ಕನ್ನಡ - ಕರ್ನಾಟಕ ರಾಜ್ಯೋತ್ಸವ ಮಾಸದ ಕೊನೆಯಲ್ಲಿ...

ಕನ್ನಡ - ಕರ್ನಾಟಕ ರಾಜ್ಯೋತ್ಸವ ಮಾಸದ ಕೊನೆಯಲ್ಲಿ...

ತೀರ್ಥಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಭಾಗವಹಿಸಿ ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ನೀಡಲು ಬೆಂಗಳೂರಿನಿಂದ ಪ್ರಯಾಣಿಸಿ ಈಗ ತೀರ್ಥಹಳ್ಳಿ ಪ್ರಕೃತಿಯ ಸುಂದರ ಮಡಿಲಲ್ಲಿ ಇರುವಾಗ ಮೂಡಿದ ಒಂದಷ್ಟು ಆಲೋಚನೆಗಳು.

ತಾಯಿ ಭಾಷೆಯ ಉಳಿವಿಗಾಗಿ.... ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು  ಮಾಡಬಹುದಾದ ಕೆಲವು ಕರ್ತವ್ಯಗಳು ನನಗೆ ತಿಳಿದಂತೆ...

೧) ಇನ್ನು ಮುಂದೆ ಕನ್ನಡದ ಯಾವುದೇ ಪೋಷಕರಿಗೆ ಹುಟ್ಟುವ ಮಕ್ಕಳಿಗೆ ಪರಂಪರಾನುಗತವಾಗಿ ಬೆಳೆದು ಬಂದ ಕನ್ನಡ ನೆಲಕ್ಕೆ ಹೆಚ್ಚು ಹತ್ತಿರದ ಮುದ್ದಾದ " ಹೆಸರುಗಳನ್ನು " ಆಯ್ಕೆ ಮಾಡಿಕೊಂಡು ನಾಮಕರಣ ಮಾಡುವುದು. ಅದರಿಂದಾಗಿ ಕನ್ನಡದ ಘಮಲು ಸದಾ ಪಸರಿಸುತ್ತಿರುತ್ತದೆ.

೨) ಒಂದು ವೇಳೆ ಅನಿವಾರ್ಯವಾಗಿ ಮತ್ತು ಅವಶ್ಯಕತೆಗಾಗಿ ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದರು ಸಹ ಮನೆಯಲ್ಲಿ ಎಲ್ಲರೂ ಸಂಪೂರ್ಣ ಅಚ್ಚ ಕನ್ನಡದಲ್ಲಿ ಮಾತನಾಡುವುದು. ಏಕೆಂದರೆ ಈಗ ಭಾಷಾ ವಾತಾವರಣ ಬದಲಾಗಿದೆ. ಹೇಗಿದ್ದರು ಆಂಗ್ಲ ಭಾಷೆಯನ್ನು ಎಲ್ಲಾ ಮಕ್ಕಳು ಸಹಜವಾಗಿ ಕಲಿಯುತ್ತಾರೆ. ನಾವು ಕನ್ನಡ ಕಲಿಸಲು ಹೆಚ್ಚು ಶ್ರಮ ಪಡಬೇಕು.

೩) ಮಕ್ಕಳು ಅವರು ಇಚ್ಚಿಸುವ ಯಾವುದೇ ಭಾಷೆಯ ಪುಸ್ತಕ ಓದುವ ಸ್ವಾತಂತ್ರ್ಯ ಇರಲಿ. ಆದರೆ ಪೋಷಕರಾದ ನಾವು ಪ್ರೀತಿಯಿಂದ ಅವರ ಮೇಲೆ ಕನಿಷ್ಠ ಒತ್ತಡ ಹೇರಿ ಕನ್ನಡ ಸಾಹಿತ್ಯದ ಪುಸ್ತಕ ಓದಲು ಪ್ರೇರೇಪಿಸಬೇಕು. ಅದರಿಂದ ಕನ್ನಡದ ಮೇಲೆ ಅವರಿಗೆ ಪರೋಕ್ಷ ಅಭಿಮಾನ ಬೆಳೆಯುತ್ತದೆ.

