ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ

ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ಬಸಯ್ಯ ಸ್ವಾಮಿ
ಪ್ರಕಾಶಕರು
ಬಂಡಾರ ಪ್ರಕಾಶನ, ಮಸ್ಕಿ, ರಾಯಚೂರು - ೫೮೪೧೨೪
ಪುಸ್ತಕದ ಬೆಲೆ
ರೂ. ೧೬೦.೦೦, ಮುದ್ರಣ ೨೦೨೩

ಬಸಯ್ಯ ಸ್ವಾಮಿ ಕಮಲದಿನ್ನಿ (ಡಾ ಬಸಯ್ಯ ಸ್ವಾಮಿ) ಅವರು “ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ" ಎಂಬ ಮಾಹಿತಿಪೂರ್ಣ ಕೃತಿಯನ್ನು ಹೊರತಂದಿದ್ದಾರೆ. ಸುಮಾರು ೧೭೦ ಪುಟಗಳ ತಮ್ಮ ಕೃತಿಗೆ ಬಸಯ್ಯ ಸ್ವಾಮಿಯವರು ಬರೆದ ಲೇಖಕರ ಮಾತಿನಿಂದ ಆಯ್ದ ಸಾಲುಗಳು ಇಲ್ಲಿವೆ...

‘ದೊಡ್ಡ ಕಣ್ಣಿಂದ ಹಿಂದೂಸ್ಥಾನವೆಲ್ಲ ತನ್ನದು' ಎಂಬ ಹೆಮ್ಮೆ ಕೊಚ್ಚಬಹುದಾದರೂ ಯಾವುದನ್ನು ಮುಟ್ಟಿದರೂ ತನ್ನದಲ್ಲ ಎಂಬ ಭಾವ”– ಚಿಗುರಿದ ಕನಸು

“ಒಬ್ಬ ಮನುಷ್ಯ ತನ್ನ ದೇಶವನ್ನು ಏಕೆ ಪ್ರೀತಿಸುತ್ತಾನೆ? ಏಕೆಂದರೆ ಅಲ್ಲಿ ರೊಟ್ಟಿ
ಹೆಚ್ಚು ರುಚಿಯಾಗಿರುತ್ತದೆ. ಗಾಳಿ ಇನ್ನೂ ಸುಗಂಧವಾಗಿರುತ್ತದೆ, ದನಿಗಳು
ಹೆಚ್ಚು ಶಕ್ತವಾಗಿ ಕೇಳುತ್ತವೆ, ಆಕಾರ ಬೇರೆಡೆಗಿಂತ ಎತ್ತರವಾಗಿರುತ್ತದೆ,
ನೆಲದ ಮೇಲೆ ನಡೆಯುವುದು ಇನ್ನೂ ಸುಲಭವಾಗಿರುತ್ತದೆ" - ಬ್ರೇಕ್ಟ್

ನಾನು ಯಾರು? ಯಾವ ಊರಲ್ಲಿ ಹುಟ್ಟಿದೆ? ಎಲ್ಲಿ ಬೆಳೆದೆ? ಅಲ್ಲಿ ಯಾಕೆ ಬೆಳೆದೆ? ಈಗ ಇಲ್ಲೇ ಇದ್ದೇನೆ? ಅಲ್ಲಿಗೆ ಯಾಕೆ ಹೋದೆ? ಹೀಗೇನು ಮಾಡುತ್ತಿದ್ದೇನೆ? ಹೀಗೆ ಇತ್ಯಾದಿ ಅನೇಕ ಪ್ರಶ್ನೆಗಳು ನನ್ನನ್ನು ನಾನೇ ಅನೇಕ ಸಲ ಕೇಳಿಕೊ೦ಡಿದ್ದಿದೆ. ನನ್ನ ಬದುಕಿನ ನಿರಂತರ ವಲಸೆಯ ಕಾರಣದಿಂದಾಗಿ ನನ್ನೊಳಗೆ ಈ ವಲಸೆ ಪ್ರಜ್ಞೆಯ ಭಾವನೆಗಳು ರೂಪಗೊಂಡು ನನ್ನೊಳಗೆ ಭಾಷೆ, ಊರು, ಮನೆ, ಸಂಬಂಧಗಳು, ಸಂಸ್ಕೃತಿಯಂತಹ ಅನೇಕ ಅಂಶಗಳು ತೂಗುಯ್ಯಾಲೆಯಾಗಿ ನಿಂತಿವೆ. ಹುಟ್ಟಿದ ಊರು ಆಮದಿಹಾಳ್, ಆದರೆ ಬೆಳೆದದ್ದು ಕಮಲದಿನ್ನಿ, ಮಲದಕಲ್, ರಾಯಚೂರು, ಯಾದಗಿರಿ, ಕಲಬುರಗಿ, ಸದ್ಯ ಬೆಂಗಳೂರು. ನನ್ನೊಳಗೆ ಇಂತಹದೊಂದು ವಲಸೆಯ ಪ್ರಜ್ಞೆಯ ಭಾವನೆಯನ್ನು ಹೊತ್ತುಕೊಂಡು ಕೇಂದ್ರೀಯ ವಿಶ್ವದ್ಯಾಲಯದಲ್ಲಿ ಪಿಎಚ್‌.ಡಿ ಸಂಶೋಧನೆಯ ಸಂದರ್ಭದಲ್ಲಿ ಒಂದೆರೆಡು ವಿಷಯಗಳನ್ನು ಬದಲಾಯಿಸುತ್ತ ಕೊನೆಗೆ ಆಯ್ಕೆ ಮಾಡಿಕೊಂಡ ಈ ವಿಷಯಕ್ಕೆ ಪೂರಕವಾಗಿ ನನ್ನೆಲ್ಲ ಈ ಅನುಭವದ ನೆಲೆಗಳು ಪೂರಕವಾಗಿ ನಿಂತಿವೆ ಎಂದು ನಾನು ಭಾವಿಸುತ್ತೇನೆ.

