ಕನ್ನಡ ಗಜಲ್
ಬರಹ
ಒಂದು ಗಜಲ್
ನೀ ನಡೆದು ಬಂದೆ ಇಬ್ಬನಿಗಳೆಲ್ಲ ನಕ್ಕವು ನೀನಿರುವುದೇ ಹಾಗೆ
ಸವಿಮುತ್ತ ನೀಡಿದೆ ಚಿಕ್ಕೆಗಳೆಲ್ಲ ಮಿನುಗಿದವು ನೀನಿರುವುದೇ ಹಾಗೆ
ಮುಂಜಾವಿನ ಹೊಂಗಿರಣದಿ ತೊಯ್ದ ಗಿಡಗಂಟೆಬಳ್ಳಿಗಳೆಲ್ಲ
ಚಿಗುರ ಬೆರಳಿಂದ ಸವರಿದೆ ಮೊಗ್ಗೆಲ್ಲ ಅರಳಿದವು ನೀನಿರುವುದೇ ಹಾಗೆ
ಸುಳಿವ ತಂಗಾಳಿಯಲ್ಲಿ ನೀರವ ಮೌನದಲ್ಲಿ ಪಿಸುಮಾತಿನ ಹೊನಲ
ಹರಿಸಿದೆ ಕೋಗಿಲೆಗಳೆಲ್ಲ ಕೂಜನವ ಮರೆತವು ನೀನಿರುವುದೇ ಹಾಗೆ
ಕುಡಿನೋಟ, ಹುಸಿನಗೆ, ಕಿರುಗೆಜ್ಜೆಯ ನಾದವ ಹೊಮ್ಮಿಸಿ, ಚಿಮ್ಮುತ, ಬಳುಕುತ
ಹಸಿರಿನಲೆಲ್ಲ ಸುಳಿದೆ ಚಿಟ್ಟೆಗಳೆಲ್ಲ ಬೆರಗಾದವು ನೀನಿರುವುದೇ ಹಾಗೆ
ಸುಳಿಸುಳಿಯಾಗಿ ಹೆರಳ ಕೆದರಿ ಕೊರಳು ಕೊಂಕಿಸಿ ಓರೆನೋಟವ ಬೀರಿ
ಮುನಿಸು ತೋರಿದೆ ನವಿಲುಗಳೆಲ್ಲ ಹೆಜ್ಜೆ ಮರೆತವು ನೀನಿರುವುದೇ ಹಾಗೆ
-ಸಿದ್ಧರಾಮ ಹಿರೇಮಠ, ಕೂಡ್ಲಿಗಿ