೪) ಮಕ್ಕಳಿಗೆ ತಾಯಿ ಎಷ್ಟು ಮುಖ್ಯವೋ ತಾಯಿ ಭಾಷೆ ಸಹ ಅಷ್ಟೇ ಮುಖ್ಯ ಎಂದು ಸಮಯ ಸಿಕ್ಕಾಗಲೆಲ್ಲಾ ಹೇಳುತ್ತಿರಬೇಕು. ತಾಯಿ ಸಮಾನ ನಮ್ಮ ಭಾಷೆ ಎಂದು ಮಕ್ಕಳಿಗೆ ಅರಿವಾದರೆ ಈಗ ತಕ್ಷಣಕ್ಕೆ ಅಲ್ಲದಿದ್ದರು ಮುಂದೆ ಅವರು ದೊಡ್ಡವರಾದ ಮೇಲೆ  ಖಂಡಿತ ನಮ್ಮ ಭಾಷೆಯನ್ನು ಸ್ವಲ್ಪವಾದರು ಪ್ರೀತಿಸುತ್ತಾರೆ.

೫) ಆಂಗ್ಲ ಭಾಷೆ ಮಾತನಾಡುವುದು ಪ್ರತಿಷ್ಠಿತ ಪ್ರಶ್ನೆಯೇ ಇರಬಹುದು ಆದರೆ ಅದರ ಜ್ಞಾನಾರ್ಜನೆ ಮತ್ತು ಕ್ರಿಯಾತ್ಮಕತೆಯ ಮೂಲ ನಮ್ಮ ತಾಯಿ ಭಾಷೆ ಎಂದು ಅವರಿಗೆ ವಿನಯಪೂರ್ವಕವಾಗಿ ತಿಳಿ ಹೇಳಬೇಕು. ನಮ್ಮೆಲ್ಲ ಕನಸು, ಆಸೆ ಆಕಾಂಕ್ಷೆ, ನೋವು ದುಃಖ ಯೋಚನೆಗಳು ಮೊಳಕೆ ಒಡೆಯುವುದೇ ತಾಯಿ ಭಾಷೆಯ ಉದರದೊಳಗೆ ಎಂದು ಅರ್ಥಮಾಡಿಸಬೇಕು.

೬) ತಾಯಿ ಭಾಷೆ ಎಂದು ಹೇಳುವಾಗ ಕನ್ನಡವೇ ಶ್ರೇಷ್ಠ ಎಂಬ ಸಂಕುಚಿತ ಮನೋಭಾವ ಬೆಳೆಸದೆ ಅವರವರ ತಾಯಿ ಭಾಷೆ ಅವರಿಗೆ ಮುಖ್ಯ ಮತ್ತು ಎಲ್ಲಾ ಭಾಷೆಗಳು ಸಮಾನ ಪ್ರಾಮುಖ್ಯತೆ ಹೊಂದಿವೆ ಎಂಬ ವಿಶಾಲ ಮನೋಭಾವ ಬೆಳೆಸಬೇಕು. ಒಂದು ಭಾಷೆಯ ಬೆಳವಣಿಗೆಗೆ ಈ ರೀತಿಯ ವಿಶಾಲ ಮತ್ತು ಸಮಗ್ರ ಚಿಂತನೆಗಳ ಮನಸ್ಥಿತಿ ಬಹಳ ಮುಖ್ಯ. ಇದರಿಂದ ಮಕ್ಕಳಲ್ಲಿ ಉತ್ತಮ ಗುಣಮಟ್ಟದ ವ್ಯಕ್ತಿತ್ವ ರೂಪಗೊಳ್ಳುತ್ತದೆ.

