೊಂಡು ತಮ್ಮ ಮದುವೆಯ ವಿಷಯವನ್ನು ಗುಟ್ಟಾಗಿಟ್ಟಿದ್ದಾರೆ ಎಂದೂ ಕೆಲವರು ಪಿಸುದನಿಯಲ್ಲಿ ಮಾತಾಡಿಕೊಳ್ಳುವುದನ್ನು ತಾನು ಕೇಳಿಸಿಕೊಂಡಿರುವುದಾಗಿಯೂ ನನ್ನ ಮಗ ಒಮ್ಮೆ ಹೇಳಿದ್ದ.

ಬಾಪಾಜಿಯ ಕಾಲದಲ್ಲಿ ಗಲ್ಲಾದಲ್ಲಿ ಕೂತು ಹಣ ಇಸಿದುಕೊಳ್ಳುವುದಷ್ಟೇ ಅವರ ಕೆಲಸವಾಗಿತ್ತು.  ಪಕ್ಕೆಲುಬುಗಳನ್ನು ಹೊರಚಾಚಿಕೊಂಡು ಕೊಕ್ಕೆಗಳಲ್ಲಿ ನೇತಾಡುವ ಕುರಿಗಳ ಬತ್ತಲೆ ದೇಹಗಳಿಂದ ಮಾಂಸವನ್ನು ಕತ್ತರಿಸಿ, ತೂಗಿ, ತುಂಡುಮಾಡಿ, ಕೊಚ್ಚಿ ಖೈಮಾ ಮಾಡಿ ಗಿರಾಕಿಗಳಿಗೆ ಕೊಡುವುದೆಲ್ಲಾ ಹರಿಲಾಲ್, ಧರಂವೀರ್ ಮತ್ತು ಯೂಸುಫನ ಕೆಲಸ.  ಕುರಿಗಳನ್ನು ಕತ್ತರಿಸುವ ಕೆಲಸವೆಲ್ಲಾ ಅಬ್ದುಲ್ಲಾನದು.  ಅದರ ಜತೆಗೆ ಕುರಿಗಳನ್ನು ಕೊಂಡುತರುವುದನ್ನೂ ಅವನೇ ಮಾಡುತ್ತಿದ್ದ.  ಬಾಪಾಜಿ ನನ್ನನ್ನು ಅವನ ಜೊತೆ ಮಾಡಿ ಬದರ್‌ಪುರಕ್ಕೆ, ನಂಗ್ಲೋಯಿಗೆ, ಮೆಹರೌಲಿಗೆ ಕಳುಹಿಸುತ್ತಿದ್ದರು.  ಅವನು ಕುರಿಗಳನ್ನು ಕತ್ತರಿಸುವುದನ್ನು ಮೊಟ್ಟ ಮೊದಲು ನೋಡಿದಾಗ ನನಗೆ ಆಘಾತವಾಗಿತ್ತು.  ಕುರಿಯನ್ನು ಕೆಡವಿಕೊಂಡು ಹಿಂಗಾಲು ಮುಂಗಾಲುಗಳನ್ನು ಒತ್ತಟ್ಟಿಗೆ ಸೇರಿಸಿ ಅವುಗಳ ಮೇಲೆ ತನ್ನ ಎಡಮಂಡಿಯನ್ನು ಹೇರಿ "ಬ್ಯಬ್ಯಬ್ಯ... ಬ್ಞಕ್ ಬ್ಞಾಕ್ ಬ್ಞುಹುಖ್..." ಎಂದು ಭೀತಿಯ ಸದ್ದು ಹೊರಡಿಸುತ್ತಿದ್ದ ಅದರ ಕತ್ತಿನ ಒಂದು ಕಡೆ ಚೂರಿಯನ್ನು ಒಂದೆರಡು ಸಲ ಆಡಿಸಿ ತೆಗೆಯುತ್ತಿದ್ದ.  "ಬ್ಞೊಖ್ ಬ್ಞೊಕ್... ಬ್ಞೂಬ್ಞೂಂ ಬ್ಞುಹುಹ್ಞೇ... ಎಂದು ಅರ್ತನಾದಗೈಯುವ ಕುರಿಯನ್ನೂ, ಛಿಲ್ಲನೆ ಚಿಮ್ಮುವ ರಕ್ತವನ್ನೂ ನೋಡುತ್ತಾ ತಣ್ಣಗೆ ಕುಳಿತುಕೊಳ್ಳುತ್ತಿದ್ದ.  ನಿಮಿಷದ ನಂತರ ತಪಸ್ಸಿನಿಂದ ಎಚ್ಚತ್ತಂತೆ ಅವನ ಕೈಯಲ್ಲಿದ್ದ ಚೂರಿ ಕುರಿಯ ಕತ್ತಿನ ಇನ್ನೊಂದು ಭಾಗವನ್ನು ಸವರುತ್ತಿತ್ತು.  ಮತ್ತೆ ತುಸು ಅಮಾಯಕ ತಪಸ್ಸು... ಮತ್ತೆ ಎಚ್ಚರಗೊಂಡ ಚೂರಿ... ಕುತ್ತಿಗೆಯ ಕೆಳಭಾಗದಲ್ಲಿ ಅದರ ಹರಿದಾಟ... ದೊಳದೊಳ ಹರಿವ ರಕ್ತ...  ಅಬ್ದುಲ್ಲಾ ಮೇಲೆದ್ದು ನಿಲ್ಲುತ್ತಿದ್ದ.  ಬಂಧವಿಮುಕ್ತವಾದ ಕುರಿಯ ಕಾಲುಗಳು ಭಯಂಕರವಾಗಿ ಒದರಾಡುತ್ತಿರುವಂತೇ ಮೂಲೆಯಲ್ಲಿದ್ದ ಮತ್ತೊಂದು ಕುರಿಯನ್ನು ಎಳೆದುಕೊಳ್ಳುತ್ತಿದ್ದ.

"ನೀನು ಅದನ್ನು ಒಂದೇ ಏಟಿಗೆ ಯಾಕೆ ಕತ್ತರಿಸುವುದಿಲ್ಲ?  ಚೂರುಚೂರೇ ಕತ್ತರಿಸಿ ಅದನ್ಯಾಕೆ ಹಿಂಸಿಸುತ್ತೀ?"  ನಾನು ಕನಲಿ ಕೇಳಿದೆ.  ಅವನು ನಕ್ಕುಬಿಟ್ಟ.  "ನೀನು ಹೊರಗೆ ಹೋಗು."  ನಗುತ್ತಲೇ ಚೂರಿ ಹಿಡಿದ ಕೈಯನ್ನು ಬಾಗಿಲತ್ತ ಚಾಚಿದ.

ಬಾಪಾಜಿ ಅವನ ಮೇಲೆ ಅತಿಶಯವಾದ ವಿಶ್ವಾಸವಿಟ್ಟಿದ್ದರು.

ಬಾಪಾಜಿಗೆ ವಿಶ್ರಾಂತಿಯಿತ್ತು ಕಸಾಯಿಖಾನೆಯ ಜವಾಬ್ದಾರಿಯನ್ನು ನಾನು ವಹಿಸಿಕೊಂಡ ಬೆಳಿಗ್ಗೆ ಕುರಿಯನ್ನು ಕೆಳಗೆ ಕೆಡವಿಕೊಂಡು ಚೂರಿ ಎತ್ತಿದ ಅಬ್ದುಲ್ಲಾನ ಮುಂದೆ ಹೋಗಿ ನಿಂತೆ.

"ಒಂದೇ ಏಟಿಗೆ ಕತ್ತರಿಸು.  ಏಕ್ ಮಾರ್ ದೋ ಟುಕಡಾ."  ಗಂಭೀರವಾಗಿ ಹೇಳಿದೆ.  ಅವನು ನಕ್ಕ.  ನೀನು ಹೊರನಡೆ ಅಂದ.  ನಾನು ಕಾಲುಗಳನ್ನು ಗಟ್ಟಿಯಾಗಿ ಊರಿ ನಿಂತೆ.  ಅವನು ವಿಚಲಿತನಾದ.  ಒಮ್ಮೆ ಸುತ್ತಲೂ ನೋಡಿದ.  ಬಾಪಾಜಿ ಮನೆಯಲ್ಲಿದ್ದರು.

"ನಿನಗೇನೂ ತಿಳಿಯುವುದಿಲ್ಲ, ಹೋಗು.  ಆಹಾರಕ್ಕಾಗಿ ಪ್ರಾಣಿಗಳನ್ನು ಹೀಗೇ ಕೊಲ್ಲಬೇಕು."  ಚೂರಿಯನ್ನು ಕುರಿಯ ಕತ್ತಿನತ್ತ ಕೊಂಡೊಯ್ದ.  ಆ ಕೈಯನ್ನೇ ನಾನು ಹಿಡಿದೆ.

"ಹೀಗೇ ಕೊಲ್ಲಬೇಕು ಅಂತ ಅದ್ಯಾರು ಕಲಿಸಿದರು ನಿನಗೆ?"  ನನ್ನ ದನಿ ತೀಕ್ಷ್ಣವಾಗಿತ್ತು.

"ನಮ್ಮ ಪುಸ್ತಕದಲ್ಲಿ ಹೇಳಿದೆ."  ಅವನು ಸೆಟೆದು ಹೇಳಿದ.

"ಯಾವ ಪುಸ್ತಕವೂ ಹಾಗೆ ಹೇಳಲು ಸಾಧ್ಯವಿಲ್ಲ.  ನೀನು ಸುಳ್ಳು ಹೇಳುತ್ತಿದ್ದೀಯ."

ಅವನು ಗಾಬರಿಗೊಂಡ.  "ನಾನು ಸತ್ಯವನ್ನೇ ಹೇಳುತ್ತಿದ್ದೇನೆ, ಅಲ್ಲಾನ ಆಣೆ."  ಅವನ ದನಿ ನಡುಗುತ್ತಿತ್ತು.  ತನ್ನ ಕಣ್ಣಮುಂದೆ ಬೆಳೆದ ಹುಡುಗ ತನ್ನ ನಂಬಿಕೆಗೇ ಸೆಡ್ಡು ಹೊಡೆಯುತ್ತಿರುವುದನ್ನು ಅವನು ಅರಗಿಸಿಕೊಳ್ಳಲಾರದವನಾಗಿದ್ದ.  ಅಲ್ಲಿ ನಡೆಯುತ್ತಿದ್ದುದು ತಲೆಮಾರುಗಳ ನಡುವಿನ ಸಂಘರ್ಷವೋ, ನಂಬಿಕೆಗಳ ನಡುವಿನ ವಿವಾದವೋ ಅರಿವಾಗದಂತೆ ಗೊಂದಲದಲ್ಲಿ ಕಣ್ಣರೆಪ್ಪೆಗಳನ್ನು ಪಕಪಕ ಆಡಿಸಿದ.

"ಮಾಂಸ ಮಾರುವುದು ನನ್ನ ವೃತ್ತಿ, ನಿಜ.  ಅದಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದು ನನ್ನ ಧರ್ಮ.  ಅದೂ ನಿಜ.  ಆದರೆ ಕೊಲ್ಲುವಲ್ಲಿ ಕ್ರೂರತನ ನನಗೆ ಸಮ್ಮತವಲ್ಲ.  ನೀನು ಒಂದೊಂದು ಸಲ ಚೂರಿ ತಾಗಿಸಿ ನಿಮಿಷಗಳವರೆಗೆ ತಪಸ್ಸು ಮಾಡುತ್ತಾ ಕೂರುತ್ತೀಯೆ.  ನೋವಿನಿಂದ ಒದ್ದಾಡುವ ಅದರತ್ತ ನಿನ್ನ ಗಮನವಿರುವುದಿಲ್ಲ."  ಅವನ ಭುಜ ಒತ್ತಿ ಹೇಳಿದೆ.  ಅವನು ಚೂರಿ ಕೆಳಗೆ ಹಾಕಿ ನನ್ನ ಕೈ ಹಿಡಿದುಕೊಂಡ.  ಬೇಡಿಕೆಯ ದನಿ ತೆಗೆದ:

"ಇಲ್ಲ.  ನೀನು ತಪ್ಪು ತಿಳಿದಿದ್ದೀಯೆ.  ಅದಕ್ಕೆ ಯಾವ ನೋವೂ ಆಗುವುದಿಲ್ಲ."

"ಅದಕ್ಕೆ ನೋವಾಗುತ್ತದೆ.  ನನಗೂ ಸಹಾ."  ಗಂಭೀರವಾಗಿ ಹೇಳಿದೆ.

"ನೀನು ಹುಚ್ಚ."  ಅವನು ಅಬ್ಬರಿಸಿದ.  "ನನ್ನ ಮಾತನ್ನು ನಂಬು.  ಪ್ರಾಣಿಗಳನ್ನು ಕೊಲ್ಲುವ ಅತೀ ಮಾನವೀಯ ವಿಧಾನ ಇದು.  ಒಂದೇ ಏಟಿಗೆ ಕುತ್ತಿಗೆ ಕತ್ತರಿಸಿದಾಗ ಆಗುವ ನೋವಿಗಿಂತ ಇದು ಕಡಿಮೆ..."

ಅವನ ಮಾತನ್ನು ಕತ್ತರಿಸಿದೆ.  ನೆಲದ ಮೇಲಿದ್ದ ಚಾಕುವನ್ನು ಕೈಗೆತ್ತಿಕೊಂಡೆ.

"ಹಾಗಿದ್ದರೆ... ನಿನ್ನ ಕುತ್ತಿಗೆಯನ್ನೂ ನಾನು ಹೀಗೇ ಕತ್ತರಿಸಲೇ?"

ಈಗ ಅವನ ಕಣ್ಣುಗಳಲ್ಲಿ ನೋವು ಕಂಡಿತು.

ಕುರಿಯ ಕಾಲುಗಳ ಮೇಲಿಂದ ತನ್ನ ಭಾರವನ್ನು ತೆಗೆದ.  ನಿಧಾನವಾಗಿ ಮೇಲೆದ್ದ.  ನಿಮಿಷದವರೆಗೆ ಕಂಬದಂತೆ ನಿಶ್ಚಲವಾಗಿ ನಿಂತ.  ತಲೆಯನ್ನು ಒಮ್ಮೆ ಸುತ್ತಲೂ ಹೊರಳಿಸಿ ತಗ್ಗಿಸಿದ.  ನನ್ನತ್ತ ತಿರುಗದೇ ನಿಧಾನವಾಗಿ ಬಾಗಿಲತ್ತ ನಡೆದುಹೋದ.  ತಲೆತಗ್ಗಿಸಿಯೇ ಬಾಗಿಲು ದಾಟಿದ.

ಆನಂತರ ಅವನನ್ನು ನಾನು ಮತ್ತೆ ನೋಡಲಿಲ್ಲ.

ನಿನ್ನೆ ಸಂಜೆಯೇ ನಾನು ಮಾತಾಡಿದ್ದ ಜಸ್‌ಬೀರ್ ಸಿಂಗ್ ಬಗ್ಗಾನಿಗೆ ಕರೆಕಳುಹಿಸಿದೆ.  ಆರಡಿ ಎತ್ತರದ ಆ ಭರ್ಜರಿ ಸಿಖ್ಖ ಒಡನೆಯೇ ಬಂದ...  ಮಚ್ಚನ್ನು ಅವನ ಕೈಲಿತ್ತೆ...  ಒಂದೇ ಏಟಿಗೆ ಕುರಿಯ ರುಂಡ ಕೆಳಗೆ ಬಿತ್ತು.  ಆಕ್ರಂದನವೂ ಇಲ್ಲ, ಒದ್ದಾಟವೂ ಇಲ್ಲ.

"ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವಾಗ ಒಂದೇ ಏಟಿಗೆ ಕುತ್ತಿಗೆ ಕತ್ತರಿಸಬೇಕು ಎಂದು ನಮ್ಮ ಪುಸ್ತಕ ಹೇಳುತ್ತದೆ" ಅಂದ ನಗುತ್ತಾ.

ಕೊಂದು ತಿನ್ನುವವರಿಗೆ ಯಾಕೆ ಈ ಪುಸ್ತಕಗಳ ಗೊಡವೆ?  ನನ್ನನ್ನೇ ಕೇಳಿಕೊಂಡೆ.

ಅಬ್ದುಲ್ಲಾ ಕೆಲಸ ತೊರೆದುಹೋದ ಎಂದಷ್ಟೇ ಬಾಪಾಜಿಗೆ ಹೇಳಿದೆ.  ಬೇರೇನನ್ನೂ ಹೇಳುವ ಅಗತ್ಯವಿಲ್ಲ ಎಂದು ನಾನು ನಿರ್ಧರಿಸಿದ್ದೆ.  ಆದರೆ ನಡೆದ ಸಂಗತಿ ಎರಡು ದಿನದಲ್ಲಿ ಅವರಿಗೆ ತಿಳಿದುಹೋಯಿತು.  ನನ್ನನ್ನು ನೇರವಾಗಿ ಕೇಳಿದರು.  ಹೌದು ಎಂದೆ.  ನನ್ನ ವರ್ತನೆಗೆ ವಿವರಣೆ ಕೊಡಲು ಬಾಯಿ ತೆರೆದೆ.  ಬಾಪಾಜಿ ಕೈಯೆತ್ತಿ ತಡೆದರು.  ಮೌನವಾಗಿ ತನ್ನ ಕೋಣೆ ಸೇರಿದರು.  ಚಹಾ ತೆಗೆದುಕೊಂಡು ಅಲ್ಲಿಗೆ ಹೋದ ಮಾಜೀಯ ಜತೆ ಅವರೇನೋ ಹೇಳುವುದು ಕೇಳಿಸಿತು.  ಮಾಜೀ ಹೊರಬರುವುದನ್ನೇ ಕಾದಿದ್ದು ಕೇಳಿದೆ.