ಹೌದು ವಲಸೆ ಎನ್ನುವುದು ಪ್ರತಿ ಜೀವಿಯ, ಅದರಲ್ಲೂ ಮನುಷ್ಯ ಬದುಕಿನ ಎಲ್ಲಾ ಸಂಕೀರ್ಣ ಆಯಾಮಗಳನ್ನು ಅಲ್ಲಾಡಿಸುವ, ಬದುಕಿನ ನೆಲೆಯನ್ನ ಭದ್ರ ಪಡಿಸುವ ಇಲ್ಲ ಉಯ್ಯಾಲೆಯಾಡಿಸುವಂತಹ ಪ್ರಕ್ರಿಯೆಯಾಗಿದೆ. ಆದಿ ಮಾನವನ ಕಾಲದಿಂದಲೂ ನಿರಂತರ ಆಲೆಮಾರಿತನದಿಂದ ತಪ್ಪಿಸಿಕೊಂಡು ಒಂದು ಸ್ಥಳದಲ್ಲಿ ಸ್ಥಿರಗೊಂಡ ನಂತರ ವಲಸೆಯಂತಹ ಪ್ರಕ್ರಿಯೆಗಳು ಆರಂಭವಾದವು. ಅವು ಆ ಮನುಷ್ಯನ ಬದುಕಿನ ಆ ಕಾಲದ ಬದುಕಿನ ಅಪೇಕ್ಷೆಯ ಮೇರೆಗೆ ನಡೆದಂತವು. ಇನ್ನು ನಂತರದ ಕಾಲದಲ್ಲಿ ಅದರಲ್ಲೂ ಆಧುನಿಕ ಕಾಲದ ಬದುಕಿನ ಒತ್ತಡಕ್ಕೂ ವಲಸೆಗಳು ನಡೆಯುತ್ತಿವೆ ಮತ್ತು ನಡೆಯುತ್ತಲೇ ಬಂದು, ಇಂದು ಎಲ್ಲಾ ಅನಿವಾರ್ಯತೆಯ ಕಾರಣಗಳು ವಲಸೆ ಪ್ರಕ್ರಿಯೆಗೆ ಚಲಕಗಳಾಗಿವೆ.