೭) ಆಂಗ್ಲ ಭಾಷೆ ಅಥವಾ ಕನ್ನಡ ಹೊರತುಪಡಿಸಿ ಇತರೆ ಯಾವುದೇ ಭಾಷೆ ಸರಿಯಾಗಿ ಓದಲು, ಬರೆಯಲು, ಮಾತನಾಡಲು ಬಾರದ ಅನೇಕ ಜನರು, ಕೇವಲ ಕನ್ನಡ ಮಾತ್ರವೇ ಕಲಿತು ಅದರಿಂದಲೇ ಬಹುದೊಡ್ಡ ಸಾಧನೆ ಮಾಡಿದ ಮಹಾನ್ ಸಾಧಕರುಗಳ ಸಾಧನೆಯನ್ನು ಮಕ್ಕಳಿಗೆ ಹೇಳಬೇಕು. ದೇಶ ವಿದೇಶಗಳಲ್ಲಿ ಅವರು ಪ್ರಖ್ಯಾತರಾದ ರೀತಿಯನ್ನು ತಿಳಿಸಬೇಕು. ಜೊತೆಗೆ ತಾಯಿ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವುದೇ ಅತ್ಯುತ್ತಮ ವಿಧ್ಯಾಭ್ಯಾಸ ಕ್ರಮ ಎಂದು ವಿಶ್ವದ ಪ್ರಖ್ಯಾತ ಭಾಷಾ ಶಾಸ್ತ್ರಜ್ಞರು ಹೇಳಿರುವುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು.

೮) ತಾಯಿ ಭಾಷೆ ಸಹಜ ಸ್ವಾಭಾವಿಕ ಮತ್ತು ಇತರೆ ಯಾವುದೇ ಭಾಷೆಗಳು ಮಲತಾಯಿ ರೀತಿಯ ಭಾಷೆಗಳು, ಅವು ಎಷ್ಟೇ ಬಲಶಾಲಿ ಅಥವಾ ಜನಪ್ರಿಯವಾದರು ತಾಯಿ ಭಾಷೆಯ ಸಹಜ ಸೊಗಡು ಇರುವುದಿಲ್ಲ ಎಂದು ತಿಳಿ ಹೇಳಬೇಕು. ಅದರಿಂದ ತಾಯಿ ಭಾಷೆಯ ಮಹತ್ವ ಮಕ್ಕಳಿಗೆ ಅರಿವಾಗುತ್ತದೆ.

೯) ಕನ್ನಡದ ಸಿನಿಮಾ ಸಾಹಿತ್ಯ ಸಂಗೀತ ಉದ್ಯಮ ವಿಜ್ಞಾನ ರಾಜಕೀಯ ಸಾಮಾಜಿಕ ಯಾವುದೇ ಆಗಿರಲಿ ನಾವು ಯಾವುದೇ ಕಚೇರಿ, ಸಮಾರಂಭ, ಶೀರ್ಷಿಕೆ, ಕಾರ್ಯಕ್ರಮಗಳಲ್ಲಿ  ಉದ್ದೇಶಪೂರ್ವಕವಾಗಿ ಕನ್ನಡವನ್ನೇ ಹೆಚ್ಚಾಗಿ ಬಳಸಲು ಪ್ರಯತ್ನಿಸಬೇಕು. ಯಾರೋ ಒಬ್ಬರೋ ಇಬ್ಬರೋ ಅವರಿಗಿರುವ ಸಂವಿಧಾನಾತ್ಮಕ ಹಕ್ಕುಗಳನ್ನು ಉಪಯೋಗಿಸಿಕೊಂಡು ಸ್ವಲ್ಪ ಭಾಷೆಯನ್ನು ನಿರ್ಲಕ್ಷ್ಯ ಮಾಡಿದರೆ ನಾವುಗಳು ಅದನ್ನೇ ನೆಪವಾಗಿ ತೆಗೆದುಕೊಂಡು ಮತ್ತೊಂದು ತಪ್ಪು ಮಾಡಬಾರದು. ನಮ್ಮ ತಾಯಿ ಭಾಷೆಯ ಅಭಿಮಾನ ಅಚಲವಾಗಿರಬೇಕು.

೧೦) ಬಹುಮುಖ್ಯವಾಗಿ ಕನ್ನಡ ಬಾರದ ಬೇರೆ ರಾಜ್ಯಗಳ ಜನರು ಇಲ್ಲಿ ವಾಸಿಸಲು ಬಂದಾಗ ಭಾಷಾ ವಿಷಯದಲ್ಲಿ ಅವರ ಮೇಲೆ ದೌರ್ಜನ್ಯ ಮಾಡಬಾರದು. ಕನ್ನಡ ಕಲಿಯಲು ಒತ್ತಾಯ ಮಾಡಬಾರದು. ಅದು ತೀರಾ ಸಣ್ಣತನವಾಗುತ್ತದೆ. ಅವರ ಆಯ್ಕೆಗೆ ಬಿಡಬೇಕು. ಆದರೆ ಕನ್ನಡ ತಾಯಿ ಭಾಷೆಯ ನಾವುಗಳು ಕನ್ನಡವನ್ನೇ ಮಾತನಾಡಬೇಕು. ಆ ಮೂಲಕ ಪರೋಕ್ಷವಾಗಿ ಅವರ ಮೇಲೆ ಒತ್ತಡ ಹಾಕಬೇಕು. ಕೆಲವು ಪ್ರಖ್ಯಾತರು ಮುಖ್ಯವಾಗಿ ಸಿನಿಮಾ ಟಿವಿ ನಟನಟಿಯರು ಶೋಕಿಗಾಗಿ ಕನ್ನಡ ಕಾರ್ಯಕ್ರಮ ಅಥವಾ ಕನ್ನಡ ವಾಹಿನಿಯಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡಿದರೆ ಅವರಿಗೆ ಛೀಮಾರಿ ಹಾಕಬೇಕು.

ಹೀಗೆ ಮತ್ತು ಇದಲ್ಲದೆ ಇನ್ನೇನಾದರು ಹೊಸ ರೀತಿಯ ಯೋಚನೆ ಹೊಳೆದರೆ, ನಾವು ಕನ್ನಡದ ಬೆಳವಣಿಗೆಗೆ ನಮ್ಮ ವೈಯಕ್ತಿಕ ಮಟ್ಟದಲ್ಲಿ ಮಾಡಬಹುದಾದ ಅಳಿಲು ಸೇವೆಯನ್ನು ನಿರಂತರವಾಗಿ ಮಾಡಿದರೆ ಕನ್ನಡ ಮತ್ತು ಕನ್ನಡದ ಮಣ್ಣಿನ ಸಂಸ್ಕೃತಿ ಮತ್ತಷ್ಟು ಪ್ರಭಾವಶಾಲಿಯಾಗುತ್ತದೆ.

ಇನ್ನು ಸರ್ಕಾರದ ಮಟ್ಟದಲ್ಲಿ ಕನ್ನಡದ ಅಭಿವೃದ್ಧಿಗೆ ಈಗಾಗಲೇ ಹಲವಾರು ಸಮಿತಿಗಳು ಅತ್ಯಂತ ಉಪಯುಕ್ತ ವರದಿಗಳನ್ನು ನೀಡಿವೆ. ಸರೋಜಿನಿ ಮಹಿಷಿ ವರದಿ ಅದರಲ್ಲಿ ಮುಖ್ಯವಾದುದು. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹೀಗೆ ಅನೇಕ ಸಂಸ್ಥೆಗಳು ಕನ್ನಡದ ಕೆಲಸ ಮಾಡಲು ಇವೆ. ಆದರೆ ಅವು ಹೆಚ್ಚು ಕ್ರಿಯಾಶೀಲವಾಗದೆ ಎಂದಿನಂತೆ ಜಡ್ಡುಗಟ್ಟಿವೆ. ಆಡಳಿತದ ಎಲ್ಲಾ ಹಂತಗಳಲ್ಲಿ ಕನ್ನಡವನ್ನೇ ಬಳಸಬೇಕಾದ ಅನಿವಾರ್ಯತೆ ನಿರ್ಮಿಸಬೇಕಿದೆ.

ಆದರೆ ಸರ್ಕಾರಕ್ಕೆ ಕೇವಲ ಭಾಷೆ ಮಾತ್ರವಲ್ಲ ಯಾವುದೇ ವಿಷಯವಾದರು ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಭ್ರಷ್ಟ ವ್ಯವಸ್ಥೆಯ ಪೋಷಣೆಲ್ಲಿಯೇ ಅದಕ್ಕೆ ಹೆಚ್ಚು ಆಸಕ್ತಿ. ಆದ್ದರಿಂದ ಸರ್ಕಾರಕ್ಕಿಂತ ಹೆಚ್ಚಾಗಿ ನಾವುಗಳೇ ಭಾಷೆ ಉಳಿಸುವ ಮತ್ತು ಬೆಳೆಸುವ ಆಸಕ್ತಿ ಮತ್ತು ಜವಾಬ್ದಾರಿ ಹೊರಬೇಕಾಗಿದೆ. ಈ ರಾಜ್ಯೋತ್ಸವದಿಂದ ನಮ್ಮ ಕೈಲಾದ ಮಟ್ಟಿಗೆ ಕನ್ನಡದ ಮಣ್ಣಿನ ಸೊಗಡನ್ನು ಉಳಿಸಲು ಮತ್ತಷ್ಟು ಪ್ರಯತ್ನಿಸೋಣ.