"ಮಾಂಸ ಮಾರುವುದು ನಮ್ಮ ವಂಶದ ವೃತ್ತಿಯಾಗಿರಲಿಲ್ಲ.  ನಾನದನ್ನು ಆರಿಸಿಕೊಂಡೆ.  ಆದರೆ ಕೊಲ್ಲುವುದು ನನ್ನಿಂದಾಗಲಿಲ್ಲ.  ಅದಕ್ಕೆ ಅಬ್ದುಲ್ಲಾನನ್ನು ನೇಮಿಸಿಕೊಂಡೆ.  ಅವನ ಕೆಲಸ ಅವನಿಗೆ, ನನ್ನ ಕೆಲಸ ನನಗೆ.  ಒಬ್ಬರ ಕೆಲಸದಲ್ಲಿ ಮತ್ತೊಬ್ಬರು ತಲೆ ಹಾಕದೇ ಅವರವರ ಪಾಲಿನ ಕೆಲಸವನ್ನು ಅವರವರು ಮಾಡಿಕೊಂಡು ಹೋಗಬೇಕಾದ್ದು ಧರ್ಮ ಎಂದು ನಾವಿಬ್ಬರೂ ತಿಳಿದಿದ್ದೆವು.  ಆದರೀಗ ಕಾಲ ಬದಲಾಗುತ್ತಿದೆ ಎಂಬುದನ್ನು ನಾನು ಅರಿಯಬೇಕಾಗಿದೆ.  ಅರಿತಿದ್ದೇನೆ.  ಎಲ್ಲ ಕೃತ್ಯಗಳೂ ಒಂದು ಕೇಂದ್ರದಿಂದ ನಿಯಂತ್ರಿತವಾಗುವ ಕಾಲ ಇದು ಅಂದರು ನಿನ್ನ ಬಾಪಾಜಿ" ಅಂದಳು ಮಾಜೀ.

 

*     *     *

 

ಜಸ್‌ಬೀರ್ ಸಿಂಗ್ ಬಗ್ಗಾ ನನ್ನ ಮೆಚ್ಚಿನ ಬಂಟನಾದ.  ಅವನ ನಂಬಿಕೆ ಹಾಗೂ ನನ್ನ ನಿಲುವಿನಲ್ಲಿದ್ದ ಸಾಮ್ಯತೆ ನಮ್ಮಿಬ್ಬರನ್ನೂ ಬೆಸೆಯಿತು.  ಆ ಬಗ್ಗಾನನ್ನು ನಾನು ದುರಾದೃಷ್ಟವಷಾತ್ ಕೆಲವೇ ದಿನಗಳಲ್ಲಿ ಕಳೆದುಕೊಂಡೆ.  ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆಯಾದ ದಿನದಿಂದ ಮೂರು ದಿನಗಳವರೆಗೆ ದೆಹಲಿಯಲ್ಲಿ ನಡೆದ ನರಮೇಧದಲ್ಲಿ ಅವನು ಹತನಾಗಿಹೋದ.

ಮನೆಯಲ್ಲಿದ್ದ ಅವನನ್ನು ಹೊರಗೆಳೆದು ಅವನ ಹೆಂಡತಿ ಮಕ್ಕಳೆದುರಿಗೇ ಕೊಚ್ಚಿಹಾಕಿದ್ದರು.  ಉದ್ದನೆಯ ಕತ್ತಿ ಹಿಡಿದಿದ್ದ ಕಿರಾತಕನೊಬ್ಬ ಒಂದೇ ಏಟಿಗೆ ಅವನ ರುಂಡವನ್ನು ಹಾರಿಸಿಬಿಟ್ಟನಂತೆ.  ಬಗ್ಗಾ ಕುರಿಗಳನ್ನು ಕತ್ತರಿಸುತ್ತಿದ್ದ ಏಕ್ ಮಾರ್ ದೋ ಟುಕಡಾ ವಿಧಾನದಲ್ಲೇ ಅವನ ಅಂತ್ಯವಾಗಿತ್ತು.  ಅವನ ಹಂತಕರು ಅವನು ನಂಬಿದ ಪುಸ್ತಕವನ್ನು ಓದಿರಲಿಲ್ಲ.  ಅವರ ಧರ್ಮ ಬೇರೆಯಾಗಿತ್ತು.  ಆದರೆ ಪ್ರಾಣಿಗಳನ್ನೂ ಮನುಷ್ಯರನ್ನೂ ಕೊಲ್ಲುವುದರಲ್ಲಿ ಅದೆಂತಹ ಸಾಮ್ಯತೆ!

ಅವನನ್ನು ಕೊಂದ ಗುಂಪಿನ ಮುಂದಾಳತ್ವ ವಹಿಸಿದ್ದವನು ಎಲ್ಲೆಲ್ಲೂ ಮಾಂಸವನ್ನು ಜೋತಾಡಿಸಿಕೊಂಡು ಚರ್ಮ ಸುಲಿದ ಕೊಬ್ಬಿದ ಹಂದಿಯಂತಿದ್ದ ರಾಜಕೀಯ ನೇತಾರ.  ಅದೆಷ್ಟು ಜನರ ರಕ್ತ ಮಾಂಸ, ಕನಸು ಅವನ ಮೈಯಲ್ಲಿ ಕರಗಿಹೋಗಿತ್ತೋ.  ಆ ಮಣಭಾರದ ಮೈಯೊಳಗೆ ನೂರೊಂದು ರೋಗಗಳನ್ನು ತುಂಬಿಕೊಂಡು ಮೊನ್ನೆ ಸತ್ತುಹೋದ.

ಆ ಮೂರು ದಿನಗಳಲ್ಲಿ ಅವನೂ ಅವನ ಅನುಯಾಯಿಗಳೂ ಬಗ್ಗಾನಂತ ಸಾವಿರಾರು ಅಮಾಯಕರನ್ನು ಕೊಂದಿದ್ದರು.  ಹೆಂಗಸರು ಮಕ್ಕಳ ಕಣ್ಣೀರನ್ನು ಕುಡಿದು ತೇಗಿದ್ದರು.  ಕೆಲವರು ಮಾತಾಡಿಕೊಳ್ಳುವ ಪ್ರಕಾರ ಒಬ್ಬೊಬ್ಬ ಸಿಖ್ಖನನ್ನು ಕೊಂದವನಿಗೂ ಐನೂರೈನೂರು ರೂಪಾಯಿಗಳ ಇನಾಮು ಕೊಡಲಾಯಿತಂತೆ.  ನೀಳ ತಲೆಗೂದಲು ದಾಡಿ ತೆಗೆಸಿಕೊಂಡು ಗುರುತು ಮರೆಸಿಕೊಂಡು ಜೀವ ಉಳಿಸಿಕೊಳ್ಳಲೆಂದು ಹಜಾಮರ ಬಳಿಹೋದ ಪ್ರತಿಯೊಬ್ಬ ಬಡಪಾಯಿ ಸಿಖ್ಖನಿಂದಲೂ ಹರಾಮಖೋರ ಹಜಾಮರು ಸಾವಿರ ರೂಪಾಯಿ ತೆಗೆದುಕೊಂಡರಂತೆ.  ಜೀವ ತೆಗೆಯಲು ಐನೂರು.  ಜೀವ ಉಳಿಸಲು ಸಾವಿರ...

...ಆ ಮೂರು ದಿನಗಳಲ್ಲಿ ದೆಹಲಿಯಲ್ಲಿ ನಾಗರೀಕ ಸರಕಾರವೇ ಇರಲಿಲ್ಲ.  ಎಲ್ಲೆಲ್ಲೂ ಕೊಲೆ ಸುಲಿಗೆ ಬೆಂಕಿ...

ನಾಲ್ಕೇ ದಿನಗಳಲ್ಲಿ ದೆಹಲಿ ಮತ್ತೆ ಕಣ್ಣು ತೆರೆದು ನನ್ನತ್ತ ಮುಗುಳ್ನಗತೊಡಗಿತ್ತು.  ಆ ಮುಗುಳ್ನಗೆಗೂ, ಮೂವತ್ತೇಳು ವರ್ಷಗಳ ಹಿಂದೆ ಎಲ್ಲವನ್ನೂ ಎರಡು ಹೆಣ್ಣುಮಕ್ಕಳನ್ನೂ ಸಹಾ ಕಳೆದುಕೊಂಡು ಜೀವ ಮಾತ್ರ ಉಳಿಸಿಕೊಂಡು ಲಾಹೋರಿನಿಂದ ಓಡಿ ಅಮೃತಸರ ಸೇರಿದಾಗ ಮಾಜೀ ನನ್ನೆಡೆ ಬೀರಿದ ಮುಗುಳ್ನಗೆಗೂ ಅದೆಂತಹ ಸಾಮ್ಯತೆ ಇತ್ತು ಎಂದು ನನಗೆ ಈಗಲೂ ಅಚ್ಚರಿಯಾಗುತ್ತದೆ.  ನನ್ನ ತಾಯಿಯಂತೇ ದೆಹಲಿಯೂ ಸಹಾ ಎಂದು ನನಗೆ ಎಷ್ಟೋ ಸಲ ಅನಿಸುತ್ತದೆ.  ಅದೆಷ್ಟೇ ಹಾನಿಯಾಗಲೀ, ಇದ್ದುದೆಲ್ಲವೂ ಲೂಟಿಯಾಗಲಿ, ಜೀವವೊಂದು ಉಳಿದರೆ ಸಾಕು.  ದೆಹಲಿ ಹಾಗೂ ಮಾಜೀ ಮತ್ತೆ ಮುಗುಳ್ನಗತೊಡಗುತ್ತಾರೆ.  ಆರು ಶತಮಾನಗಳ ಹಿಂದೆ ಆ ಕುಂಟ ಕಿರಾತಕ ತೈಮೂರ್ ಇದೇ ದೆಹಲಿಯನ್ನು ಲೂಟಿಮಾಡಿ ಬೆಂಕಿ ಹಚ್ಚಿದ್ದ.  ಅವನು ಅತ್ತ ಹೋದದ್ದೇ ದೆಹಲಿ ಕಣ್ಣು ತೆರೆದು ಮೇಲೆದ್ದಿತ್ತು.  ಮತ್ತೆ... ಮುನ್ನೂರು ವರ್ಷಗಳೂ ಆಗಿಲ್ಲ, ಆ ನಾದಿರ್ ಷಾ ಇಡೀ ಊರನ್ನು ಸ್ಮಶಾನವಾಗಿಸಿ ಕೊಹಿನೂರನ್ನೂ ಮಯೂರ ಸಿಂಹಾಸನವನ್ನೂ ಹೊತ್ತೊಯ್ದ.  ಮಾಸಿದ ಸೀರೆಯ ಕೆದರಿದ ತಲೆಯ ವಾಸನೆ ಬಾಯಿಯ ಹುಚ್ಚಿಯಿಂದ ದೂರ ಓಡುವಂತೆ ಆ ಬ್ರಿಟಿಷರು ದೆಹಲಿಯನ್ನು ಕಡೆಗಣಿಸಿ ಬಂಗಾಳಿ ಯುವಚೆಲುವೆ ಕಲಕತ್ತೆಯ ಮಡಿಲಲ್ಲಿ ಮಲಗಿದರು.  ಆದರೆ ನಾಕು ದಿನದಲ್ಲಿ ಕಲಕತ್ತೆಯ ಮೈಯೆಲ್ಲಾ ಕಜ್ಜಿಯೆದ್ದು ಗಬ್ಬೆದ್ದುಹೋಯಿತು.  ದೆಹಲಿ ದೆಹಲಿಯೇ, ಕಲಕತ್ತೆ ಕಲಕತ್ತೆಯೇ.  ನಿಧಾನವಾಗಿಯಾದರೂ ಚೇತರಿಸಿಕೊಂಡು ಮೇಲೆದ್ದು "ಬನ್ನೀ ಮಕ್ಕಳೇ" ಎಂದು ಮುಗುಳ್ನಕ್ಕ ದೆಹಲಿಯ ಕರೆಯನ್ನು ಮನ್ನಿಸದಿರುವುದು ಪರಂಗಿ ದೊರೆಗಳಿಗೂ ಸಾಧ್ಯವಾಗಲಿಲ್ಲ.  ದೆಹಲಿ ಮತ್ತೆ ರಾಜಧಾನಿ.  ಒಬ್ಬರಿಗೆ ಒಬ್ಬಳೇ ತಾಯಿ.  ಒಂದು ರಾಷ್ಟ್ರಕ್ಕೆ ಒಂದೇ ರಾಜಧಾನಿ.  ಅದು ದೆಹಲಿ, ನನ್ನ ದೆಹಲಿ, ತನ್ನೊಳಗೆ ಅದೆಷ್ಟೋ ಯಾತನೆಗಳನ್ನು ಅಡಗಿಸಿಕೊಂಡು ಮುಗುಳುನಗುವ ನನ್ನ ಮಹಾನ್ ಮಾತೆ.

ಬಗ್ಗಾ ಹೋದಮೇಲೆ ಅವನ ಕೆಲಸವನ್ನು ತಾನು ಮಾಡುವುದಾಗಿ ಯೂಸುಫ್ ಮುಂದೆ ಬಂದ.  ನಾನು ಸ್ಪಷ್ಟವಾಗಿ ನಿರಾಕರಿಸಿದೆ.  ಅವನನ್ನು ಗಲ್ಲಾದ ಮೇಲೆ ಕೂರಿಸಿಯೇನು, ಕೂರಿಸಿದ್ದೇನೆ, ಆದರೆ ಚೂರಿಯನ್ನು ಮಾತ್ರ ಅವನ ಕೈಗೆ ಕೊಡಲಾರೆ.  ಧರಂವೀರನಿಗೆ ಆ ಕೆಲಸ ಒಪ್ಪಿಸಿದೆ.  ಯೂಸುಫ್ ಅಸಹನೆಯಲ್ಲಿ ಕುದಿದ.  ಇಲ್ಲಿರಲು ಇಷ್ಟವಿಲ್ಲದಿದ್ದರೆ ನೀನೂ ಅಬ್ದುಲ್ಲಾನ ದಾರಿ ಹಿಡಿಯಬಹುದು ಎಂದೆ.  ಅವನು ತಣ್ಣಗಾದ.  ಅಬ್ದುಲ್ಲಾ ಹೋದ ದಾರಿಯ ಗುರುತು ಅವನಿಗಿರಲಿಲ್ಲ.  ಗುರುತಿದ್ದರೂ ಅಬ್ದುಲ್ಲಾ ಈಗ ತನ್ನನ್ನು ಸ್ವೀಕರಿಸಲಾರ ಎಂದವನಿಗೆ ಅರಿವಾಗಿತ್ತು.  ನನ್ನ ಕಸಾಯಿಖಾನೆಯಲ್ಲಿ ಅವನು ಅಲ್ಪಸಂಖ್ಯಾತ ಎಂಬ ಕಟುಸತ್ಯ ಅವನ ಕಣ್ಣೆದುರಿಗಿತ್ತು.  ವಾಸ್ತವವನ್ನು ಒಪ್ಪಿಕೊಂಡ ಅವನು ಆಗೊಮ್ಮೆ ಈಗೊಮ್ಮೆ ನಾ ವಹಿಸುವ ಗಲ್ಲಾದ ಜವಾಬ್ದಾರಿಗೆ ಕಾದಿರುತ್ತಿದ್ದ.  ಸಿಕ್ಕಿದೊಡನೇ ಗಬಕ್ಕನೆ ಆತುಕೊಳ್ಳುತ್ತಿದ್ದ.  ಕೂರು ಅಂದಾಗ ಕೂರುತ್ತಿದ್ದ.  ಏಳು ಎಂದಾಗ ಏಳುತ್ತಿದ್ದ.  ಒಮ್ಮೆಯಂತೂ ಪ್ರಧಾನಮಂತ್ರಿಗಳ ನಿವಾಸಕ್ಕೆ ಅರ್ಧರಾತ್ರಿಯಲ್ಲಿ ಮಾಂಸ ಸಪ್ಲೈ ಮಾಡಬೇಕಾದಾಗ ಅವನಿಗೆ ಕರೆ ಕಳುಹಿಸಿದೆ.  ದೆಹಲಿಯ ಬಿರುಬೇಸಗೆಯ ಸೆಖೆಯಲ್ಲಿ ಮೈಮೇಲೆ ನೀರು ಸುರಿದುಕೊಳ್ಳುತ್ತಿದ್ದ ಅವನು ಗಡಬಡಿಸಿ ನಡುವಿಗೆ ಟವಲ್ ಸುತ್ತಿಕೊಂಡೇ ಓಡಿಬಂದು ನಾ ಒಪ್ಪಿಸಿದ ಕೆಲಸವನ್ನು ತುಟಿ ಪಿಟಕ್ಕೆನ್ನದೆ ಮಾಡಿಹೋಗಿದ್ದ.

 

*     *     *

 

ಬಾಪಾಜಿಗೆ ಇತ್ತೀಚೆಗೆ ಆರೋಗ್ಯ ಸರಿಯಿಲ್ಲ.  ವಯಸ್ಸಾಯಿತಲ್ಲ.  ಎಂಬತ್ತರ ವಯಸ್ಸೇನು ಸಾಮಾನ್ಯವೇ?  ಅಂಗಡಿಯಲ್ಲೂ ಸ್ವಲ್ಪ ಏರುಪೇರಾಗಿದೆ.  ಧರಂವೀರ್ ನಿನ್ನೆ ಸಂಜೆ ಕೆಲಸ ಬಿಟ್ಟುಹೋದ.  ಅವನಿಗೂ ವಯಸ್ಸಾಗಿತ್ತು.  ಅವನ ಮಗ ಅಮೆರಿಕಾದಲ್ಲಿದ್ದಾನಂತೆ.  ಅವನು ಕಳುಹಿಸುವ ದುಡ್ಡೇ ಸಾಕು ತನಗೆ ನೆಮ್ಮದಿಯಾಗಿ ಬದುಕು ಕಳೆಯಲು ಎಂದವನು ನಗುತ್ತಾ ಹೇಳಿಹೋದ.  ಯೂಸುಫ್‌ನ ಕಣ್ಣುಗಳಲ್ಲಿ ಮತ್ತೆ ನಿರೀಕ್ಷೆ.  ನಾನು ಮುಖ ಹೊರಳಿಸಿ ಮನೆಗೆ ಬಂದೆ.