ವಲಸೆ ಪ್ರಕ್ರಿಯೆಗೆ ಒಳಗಾದ ವಲಸಿಗರ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ, ಆರ್ಥಿಕ, ಭಾಷಿಕ ಹೀಗೆ ಎಲ್ಲ ಬದುಕಿನ ಆಯಾಮದಲ್ಲಿ ಅನೇಕ ಸಂಘರ್ಷಾತ್ಮಕ ಬದಲಾವಣೆ ಹೊಂದಾಣಿಕೆಗಳು ನಡೆದಿವೆ. ಇಲ್ಲಿ ತಮ್ಮ ಊರು, ಮನೆ ಮತ್ತು ಹೊರಗಿನ ಬದುಕಿನ ಕ್ರಮಗಳು, ರೀತಿ ನೀತಿಗಳು, ಆಚಾರ ವಿಚಾರಗಳು, ಬದುಕಿನ ಸಿಹಿ ಕಹಿ ನೆನಪುಗಳು ಎಲ್ಲವೂ ವಲಸೆ ಬಂದ ನೆಲದಲ್ಲಿ ಭೂತ ವರ್ತಮಾನ ಭವಿಷ್ಯತ್ತಿನ ಪ್ರಜ್ಞೆಯಾಗಿ ರೂಪುಗೊಂಡು ಕಾಡಿ ತಾವು ವಲಸಿಗರು ಎಂಬ ವಾಸ್ತವದ ಪ್ರಜ್ಞೆಯಲ್ಲಿ ಅವರು ಉಳಿದುಬಿಡುತ್ತಾರೆ. ವಲಸಿಗರು ತಮ್ಮೊಳಗೆ ಅನಾಥ ಭಾವ, ಪರಕೀಯತೆ ಏಕಾಂಗಿತನ ಭಾವನೆಯಲ್ಲಿ ತಮ್ಮದೊಂದು ಅಸ್ತಿತ್ವವನ್ನು ಕಂಡುಕೊಳ್ಳಲು ವಲಸೆ ನೆಲದಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಾರೆ. ಕೆಲ ವಲಸಿಗರು ಸಫಲತೆ ಹೊಂದುತ್ತಾರೆ, ಕೆಲವರು ವಿಫಲರಾಗುತ್ತಾರೆ. ಈ ಸಂದರ್ಭದಲ್ಲಿ ಮಾನಸಿಕವಾಗಿ, ಭಾವನಾತ್ಮಕವಾಗಿ ಅನುಭವಿಸುವ ಯಾತನೆ ಸಂಕಟಗಳೊಂದಿಗೆ ವಲಸಿಗರು ಒಂದು ಅದಾಗಲೇ ಇದ್ದ ಶಿಲ್ಪವನ್ನೇ ಕೆತ್ತಿ ಶಿಲ್ಪವನ್ನ ಮಾಡಿದ ಆಕೃತಿಗೆ ಬಂದು ನಿಲ್ಲುತ್ತಾರೆ, ದಿನ ನಿತ್ಯವೂ ಸಾವಿರಾರು ಪುರುಷ ವಲಸಿಗರೊಂದಿಗೆ ಸಾವಿರಾರು ಮಹಿಳೆಯರು ಕೂಡ ತಮ್ಮ ಬದುಕಿನ ಗಂಟು ಮೂಟೆಯೊಂದಿಗೆ ವಲಸೆ ಹೋಗುತ್ತಾರೆ. ಅವರ ಬದುಕಿನ ಅನುಭವಗಳು ಭಿನ್ನವಾದರೂ ಕೂಡ ಇದ್ದ ನೆಲೆಯಲ್ಲಿಗಿಂತ ಅವರ ಮನೋಭಾವನೆಗಳಿಗಿರುವ ಕಿಮ್ಮತ್ತು ಭಿನ್ನವಾಗಿ ಏನು ಕಾಣಿಸುವುದಿಲ್ಲ. ಅಂದರೆ 'ಪಾಪಿಗೆ ಸಮುದ್ರದಲ್ಲೂ ಮೊಳಕಾಲು ಕೆಳಗೆ ನೀರು' ಎನ್ನುವ ಹಾಗೆ ಅವರ ಭಾವನೆಗಳಿಗೆ ಅನುಭವಗಳಿಗೆ ಪ್ರಾಧಾನ್ಯತೆ ಇಲ್ಲ ಎನ್ನುವಷ್ಟು ಕಡಿಮೆ. ಆದರೆ ಸಮಾಜದ ಕೈಗನ್ನಡಿ ಎಂದು ಕರೆಸಿಕೊಳ್ಳುವ ಸಾಹಿತ್ಯದಲ್ಲಿಯೂ ಈ ಮಹಿಳಾ ವಲಸಿಗರ ಅನುಭವಗಳ ಚಿತ್ರಣ ಇಲ್ಲ ಎನ್ನುವಷ್ಟರ ಮಟ್ಟಿಗೆ ದಾಖಲಾಗಿವೆ.