***

ಕನ್ನಡ ಎನೆ ಕುಣಿದಾಡುವುದೆನ್ನೆದೆ,

ಕನ್ನಡ ಎನೆ ಕಿವಿ ನಿಮಿರುವುದು.

ಭಾರತದ ಎಲ್ಲಾ ರಾಜ್ಯಗಳಲ್ಲಿ ಕರ್ನಾಟಕದ ಹೆಚ್ಚುಗಾರಿಕೆ ಮತ್ತು ಕಳಪೆ ಸಾಧನೆ ಏನಿರಬಹುದು. ಒಂದು ನೋಟ. ಸ್ವಲ್ಪ ಕನ್ನಡ ನಾಡಿನ ಪಕ್ಷಪಾತಿ ಎನಿಸಬಹುದು. ಆದರೂ ಒಂದು ಅನಿಸಿಕೆ - ಅಭಿಪ್ರಾಯ..

೧) ನಡವಳಿಕೆ: ಬಹುತೇಕ ಎಲ್ಲಾ ರಾಜ್ಯಗಳನ್ನು ಒಂದಷ್ಟು ಸುತ್ತಿದ್ದೇನೆ. ಕರ್ನಾಟಕದ ಜನರ ನಡವಳಿಕೆ ವರ್ತನೆ ಇತರ ರಾಜ್ಯಗಳಿಗೆ ಹೋಲಿಸಿದರೆ ಸ್ವಲ್ಪ ಮೃದು ಮತ್ತು ಸೌಮ್ಯವಾಗಿದೆ. ಒರಟುತನ ಕಾಣುವುದಿಲ್ಲ. ಇರುವುದರಲ್ಲಿ ಉತ್ತಮ ಎಂದು ಹೇಳಬಹುದು. ಹಾಗೆಂದು ಸರ್ವಶ್ರೇಷ್ಠ ಎಂದು ಭಾವಿಸಬೇಕಿಲ್ಲ. ಈ ವಿಷಯದಲ್ಲಿ ಬೇರೆಯವರಿಗಿಂತ ಒಂದು ಅಂಕ ಹೆಚ್ಚು. ಕರ್ನಾಟಕದಲ್ಲಿ ಆರಾಮವಾಗಿ ವಾಸಿಸಬಹುದು.

೨) ಆಹಾರ: ಉತ್ತರ ಭಾರತದ ಮುಖ್ಯ ಆಹಾರ ಗೋಧಿ, ದಕ್ಷಿಣದ ಇತರ ರಾಜ್ಯಗಳ ಅಕ್ಕಿ ಗೋದಿ ಮುಂತಾದ ಸಾಮಾನ್ಯ  ಆಹಾರ ಪದಾರ್ಥಗಳನ್ನು ಗಮನಿಸಿದಾಗ ಕರ್ನಾಟಕದಲ್ಲಿ ಗೋಧಿ ಅಕ್ಕಿ ರಾಗಿ ವಿವಿಧ ರೀತಿಯ ಜೋಳಗಳು, ಸಿರಿ ಧಾನ್ಯಗಳು, ತರಕಾರಿ ಹಣ್ಣುಗಳು, ಬೇಳೆಕಾಳುಗಳು, ಅಡಿಕೆ, ತೆಂಗು, ಕಬ್ಬು ಎಲ್ಲವನ್ನೂ ಬೆಳೆಯಲಾಗುತ್ತದೆ ಮತ್ತು ಬಳಸಲಾಗುತ್ತದೆ. ದಕ್ಷಿಣ ಕರ್ನಾಟಕದ ರಾಗಿಯ ಮುದ್ದೆ ಊಟ, ಉತ್ತರ ಕರ್ನಾಟಕದ ಜೋಳ ಆಧಾರಿತ ರೊಟ್ಟಿ, ದಕ್ಷಿಣ ಕನ್ನಡ ಕರಾವಳಿ ಭಾಗದ ಮೀನು ಕಡುಬು ಕೇಂದ್ರಿತ ಪದಾರ್ಥಗಳು, ಕೊಡಗಿನ ವಿಶಿಷ್ಟ ಶೈಲಿಯ ಮಾಂಸಾಹಾರ ಎಲ್ಲವೂ ಸ್ವಲ್ಪ ಹೆಚ್ಚು ವಿಭಿನ್ನತೆ ಹೊಂದಿದೆ. ಗುಜರಾತ್, ಮಹಾರಾಷ್ಟ್ರ ಕೇರಳದ ಆಹಾರವೂ ವೈವಿಧ್ಯಮಯವಾಗಿದೆ. ಇಲ್ಲಿಯೂ ಕರ್ನಾಟಕಕ್ಕೆ ಒಂದು ಅಂಕ ಹೆಚ್ಚು ನೀಡಬಹುದು.

೩) ಉಡುಗೆ ತೊಡುಗೆ: ಇದರಲ್ಲಿ ಅಷ್ಟೊಂದು ಉತ್ತಮ ಅಂಕ ಇಲ್ಲ. ಕೇರಳ, ಪಂಜಾಬ್, ರಾಜಸ್ಥಾನ ಪೂರ್ವದ ರಾಜ್ಯಗಳು ಹೆಚ್ಚು ಸುಂದರ ಮತ್ತು ಆಕರ್ಷಕ ವೇಷಭೂಷಣಗಳನ್ನು ಹೊಂದಿವೆ. ಕರ್ನಾಟಕ ಸಾಧಾರಣ ಅಂಕಗಳಿಸುತ್ತದೆ.

೪) ರಾಜಕೀಯ: ಮೊದಲು ತುಂಬಾ ಸಭ್ಯ ಮತ್ತು ಒಳ್ಳೆಯ ಮೌಲ್ಯಯುತ ರಾಜಕೀಯಕ್ಕೆ ಹೆಸರಾಗಿದ್ದ ಕರ್ನಾಟಕ ಕಳೆದ ಎರಡು ದಶಕಗಳಲ್ಲಿ ಆ ಸ್ಥಾನ ಹೊಂದಿಲ್ಲ. ಇತ್ತೀಚೆಗೆ ತೀರಾ ಅಧೋಗತಿಗೆ ಇಳಿದಿದೆ. ಇಲ್ಲಿ ತೃತೀಯ ದರ್ಜೆ ನೀಡಬಹುದು.

೫) ಸಾಹಿತ್ಯ ಸಂಗೀತ ಸಿನೆಮಾ ನಾಟಕ ಕಲೆ: ಇದರಲ್ಲಿ ಖಂಡಿತವಾಗಿ  ಕೇರಳ ಆಂದ್ರಪ್ರದೇಶ ಮಹಾರಾಷ್ಟ್ರ ಪಶ್ಚಿಮ ಬಂಗಾಳಗಳ ಜೊತೆ ಮೊದಲ ಸ್ಥಾನಕ್ಕೆ ನಿಕಟ ಸ್ಪರ್ಧೆ ನೀಡುವ ಉತ್ತಮ ಗುಣಮಟ್ಟ ಕರ್ನಾಟಕ ಹೊಂದಿದೆ. ಸಾಹಿತ್ಯದಲ್ಲಿ ಒಂದು ಕೈ ಮೇಲಿದೆ‌.

೬) ಕ್ರೀಡೆ: ಇಲ್ಲ, ಉತ್ತರ ಭಾರತ, ಕೇರಳ, ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದ ಸಾಧನೆ ದ್ವಿತೀಯ ದರ್ಜೆಗೆ ಮಾತ್ರ ಸೀಮಿತ.

೭) ಕಾನೂನು ಮತ್ತು ಸುವ್ಯವಸ್ಥೆ: ಹೌದು, ಇದರಲ್ಲಿ ಖಂಡಿತ ಉತ್ತಮ ಸ್ಥಾನದಲ್ಲಿ ನಾವು ನಿಲ್ಲುತ್ತೇವೆ. ಮಹಿಳಾ ಸ್ವಾತಂತ್ರ್ಯ, ಕೋಮು ಗಲಭೆಗಳು, ಗುಂಪು ಘರ್ಷಣೆಗಳು, ಭಯೋತ್ಪಾದನೆ, ನಕ್ಸಲಿಸಂ ಇವುಗಳಲ್ಲಿ ಇತರ ರಾಜ್ಯಗಳಿಗಿಂತ ಕರ್ನಾಟಕ ಪರವಾಗಿಲ್ಲ. ಜನ ತೀರಾ ಅತಿರೇಕದ ಹಿಂಸೆಗೆ ಇಳಿಯುವುದಿಲ್ಲ.

೮) ವ್ಯಾಪಾರ ವಾಣಿಜ್ಯ; ಇಲ್ಲ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ಈ ವಿಷಯದಲ್ಲಿ ತುಂಬಾ ಮುಂದಿವೆ. ನಾವು ಇದರಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದುವ ಅವಶ್ಯಕತೆ ಇದೆ.

೯)ಮಾಹಿತಿ ತಂತ್ರಜ್ಞಾನ:  ಭಾರತವಷ್ಟೇ ಏಕೆ ವಿಶ್ವದಲ್ಲೇ ಕರ್ನಾಟಕದ ಸ್ಥಾನ ಅತ್ಯುತ್ತಮ ಮಟ್ಟದಲ್ಲಿದೆ. ಹೊರ ದೇಶಗಳಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರು ಮಾಹಿತಿ ತಂತ್ರಜ್ಞಾನದ ತವರು ಎಂದೇ ಗುರುತಿಸಲಾಗುತ್ತದೆ.

೧೦) ಶಿಕ್ಷಣ ಪ್ರವಾಸೋದ್ಯಮ: ಇಲ್ಲ, ಆಂದ್ರಪ್ರದೇಶ, ಕೇರಳ, ಕಾಶ್ಮೀರ ಹಿಮಾಚಲ ಪ್ರದೇಶ ಮುಂತಾದ ರಾಜ್ಯಗಳಿಗೆ ಹೋಲಿಸಿದರೆ ಸಾಕಷ್ಟು ಸುಧಾರಣೆಯ ಅವಶ್ಯಕತೆ ಇದೆ.

೧೧) ಭಾಷಾಭಿಮಾನ: ಬಹುಶಃ ದೇಶದಲ್ಲೇ ಅತ್ಯಂತ ಕಡಿಮೆ ಭಾಷಾಭಿಮಾನ ಹೊಂದಿದ ರಾಜ್ಯ ಕರ್ನಾಟಕವೇ ಇರಬಹುದು. ಅದಕ್ಕಾಗಿಯೇ ಇಲ್ಲಿ ಸದಾ ಭಾಷಾ ಹೋರಾಟದ ಚಳವಳಿಗಳು ಜೀವಂತವಿದೆ. ಹೀಗೆ ಕೆಲವು ಕ್ಷೇತ್ರಗಳಲ್ಲಿ ಕರುನಾಡಿನ ಸಾಧನೆಯ ಏರಿಳಿತಗಳಿವೆ. ಇದು‌ ಅಂಕಿ ಅಂಶಗಳನ್ನು ಆಧಾರಿಸಿಲ್ಲ. ಅನುಭವ ಮತ್ತು ಗ್ರಹಿಕೆಯ ಆಧಾರದ ಮೇಲೆ ಒಂದು ಕಣ್ಣೋಟವಷ್ಟೆ. ತಪ್ಪುಗಳನ್ನು ಸರಿಪಡಿಸಿಕೊಂಡು ಕರ್ನಾಟಕ ದೇಶದಲ್ಲಿ ಅತ್ಯುತ್ತಮ ಆದರ್ಶ ರಾಜ್ಯ ಎಂದು ಹೆಸರಾಗಲಿ ಎಂಬ ಕನಸಿನ ಅರಮನೆಯಲ್ಲಿ...

-ವಿವೇಕಾನಂದ ಎಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