ಹೊಸ ನಂಬಿಗಸ್ತ ಕಟುಕನನ್ನು ಹುಡುಕಬೇಕು.  ಈವತ್ತೇ ಆ ಕೆಲಸ ಮಾಡಬೇಕು.  ಇಂದು ಮಂಗಳವಾರ, ಅಂಗಡಿಗೆ ರಜೆ.  ದೆಹಲಿ ಸರಕಾರದ ನಿಯಮ ನಿಮಗೆ ಗೊತ್ತಿರಬೇಕಲ್ಲ?  ರಿಂಗ್ ರೋಡಿನ ಹೊರಗಿರುವ ಎಲ್ಲಾ ಅಂಗಡಿ ಮುಂಗಟ್ಟುಗಳೂ ಪ್ರತೀ ಮಂಗಳವಾರ ಕಡ್ಡಾಯವಾಗಿ ಬಂದ್ ಆಗಬೇಕು.  ರಿಂಗ್ ರೋಡಿನ ಒಳಗಿರುವ ಅಂಗಡಿಗಳು ಬೀಗ ಜಡಿದುಕೊಂಡು ಮೌನವಾಗುವುದು ನಿನ್ನೆ ಅಂದರೆ ಸೋಮವಾರವೇ ಆಗಿಹೋಗಿದೆ.

ಚಳಿಗಾಲ ಮುಗಿಯುತ್ತಾ ಬಂದು ಹವೆ ಬೆಚ್ಚಗಾಗತೊಡಗಿತ್ತು.  ದೆಹಲಿಗರು ಜರ್ಕಿನ್, ಸ್ವೆಟರ್‌ಗಳಿಂದ ಹೊರಬರತೊಡಗಿದ್ದರು.  ದೆಹಲಿಯಲ್ಲಿ ವಸಂತಾಗಮನಕ್ಕೆ ಸಾಕ್ಷಿಯಾಗುವುದೆಂದರೆ ಅದೊಂದು ಅತೀ ಸುಂದರ ಅನುಭವ.  ಪ್ರಕೃತಿಯಷ್ಟೇ ಅಲ್ಲ ಜನರೂ ಮುಖ್ಯವಾಗಿ ಹೆಂಗೆಳೆಯರು ಅದ್ಭುತ ಲವಲವಿಕೆಯಿಂದ ನಳನಳಿಸುತ್ತಿರುತ್ತಾರೆ.  ಚಳಿಗಾಲದ ಇಡೀ ಮೂರುತಿಂಗಳು ಉಣ್ಣೆಯ ಉಡುಪಿನೊಳಗೆ ಬೆಚ್ಚಗೆ ಅಡಗುವ ಅವರ ಶರೀರಗಳು ವಸಂತಾಗಮನದೊಡನೆ ಹೊರಬಂದು ದುಂಡುದುಂಡಾಗಿ ಅರಳಿ ಕಣ್ಣುಕುಕ್ಕುವ ಹೊನ್ನ ಬಣ್ಣದಲ್ಲಿ ಹೊಳೆಯತೊಡಗುತ್ತವೆ.  ಆ ಸೌಂದರ್ಯವನ್ನು ನೋಡಿಯೇ ಸವಿಯಬೇಕು.

ಬಾಪಾಜಿ ಒರಗಿದ್ದ ಮಂಚದ ಒಂದು ಅಂಚಿನಲ್ಲಿ ನಾನು, ಮತ್ತೊಂದು ಅಂಚಿನಲ್ಲಿ ಮಾಜೀ.  ಮೂವರೂ ನನ್ನ ಹೆಂಡತಿ ಆ ಬೆಳಿಗ್ಗೆ ಮೂರನೆಯ ಬಾರಿಗೆ ನೀಡಿದ ಅದ್ರಕ್ ಚಾಯ್ ಗುಟುಕರಿಸುತ್ತಿದ್ದೆವು.  ಕಿಟಕಿಯ ಪಕ್ಕದ ಆರಾಮಕುರ್ಚಿಯಲ್ಲಿ ಒರಗಿ ನನ್ನ ಮಗ ಸ್ಯಾಮುಯೆಲ್ ಹಂಟಿಂಗ್‌ಟನ್‌ನ "The Clash of Civilizations"ನಲ್ಲಿ ಮುಳುಗಿಹೋಗಿದ್ದ.  ಅವನ ತೊಡೆಯ ಮೇಲೆ ಫ್ರಾನ್ಸಿಸ್ ಫುಕಯಾಮಾನ "The End of History" ಇತ್ತು.  ಆಗೊಮ್ಮೆ ಈಗೊಮ್ಮೆ ಅವನು ಅದನ್ನೆತ್ತಿಕೊಂಡು ಅಲ್ಲಲ್ಲಿ ಚಕಚಕನೆ ಕಣ್ಣಾಡಿಸಿ ಮತ್ತೆ The Clash of Civilizationsಗೆ ಹಿಂತಿರುಗುತ್ತಿದ್ದ.  ಟೀವಿಯಲ್ಲಿ ಪರ್ವೆಜ್ ಮುಷರ್ರಫ್ ತನ್ನ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದ: "...ಕಶ್ಮೀರ್ ಹಮಾರಾ ರಗ್ ರಗ್ ಮೆ ಹೈ.  ಕಶ್ಮೀರ್ ಹಮಾರಾ ಹೈ..."

ಬಾಪಾಜಿ ನಕ್ಕುಬಿಟ್ಟರು.  ಅವರೇನೋ ಹೇಳಲು ಬಾಯಿ ತೆರೆದರು.  ಆ ಗಳಿಗೆಗೆ ಸರಿಯಾಗಿ ನನ್ನ ಹೆಂಡತಿ "ಸುನೋಜೀ" ಎನ್ನುತ್ತಾ ಬಾಗಿಲಲ್ಲಿ ಕಾಣಿಸಿಕೊಂಡಳು.  "ನಿಮ್ಮನ್ನು ನೋಡಲು ಯಾರೋ ಬಂದಿದ್ದಾರೆ."

ಚಹಾದ ಕೊನೆಯ ಗುಟುಕನ್ನು ನಾಲಿಗೆಯ ಮೇಲೆ ಸುರಿದುಕೊಂಡು ಬಾಪಾಜಿಗೆ "ಇದೀಗ ಬಂದೆ" ಎಂದು ಹೇಳಿ ಹೊರನಡೆದೆ.  ಹೊಸ್ತಿಲು ದಾಟುತ್ತಿದ್ದಾಗಲೂ ಮುಷರ್ರಫ್‌ನ ಲಬೊಲಬೋ ನಡೆದೇ ಇತ್ತು.  ಬಾಪಾಜಿ ಮತ್ತೊಮ್ಮೆ ನಕ್ಕು ಮಾಜೀಗೆ ಏನೋ ಹೇಳತೊಡಗಿದ್ದು ಕೇಳಿಸಿತು.

ಬಂದಾತ ಬಾಗಿಲಲ್ಲೇ ನಿಂತಿದ್ದ.  ಮೂವತ್ತು - ಮೂವತ್ತೈದರ ಸ್ಫುರದ್ರೂಪೀ ತರುಣ.  ಪಕ್ಕಾ ಕಶ್ಮೀರೀ ಮೈಬಣ್ಣ, ಸದೃಢ ಮೈಕಟ್ಟು.  ಆದರೆ ಕಣ್ಣುಗಳಲ್ಲೇನೋ ವ್ಯಾಕುಲತೆ.  "ನಮಸ್ತೆ" ಎಂದು ಕೈಜೋಡಿಸಿದ.  ಔಪಚಾರಿಕವಾಗಿ ಪ್ರತಿವಂದಿಸಿ "ಏನು ಬಂದದ್ದು?" ಅಂದೆ.

ನಿಮ್ಮ ಕಸಾಯಿಖಾನೆಯಲ್ಲಿ ನನಗೊಂದು ಕೆಲಸ ಬೇಕು."  ಅವನು ನೇರವಾಗಿ ವಿಷಯಕ್ಕೆ ಬಂದ.

"ನೀನು ಯಾರು?  ಎಲ್ಲಿಯವನು?"  ನಾನೂ ನೇರವಾಗಿ ವಿಷಯಕ್ಕಿಳಿದೆ.

"ಬಾರಾಮುಲ್ಲಾ ಗೊತ್ತಲ್ಲಾ?  ಕಶ್ಮೀರ್‌ನಲ್ಲಿದೆ.  ಅಲ್ಲಿ ನಮ್ಮ ಚಿನ್ನಾಭರಣಗಳ ವ್ಯಾಪಾರ ವಹಿವಾಟು ಇತ್ತು.  ಆತಂಕವಾದಿಗಳು ಎಲ್ಲವನ್ನೂ ಹಾಳುಮಾಡಿಬಿಟ್ಟರು.  ಐದು ವರ್ಷಗಳ ಹಿಂದೆ ಎಲ್ಲವನ್ನೂ ತೊರೆದು ಜಮ್ಮುವಿನಲ್ಲಿನ ನಿರಾಶ್ರಿತರ ಶಿಬಿರಕ್ಕೆ ಬಂದೆವು.  ನನ್ನ ಜತೆ ನನ್ನ ತಾಯಿ, ತಂದೆ, ಇಬ್ಬರು ತಮ್ಮಂದಿರಿದ್ದರು.  ನನ್ನ ಹೆಂಡತಿ ಮತ್ತು ಮಗಳು ದಾರಿಯಲ್ಲಿ ಕಳೆದುಹೋದರು.  ಎಲ್ಲಿ ಹೋದರೋ ತಿಳಿಯಲಿಲ್ಲ.  ಎಷ್ಟು ಹುಡುಕಿದರೂ ಸಿಗಲಿಲ್ಲ.  ಅವರಿಬ್ಬರೂ ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ."  ಹೇಳುತ್ತಾ ಅವನ ಗಂಟಲು ಕಟ್ಟಿತು.  ನಾನು "ಚಿಂತಿಸಬೇಡ, ದೇವರು ಅವರನ್ನು ಎಲ್ಲೋ ಒಂದುಕಡೆ ಸುರಕ್ಷಿತವಾಗಿಟ್ಟಿರುತ್ತಾನೆ.  ಒಂದಲ್ಲಾ ಒಂದುದಿನ ನಿನಗೆ ಸಿಕ್ಕೇ ಸಿಗುತ್ತಾರೆ" ಎಂದೆ.  ಅವನು ಪ್ರತಿಕ್ರಿಯಿಸದೇ ಒಮ್ಮೆ ಕಣ್ಣಿರೊರೆಸಿಕೊಂಡು ಮಾತು ಮುಂದುವರೆಸಿದ: "ತಿಂಗಳ ಹಿಂದೆ ತಂದೆಯವರು ತೀರಿಕೊಂಡರು.  ಅವರು ಉಳಿಸಿಹೋದದ್ದನ್ನು ಹಂಚಿಕೊಂಡು ಮೂವರೂ ಹೊಸ ಬದುಕು ಆರಂಭಿಸಿ ಎಂದು ಅಮ್ಮ ಹೇಳಿದಳು."

"ನಿನ್ನ ತಂದೆ ಉಳಿಸಿದ್ದರಲ್ಲಿ ನಿನ್ನ ಪಾಲಿಗೆ ಬಂದದ್ದರಿಂದ ನೀನು ಸ್ವತಂತ್ರವಾಗಿ ಬದುಕಬಹುದಲ್ಲ?"

ಅವನು ಮುಗುಳ್ನಕ್ಕ.  "ಆಸ್ತಿಪಾಸ್ತಿ ಹಣಕಾಸು ಎಲ್ಲವೂ ಬಾರಾಮುಲ್ಲಾದಲ್ಲೇ ಉಳಿದುಹೋಯಿತು.  ಜಮ್ಮುಗೆ ಬರುವಾಗ ಕೈಯಲ್ಲಿ ತಂದ ಚಿನ್ನ ಹಣ ನಾಕು ದಿನದಲ್ಲಿ ಚೂರೂ ಇಲ್ಲದಂತೆ ಕರಗಿಹೋಯಿತು.  ತಂದೆಯವರು ಸಾಯುವಾಗ ಅವರ ಬಳಿ ಅಗಾಧವಾಗಿದ್ದುದೆಂದರೆ ಕೇವಲ ಎರಡೇ ವಸ್ತುಗಳು- ಸತ್ಯ ಮತ್ತು ಪ್ರಾಮಾಣಿಕತೆ.  ಅವೆರಡನ್ನೂ ಒಂದು ದೊಡ್ಡ ಗಂಟು ಮಾಡಿ ಇಟ್ಟುಕೊಂಡಿದ್ದರು.  ಅದರ ಜತೆ ಸುಳ್ಳಿನ ಒಂದು ಪುಟ್ಟ ಗಂಟೂ ಇತ್ತು.  ಸಮಯಕ್ಕೆ ಇರಲಿ ಎಂದು ಇಟ್ಟುಕೊಂಡಿದ್ದರು."

"ಸಮಯಕ್ಕೆ ಇರಲಿ ಅಂದರೆ?"

"ತಂದೆಯವರು ಮನುಷ್ಯನನ್ನು ಚಿನ್ನಕ್ಕೆ ಹೋಲಿಸುತ್ತಿದ್ದರು.  ಇಪ್ಪತ್ತನಾಲ್ಕು ಕ್ಯಾರಟ್ ಚಿನ್ನ ಶುದ್ಧ ಚಿನ್ನ.  ಆದರೆ ಅದು ಯಾತಕ್ಕೂ ಪ್ರಯೋಜನವಿಲ್ಲ.  ಮೃದುವಾಗಿದ್ದು ಒತ್ತಿದ ಆಕಾರವನ್ನು ಪಡೆದುಕೊಳ್ಳುವ ಅದರಿಂದ ಆಭರಣವನ್ನಾಗಲೀ ನಾಣ್ಯಗಳನ್ನಾಗಲೀ ಮಾಡಬರುವುದಿಲ್ಲ.  ಆ ಶುದ್ಧ ಚಿನ್ನ ಉಪಯೋಗಕ್ಕೆ ಬರಬೇಕಾದರೆ ಅದಕ್ಕೆ ಸ್ವಲ್ಪ ತಾಮ್ರವನ್ನು ಬೆರೆಸಿ ಅಶುದ್ಧಗೊಳಿಸಬೇಕು.  ಆಗಲೇ ಅದು ಗಟ್ಟಿತನ ಪಡೆದುಕೊಂಡು ಬೇಕಾದ ಉಪಯೋಗಕ್ಕೆ ಬರುತ್ತದೆ.  ಹಾಗೇ ಸಂಪೂರ್ಣ ಒಳ್ಳೆಯವನಾದ ಮನುಷ್ಯನೂ ಸಹಾ ಅಪ್ರಯೋಜಕ.  ಅಂಥವನು ಏನನ್ನೂ ಸಾಧಿಸಲಾರ.  ಚೂರು ಸುಳ್ಳು ಮೋಸ ಯುಕ್ತಿ ಚಾಲಾಕಿತನಗಳನ್ನು ಮೈಗೂಡಿಸಿಕೊಂಡು ಹುರಿಗೊಂಡವನು ಮಾತ್ರ ಈ ಪ್ರಪಂಚದಲ್ಲಿ ಯಶಸ್ವಿಯಾಗಿ ಬದುಕಬಲ್ಲ.  ತನಗಾಗಿ, ತನ್ನನ್ನು ನಂಬಿದವರಿಗಾಗಿ ಏನಾದರೂ ಸಾಧಿಸಬಲ್ಲ.  ಅದರಿಂದಾಗಿಯೇ ತಂದೆಯವರು..."

ಅವನ ಮಾತನ್ನು ಅಲ್ಲಿಗೇ ತಡೆದೆ.  "ಒಳಗೆ ಬಾ."  ಸೋಫಾದತ್ತ ಕೈತೋರಿದೆ.  ಒಳಕೋಣೆಯತ್ತ ತಿರುಗಿ "ಸುನೋ" ಎಂದು ಕೂಗಿ ಮುಖ ತೋರಿಸಿದ ನನ್ನ ಹೆಂಡತಿಗೆ ಚಾಯ್ ತರುವಂತೆ ಹೇಳಿದೆ...

...ಅವನು ಲೋಟವನ್ನು ಎರಡೂ ಕೈಗಳಲ್ಲಿ ಹಿಡಿದು ಒಂದೊಂದು ಗುಟುಕನ್ನೂ ಮನಸ್ಸಿಟ್ಟು ಸವಿಯುವುದನ್ನೇ ನೋಡುತ್ತಾ ಕುಳಿತೆ.  ಕುಡಿದು ಮುಗಿಸಿ ಲೋಟ ಕೆಳಗಿಟ್ಟ ನಂತರ ಮಾತು ತೆಗೆದೆ.

"ಆ ಮೂರು ಆಸ್ತಿಗಳಲ್ಲಿ ನಿನ್ನ ಪಾಲಿಗೆ ಬಂದದ್ದು ಯಾವುದು?"

"ಸುಳ್ಳಿನ ಪುಟ್ಟ ಗಂಟು."  ಅವನು ನಸುನಗುತ್ತಾ ಹೇಳಿದ.

ನನಗೆ ನಂಬಿಕೆಯಾಗಲಿಲ್ಲ.  "ಅದು ಹೇಗೆ?  ನೀನು ಹಿರಿಯವ.  ಸತ್ಯ ಮತ್ತು ಪ್ರಾಮಾಣಿಕತೆ ಇದ್ದ ದೊಡ್ಡ ಗಂಟು ನಿನಗೆ ಸಿಕ್ಕಿರಬೇಕು."

ಅವನು ಮತ್ತೆ ಮುಗುಳ್ನಕ್ಕ.  "ಹಾಗೇನಿಲ್ಲ.  ಮೊದಲ ಆಯ್ಕೆ ತಮ್ಮಂದಿರದು, ಅವರು ಉಳಿಸಿದ್ದನ್ನು ನೀನು ತೆಗೆದುಕೊ, ಅದು ಧರ್ಮ ಎಂದು ಅಮ್ಮ ಹೇಳಿದಳು.  ನನಗದು ಸರಿಯೆನಿಸಿತು.  ಸತ್ಯ ಮತ್ತು ಪ್ರಾಮಾಣಿಕತೆಗಳು ಜತೆಯಲ್ಲಿದ್ದವು.  ನನ್ನ ತಮ್ಮಂದಿರಿಬ್ಬರೂ ಅವಳಿ ಜವಳಿ.  ಯಾವಾಗಲೂ ಜತೆಯಲ್ಲಿರುತ್ತಿದ್ದರು.  ಇಬ್ಬರೂ ಒಟ್ಟಿಗೆ ಸತ್ಯ ಮತ್ತು ಪ್ರಾಮಾಣಿಕತೆಗಳ ಗಂಟನ್ನು ತೆಗೆದುಕೊಂಡರು.  ಸುಳ್ಳಿನ ಪುಟ್ಟಗಂಟು ನನ್ನ ಪಾಲಿಗೆ ಉಳಿಯಿತು."

"ಅದೆಲ್ಲಿ ಈಗ?"

"ಅದನ್ನು ಅಡವಿಟ್ಟಿದ್ದೇನೆ."

"ಯಾಕೆ?"

"ತಾಯಿಯವರನ್ನು ನೋಡಿಕೊಳ್ಳುವ ಜವಾಬ್ಧಾರಿ ಹಿರಿಯವನಾದ ನನ್ನದು.  ಮೊನ್ನೆ ಅಮ್ಮ ಅಮರನಾಥಕ್ಕೆ ಹೋಗಬೇಕೆಂಬ ಆಸೆ ಹೇಳಿಕೊಂಡಳು.  ನನ್ನ ಬಳಿ ಹಣವಿರಲಿಲ್ಲ.  ಸಾಲ ಕೊಡಲು ಯಾರೂ ತಯಾರಿರಲಿಲ್ಲ.  ಹೀಗಾಗಿ ನನ್ನಲ್ಲಿದ್ದ ಸುಳ್ಳನ್ನು ಒಬ್ಬ ಮುಸ್ಲಿಂ ಫಕೀರನ ಬಳಿ ಅಡವಿಟ್ಟು ಹತ್ತುಸಾವಿರ ರೂಪಾಯಿ ಪಡೆದೆ.  ಅಷ್ಟೂ ಹಣವನ್ನು ಅಮ್ಮನ ಕೈಯಲ್ಲಿಟ್ಟು ಸುಸೂತ್ರವಾಗಿ ಯಾತ್ರೆ ಮುಗಿಸಿಕೊಂಡು ಬನ್ನಿ ಎಂದು ಹೇಳಿಕಳಿಸಿದೆ."

"ಫಕೀರನ ಬಳಿ!  ಅವನ ಬಳಿ ಅಷ್ಟು ಹಣವಿತ್ತೇ?"  ನಂಬಲಾರದೇ ಕೇಳಿದೆ.

"ಇತ್ತು.  ಜಾಸ್ತಿಯೇ ಇತ್ತು.  ಫಕೀರನಾಗುವುದಕ್ಕೆ ಮೊದಲು ಅವನು ಇದೇ ದೆಹಲಿಯಲ್ಲಿ ಏನೋ ಕಸುಬು ಮಾಡಿಕೊಂಡಿದ್ದನಂತೆ.  ಅದನ್ನು ಬಿಡುವಾಗ ಕೈಲಿ ಉಳಿದಿದ್ದ ಹಣವನ್ನೆಲ್ಲಾ ಇದು ಸತ್ಕರ್ಮಕ್ಕೆ ವಿನಿಯೋಗವಾಗಬೆಕು ಅಂದುಕೊಂಡು ಜೋಪಾನವಾಗಿಟ್ಟುಕೊಂಡನಂತೆ.  ನನ್ನಮ್ಮನ ಅಮರನಾಥಯಾತ್ರೆಯ ಬಗ್ಗೆ ತಿಳಿದಾಗ ಇಡೀ ಗಂಟನ್ನು ನನ್ನ ಮುಂದಿಟ್ಟುಬಿಟ್ಟ.  ಎಲ್ಲವನ್ನೂ ತೆಗೆದುಕೋ.  ಹೇಗೂ ಅಡವಿಟ್ಟುಕೊಂಡು ತಾನೆ ಕೊಡುತ್ತಿದ್ದೇನೆ.  ಪುಕ್ಕಟೆಯಾಗೇನೂ ಅಲ್ಲವಲ್ಲ ಅಂದ.  ನನಗೆ ಇಡೀ ಗಂಟಿನ ಅಗತ್ಯವಿರಲಿಲ್ಲ.  ಅಗತ್ಯಕ್ಕಿಂತ, ಹಿಂತಿರುಗಿಸುವ ಸಾಮರ್ಥ್ಯಕ್ಕಿಂತ ಹೆಚ್ಚಿಗೆ ಸಾಲ ಮಾಡಬಾರದಲ್ಲ?"

ವಿವರಗಳನ್ನು ನಿಧಾನವಾಗಿ ಅರಗಿಸಿಕೊಂಡೆ.

"ಅಡವಿನ ನಿಯಮಗಳೇನು?"  ಪ್ರಶ್ನಿಸಿದೆ.

"ಅದು ಸರಳ.  ಅಸಲು ಬಡ್ಡಿ ಕಟ್ಟುವವರೆಗೆ ನಾನು ಸುಳ್ಳನ್ನು ಉಪಯೋಗಿಸುವಂತಿಲ್ಲ.  ಅದು ನನ್ನದಲ್ಲವೇ ಅಲ್ಲ."

"ನಾಳೆ ಬೆಳಿಗ್ಗೆ ಐದುಗಂಟೆಗೆ ನನ್ನ ಕಸಾಯಿಖಾನೆಗೆ ಬಾ."  ಮಾತು ಮುಗಿಸಿ ಮೇಲೆದ್ದೆ.  ಅವನು ನಡುಬಾಗಿ ವಂದಿಸಿ ಹೊರಟುಹೋದ.

ಬಾಪಾಜಿ ಇದ್ದ ಕೋಣೆಯೊಳಗೆ ನಡೆದೆ.  ಪರ್ವೆಜ್ ಮುಷರ್ರಫ್‌ನ ಕಶ್ಮೀರ್ ಲಬೋಲಬೋ ಬಗ್ಗೆ ಅವರು ಹೇಳುತ್ತಿದ್ದುದೇನೆಂದು ತಿಳಿಯುವ ಕುತೂಹಲವಿತ್ತು.  ಆದರೆ ಬಾಪಾಜಿ ನಿದ್ದೆ ಹೋಗಿಬಿಟ್ಟಿದ್ದರು.  ಮಾಜೀಯನ್ನು ಕೇಳಿದೆ.  ಆಕೆ ನಗುತ್ತಾ ಹೇಳಿದಳು: "ಇವನೊಬ್ಬ ಮೂರ್ಖ.  ಬಲೂಚಿಸ್ತಾನದಿಂದ ಬರ್ಮಾದವರೆಗೆ, ಕಶ್ಮೀರದಿಂದ ಕನ್ಯಾಕುಮಾರಿಯವರೆಗೆ ಇಡೀ ಭರತಖಂಡ ಇವನದಾಗಿತ್ತು.  ಯಾರೋ ಮನೆಮುರುಕರ ಮಾತು ಕೇಳಿ ಈ ವಿಶಾಲ ನೆಲದ ಒಂದು ತುಣುಕನ್ನು ಮಾತ್ರ ತನ್ನ ಹೆಸರಿಗೆ ಮಾಡಿಸಿಕೊಂಡು ಹುಸಿ ಹೆಮ್ಮೆಯಲ್ಲಿ ಬೀಗಿದ.  ಬುದ್ಧಿವಂತರು ಮಾಡುವ ಕೆಲಸವೇ ಇದು?  ಈಗ ಅದರ ಪಕ್ಕದ ಇನ್ನೊಂದು ಚೂರು ಕಶ್ಮೀರವೂ ಬೇಕು ಅನ್ನುತ್ತಿದ್ದಾನೆ.  ತನ್ನ ತಟ್ಟೆಯಲ್ಲಿದ್ದ ಇಡೀ ರೊಟ್ಟಿಯಲ್ಲಿ ಒಂದು ಚೂರನ್ನು ಮಾತ್ರ ಕೈಗೆತ್ತಿಕೊಂಡು ಉಳಿದ ಇಡೀ ರೊಟ್ಟಿಯನ್ನು ಅಸಡ್ಡೆಯಿಂದ ದೂರ ತಳ್ಳಿ ಈಗ ಇನ್ನೊಂದು ಚೂರು ಕೊಡಿ ಇನ್ನೊಂದು ಚೂರು ಕೊಡಿ ಎಂದು ಹಲುಬುತ್ತಿದ್ದಾನೆ.  ಈ ಮುಠ್ಠಾಳತನಕ್ಕೆ ಏನು ಹೇಳಬೇಕು?  ಇವನಿಗೆ ಬುದ್ಧಿ ಬರುವುದು ಯಾವಾಗ?"

*      *     *

 

ಭಾಗ - ಎರಡು

 

ಬೆಳಿಗ್ಗೆ ನಾನು ನನ್ನ ಕಸಾಯಿಖಾನೆ ತಲುಪುವ ಮೊದಲೇ ಅವನು ಅಲ್ಲಿದ್ದ.  ಸ್ನಾನ ಮಾಡಿ ಒಗೆದ ಬಟ್ಟೆಗಳನ್ನು ಧರಿಸಿದ್ದ.  ಹಣೆಯಲ್ಲಿ ವಿಭೂತಿ ಕಂಗೊಳಿಸುತ್ತಿತ್ತು.

"ನನ್ನಲ್ಲಿ ಕೆಲಸವಿದೆ ಎಂದು ನಿನಗೆ ಹೇಗೆ ತಿಳಿಯಿತು?"  ನಿನ್ನೆಯಿಂದಲೂ ಕೊರೆಯುತ್ತಿದ್ದ ಪ್ರಶ್ನೆಯನ್ನು ಹೊರಹಾಕಿದೆ.

"ಆ ಫಕೀರನೇ ಹೇಳಿದ.  ಅವನದು ದಿವ್ಯದೃಷ್ಟಿ.  ಕಣ್ಣುಮುಚ್ಚಿ ಏನೋ ಧೇನಿಸಿ ಕಣ್ಣುತೆರೆದು `ಸುಮ್ಮನೆ ನಡೆಯುತ್ತಾ ಹೋಗು.  ನಿನ್ನ ಅಗತ್ಯ ಎಲ್ಲಿದೆಯೋ ಅಲ್ಲಿಗೆ ನೀನು ತಲುಪಿದಾಗ ನಿನ್ನ ಹೆಜ್ಜೆಗಳನ್ನು ನಾನೇ ನಿಲ್ಲಿಸುತ್ತೇನೆ' ಅಂದ.  ಅವನ ಮಾತಿನಂತೇ ನಡೆಯುತ್ತಾ ಬಂದವನು ನಲವತ್ತೇಳು ಗಂಟೆಗಳ ನಂತರ ನಿಂತದ್ದು ನಿಮ್ಮ ಬಾಗಿಲಲ್ಲಿ."

"ನಿನ್ನನ್ನು ನಾನು ಏನೆಂದು ಕರೆಯಲಿ?"  ಸಂದಿಗ್ಧವನ್ನು ಹೊರಹಾಕಿದೆ.

"ಏನು ಬೇಕಾದರೂ.  ನಾನೊಬ್ಬ ಕಶ್ಮೀರಿ.  ಹಿಂದೂವಾಗಿ ಹುಟ್ಟಿ, ಬೌದ್ಧನಾಗಿ ಬಾಲ್ಯ ಕಳೆದು, ಯೌವನದಲ್ಲಿ ಇಸ್ಲಾಮನ್ನು ಒಪ್ಪಿ, ಸೂಫಿಮಾರ್ಗದಲ್ಲಿ ನನ್ನ ಸ್ವಂತಿಕೆ ಕಂಡುಕೊಂಡು ನೆಮ್ಮದಿಯಾಗಿದ್ದೆ.  ಈಗ ನನ್ನ ಇತಿಹಾಸ ಮತ್ತು ನನ್ನ ವರ್ತಮಾನಗಳು ನನ್ನನ್ನು ವಿರುದ್ಧ ದಿಕ್ಕುಗಳಿಗೆ ಎಳೆದಾಡಿ ಹಣ್ಣಾಗಿಸುತ್ತಿವೆ.  ನಾನು ಹಿಂದೇನಾಗಿದ್ದೆ ಎಂಬುದು ಅರ್ಥ ಕಳೆದುಕೊಂಡಿದೆ.  ನಾಳೆ ಏನಾಗುತ್ತೇನೆ ಎಂಬುದು ನನ್ನ ಊಹೆ ನಿಲುಕದ ವಿಚಾರ.  ಈ ಗಳಿಗೆಯಲ್ಲಿ ನಾನೊಬ್ಬ ಕಟುಕ ಅಷ್ಟೇ.  ನೀವು ನನ್ನನ್ನು ಹಾಗೇ ಕರೆಯಿರಿ."

ನಾನು ಹ್ಞೂಂಗುಟ್ಟಿ ಅಗರಬತ್ತಿ ಹಚ್ಚಿ ದುರ್ಗೆಗೆ ಪೂಜೆ ಸಲ್ಲಿಸುವಷ್ಟರಲ್ಲಿ ಉಳಿದವರೆಲ್ಲಾ ಬಂದರು.  ನನ್ನ ಕಸಾಯಿಖಾನೆಯಲ್ಲಿ ಮತ್ತೊಂದು ದಿನ ಉದಯಿಸಿತ್ತು.

ಚೂರಿಯನ್ನು ದುರ್ಗೆಯ ಪಾದಗಳಿಗೆ ಒಮ್ಮೆ ತಾಕಿಸಿ ಅವನ ಕೈಲಿಟ್ಟೆ.  ತಲೆಬಾಗಿಸಿ ತೆಗೆದುಕೊಂಡ.  ಯೂಸುಫ್ ಎಳೆದುತಂದ ಕುರಿಯನ್ನು ತಲೆಸವರಿ ಹತ್ತಿರಕ್ಕೆಳೆದುಕೊಂಡ.  ಅವನತ್ತ ತಲೆಯೆತ್ತಿ ನೋಡಿದ ಅದರ ಒಂದು ಪಕ್ಕಕ್ಕೆ ಕೈಹೂಡಿ ಕೆಳಕ್ಕೆ ಕೆಡವಿದ.  ಗಾಬರಿಯಲ್ಲಿ ನೆಲದ ಮೇಲೆ ಪರಪರ ಸದ್ದುಹೊರಡಿಸಿದ ಅದರ ಕಾಲುಗಳನ್ನು ಒಟ್ಟಾಗಿ ಸೇರಿಸಿ ಮೇಲೆ ತನ್ನ ಮಂಡಿಯನ್ನೂರಿದ.  ಅದರ ಕಣ್ಣುಗಳನ್ನು ಮುಚ್ಚುವಂತೆ ಎಡಅಂಗೈ ಊರಿ ತಲೆಯನ್ನು ಒತ್ತಿಹಿಡಿದ.  ಬಲಗೈಲಿದ್ದ ಚೂರಿಯನ್ನು ಅದರ ಎಡಕುತ್ತಿಗೆಯ ಮೇಲೆ ಸರಕ್ಕನೆ ಆಡಿಸಿ ತೆಗೆದ.  ರಕ್ತರಂಜಿತ ಕುತ್ತಿಗೆಯನ್ನು ಹೊರಳಿಸಿ ಬಲಭಾಗದಲ್ಲೂ ಚೂರಿಯನ್ನು ಕಚಕ್ಕನೆ ಇಳಿಸಿ ತೆಗೆದ.

"ಬ್ಞೊಖ್ ಬ್ಞೊಕ್... ಬ್ಞೂಬ್ಞೂಂ ಬ್ಞುಹುಹ್ಞೇ..."  ಅತೀವ ವೇದನೆಯ ಆಕ್ರಂದನ.  ಛಿಲ್ಲನೆ ಚಿಮ್ಮಿದ ರಕ್ತ.

ಅವನು ತಣ್ಣಗೆ ಕುಳಿತಿದ್ದ.  ನಾನು ದಿಗ್ಭ್ರಮೆಗೊಂಡಿದ್ದೆ.

"ಇದೆನು ಮಾಡುತ್ತಿದ್ದೀಯ ನೀನು?  ಒಂದೇ ಏಟಿಗೆ ಕತ್ತರಿಸು ಅದನ್ನು.  ಏಕ್ ಮಾರ್ ದೋ ಟುಕಡಾ."  ಅರಚಿದೆ.  ಅವನು ನಸುನಕ್ಕ.  ಕುರಿಯ ತಲೆಯನ್ನು ಹೊರಳಿಸಿ ಕುತ್ತಿಗೆಯ ತಳಭಾಗದಲ್ಲಿ ಚೂರಿ ಆಡಿಸಿದ.  ಎದ್ದುನಿಂತ.  ಬಂಧಮುಕ್ತವಾದ ಕುರಿಯ ಕಾಲುಗಳು ಒರಟು ಸಿಮೆಂಟ್ ನೆಲದ ಮೇಲೆ ಪರಪರ ಬಡಿದುಕೊಳ್ಳುತ್ತಿದ್ದವು.  ಪಕ್ಕೆಗಳು ಏರಿಳಿಯುತ್ತಿದ್ದವು.  ಅದೊಂದು ಕರುಣಾಜನಕ ನೋಟ.

"ಅಬ್ದುಲ್ಲಾ!"  ಚೀರಿದೆ.  ಬೆಚ್ಚಿದೆ.  ಅವನತ್ತ ದಿಗ್ಭ್ರಮೆಯ ನೋಟ ಹೂಡಿದೆ.

ಅವನು ಮತ್ತೊಮ್ಮೆ ಮುಗುಳ್ನಕ್ಕ.  ನನ್ನ ಬೆನ್ನು ತಟ್ಟಿದ.  "ಪರಿಸ್ಥಿತಿಯ ಒತ್ತಡದಿಂದ ನನ್ನ ಹೊಟ್ಟೆಪಾಡಿಗಾಗಿ ನಾನು ಕಟುಕನಾಗಿದ್ದೇನೆ.  ಆದರೆ ಕಟುಕತನದಲ್ಲಿ ಮಾನವೀಯತೆ ಇರಬೇಕು.  ಪ್ರಾಣಿಯನ್ನು ಕೊಲ್ಲುವ ಅತಂತ್ಯ ಮಾನವೀಯ ವಿಧಾನ ಇದು."

"ಇಲ್ಲಾ!"  ಮತ್ತೊಮ್ಮೆ ಚೀರಿದೆ.  "ತೊಲಗಾಚೆ, ನನ್ನಲ್ಲಿ ನಿನಗೆ ಕೆಲಸವಿಲ್ಲ."  ಅಬ್ಬರಿಸಿದೆ.

ಅವನ ಮುಖದಲ್ಲಿ ಅದೇ ಮುಗುಳ್ನಗೆ.

"ಇಲ್ಲಿ ಬನ್ನಿ."  ಹೇಳುತ್ತಾ ಮೂಲೆಯಲ್ಲಿದ್ದ ತನ್ನ ಚೀಲದತ್ತ ನಡೆದ.  ಅದರೊಳಗೆ ಕೈತೂರಿಸಿ ಡಿವಿಡಿಯೊಂದನ್ನು ಹೊರತೆಗೆದ.  ಗಲ್ಲಾದ ಎದುರಿಗಿದ್ದ ಟಿವಿಯತ್ತ ನಡೆದ.  ಸ್ವಿಚ್‌ಗಳನ್ನು ಒತ್ತಿ ಡಿಸ್ಕನ್ನು ಡಿವಿಡಿ ಪ್ಲೇಯರ್‌ನೊಳಗೆ ತೂರಿಸಿದ.  ನನ್ನತ್ತ ತಿರುಗಿದ.  ಗಂಭೀರ ದನಿಯಲ್ಲಿ ನುಡಿದ: "ಜರ್ಮನಿಯ ಹ್ಯಾನೋವರ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿದ ಪ್ರಯೋಗ ಇದು."  ರಿಮೋಟನ್ನು ಕೈಗೆತ್ತಿಕೊಂಡು ಗುಂಡಿಗಳನ್ನು ಒತ್ತಿದ.  ನಾನು ಮಂತ್ರಮುಗ್ಧನಾಗಿ ನೋಡುತ್ತಿದ್ದೆ.

ಹಚ್ಚಹಸಿರು ಹುಲ್ಲುಗಾವಲಿನಲ್ಲಿ ಸ್ವಚ್ಛಂದವಾಗಿ ಮೇಯುತ್ತಿದ್ದ ಕುರಿಗಳು ಟೀವಿಯ ತೆರೆ ತುಂಬಿದವು.  ಯಾವ ಚಿಂತೆಯೂ ಇಲ್ಲದ ಸ್ವತಂತ್ರ ಜೀವಿಗಳು...  ಮೋಡಿಗೊಳಿಸುವಂಥ ಗಂಭೀರ ಕಂಠದಲ್ಲಿ ವಿವರಣೆ ಆರಂಭವಾಯಿತು.

ಮುಂದಿನ ಎರಡು ಕ್ಷಣಗಳಲ್ಲಿ ನೀಲೀ ಸಮವಸ್ತ್ರದ ನಾಕೈದು ಜನ ಅವತರಿಸಿ ಮೂರು ಕುರಿಗಳನ್ನು ತೋಳುಗಲ್ಲಿ ಎತ್ತಿಕೊಂಡು ಮುದ್ದಿಸುತ್ತಾ ಒಂದು ಕಟ್ಟಡದೊಳಗೆ ನಡೆದರು.

ಅದೊಂದು ಆಪರೇಷನ್ ಥಿಯೇಟರ್‌ನಂತಿತ್ತು.  ಆ ಮೂರು ಕುರಿಗಳಿಗೂ ಅರಿವಳಿಕೆ ನೀಡಲಾಯಿತು.  ಹಸಿರುರುಡುಗೆಯ ವೈದ್ಯರುಗಳು ಕಾಣಿಸಿಕೊಂಡರು.  ಕ್ಷಣಗಳ ಹಿಂದೆ ಹಸಿರು ಹುಲ್ಲುಗಾವಲಿನಲ್ಲಿ ಮೇಯುತ್ತಿದ್ದ ಬಿಳೀ ಕುರಿಗಳು.  ಈಗ ಬಿಳೀ ಶಸ್ತ್ರಚಿಕಿತ್ಸಾಯದಲ್ಲಿ ಹಸಿರುಡುಗೆಯ ವೈದ್ಯರುಗಳು!

ನೀಲೀ ಉಡುಗೆಯವರು ಮೂರೂ ಕುರಿಗಳ ತಲೆಗಳಲ್ಲಿ ತುಂಬಿದ್ದ ತುಂಡುಗೂದಲುಗಳನ್ನು ಶೇವ್ ಮಾಡಿ ತೆಗೆದರು.  ಬತ್ತಲೆಯಾದ ಚರ್ಮದ ಮೇಲೆ ವೈದ್ಯರುಗಳ ಹೊಳೆಯುವ ಚಾಕುಗಳು ಅಕ್ಕರೆಯಿಂದ ಸವರುವಂತೆ ಹರಿದಾಡಿದವು...  ಒಂದೊಂದಾಗಿ ಮೂರು ಕುರಿಗಳ ತಲೆಬುರುಡೆಯ ವಿವಿಧಭಾಗಗಳಲ್ಲಿ ಅತೀಸೂಕ್ಷ್ಮ ಎಲೆಕ್ಟೋಡುಗಳನ್ನು ಆಳವಡಿಸಲಾಯಿತು.

"ಇಪ್ಪತ್ತು ನಿಮಿಷಗಳ ನಂತರ."  ಪರದೆಯ ಮೇಲೆ ಅಕ್ಷರಗಳು ಕಾಣಿಸಿಕೊಂಡವು.  ಕುರಿಗಳು ಮೆಲ್ಲಮೆಲ್ಲನೆ ಕಾಲು ಸರಿದಾಡಿಸತೊಡಗಿದವು.

"ಮೂವತ್ತೈದು ನಿಮಿಷಗಳ ನಂತರ."

ಕುರಿಗಳು ಕಣ್ಣು ಬಿಟ್ಟು ದಿಕ್ಕೆಟ್ಟವಂತೆ ಸುತ್ತಲೂ ಮಿಕಿಮಿಕಿ ನೋಡಿದವು.

"ಒಂದು ದಿನದ ನಂತರ."

ಕುರಿಗಳು ಒಂದು ಪುಟ್ಟ ಹಸಿರು ಅಂಗಳದಲ್ಲಿ ಕೆಡೆದುಕೊಂಡು ಮೆಲುಕು ಹಾಕುತ್ತಿದ್ದವು.  ಮೂವರು ನೀಲೀಸಮವಸ್ತ್ರದ ಯುವಕರು ಬಂದು ಮೂರೂ ಕುರಿಗಳ ಕತ್ತಿನ ಸುತ್ತಲೂ ಅಳಿಸಲಾಗದ ಇಂಕಿನಿಂದ ಒಂದೊಂದು ಕಪ್ಪುಪಟ್ಟೆ ಎಳೆದರು.

"ಆರು ವಾರಗಳ ನಂತರ."

ಅದೇ ಹಚ್ಚಹಸಿರು ಹುಲ್ಲುಗಾವಲು.  ಕಪ್ಪುಪಟ್ಟೆಯ ಕುರಿಗಳು ಉಳಿದ ಕುರಿಗಳ ಜತೆ ಕುಶಾಲಿನಿಂದ ಆಟವಾಡುತ್ತಿದ್ದವು.  ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನುಣುಪಾಗಿ ಬೋಳಿಸಲಾಗಿದ್ದ ಅವುಗಳ ತಲೆಗಳ ತುಂಬಾ ಈಗ ಬಿರುಸಾದ ತುಂಡು ತುಪ್ಪುಳ...  ನೀಲೀ ಸಮವಸ್ತ್ರದ ಜನ ಮತ್ತೆ ಬಂದರು.  ಕಪ್ಪುಪಟ್ಟೆಯ ಕುರಿಗಳನ್ನು ಮುದ್ದಿಸುತ್ತಾ ಹೊತ್ತೊಯ್ದರು.  ಅದೇ ಬಿಳುಪು ಪ್ರಯೋಗಶಾಲೆ, ಅದೇ ವೈದ್ಯರುಗಳು.  ಅವರೀಗ ಕಪ್ಪು ಉಡುಪುಗಳಲ್ಲಿದ್ದರು...  ಕುರಿಗಳು ಮತ್ತೆ ಟೇಬಲ್‌ಗಳನ್ನೇರಿದವು.  ಈಗ ಅವುಗಳಿಗೆ ಅರಿವಳಿಕೆ ನೀಡಲಿಲ್ಲ.  ಕಾಲುಗಳನ್ನು ಅಗಲ ಟೇಪಿನಿಂದ ಕಟ್ಟಿದರು.  ಟೇಪ್ ಬಾಯಿಗಳನ್ನೂ ಬಂಧಿಸಿತು.  ವಿವರಣೆ ಸಾಗಿತ್ತು.

ಅಲ್ಲಿ ಮೂರು ಪುಟ್ಟಪುಟ್ಟ ಯಂತ್ರಗಳು.  ಅವುಗಳಿಂದ ಹೊರಟ ವಯರುಗಳು ಕುರಿಗಳ ತಲೆಗಳ ವಿವಿಧಭಾಗಗಳತ್ತ ಸಾಗಿದ್ದವು...  "ಇವು ಎಲೆಕ್ಟ್ರೋಎನ್‌ಸಿಫಲೋಗ್ರಾಂ ಅಂದರೆ ಇಇಜಿ ಯಂತ್ರಗಳು.  ದೇಹದ ಮೇಲಾಗುವ ಯಾವುದೇ ಪರಿಣಾಮಕ್ಕೆ ಮೆದುಳು ಸ್ಪಂದಿಸುವ ಗತಿ ಮತ್ತದರ ತೀವ್ರತೆಯ ಪ್ರಮಾಣವನ್ನು ಇವು ಗ್ರಹಿಸಿ ದಾಖಲಿಸುತ್ತವೆ..."  ವಿವರಣೆ ತಿಳಿಸಿತು.

ಹೊಳೆಯುವ ಅಗಲ ಅಲುಗಿನ ಭಾರದ ಮೊಂಡುಗತ್ತಿ ಒಬ್ಬನ ಕೈಯಲ್ಲಿ ಮಿನುಗಿತು.  ಅವನು ಸುತ್ತಲೂ ಒಮ್ಮೆ ನೋಡಿ ತನ್ನ ಮುಂದೆ ನಿಸ್ಸಹಾಯಕವಾಗಿ ಬಿದ್ದಿದ್ದ ಕುರಿಯತ್ತ ನೋಡಿದ.  ಮರುಕ್ಷಣ ಕತ್ತಿ ಕುರಿಯ ಕುತ್ತಿಗೆಯ ಮೇಲೆರಗಿತು.  ಒಂದೇ ಏಟು... ಏಕ್ ಮಾರ್ ದೋ ಟುಕಡಾ!

ಇಇಜಿಯ ಗ್ರ್ಯಾಫ್ ಗೆರೆ ಒಮ್ಮೆಲೆ ಜಿಗಿದು ತಟಪಟ ಕುಣಿದಾಡಿ ನಿಶ್ಚಲವಾಯಿತು.  ಕುರಿಯ ಎದೆಯೂ ಒಮ್ಮೆ ಏರಿಳಿಯಿತು.  ಮುಂದಿನ ಕ್ಷಣದಲ್ಲಿ ಅದೂ ನಿಶ್ಚಲ.  ಅಲ್ಲಿದ್ದವನೊಬ್ಬ ಅದರ ಕಾಲುಗಳನ್ನು ಬಂಧಿಸಿದ್ದ ಟೇಪುಗಳನ್ನು ಸರಕ್ಕನೆ ಕತ್ತರಿಸಿದ.  ಅವು ಅಲುಗಲೇ ಇಲ್ಲ.

ಅವನು ಕತ್ತಿಯನ್ನು ಪಕ್ಕಕ್ಕಿಟ್ಟ.  ಪಕ್ಕದ ಟೇಬಲ್‌ನತ್ತ ನಡೆದ.  ಕುರಿಯತ್ತ ನಸುನಗೆ ಬೀರಿದ.  ಈಗವನ ಕೈಯಲ್ಲಿ ಒಂದು ಪಿಸ್ತೂಲಿತ್ತು.  ಅದೊಂದು ಕ್ಯಾಪ್ಟಿವ್ ಬೋಲ್ಟ್ ಪಿಸ್ತೂಲು ಎಂಬ ವಿವರಣೆ ಬಂತು.  ಅದರ ನಳಿಕೆಯನ್ನು ಕುರಿಯ ತಲೆಬುರುಡೆಗೆ ಒತ್ತಿಹಿಡಿದು ಟ್ರಿಗರ್ ಎಳೆದ... ಇನ್ನೊಮ್ಮೆ... ಮತ್ತೊಮ್ಮೆ...

ಇಇಜಿ ಗೆರೆ ಸ್ತಬ್ಧವಾಗಿತ್ತು.  ಮುಂದಿನ ಕ್ಷಣದಲ್ಲಿ ಅದು ಅಂಕೆತಪ್ಪಿದಂತೆ ಮೇಲೆಕೆಳಗೆ ಜಿಗಿದಾಡತೊಡಗಿತು.  ಕುರಿ ನಿಶ್ಚಲವಾಗಿತ್ತು.  ಬಂಧಮುಕ್ತಗೊಂಡ ಕಾಲುಗಳು ಸೋತು ಮಲಗಿದ್ದವು.  ಗೆರೆಯ ತಕತಕ ಜಿಗಿದಾಟ ನಡೆದೇ ಇತ್ತು.

ಅವನು ಮೂರನೆಯ ಟೇಬಲ್ ಬಳಿ ನಿಂತ.  ಈಗವನ ಕೈಯಲ್ಲಿ ಹರಿತ ಕಿರುಗತ್ತಿ.  ಅದನ್ನು ತನ್ನ ಮುಂದೆ ನಿಸ್ಸಹಾಯಕವಾಗಿ ಬಿದ್ದುಕೊಂಡಿದ್ದ ಕುರಿಯ ಕುತ್ತಿಗೆಯ ಎರಡೂ ಭಾಗಗಳಲ್ಲಿ ಸರಕ್ಕನೆ ಇಳಿಸಿ ತೆಗೆದ.  ಇಇಜಿ ಗೆರೆ ನಿಶ್ಚಲ.  ಎರಡು ಕ್ಷಣದಲ್ಲಿ ಅದು ಬೇಕೋ ಬೇಡವೋ ಎಂಬಂತೆ ಒಮ್ಮೆ ಅಲುಗಿತು.  ಅವನು ಕುರಿಯ ಕುತ್ತಿಗೆಯ ತಳಭಾಗದಲ್ಲಿ ಚೂರಿ ಹೂಡಿದ...  ದೂರ ಸರಿದು ಅಮಾಯಕನಂತೆ ನಿಂತ.  ಅವನ ಸಂಗಡಿಗ ಸರ್ರನೆ ಮುಂದೆ ಬಂದು ಕುರಿಯ ಕಾಲುಗಳನ್ನು ಬಂಧಮುಕ್ತಗೊಳಿಸಿದ.  ಅವು ಹುಚ್ಚುವೇಗದಲ್ಲಿ ಒದರಾಡತೊಡಗಿದವು.  ಕುರಿಯ ದೇಹ ಭಯಾನಕವಾಗಿ ಅದುರುತ್ತಿತ್ತು.  ಇಇಜಿ ತೆರೆಯತ್ತ ನೋಟ ಹೊರಳಿಸಿದ ನಾನು ಬೆಚ್ಚಿದೆ.  ಅದು ಸಂಪೂರ್ಣವಾಗಿ ಸ್ತಬ್ಧಗೊಂಡಿತ್ತು.  ನನಗೆ ನನ್ನ ಕಣ್ಣುಗಳನ್ನೇ ನಂಬಲಾಗಲಿಲ್ಲ.

ಮರುಕ್ಷಣ ಇಡೀ ಕೋಣೆ ಪರದೆಯಲ್ಲಿ ಅನಾವರಣಗೊಂಡಿತು.  ಟೇಬಲ್‌ಗಳ ಮೇಲೆ ಬಿದ್ದಿದ್ದ ಕುರಿಗಳ ಕಳೇಬರಗಳು, ಅವುಗಳ ಹಿಂದೆ ಇಇಜಿ ಯಂತ್ರಗಳು.

ಮೊದಲನೆಯ ಕುರಿಯೂ ಅದರ ಇಇಜಿ ಗೆರೆಯೂ ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದವು.  ಎರಡನೆಯ ಕುರಿಯೂ ನಿಶ್ಚಲ.  ಆದರೆ ಅದರ ಇಇಜಿ ಗೆರೆ ಇನ್ನೂ ಅಲುಗುತ್ತಾ ಸಾಗಿತ್ತು.  ಮೂರನೆಯ ಕುರಿಯ ಒದರಾಟ ನಡೆದೇ ಇತ್ತು.  ಅದರ ಯಾತನೆಯನ್ನು ನೋಡಿದರೆ ಕಟುಕನ ವೃತ್ತಿಯಿರಲಿ, ಮಾಂಸ ತಿನ್ನುವುದನ್ನೇ ತೊರೆದುಬಿಡಬೇಕು ಎನ್ನುವಷ್ಟು ಬೇಸರವಾಯಿತು.  ಆದರೆ ಅದರ ಇಇಜಿ ಗೆರೆ...

ಕುರಿಯ ಒದ್ದಾಟಕ್ಕೂ ತನಗೂ ಏನೂ ಸಂಬಂಧವಿಲ್ಲ ಎಂಬಂತೆ ಅದು ನಿಶ್ಚಲವಾಗಿ ನಿದ್ರಿಸುತ್ತಿತ್ತು.

"ಅದು ಕೆಟ್ಟಿದೆ."  ನಾನು ಅಸಹನೆಯಲ್ಲಿ ಕೂಗಿದೆ.  ಅವನು ನಸುನಕ್ಕ.  "ಅದು ಸರಿಯಾಗಿದೆ, ಮತ್ತು ನಿಜವನ್ನೇ ಹೇಳುತ್ತಿದೆ."

"ನೀನು ಸುಳ್ಳು ಹೇಳುತ್ತಿದ್ದೀಯೆ!"  ಅಬ್ಬರಿಸಿದೆ.

"ಇಲ್ಲ.  ಅದು ನನ್ನಲ್ಲಿಲ್ಲ.  ನಾನದನ್ನು ಅಡವಿಟ್ಟಿದ್ದೇನೆ."  ಅವನು ಕನಲಿ ಹೇಳಿದ.  ನಾನು ಸಾವರಿಸಿಕೊಳ್ಳಲು ಹೆಣಗಿದೆ.  ಅವನು ಎದುರಿನಿಂದ ಮೂಡಿಬರುತ್ತಿದ್ದ ಅದೇ ಮೋಡಿದನಿಯ ವಿವರಣೆಯತ್ತ ನನ್ನ ಗಮನ ಸೆಳೆದ.

"...ಈಗ ವ್ಯಾಪಕವಾಗಿ ಪ್ರಚಲಿತವಿರುವ ಮೂರು ವಿಧಾನಗಳ ಮೂಲಕ ಈ ಮೂರು ಕುರಿಗಳನ್ನು ಹತ್ಯೆ ಮಾಡಲಾಗಿದೆ.  ಹತ್ಯೆಯ ಸಮಯದಲ್ಲಿ ಕುರಿಗಳು ಅನುಭವಿಸಿದ ನೋವಿನ ಪ್ರಮಾಣವನ್ನು ಅವುಗಳ ತಲೆಯ ವಿವಿಧಭಾಗಗಳಲ್ಲಿ ಒಂದೂವರೆ ತಿಂಗಳ ಹಿಂದೆ ಆಳವಡಿಸಲಾಗಿದ್ದ ಎಲೆಕ್ಟ್ರೋಡುಗಳು ಇಇಜಿ ಯಂತ್ರಗಳಿಗೆ ರವಾನಿಸಿದವು.  ಇಇಜಿಯ ಗ್ರ್ಯಾಫ್ ಗೆರೆಗಳ ಚಲನೆಯಲ್ಲಿನ ಏರಿಳಿತ ಕುರಿಗಳು ಅನುಭವಿಸಿದ ಯಾತನೆಯ ಮಟ್ಟವನ್ನು ದಾಖಲಿಸಿತು.

ಮೊದಲನೆಯ ಕುರಿಯನ್ನು ಪೌರ್ವಾತ್ಯ ಸಮಾಜಗಳ ಸಾಂಪ್ರದಾಯಿಕ ಶೈಲಿಯಲ್ಲಿ ಹತ್ಯೆ ಮಾಡಲಾಯಿತು.  ಕುತ್ತಿಗೆಯ ಮೇಲೆ ಭಾರದ ಹರಿತ ಕತ್ತಿಯ ಒಂದೇ ಏಟು...  ಪರಿಣಾಮ?  ಹೃದಯಕ್ಕೆ ಆಮ್ಲಜನಕದ ಪೂರೈಕೆ ಏಕಾಏಕಿ ಸ್ತಬ್ಧಗೊಂಡಿತು.  ಜತೆಗೇ ವೇಗವಾಗಿ ಇಳಿಯತೊಡಗಿದ ರಕ್ತದೊತ್ತಡದ ಪರಿಣಾಮವಾಗಿ ಕುರಿಗೆ ಹೃದಯಾಘಾತವಾಯಿತು.  ಈ ಪ್ರಕ್ರಿಯೆ ಜರುಗುವಾಗ ಕುರಿಯ ಮೆದುಳು ಕಾರ್ಯನಿರ್ವಹಿಸುತ್ತಲೇ ಇತ್ತು.  ಪರಿಣಾಮವಾಗಿ ಕುತ್ತಿಗೆ ಕತ್ತರಿಸಿದ ಯಾತನೆಯನ್ನು ಕುರಿ ಅಲ್ಪಕಾಲವಾದರೂ ಅತೀವವಾಗಿ ಅನುಭವಿಸಿತು.

ಎರಡನೆಯ ಕುರಿಯನ್ನು ಪಾಶ್ಛಾತ್ಯ ದೇಶಗಳ ಆಧುನಿಕ ವಿಧಾನದಂತೆ ಕೊಲ್ಲಲಾಯಿತು.  ಕೊಲ್ಲುವ ಮೊದಲು ಕುರಿಯ ಮೆದುಳಿಗೆ ಕ್ಯಾಪ್ಟಿವ್ ಬೋಲ್ಟ್ ಪಿಸ್ತೂಲಿನಿಂದ ಗುಂಡು ತೂರಿಸಿ ಅದನ್ನು ಸ್ಥಂಭಿತಗೊಳಿಸಲಾಯಿತು.  ಕುರಿ ನಿಶ್ಚಲವಾಯಿತು.  ಆ ಕುರಿಯನ್ನು ಆನಂತರ ಕಸಾಯಿಖಾನೆಗಳಲ್ಲಿ ಹಿಂಗಾಲುಗಳಲ್ಲಿ ನೇತುಹಾಕಿ ಕತ್ತರಿಸುತ್ತಾರೆ.  ಕುರಿಯೇನೋ ನಿಶ್ಚಲವಾಗಿರುತ್ತದೆ.  ಆದರೆ ಅದರ ಮೆದುಳು ಸಂಪೂರ್ಣವಾಗಿ ಸತ್ತಿರುವುದಿಲ್ಲ.  ಹೀಗಾಗಿ ಕುರಿ ಯಾತನೆಯನ್ನು ಅನುಭವಿಸುತ್ತಿರುತ್ತದೆ ಹಾಗೂ ಆ ಯಾತನೆ ಧೀರ್ಘವಾಗಿರುತ್ತದೆ.  ಇಇಜಿ ಇದನ್ನು ಸ್ಪಷ್ಟವಾಗಿ ತೋರಿಸಿದೆ.

ಮೂರನೆಯ ಕುರಿಯನ್ನು ಯಹೂದಿಗಳ ಕೋಶರ್ ಮತ್ತು ಮುಸ್ಲಿಮರ ಹಲಾಲ್ ಪದ್ದತಿಗಳ ಅನುಸಾರವಾಗಿ ಕೊಲ್ಲಲಾಯಿತು.  ಮೊದಲು ಅದರ ಮೆದುಳಿನಿಂದ ಹೃದಯಕ್ಕೆ ಮಲಿನ ರಕ್ತವನ್ನು ಸಾಗಿಸುವ ಅಭಿಧಮನಿಗಳನ್ನೂ, ಹೃದಯದಿಂದ ಮೆದುಳಿಗೆ ಶುದ್ಧರಕ್ತವನ್ನು ಸಾಗಿಸುವ ಅಪಧಮನಿಗಳನ್ನೂ ಕತ್ತರಿಸಿ ಮೆದುಳಿಗೆ ರಕ್ತದ ಪೂರೈಕೆಯನ್ನು ತಡೆಯಲಾಯಿತು.  ನಂತರ ಅದರ ಅನ್ನನಾಳ ಮತ್ತು ಶ್ವಾಸನಾಳಗಳನ್ನು ತುಂಡರಿಸಲಾಯಿತು.  ಆದರೆ ಮೆದುಳುಬಳ್ಳಿಯನ್ನು ಹಾಗೇ ಬಿಡಲಾಯಿತು.  ರಕ್ತನಾಳಗಳನ್ನು ಒಂದೊಂದಾಗಿ ಕತ್ತರಿಸಿದ್ದರಿಂದ ಕುರಿಯ ದೇಹದಿಂದ ರಕ್ತದ ಹೊರಹರಿಯುವಿಕೆ ನಿಧಾನವಾಗಿತ್ತು.  ಹೀಗಾಗಿ ಅದಕ್ಕೆ ತಕ್ಷಣ ಹೃದಯಾಘಾತವಾಗಲಿಲ್ಲ.  ಹೃದಯ ಕಾರ್ಯನಿರ್ವಹಿಸುತ್ತಲೇ ಇತ್ತು ಮತ್ತು ಅದು ನಿಧಾನವಾಗಿ ತನ್ನ ಕ್ಷಮತೆ ಕಳೆದುಕೊಳ್ಳುತ್ತಿತ್ತು.  ಆದರೆ ಅದೇ ಸಮಯದಲ್ಲಿ ರಕ್ತ ಮತ್ತು ಆಮ್ಲಜನಕಗಳ ಪೂರೈಕೆಯಲ್ಲಾದ ನಿಲುಗಡೆಯಿಂದಾಗಿ ಮೆದುಳು ನಿಷ್ಕ್ರಿಯವಾಯಿತು.  ಅಂದರೆ ಕುರಿ ಬ್ರೈನ್ ಡೆತ್‌ಗೆ ಒಳಗಾಯಿತು.  ಅಂದರೆ ಕುರಿಗೆ ಯಾವ ನೋವಿನ ಅನುಭವವೂ ತಟ್ಟುತ್ತಿರಲಿಲ್ಲ.  ಆದರೂ ಅದರ ದೇಹ ಮತ್ತು ಕಾಲುಗಳು ಒದರಾಡುತ್ತಿದ್ದವು.  ಇದಕ್ಕೆ ಕಾರಣ ಇನ್ನೂ ಕ್ರಿಯಾಶೀಲವಾಗಿದ್ದ ಹೃದಯ ಮತ್ತು ದೇಹದಿಂದ ನಿಧಾನವಾಗಿ ಬಸಿಯಲ್ಪಡುತ್ತಿದ್ದ ರಕ್ತ ಹಾಗೂ ತನ್ಮೂಲಕ ಕುಸಿಯುತ್ತಿದ್ದ ರಕ್ತದೊತ್ತಡ.  ಈ ಒದ್ದಾಟ ನೋವಿನಿಂದಲ್ಲ ಎಂದು ಇಇಜಿ ಸ್ಪಷ್ಟವಾಗಿ ಸೂಚಿಸಿತು.

ಮೊದಲ ಎರಡು ವಿಧಾನಗಳಲ್ಲಿ ಕುರಿ ಕ್ಷಣದಲ್ಲಿ ನಿಶ್ಚಲವಾಗುತ್ತದೆ.  ಆದರೆ ಅದರ ಮೆದುಳು ಇನ್ನೂ ಕ್ರಿಯಾಶೀಲವಾಗಿರುವುದರಿಂದ ಕುರಿಗೆ ನೋವಿನ ಅನುಭವವಾಗುತ್ತಿರುತ್ತದೆ.  ಮೂರನೆಯ ವಿಧಾನದಲ್ಲಿ ಕುರಿಯ ಮೆದುಳು ಮೊದಲು ಸಾಯುತ್ತದೆ.  ಹೀಗಾಗಿ ದೇಹದ ಇತರ ಭಾಗಗಳಲ್ಲಿ ನಡೆಯುವ ಯಾವ ಬೆಳವಣಿಗೆಗಳನ್ನೇ ಆಗಲಿ ಗ್ರಹಿಸುವ ಸ್ಥಿತಿಯಲ್ಲಿ ಮೆದುಳು ಇರುವುದಿಲ್ಲ.  ಪರಿಣಾಮವಾಗಿ ನೋವಿನ ಅನುಭವ ಕುರಿಗೆ ಆಗುವ ಸಾಧ್ಯತೆಯೇ ಇಲ್ಲ.  ಆದರೆ ಅದರ ದೇಹದ ಒದರಾಟ ನೋಡುಗರಿಗೆ ಕುರಿ ಅತೀವ ಯಾತನೆಯನ್ನನುಭವಿಸುತ್ತಿದೆ ಎಂಬ ಭ್ರಮೆ ಉಂಟುಮಾಡುತ್ತದೆ.  ಕಣ್ಣಿಗೆ ಕಂಡದ್ದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ..."

"ಸುಳ್ಳು.  ನಾನಿದನ್ನು ನಂಬುವುದಿಲ್ಲ."  ರೋಷದಲ್ಲಿ ಅಬ್ಬರಿಸಿದೆ.  ನನ್ನ ಶರೀರ ಕಂಪಿಸುತ್ತಿತ್ತು.

"ಇದು ವೈದ್ಯಕೀಯ ವಿಜ್ಞಾನ ಹೇಳುವ ಸತ್ಯ.  ನೀನಿದನ್ನು ನಂಬಲೇಬೇಕು ಪಪ್ಪ."

ಬೆಚ್ಚಿ ಹಿಂದೆ ತಿರುಗಿದೆ.  ನನ್ನ ಮಗ ಮುಗುಳುನಗುತ್ತಾ ನಿಂತಿದ್ದ.

"ನೀನು... ನೀನು!   ಇಲ್ಲಿಗೇಕೆ ಬಂದೆ?"  ನಾನು ಅತೀವ ಅಚ್ಚರಿಯಲ್ಲಿ ಪ್ರಶ್ನಿಸಿದೆ.  ಇಷ್ಟು ವರ್ಷಗಳಲ್ಲಿ ಅವನನ್ನು ಇಲ್ಲಿಗೆ ಒಮ್ಮೆಯೂ ಕರೆತಂದಿರಲಿಲ್ಲ.  ನಾನು ಪ್ರಾಣಿಗಳನ್ನು ಕೊಂದು ಮಾರುವುದನ್ನು ಅವನು ನೋಡುವುದು ನನಗಿಷ್ಟವಿರಲಿಲ್ಲ.

"ಯಾಕೆ, ಬರಬಾರದಿತ್ತೇನು?"  ಅವನ ಮುಖದಲ್ಲಿ ಅದೇ ಮುಗುಳ್ನಗೆ.

"ಹೌದು, ನೀನಿಲ್ಲಿಗೆ ಬರಬಾರದಿತ್ತು.  ಇದೊಂದು ಕೊಳಕು ಜಾಗ.  ಇಲ್ಲಿ ರಕ್ತ, ಹೊಲಸು..."  ನನ್ನ ದನಿ ಕಂಪಿಸುತ್ತಿತ್ತು.

"ಹಾಗಿದ್ದರೆ... ನೀನೇಕೆ ಇಲ್ಲಿದ್ದೀಯ?  ನಾನು ಕಾಲಿಡಬಾರದ ಸ್ಥಳದಲ್ಲಿ ನನ್ನ ತಂದೆ ಇರುವುದು ಏಕೆ?"  ಗುಂಡಿನಂತೆ ಬಂತು ಪ್ರಶ್ನೆ.

ನಾನು ಬೆಚ್ಚಿದೆ.  ಎದೆಯೆತ್ತರಕ್ಕೆ ಬೆಳೆದು ನಿಂತಿದ್ದ ಮಗ ನನ್ನತ್ತ ನೇರವಾಗಿ ನೋಡುತ್ತಿದ್ದ.  ಕಣ್ಣುಗಳಲ್ಲಿ ಗಾಂಭೀರ್ಯ.  ತುಟಿಗಳಲ್ಲಿ ಅದೇ ಮಾಸದ ಮುಗುಳ್ನಗೆ.

ಉತ್ತರಕ್ಕಾಗಿ ನಾನು ತಡಕಾಡಿದೆ.  "ಇದು... ಇದು... ನನ್ನ ವೃತ್ತಿ."  ತಡವರಿಸಿದೆ.

"ನಮ್ಮ ಮನೆತನದ ವೃತ್ತಿ ಕನ್ನಡಿಗಳನ್ನು ಮಾಡಿ ಮಾರುವುದಾಗಿತ್ತು ಎಂದು ದಾದಿಮಾ ನನಗೆ ಹೇಳಿದ್ದಾಳೆ."  ಅವನ ನಗೆ ದೊಡ್ಡದಾಯಿತು.

"ಆದರೆ... ಆದರೆ...  ನನ್ನ ಬಾಪಾಜಿ... ನಿನ್ನ ದಾದಾಜಿ..."  ಮುಂದೇನೆಂದು ಹೇಳಬೇಕೆಂದು ನನಗೆ ಹೊಳೆಯಲಿಲ್ಲ.  ಇಡೀ ವಾತಾವರಣದ ದಿಕ್ಕೆಡಿಸುವ ಅಪರಿಚಿತತೆಯಲ್ಲಿ ನಾನು ವಿಲವಿಲನೆ ಒದ್ದಾಡಿದೆ.

"ನಾನು ಇಲ್ಲೇ ಇದ್ದೇನೆ ಮಗೂ."  ಹಿಂದಿನಿಂದ ಬಂದ ಬಾಪಾಜಿ ನನ್ನನ್ನು ತಮ್ಮ ಎದೆಗವಚಿಕೊಂಡರು.  ನನ್ನ ಮಗನತ್ತ ತಿರುಗಿ ಹೇಳಿದರು: "ನಿನ್ನ ಪ್ರಶ್ನೆಗೆ ನಾನು ಉತ್ತರ ಹೇಳುತ್ತೇನೆ.  ನಲವತ್ತೇಳರಲ್ಲಿ ಬರೀ ನಿರಾಶ್ರಿತರೇ ತುಂಬಿದ್ದ ಈ ಊರಿನಲ್ಲಿ ನೆಮ್ಮದಿಯಾಗಿ ಕನ್ನಡಿಯಲ್ಲಿ ಮೋರೆ ನೋಡಿಕೊಳ್ಳುತ್ತಾ ಕೂರಲು ಯಾರಿಗೂ ಸಮಯವಿರಲಿಲ್ಲ.  ಕನ್ನಡಿ ಮಾಡಲು ಬೇಕಾಗಿದ್ದ ಸಾಮಗ್ರಿಗಳೂ ನನಗಿಲ್ಲಿ ಸಿಗುತ್ತಿರಲಿಲ್ಲ.  ಮಾಡಿದ್ದರೂ ಕೊಂಡುಕೊಳ್ಳಲು ಯಾರೂ ಬರುತ್ತಿರಲಿಲ್ಲ.  ನಮ್ಮೆಲ್ಲರ ಹೊಟ್ಟೆಯ ಮೇಲೆ ತಣ್ಣೀರುಬಟ್ಟೆ ಬೀಳುತ್ತಿತ್ತು.  ಆ ಗಳಿಗೆಯಲ್ಲಿ ನನಗೆ ತೋರಿದ ದಾರಿ ಇದು.  ಲಂಡನ್ನಿಗೆ ಓಡಿಹೋದ ಕಸಾಯಿಯೊಬ್ಬ ಬಿಟ್ಟುಹೋಗಿದ್ದ ಈ ಕಸಾಯಿಖಾನೆಯನ್ನು ಸರಕಾರಕ್ಕೆ ಎಂಟು ರೂಪಾಯಿ ಹದಿನೈದು ಆಣೆ ಕೊಟ್ಟು ನನ್ನ ಹೆಸರಿಗೆ ಮಾಡಿಸಿಕೊಂಡೆ.  ಮಾಂಸ ಮಾರುವವನಾದೆ.  ನನಗೆ ಬೇರೆ ದಾರಿ ಇರಲಿಲ್ಲ."

"ಆದರೆ ನನ್ನ ಪಪ್ಪನಿಗೆ ಬೇರೆ ದಾರಿ ಇತ್ತಲ್ಲ?  ಅವರೇಕೆ ಇದಕ್ಕೇ ಅಂಟಿಕೊಂಡರು?"  ನನ್ನ ಮಗ ನಸುನಗುತ್ತಲೇ ದಾಳಿ ಮುಂದುವರೆಸಿದ್ದ.

ಈ ಪ್ರಶ್ನೆಗೆ ಉತ್ತರಕ್ಕಾಗಿ ನನ್ನ ಬದುಕನ್ನೇ ನಾನು ಶೋಧಿಸಿಕೊಳ್ಳಬೇಕಾಗಿತ್ತು.

ನಾನು ಅಳತೊಡಗಿದೆ.  "ಹೌದು ಮಗೂ, ಬೇರೆ ದಾರಿ ಹಿಡಿಯಬೇಕೆಂದು ನಾನೂ ಅಂದುಕೊಂಡಿದ್ದೆ.  ಆದರೆ... ಆದರೆ... ನಮ್ಮ ಚರಿತ್ರೆಯ..."  ಮುಂದೆ ಹೇಳಲಾಗಲಿಲ್ಲ.  ಬಿಕ್ಕಳಿಸತೊಡಗಿದೆ.

ನನ್ನ ಮಗ ಮುಂದೆ ಬಂದು ನನ್ನನ್ನು ಅಪ್ಪಿಕೊಂಡ.  ನನ್ನ ಕಣ್ಣೀರು ಒರೆಸುತ್ತಾ ಹೇಳಿದ: "ಯೆಸ್, ದಿಸ್ ಈಸ್ ದ ಕ್ರಕ್ಸ್ ಆಫ್ ದ ಪ್ರಾಬ್ಲಮ್.  ಇದು ಚರಿತ್ರೆಯ ದೋಷ.  ಚರಿತ್ರೆಯ ಹಿಡಿತಕ್ಕೆ ಸಿಕ್ಕುಬೀಳುವವರೆಲ್ಲರೂ ಹೀಗೆ ಒಂದಲ್ಲಾ ಒಂದು ದಿನ ತಮ್ಮ ಬದುಕನ್ನೇ ಶೋಧಿಸಿಕೊಳ್ಳಬೇಕಾದ, ಪಶ್ಚಾತ್ತಾಪದ ಅಗ್ನಿಯಲ್ಲಿ ಬೇಯಬೇಕಾದ ಪರಿಸ್ಥಿತಿಗೆ ಸಿಕ್ಕಿಕೊಳ್ಳುತ್ತಾರೆ.  ಯಾಕೆಂದರೆ ಚರಿತ್ರೆ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುವ ಮಾನವಜನಾಂಗ ವಿವಿಧ ಕಾಲಘಟ್ಟಗಳಲ್ಲಿ ಹಿಡಿದ ಮಾರ್ಗಗಳನ್ನಷ್ಟೇ ನಮ್ಮ ಮುಂದಿಟ್ಟು ನಮ್ಮ ಆಯ್ಕೆಯನ್ನು ಸೀಮಿತಗೊಳಿಸಿಬಿಡುತ್ತದೆ.  ಅದು ಒಡ್ಡುವ ಭಾವುಕ ಮಾಯಾಜಾಲದಲ್ಲಿ ಸಿಲುಕುವ ನಾವು ಅದು ತೋರುವ ಯಾವುದಾದರೊಂದು ಮಾರ್ಗವನ್ನು ಅನುಸರಿಸುವ ಸಮ್ಮೋಹಿನಿಗೆ ಸಿಕ್ಕಿಬಿದ್ದು ಅಷ್ಟರ ಮಟ್ಟಿಗೆ ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆ.  ಹೀಗೆ ನಮ್ಮ ಮನಸ್ಸುಗಳನ್ನು ತನ್ನ ಗುಲಾಮರನ್ನಾಗಿಸಿಕೊಂಡು ನಮ್ಮ ಸೃಜನಶೀಲತೆಯನ್ನೇ ನುಂಗಿ ನೊಣೆಯುವ ಅದು ನಮ್ಮನ್ನು ಹೊಸದೊಂದು ದಾರಿಯನ್ನು ಹುಡುಕಲಾರದಷ್ಟು ನಿರ್ವೀಯರನ್ನಾಗಿಸಿಬಿಡುತ್ತದೆ.  ಇದಕ್ಕಿರುವ ಪರಿಹಾರ ಒಂದೇ.  ಚರಿತ್ರೆಯನ್ನು ಬರೀ ಪುಸ್ತಕಗಳಿಗೆ ಸೀಮಿತಗೊಳಿಸಿ ನಮ್ಮ ಬದುಕನ್ನು ಆಧುನಿಕತೆಗೆ, ಅದು ಪ್ರತಿಪಾದಿಸುವ ಎಲ್ಲಾ ಮಾನವ ಕಾಳಜಿಗಳಿಗೆ ಅಭಿಮುಖವಾಗಿಸಿಕೊಳ್ಳುವುದು.  `ನಿನ್ನಲ್ಲಿಲ್ಲದ ಹೊಸಹಾದಿಯೊಂದನ್ನು ನಾವು ಶೋಧಿಸಿದ್ದೇವೆ, ನೋಡು' ಎಂದು ಚರಿತ್ರೆಗೆ ಹೇಳುವುದು."

"ಸರಿಯಾಗಿ ಹೇಳಿದೆ ಮಗೂ."  ಬಾಗಿಲಲ್ಲಿ ದನಿ ಕೇಳಿಸಿತು.  ಎಲ್ಲರೂ ಅತ್ತ ತಿರುಗಿದೆವು.  ಮುಸ್ಲಿಂ ಫಕೀರನೊಬ್ಬ ಒಳಬರುತ್ತಿದ್ದ.

"ಓಹ್!  ನನ್ನ ಸುಳ್ಳಿನ ಗಂಟನ್ನು ಅಡವಿಟ್ಟುಕೊಂಡು ನನಗೆ ಹಣಕೊಟ್ಟು ಈ ದಾರಿ ತೋರಿದ ಮಹಾತ್ಮ ಅವರು!"  ಕಟುಕ ಅಚ್ಚರಿ ಆನಂದದಲ್ಲಿ ಉದ್ಗರಿಸಿದ.  "ಬಾ ಅಬ್ದುಲ್ಲಾ, ಇಷ್ಟು ದಿನ ಅದೆಲ್ಲಿ ಮಾಯವಾಗಿದ್ದೆ?"  ಬಾಪಾಜಿ ಆತ್ಮೀಯತೆಯಿಂದ ಕರೆದರು.

 

*     *     *

 

ಮುಂದಿನ ಒಂದುಗಂಟೆಯಲ್ಲಿ ನಡೆದುದೇನೆಂದು ನನ್ನ ಅರಿವಿಗೆ ಇನ್ನೂ ನಿಲುಕಿಲ್ಲ.  ಕಟುಕ ತೋರಿದ ವಿಡಿಯೋವನ್ನೂ, ನನ್ನ ಮಗನ ವಿಚಾರಧಾರೆಯನ್ನೂ ಒಪ್ಪಿಕೊಳ್ಳಲಾರದೆ, ನನ್ನ ಇದುವರೆಗಿನ ನಂಬಿಕೆಗಳನ್ನು ಬಿಟ್ಟುಕೊಡಲಾರದೆ ನಾನು ಗೊಂದಲದಲ್ಲಿದ್ದೆ.  ಈ ದ್ವಂದ್ವ ಸಮಾಪ್ತಿಯಾಗುವವರೆಗೆ ನನ್ನ ಕಸಾಯಿಖಾನೆಯನ್ನು ಬಂದ್ ಮಾಡುವುದು ಒಳ್ಳೆಯದು ಎಂಬ ಬಾಪಾಜಿಯ ಸಲಹೆಯನ್ನು ಒಪ್ಪಿಕೊಂಡೆ.   ಹಾಗೆ ಹೇಳಿದ ಬಾಪಾಜಿ ಅಬ್ದುಲ್ಲಾನ ಜತೆ ಹಜ಼ರತ್‌ಬಾಲ್ ಹಾಗೂ ಅಮರನಾಥ ಕ್ಷೇತ್ರಗಳಿಗೆ ತೀರ್ಥಯಾತ್ರೆ ಹೊರಟುಹೋದರು.  ಅಲ್ಲಿ ತನ್ನಮ್ಮ ಸಿಕ್ಕಿದರೆ ಅವಳನ್ನು ಸುರಕ್ಷಿತವಾಗಿ ಇಲ್ಲಿಗೆ ಕರೆತನ್ನಿ ಎಂದು ಕಟುಕ ಅವರನ್ನು ಕೇಳಿಕೊಂಡ.  ಅವರಿಬ್ಬರೂ "ಇನ್ಷಾ ಅಲ್ಲಾ" ಎಂದು ಹೇಳಿ ಹೊರಟುಹೋದರು.  ಅವರನ್ನು ಹಿಂಬಾಲಿಸಿ ನಡೆದ ನನ್ನ ಮಾಜೀ "ದೈವೇಚ್ಛೆ ಇದ್ದಂತಾಗುತ್ತದೆ" ಎಂದು ಕಟುಕನಿಗೆ ಹೇಳಿದಳು.  ನಾನು ಕಸಾಯಿಖಾನೆಯ ಬಗ್ಗೆ ಏನಾದರೊಂದು ನಿರ್ಧಾರ ತೆಗೆದುಕೊಳ್ಳುವವರೆಗೆ ತಾನದರ ಕಾವಲುಗಾರನಾಗಿ ಅಲ್ಲಿ ಉಳಿಯುವುದಾಗಿ ಕಟುಕ ಹೇಳಿದ.  ಈಗ ತನ್ನನ್ನು ಸೈನಿಕ ಎಂದು ಕರೆಯಬೇಕೆಂದು ವಿನಂತಿಸಿಕೊಂಡ.  ಹ್ಞೂಂಗುಟ್ಟಿ ಮನೆಗೆ ಬಂದೆ.

ಮನೆಯಲ್ಲಿ ನನ್ನ ಹೆಂಡತಿ ಮುದ್ದಾದ ಬೊಂಬೆಯಂತಿದ್ದ ಒಬ್ಬಳು ಪುಟ್ಟ ಹುಡುಗಿಗೆ ತಲೆಬಾಚುತ್ತಿದ್ದಳು.

"ಇದ್ಯಾರ ಮನೆ ಹುಡುಗಿ?"  ಕುತೂಹಲದಿಂದ ಪ್ರಶ್ನಿಸಿದೆ.

"ಆ ನಿರಾಶ್ರಿತೆಯ ಮಗಳು."  ಉತ್ತರ ಬಂತು.

"ಯಾವ ನಿರಾಶ್ರಿತೆ?"

"ಓಹ್ ನಿಮಗೆ ಹೇಳಲೇ ಇಲ್ಲ.  ಅದೇ ನಿಮ್ಮ ಆ ಕಟುಕ, ಇಲ್ಲ... ಆ ಸೈನಿಕ ಇದ್ದಾನಲ್ಲ ಅವನ ಹೆಂಡತಿ.  ತನಗೆ ನೆಲೆ ಸಿಗುವವರೆಗೆ ತನ್ನ ಮಗಳನ್ನು ನೋಡಿಕೊಳ್ಳಿ ಎಂದು ಬೇಡಿಕೊಂಡಳು.  ಇರಿಸಿಕೊಂಡೆ."  ಹೇಳುತ್ತಾ ಹುಡುಗಿಯನ್ನು ಮುದ್ದಿಸಿದಳು.

"ಅವಳನ್ನು ಅಷ್ಟೋಂದು ಹಚ್ಚಿಕೊಳ್ಳಬೇಡ.  ಒಂದಲ್ಲಾ ಒಂದುದಿನ ಈ ಮನೆ ಬಿಟ್ಟುಹೋಗುವವಳು."  ಭಾವುಕಜೀವಿಯಾದ ನನ್ನ ಹೆಂಡತಿಗೆ ವಾಸ್ತವದ ಅರಿವು ಮಾಡಿಸಲು ಪ್ರಯತ್ನಿಸಿದೆ.  ಅವಳು ನಕ್ಕುಬಿಟ್ಟಳು.

"ನೀವೊಂದು ಪೆದ್ದು.  ಇವಳೆಂದೂ ಈ ಮನೆ ಬಿಟ್ಟುಹೋಗುವುದಿಲ್ಲ.  ಕೈಗೆ ಸಿಕ್ಕಿದ ರತ್ನವನ್ನು ಯಾರಾದರೂ ಕಳೆದುಕೊಳ್ಳುತ್ತಾರೆಯೇ?  ಇದು ಇವಳ ಮನೆ, ಇವಳು ಈ ಮನೆಯ ಹೆಣ್ಣು.  ಈಗಿವಳು ಮುದ್ದಿನ ಬೇಟಿ.  ಇನ್ನು ಹತ್ತುವರ್ಷದಲ್ಲಿ ಹೆಮ್ಮೆಯ ಬಹುರಾಣಿ."  ಹೇಳುತ್ತಾ ಬಾಲ್ಕನಿಯತ್ತ ನಡೆದಳು.  ಮಾಳಿಗೆಯ ಮೇಲೆ ತಟಪಟನೆ ಹನಿಗಳುದುರಿದ್ದು ನನ್ನ ಗಮನಕ್ಕೆ ಬಂತು.

ಮಳೆಯ ಶಬ್ಧವನ್ನೂ ಮೀರಿ ಟೀವಿಯಲ್ಲಿ ಬೇನಜ಼ಿರ್ ಭುಟ್ಟೋಳ ಸೀಳುಕಂಠ ಕೇಳಿಬಂತು: "ಕಶ್ಮೀರ್ ಹಮಾರಾ ಹೈ.  ಮಹಾರಾಜಾ ಹರಿಸಿಂಗ್ ಕಶ್ಮೀರವನ್ನು ಭಾರತಕ್ಕೆ ಒಪ್ಪಿಸಿದ ಒಪ್ಪಂದವನ್ನು ನಾವು ಎಂದೂ ಒಪ್ಪಿಕೊಂಡಿಲ್ಲ.  ಒಪ್ಪಿಕೊಳ್ಳುವುದೂ ಇಲ್ಲ..."

ನನಗೆ ಏನೊಂದೂ ಅರ್ಥವಾಗಲಿಲ್ಲ.  ಕುರ್ಚಿಯಲ್ಲಿ ಕುಸಿದೆ.  ಬೆಳಗಿನಿಂದಲೂ ನಡೆಯುತ್ತಿರುವುದೇನು?  ನನ್ನ ನಂಬಿಕೆಯ ಬುಡವೇ ಅಲ್ಲಾಡಿತ್ತು.  ನನ್ನ ಇದುವರೆಗಿನ ಬದುಕೇ ವ್ಯರ್ಥವೆನಿಸಿತ್ತು.  ನನ್ನ ಭವಿಷ್ಯವೇನು?  ಹತಾಷೆಯಲ್ಲಿ ಕಣ್ಣು ಮುಚ್ಚಿದೆ.

ಆ ಹುಡುಗಿ ಎದ್ದು ಕಿಟಕಿಯ ಬಳಿ ನಡೆದಳು.  ಗುಲಾಬಿ ಕೆನ್ನೆಗಳನ್ನು ಉಬ್ಬಿಸಿಕೊಂಡು ನೀಲೀ ಕಣ್ಣುಗಳನ್ನು ಅರಳಿಸಿಕೊಂಡು ಸುರಿವ ಮಳೆಯನ್ನೇ ನೋಡುತ್ತಾ ನಿಂತಳು.  ಒಣಗಿದ್ದ ಬಟ್ಟೆಗಳನ್ನು ಎದೆಗವಚಿಕೊಂಡು ಒಳಬಂದ ನನ್ನ ಹೆಂಡತಿ "ಮಳೆಹನಿಗೆ ಮುಖವೊಡ್ಡಬೇಡ, ಶೀತವಾದೀತು" ಎನ್ನುತ್ತಾ ಒಳಕೋಣೆಗೆ ಹೋದಳು.

ಆ ಬಾಲೆ ನನ್ನತ್ತ ತಿರುಗಿ ಮುಗುಳ್ನಕ್ಕಳು.  "ಮಳೆ ಎಷ್ಟು ಚಂದ ಅಲ್ಲವಾ?" ಅಂದಳು ಮುದ್ದುಮುದ್ದಾಗಿ.  "ನನಗೊಂದು ಕಾಗದದ ದೋಣಿ ಮಾಡಿಕೊಡುತ್ತೀರಾ?"  ಸಲಿಗೆಯಿಂದ ಕೇಳಿದಳು.  ಅವಳ ದನಿಯಲ್ಲಿದ್ದ ಸಲಿಗೆ, ಕಣ್ಣುಗಳಲ್ಲಿದ್ದ ನಿರಾಳತೆ ನನ್ನಲ್ಲಿ ಉತ್ಸಾಹ ಮೂಡಿಸಿದವು.

"ಖಂಡಿತಾ ಮಾಡಿಕೊಡುತ್ತೇನೆ.  ಅದಕ್ಕೆ ಮೊದಲು ನೀನು ನಿನ್ನ ಹೆಸರೇನೆಂದು ನನಗೆ ಹೇಳಬೇಕು."  ಕೀಟಲೆಯ ದನಿಯಲ್ಲಿ ಹೇಳಿದೆ.  ಅವಳು ನಾಚಿದಳು.  ಕೆನ್ನೆಗಳು ಮತ್ತಷ್ಟು ಗುಲಾಬಿಯಾದವು.  ನನ್ನನ್ನು ಓರೆಗಣ್ಣಿನಲ್ಲಿ ನೋಡುತ್ತಾ ಮೆಲ್ಲಗೆ "ಸಿಂಧೂ" ಅಂದಳು.

"ಸಿಂಧೂ!"

ನೂರು ನೂರು ನೆನಪುಗಳು ನುಗ್ಗಿಬಂದವು.  ಕಣ್ಣುಗಳನ್ನು ಅರೆಮುಚ್ಚಿದೆ.  ನನ್ನೊಳಗಿನ ಪ್ರಶ್ನೆಗಳ ಪ್ರವಾಹದ ಅರಿವೇ ಇಲ್ಲದ ಆಕೆ ಅಲ್ಲೇ ಇದ್ದ ನನ್ನ ಮಗನ ನೋಟುಪುಸ್ತಕದಿಂದ ಒಂದು ಹಾಳೆಯನ್ನು ಹರಿದು ನನ್ನ ಮುಂದೆ ಹಿಡಿದಳು.

ಮೌನವಾಗಿ ಹಾಳೆಯನ್ನು ಕೈಗೆ ತೆಗೆದುಕೊಂಡೆ.  ಆಯತಾಕಾರದ ಹಾಳೆಯ ಒಂದು ಭಾಗವನ್ನು ಚೌಕಾಕಾರದಲ್ಲಿ ಹರಿದೆ.  ಕೆಳಗೆ ಬಿದ್ದ ಹಾಳೆಯ ನೀಳ ಚೂರನ್ನು ಎತ್ತಿಕೊಂಡು ತನ್ನ ಬೆರಳುಗಳಿಗೆ ಸುತ್ತಿಕೊಳ್ಳುತ್ತಾ ನಾನು ದೋಣಿ ಮಾಡುವುದನ್ನೇ ನೋಡುತ್ತಾ ನಿಂತಳು.

ಒಂದು ನಿಮಿಷದಲ್ಲಿ ದೋಣಿ ತಯಾರಾಯಿತು.  ಅದನ್ನು ಅವಳ ಮುಂದೆ ಹಿಡಿದೆ.  "ಅಹ್ಹಾ!" ಎಂದು ಖುಷಿಯಿಂದ ಉದ್ಗರಿಸುತ್ತಾ ತೆಗೆದುಕೊಂಡಳು.  ಅವಳ ಕಣ್ಣುಗಳ ಹೊಳಪು ಚಹಾದ ಲೋಟ ಹಿಡಿದು ಬಂದ ನನ್ನ ಹೆಂಡತಿಯ ಕಣ್ಣುಗಳಲ್ಲಿ ಪ್ರತಿಫಲಿಸಿತು.

ಚಹಾ ಲೋಟಕ್ಕೆ ಕೈಹಾಕುವಷ್ಟರಲ್ಲಿ ಸಿಂಧೂ ನನ್ನ ಗಮನ ಸೆಳೆದಳು.  "ಇದರಲ್ಲಿ ಒಂದು ಪುಟ್ಟ ದೋಣಿ...?"  ಅನುಮಾನಿಸುತ್ತಾ ಕೈಯಲ್ಲಿದ್ದ ಕಿರಿದಾದ ನೀಳ ತುಂಡನ್ನು ಮುಂದೆ ಹಿಡಿದಳು.

"ಧಾರಾಳವಾಗಿ ಮಾಡಬಹುದು."  ಅವಳ ಅನುಮಾನವನ್ನು ಅಲ್ಲಗಳೆಯುವಂತೆ ನಕ್ಕು ಕಾಗದವನ್ನು ತೆಗೆದುಕೊಂಡೆ.  ಅದರ ಒಂದು ಭಾಗದಲ್ಲಿ ಪುಟ್ಟ ಚೌಕಾಕಾರದ ಚೂರೊಂದನ್ನು ಹರಿದು ಪುಟ್ಟ ದೋಣಿ ಮಾಡಿದೆ.

"ಇನ್ನೊಂದು."

ನಿಮಿಷದಲ್ಲಿ ಇನ್ನೊಂದು ಪುಟ್ಟ ದೋಣಿ ತಯಾರಾಯಿತು.  ಅವಳು ಕೇಳುವ ಮೊದಲೇ ಉಳಿದಿದ್ದ ಚೂರಿನಲ್ಲಿ ಮತ್ತೊಂದು ದೋಣಿ ಮಾಡಿದೆ.  ಉಳಿದ ಎರಡಿಂಚು ಉದ್ದ, ಅರ್ಧ ಇಂಚು ಅಗಲದ ಕಾಗದದ ಚೂರನ್ನು ಕೆಳಗೆ ತೂರಿದೆ.

ಮೂರು ಪುಟ್ಟ ಪುಟ್ಟ ದೋಣಿಗಳನ್ನು ದೊಡ್ಡ ದೋಣಿಯ ಅಂಚುಗಳಲ್ಲಿ ಅಂಟಿಸಿದಳು.  "ಇವು ಲೈಫ್ ಬೋಟ್‌ಗಳು."  ಖುಷಿಯಿಂದ ಹೇಳಿದಳು.  ಕುಣಿಯುತ್ತಾ ಅಡಿಗೆ ಮನೆಗೆ ಹೋಗಿ ನನ್ನ ಹೆಂಡತಿಗೆ ತೋರಿಸಿಕೊಂಡು ಬಂದಳು.  ನನ್ನತ್ತ ನೋಡಿ "ಶುಕ್ರಿಯಾ, ಬಹುತ್ ಶುಕ್ರಿಯಾ" ಅಂದಳು.  ನೆಲದ ಮೇಲೆ ಬಿದ್ದಿದ್ದ ಕಾಗದದ ಚೂರನ್ನು ಎತ್ತಿಕೊಂಡು ನನ್ನ ಮುಂದೆ ಹಿಡಿದಳು.  "ಇದರಲ್ಲಿ ಒಂದು ಅತೀ ಪುಟ್ಟ ದೋಣಿ...?"  ಕಣ್ಣರೆಪ್ಪೆಗಳನ್ನು ಪಟಪಟ ಬಡಿದಳು.  ಹೇಳಬೇಕೋ ಬೇಡವೋ ಎಂಬ ಹಿಂಜರಿಕೆಯಲ್ಲಿ ದನಿ ತೆಗೆದಳು: "ಇಲ್ಲಿ ಮೂರೇ ಮೂರು ಲೈಫ್ ಬೋಟ್‌ಗಳಿವೆ.  ನೀವು ಮೂವರಿಗಾಯಿತು.  ನನಗೆ..."  ನಿಲ್ಲಿಸಿದಳು.

ನಾನು ನಕ್ಕುಬಿಟ್ಟೆ.  "ಕೊಡು, ಈ ಪುಟ್ಟ ಅಪ್ಸರೆಗೊಂದು ಪುಟ್ಟ ಲೈಫ್‌ಬೋಟ್" ಎನ್ನುತ್ತಾ ಆ ಕಾಗದದ ತುಂಡನ್ನು ಕೈಗೆ ತೆಗೆದುಕೊಂಡೆ.  ಅದರ ಒಂದು ಭಾಗದಲ್ಲಿ ಚೌಕಾಕಾರದ ಚೂರನ್ನು ಹರಿದಾಗ ಅದು ನನ್ನ ಹೆಬ್ಬೆರಳಿನ ಉಗುರಿನಷ್ಟು ಚಿಕ್ಕದಿತ್ತು.  ಅದರಿಂದ ದೋಣಿ ಮಾಡುವುದೊಂದು ಸವಾಲೇ ಸರಿ.  ಆ ಪುಟ್ಟ ದೇವತೆಗಾಗಿ ಸವಾಲನ್ನು ಸ್ವೀಕರಿಸಿದೆ.

ಎರಡು ಮಡಿಕೆ ಮಡಿಸಿ ಒಂದು ಅಂಚನ್ನು ಒಂದು ಕಡೆ ಉಳಿದ ಮೂರು ಅಂಚುಗಳನ್ನು ಇನ್ನೊಂದು ಕಡೆ ಮಡಿಸಿದ್ದೇನೋ ಆಯಿತು.  ಕೈಗೆ ಬಂದ ಅತೀ ಪುಟ್ಟ ತ್ರಿಕೋಣಾಕಾರವನ್ನು ಪ್ರಯಾಸದಿಂದ ಅಡ್ಡವಾಗಿ ಮಡಿಸಿದ್ದೂ ಆಯಿತು.  ಅದನ್ನು ತಲೆಕೆಳಗಾಗಿಸಿ ಎರಡೂ ಅಂಚುಗಳನ್ನು ಅತ್ತಿತ್ತ ಎಳೆದರೆ ಅವು ಬರಲೇ ಇಲ್ಲ.  ಬಲಪ್ರಯೋಗಿಸಿದರೆ ಕಾಗದ ಹರಿದುಹೋಗುವ ಭಯ ಕಾಡಿದ್ದರಿಂದ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗಿತ್ತು.  ಬೆರಳುಗಳ ಹಿಡಿತಕ್ಕೆ ಸರಿಯಾಗಿ ಸಿಕ್ಕದೇ ಎರಡು ಸಲ ಅದು ಕೈಜಾರಿ ಹಾರಿಹೋಯಿತು.  ಒಮ್ಮೆ ನಾನು ಮತ್ತೊಮ್ಮೆ ಸಿಂಧೂ ಅದರ ಹಿಂದೆ ಓಡಿ ಹಿಡಿದೆವು.  ನನ್ನ ಪರದಾಟವನ್ನು ಮೋಜಿನಂತೆ ಕಂಡು ಅವಳು ಮೊದಮೊದಲು ನಕ್ಕರೂ ತನಗೊಂದು ಲೈಫ್ ಬೋಟ್ ತಯಾರಾಗುವುದೇ ಇಲ್ಲವೇನೋ ಎಂದು ಭಾವಿಸಿ ಸಪ್ಪಗಾದಳು.  ಕಾಗದದ ಚೂರಿನ ಮೇಲೇ ನೋಟ ಕೀಲಿಸಿದ್ದ ಅವಳ ಕಣ್ಣುಗಳಲ್ಲಿ ನಿರಾಶೆ ಇಣುಕಿತು.  ಅವಳ ಬೆನ್ನು ತಟ್ಟಿದೆ.  "ಚಿಂತೆ ಬೇಡ.  ಹಮ್ ಹೋಂಗೇ ಕಾಮಿಯಾಬ್!"  ನಕ್ಕೆ.  ಅವಳ ಕಣ್ಣುಗಳ ದುಗುಡ ಕಡಿಮೆಯಾಗಲಿಲ್ಲ.

ಜೇಬಿನಲ್ಲಿದ್ದ ಪೆನ್ನಿನಿಂದ ರಿಫಿಲ್ ಹೊರತೆಗೆದೆ.  ಅದರ ಮೊನೆಯನ್ನು ನಯವಾಗಿ ಆಡಿಸಿ ದೋಣಿಯ ಅಂಚುಗಳನ್ನು ಮೇಲೆತ್ತಿದೆ.  ತಿರುಚಿಕೊಂಡ ಒಂದು ಅಂಚನ್ನು ರಿಫಿಲ್‌ನ ಮೊನೆಯಿಂದಲೇ ತಳ್ಳಿ ಸರಿಪಡಿಸಿದೆ...  ದೋಣಿ ತಯಾರಾಯಿತು.  ಅದನ್ನು ಅಂಗೈ ಮೇಲಿಟ್ಟೆ.  ಕೈಯನ್ನು ಸಿಂಧೂಳ ಮುಖದತ್ತ ಕೊಂಡೊಯ್ದೆ.  ಹೆಮ್ಮೆಯಿಂದ ಹೇಳಿದೆ:

"ಪುಟ್ಟ ರಾಜಕುಮಾರಿಗೊಂದು ಪುಟ್ಟ ಲೈಫ್ ಬೋಟ್!"

ಅದೇ ಗಳಿಗೆಗೆ ಸರಿಯಾಗಿ ನನ್ನ ಮಗ "ಸಿಂಧೂ" ಎಂದು ಕೂಗುತ್ತಾ ಬಾಗಿಲಲ್ಲಿ ಕಾಣಿಸಿಕೊಂಡ.  "ನಾನೊಂದು ಕನ್ನಡಿ ಮಾಡಿದ್ದೇನೆ.  ಇದರಲ್ಲಿ ನಮ್ಮ ಮನಸ್ಸು ಕಾಣುತ್ತೆ.  ಒಳ್ಳೆಯ ಆಲೋಚನೆಗಳು, ಕೆಟ್ಟ ಆಲೋಚನೆಗಳು ಸ್ಪಷ್ಟವಾಗಿ ಬೇರೆಬೇರೆಯಾಗಿ ಕಾಣುತ್ತವೆ.  ಬಾ ನಿನ್ನ ಮನಸ್ಸನ್ನ ನೋಡಿಕೋ."

"ಓ ಬಂದೇ" ಎಂದು ಉತ್ಸಾಹದಿಂದ ಅವನಿಗೆ ಉತ್ತರಿಸಿದ ಸಿಂಧೂ ನನ್ನತ್ತ ತಿರುಗಿ "ಈ ಲೈಫ್ ಬೋಟ್ ನಂಗೇನೂ ಬೇಡಾ.  ನೀವೇ ಇಟ್ಕೊಳ್ಳಿ" ಎನ್ನುತ್ತಾ ಬಾಗಿಲತ್ತ ಓಡಿಹೋದಳು.

ಅವಳು ಹೋದ ದಿಕ್ಕನ್ನೇ ದಿಗ್ಭ್ರಮೆಯಿಂದ ನೋಡಿದೆ.  ಸೋತ ಕಣ್ಣುಗಳನ್ನು ಅಂಗೈಯಲ್ಲಿ ಕೂತು ಅಣಕಿಸುತ್ತಿದ್ದ ಪುಟ್ಟ ದೋಣಿಯತ್ತ ತಿರುಗಿಸಿದೆ.  ಆಯಾಸವಾದಂತೆನಿಸಿತು.  ಹೆಂಡತಿ ಇಟ್ಟುಹೋಗಿದ್ದ ಚಹಾದ ಲೋಟವನ್ನು ನಿಧಾನವಾಗಿ ಎತ್ತಿಕೊಂಡು ತುಟಿ ಸೋಕಿಸಿದೆ.  ಅದು ತಣ್ಣಗಾಗಿಹೋಗಿತ್ತು.  ಲೋಟವನ್ನು ಹಿಡಿದಂತೇ ನಿರಾಶೆಯಲ್ಲಿ ಹಿಂದಕ್ಕೆ ಒರಗಿದೆ.

ಎಡಗೈಯಲ್ಲಿ ಚಹಾದ ಲೋಟ, ಬಲ ಅಂಗೈಯಲ್ಲಿ ದೋಣಿ.  ಈ ಕ್ಷಣದ ನಿರರ್ಥಕತೆ ಇಡೀ ಬದುಕನ್ನು ಹೀನಾಯವಾಗಿ ಬೆತ್ತಲೆಗೊಳಿಸಿ ಎದುರಿಗೆ ನಿಲ್ಲಿಸಿತ್ತು.

ಒಮ್ಮೆ ಕಣ್ಣುಮುಚ್ಚಿ ತೆರೆದೆ.  ಚಹದ ಲೋಟವನ್ನು ಎಡ ಅಂಗೈನಲ್ಲಿಟ್ಟೆ.  ಅದನ್ನು ಮುಖದ ಹತ್ತಿರ ತಂದೆ.  ದೋಣಿಯನ್ನು ಮೆಲ್ಲನೆ... ಮೆಲ್ಲಮೆಲ್ಲನೆ... ಲೋಟದಲ್ಲಿನ ಚಹಾದಲ್ಲಿ ಇಳಿಸಿದೆ.  ಲೋಟದ ಅಂಚಿಗೆ ಒರಗಿ ನಿಂತ ಅದರ ಒಂದು ತುದಿಯನ್ನು ರಿಫಿಲ್‌ನಿಂದ ನೇರಕ್ಕೆ ತಿರುಗಿಸಿದೆ.  ಅದರ ಹಿಂಭಾಗಕ್ಕೆ ಮೆಲ್ಲನೆ ಗಾಳಿ ಊದಿದೆ...

ಹೋಗಲೋ ಬೇಡವೋ ಎಂಬಂತೆ ಹಿಂಜರಿಯುತ್ತ ಹಿಂಜರಿಯುತ್ತಲೇ ಚಹಾ ಲೋಟದ ಒಂದು ಅಂಚಿನಿಂದ ಮತ್ತೊಂದು ಅಂಚಿಗೆ ಯಾನ ಹೊರಟ ಪುಟ್ಟದೋಣಿಯನ್ನೇ ನೋಡುತ್ತಾ ಕುಳಿತೆ.

 

--***೦೦೦***--

 

ಡಿಸೆಂಬರ್ ೨೦೦೭

Comments