ಕನ್ನಡ ಚಿತ್ರವೊಂದು ಆರು ದಶಕಗಳ ಹಿಂದೆ ಎಂಟು ಭಾಷೆಗಳಿಗೆ ಡಬ್ ಆಗಿತ್ತು!

ಕನ್ನಡ ಚಿತ್ರವೊಂದು ಆರು ದಶಕಗಳ ಹಿಂದೆ ಎಂಟು ಭಾಷೆಗಳಿಗೆ ಡಬ್ ಆಗಿತ್ತು!

ಈಗಂತೂ ಯಾವುದೇ ಚಲನ ಚಿತ್ರ, ಯಾವುದೇ ಭಾಷೆಯಲ್ಲಿ ತಯಾರಾಗಿದ್ದರೂ ನಿಮಗೆ ಬೇಕಾದ ಭಾಷೆಯಲ್ಲಿ ವೀಕ್ಷಿಸುವ ಮುಕ್ತ ಅವಕಾಶ ಇದ್ದೇ ಇದೆ. ಚಿತ್ರವೊಂದು ತಯಾರಾಗುವಾಗಲೇ ಎಷ್ಟು ಭಾಷೆಗಳಿಗೆ ಡಬ್ ಮಾಡಬೇಕು ಅಥವಾ ರೀಮೇಕ್ ಮಾಡಬೇಕು ಅನ್ನೋದನ್ನು ನಿರ್ಧರಿಸಿ ಚಿತ್ರವನ್ನು ನಿರ್ಮಾಣ ಮಾಡಿರುತ್ತಾರೆ. ಈ ಕಾರಣದಿಂದಲೇ ಈಗ ಚಿತ್ರವೊಂದು ಬಿಡುಗಡೆಯಾಗುವಾಗ ವಿಶ್ವದಾದ್ಯಂತ ಬಿಡುಗಡೆಯಾಗುತ್ತದೆ. ಸೂಪರ್ ಹಿಟ್ ಚಲನ ಚಿತ್ರ ಕೆಜಿಎಫ್ ಒಂದನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಅದು ಹಿಂದಿ, ತಮಿಳು, ತೆಲುಗು, ಮಲಯಾಳಂ ಮೊದಲಾದ ಭಾಷೆಗಳಲ್ಲಿ ಡಬ್ ಆಗಿ ಹೊರಬಂದಿತ್ತು. ಈ ಕಾರಣದಿಂದ ಒಂದೇ ಸಮಯದಲ್ಲಿ ದೇಶದಾದ್ಯಂತ ಇರುವ ಚಿತ್ರ ಪ್ರೇಮಿಗಳು ನಮಗೆ ತಿಳಿದ ಭಾಷೆಯಲ್ಲಿ ಈ ಚಿತ್ರವನ್ನು ವೀಕ್ಷಿಸಿದ್ದರು. ಈ ಕಾರಣದಿಂದಲೇ ಅದು ಗಲ್ಲಾಪೆಟ್ಟಿಗೆಯಲ್ಲಿ ಬಹಳ ದೊಡ್ದ ಸದ್ದು ಮಾಡಿತ್ತು.

ಆದರೆ, ಆರು ದಶಕಗಳ ಹಿಂದೆ ಕನ್ನಡ ಚಿತ್ರವೊಂದು ೮ ಭಾಷೆಗಳಿಗೆ ಡಬ್ ಆದ ಕಥೆ ಗೊತ್ತೇ? ನಿಮಗಿದು ಅಚ್ಚರಿ ಎಂದು ಕಂಡು ಬಂದರೂ ಸತ್ಯವಾದ ವಿಷಯ. ಸುಮಾರು ೬೫ ವರ್ಷಗಳ ಹಿಂದೆ ಅಂದರೆ ೧೯೫೯ರಲ್ಲಿ ತೆರೆಕಂಡ ಚಿತ್ರ “ಮಹಿಷಾಸುರ ಮರ್ಧಿನಿ". ಇದು ಕಪ್ಪು ಬಿಳುಪು ಚಿತ್ರ. ತಾರಾಗಣದಲ್ಲಿ ಡಾ ರಾಜ್ ಇದ್ದರೂ ಅವರು ಆಗ ಖ್ಯಾತ ನಟರೇನೂ ಆಗಿರಲಿಲ್ಲ. ಆಗ ಕನ್ನಡ ಚಿತ್ರರಂಗದಲ್ಲಿ ತಯಾರಾಗುತ್ತಿದ್ದ ಚಿತ್ರಗಳೂ ಬೆರಳೆಣಿಕೆಯಷ್ಟು. ಆ ವರ್ಷ ಬಿಡುಗಡೆಯಾದ ಚಿತ್ರಗಳು ಕೇವಲ ಆರು. ‘ಮಹಿಷಾಸುರ ಮರ್ಧಿನಿ' ಹೆಸರೇ ಹೇಳುವಂತೆ ಪೌರಾಣಿಕ ಚಿತ್ರ. ಈ ಚಿತ್ರದಲ್ಲಿ ಡಾ ರಾಜ್ ಮಹಿಷಾಸುರನ ಪಾತ್ರ ಮಾಡಿದ್ದರು. ಚಾಮುಂಡೇಶ್ವರಿಯಾಗಿ ನಟಿಸಿದ್ದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಜಯಲಲಿತಾ ಅವರ ತಾಯಿ ಸಂಧ್ಯಾ. ನಾರದನಾಗಿ ಕೆ ಎಸ್ ಅಶ್ವಥ್, ವ್ಯಾಘ್ರಸಿಂಹನಾಗಿ ಹಾಸ್ಯನಟ ನರಸಿಂಹರಾಜು, ಗುಣವತಿಯಾಗಿ ಸಾಹುಕಾರ್ ಜಾನಕಿ, ರಂಭೇಶನಾಗಿ ಉದಯ ಕುಮಾರ್ ನಟಿಸಿದ್ದರು. ಈ ಚಿತ್ರ ಬೆಂಗಳೂರಿನ ಚಿತ್ರಮಂದಿರದಲ್ಲಿ ನೂರು ದಿನಗಳ ಹೌಸ್ ಫುಲ್ ಪ್ರದರ್ಶನವನ್ನು ಕಂಡಿತ್ತು.

‘ಮಹಿಷಾಸುರ ಮರ್ಧಿನಿ' ಚಿತ್ರದ ಖ್ಯಾತಿಯನ್ನು ಕಂಡು ಆ ಸಮಯದಲ್ಲೇ ಅದು ೮ ಭಾಷೆಗಳಿಗೆ ಡಬ್ ಆಗಿತ್ತು. ಆದರೆ ಯಾವೆಲ್ಲಾ ಭಾಷೆಗೆ ಡಬ್ ಆಗಿತ್ತು. ಯಾರು ಅದರ ನಿರ್ಮಾಣ ಕಾರ್ಯವನ್ನು ಹೊತ್ತುಕೊಂಡಿದ್ದರು ಎಂಬ ಬಗ್ಗೆ ಸರಿಯಾದ ಮಾಹಿತಿಗಳು ಸಿಗುತ್ತಿಲ್ಲ. ಮಾಹಿತಿಯೊಂದರ ಪ್ರಕಾರ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗೆ ಡಬ್ ಆಗಿತ್ತು ಎಂದು ತಿಳಿದು ಬರುತ್ತದೆ. ಆದರೆ ಉಳಿದ ನಾಲ್ಕು ಭಾಷೆಗಳ ಬಗ್ಗೆ ಸರಿಯಾದ ಮಾಹಿತಿಗಳು ದೊರಕುತ್ತಿಲ್ಲ. 

ಈ ಚಿತ್ರದ ಮತ್ತೊಂದು ಮಹತ್ವದ ಸಂಗತಿ ಎಂದರೆ ನಿರ್ಮಾಪಕರು ಚಿತ್ರದ ಯಶಸ್ಸಿನ ಬಳಿಕ ನಾಯಕ ನಟನಿಗೆ ಕೊಟ್ಟ ಅಧಿಕ ಸಂಭಾವನೆಯದ್ದು! ಆ ಕಾಲದಲ್ಲಿ ನಾಯಕ ನಟನಿಗೆ ಸಿಗುತ್ತಿದ್ದ ಸಂಭಾವನೆ ಬಹಳ ಅತ್ಯಲ್ಪವೇ ಆಗಿತ್ತು. ಈ ಕಾರಣದಿಂದ ಅಂದಿನ ನಟ ನಟಿಯರು ಚಲನ ಚಿತ್ರದಲ್ಲಿ ನಟಿಸುವುದರ ಜೊತೆಗೆ ರಂಗಭೂಮಿಯಲ್ಲೂ ಸಕ್ರಿಯವಾಗಿ ನಟಿಸುತ್ತಿದ್ದರು. ‘ಮಹಿಷಾಸುರ ಮರ್ಧಿನಿ'ಯ ಅಭೂತಪೂರ್ವ ಯಶಸ್ಸಿನಿಂದ ಸಂತೋಷಗೊಂಡ ನಿರ್ಮಾಪಕ ಬಿ ಎಸ್ ರಂಗಾ ಅವರು ಆ ಚಿತ್ರದ ನಾಯಕ ನಟರಾದ ಡಾ ರಾಜ್ ಅವರು ಒಪ್ಪಿಕೊಂಡಿದ್ದ ಸಂಭಾವನೆಗಿಂತ ಎರಡು ಪಟ್ಟು ಸಂಭಾವನೆಯನ್ನು ಶತದಿನೋತ್ಸವದ ಸವಿನೆನಪಿಗಾಗಿ ನೀಡಿ ಗೌರವಿಸಿದ್ದರು. ಇದೊಂದು ಅಂದಿನ ಸಮಯದ ದಾಖಲೆ ಎಂದೇ ಹೇಳಬಹುದು. ಅಂದಿನ ಸಮಯದಲ್ಲಿ ಕೆಲವು ಬಾರಿ ಕಲಾವಿದರಿಗೆ ಸಂಭಾವನೆಯೇ ಸರಿಯಾಗಿ ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ನಿರ್ಮಾಪಕರಾದ ಬಿ ಎಸ್ ರಂಗಾ ಅವರು ತಮ್ಮ ಸಹೃದಯತೆಯಿಂದ ಮನಗೆದ್ದರು. 

‘ಮಹಿಷಾಸುರ ಮರ್ಧಿನಿ' ಚಿತ್ರವು ಕಪ್ಪು ಬಿಳುಪು ಚಿತ್ರವಾಗಿದ್ದರೂ ತಾಂತ್ರಿಕವಾಗಿ ಬಹಳ ನೈಪುಣ್ಯತೆಯನ್ನು ಹೊಂದಿತ್ತು. ಈ ಚಿತ್ರವನ್ನು ಬಿ ಎಸ್ ರಂಗಾ ಅವರು ಮದ್ರಾಸಿನ (ಚೆನ್ನೈ) ‘ವಿಕ್ರಂ ಸ್ಟುಡಿಯೋ’ ದ ಅದ್ದೂರಿ ಸೆಟ್ ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ವಿಕ್ರಂ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡ ಮೊದಲ ಚಿತ್ರ ಇದಾಗಿತ್ತು. ಡಾ ರಾಜ್ ಅವರು ಮಹಿಷಾಸುರನ ಪಾತ್ರದಲ್ಲಿ ನೆಗೆಟಿವ್ ಇಮೇಜ್ ನಲ್ಲಿ ನಟಿಸಿದ್ದರು. ಸಂಧ್ಯಾ ಅವರು ಚಾಮುಂಡೇಶ್ವರಿ ದೇವಿಯ ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿದ್ದರು. ಈ ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಖ್ಯಾತ ಚಿತ್ರ ಸಾಹಿತಿ ಚಿ.ಉದಯಶಂಕರ್ ಅವರು ಭಗವಾನ್ ವಿಷ್ಣುವಿನ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿ ಸೈ ಅನಿಸಿಕೊಂಡಿದ್ದು. ಚಿತ್ರದ ಸಂಭಾಷಣೆ ಮತ್ತು ಗೀತೆಗಳನ್ನು ರಚಿಸಿದ್ದು ಇದೇ ಉದಯಶಂಕರ್ ಅವರ ತಂದೆ ಚಿ. ಸದಾಶಿವಯ್ಯನವರು. ಈ ಚಿತ್ರವು ಇತರೆ ಭಾಷೆಗಳ ಚಿತ್ರಗಳ ನಿರ್ಮಾಪಕರ ಕಣ್ಣುಕುಕ್ಕಿದಂತೂ ನಿಜ. 

ಡಾ ರಾಜ್ ಕುಮಾರ್ ಅವರೂ ಈ ಚಿತ್ರದಲ್ಲಿ ಹಾಡುವುದರ ಮೂಲಕ ಭವಿಷ್ಯದಲ್ಲಿ ತಾವೊಬ್ಬ ಉತ್ತಮ ಗಾಯಕರಾಗುವವರೆಂದು ಸಾಬೀತು ಪಡಿಸಿದರು. (ಕೆಲವು ಮಾಹಿತಿಗಳ ಪ್ರಕಾರ ಡಾ ರಾಜ್ ಹಾಡಿದ ಮೊದಲ ಚಿತ್ರ ‘ಓಹಿಲೇಶ್ವರ’) ಈ ಚಿತ್ರದಲ್ಲಿ ಸುಮಾರು ೧೨ ಹಾಡುಗಳಿದ್ದವು. ರಾಜ್ ಅವರು ಎಸ್. ಜಾನಕಿ ಜೊತೆ ಹಾಡಿದ ‘ತುಂಬಿತು ಮನವಾ ತಂದಿತು ಸುಖವಾ’ ಎಂಬ ಗೀತೆ ಬಹಳ ಜನಪ್ರಿಯವಾಗಿತ್ತು. ನಿರ್ಮಾಪಕರಾಗಿದ್ದ ಬಿ ಎಸ್ ರಂಗಾ ಅವರು ಉತ್ತಮ ಛಾಯಾಗ್ರಾಹಕರೂ ಆಗಿದ್ದರು. ಈ ಕಾರಣದಿಂದ ‘ಮಹಿಷಾಸುರ ಮರ್ಧಿನಿ' ಚಿತ್ರಕ್ಕೆ ಅವರೇ ಛಾಯಾಗ್ರಾಹಕರಾಗಿದ್ದರು. ಹಲವಾರು ವಿಶೇಷತೆಗಳಿರುವ ‘ಮಹಿಷಾಸುರ ಮರ್ಧಿನಿ' ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಮೈಲುಗಲ್ಲು ನೆಟ್ಟದ್ದು ಮಾತ್ರ ನಿಜ!

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