ಸಾಹಿತ್ಯದಲ್ಲಿ ಮಹಿಳಾ ವಲಸಿಗರ ಬದುಕಿನ ಬವಣೆಗಳ ಗೈರುತನ ಎದು ಕಾಣುತ್ತದೆ. ಅಲ್ಲಿ ಇಲ್ಲಿ ಪರೋಕ್ಷವಾಗಿ ಪ್ರತ್ಯಕ್ಷವಾಗಿ ಸಿಕ್ಕ ಅಲ್ಪದರಲ್ಲಿಯೂ ಅವರ ವಲಸೆ ಬದುಕಿಗೂ ಮತ್ತು ಮೂಲ ಬದುಕಿಗೂ ಇದ್ದ ವ್ಯತ್ಯಾಸಗಳು ತೀರ ಭಿನ್ನವೇನು ಅಲ್ಲ. ತನ್ನ ನೆಲದಲ್ಲಿಯೂ ಮೌನವಾಗಿರುವ ಹೆಣ್ಣು ವಲ ನೆಲದಲ್ಲಿಯೂ ಒಬ್ಬ ಮೌನವಾಗಿರುವ ಹೆಣ್ಣು. ಅವಳ ಭಾವನೆಗಳನ್ನು ಕೇಳಲು ಮೂಕ ಸಂಕಟಗಳನ್ನ ಆಲಿಸಲು ತಾಳ್ಮೆಯ ಹೆಣ್‌ಗಿವಿಗಳಿಲ್ಲ. ಅರ್ಥ ಮಾಡಿಕೊಳ್ಳಲು ಸೂಕ್ಷ್ಮ ಮನಸ್ಸುಗಳಿಲ್ಲ ಎನ್ನುವ ಸ್ಥಿತಿಯಲ್ಲಿ ಕಾದಂಬರಿಯ ಸೀ ಪಾತ್ರಗಳು ಕಂಡುಬರುತ್ತವೆ. ತನ್ನ ಒಳತೋಟಿಯ ದುಃಖ ದುಮ್ಮಾನಗಳ ಭಾರ, ಅಳು ನಗು ಮಾತುಗಳಲ್ಲಿ ಹರಿಯಬೇಕಿದ್ದ ಸಂದರ್ಭದ ಬದಲಾಗಿ ಇರುಳಲ್ಲಿ ಗಂಟಲಲ್ಲಿ ಗುನುಗಿಕೊಳ್ಳುವ, ಹಾಡಾಗಿಸಿ ಬತ್ತಿಸಿಕೊಳ್ಳುವ ಕಣ್ಣ ಹನಿಗಳಲ್ಲಿ ಘನಿಕರಿಸಿಕೊಂಡು ಸೆರಗಲ್ಲಿ ಒದ್ದೆಯಾಗಿ ಉಳಿದುಬಿಟ್ಟಿವೆ.

ಈ ಜಗತ್ತಿನ ವಲಸಿಗರ ಅನುಭವಗಳು ಒಂದು ರೀತಿಯಲ್ಲಿ ಅಂತರಗಂಗೆ ಯಂತೆ ನಿರಂತರವಾಗಿ ಹರಿಯುತ್ತಿವೆ. ಕನ್ನಡ ಕಾದಂಬರಿ ಸಾಹಿತ್ಯದಲ್ಲಿ ಅಲ್ಲಲ್ಲಿ ಜಿನುಗಿ ಜರಿಯಂತೆ ಹರಿಯುವ ವಲಸಿಗರ ಬದುಕಿನ ಎಲ್ಲಾ ಆಯಾಮದ ಅನುಭವಗಳ ಪ್ರಜ್ಞೆಯನ್ನು ಕನ್ನಡ ಸಾಹಿತ್ಯ ಪ್ರತ್ಯಕ್ಷವಾಗಿ, ಪರೋಕ್ಷವಾಗಿ, ಆನುಷಂಗಿಕವಾಗಿ ದಾಖಲಿಸಿದೆ. ಅಂತರಗಂಗೆಯ ಜರಿಗಳಂತಿರುವ ವಲಸಿಗರ ಅನುಭವಗಳನ್ನು ಕಾದಂಬರಿಯಲ್ಲಿ ಗುರುತಿಸುತ್ತಾ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಭಾಷಿಕ ನೆಲೆಯಲ್ಲಿ ಚರ್ಚಿಸುತ್ತಾ ವಿಶ್ಲೇಷಣೆಗೊಳಗು ಮಾಡಿ ವಲಸಿಗರ ವಲಸೆಯ ಭೂತ, ವರ್ತಮಾನ ಭವಿಷ್ಯತ್ ಕಾಲದ ಪ್ರಜ್ಞೆಯನ್ನು ಹಲವಾರು ಮಗ್ಗುಲಗಳಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ.