ಕನ್ನಡ ನಾಡಿನ ವೀರ ಪುತ್ರ - ಮೈಲಾರ ಮಹಾದೇವ
“ವಿದೇಶೀ ಸಂಸ್ಕೃತಿಯ ದ್ಯೋತಕವಾದ ಈ ಟೊಪ್ಪಿಗೆಯನ್ನು ನಾನು ಇಂದೇ ತ್ಯಜಿಸಿ ಬಿಡುವೆ" ಎಂದು ತನ್ನ ತಲೆಯ ಮೇಲಿದ್ದ ವಿದೇಶೀ ಟೊಪ್ಪಿಗೆಯನ್ನು ತೆಗೆದು ಬಿಸಾಕಿದ ಪುಟ್ಟ ಶಾಲಾ ಬಾಲಕನೇ ದೊಡ್ಡವನಾಗಿ ಮೈಲಾರ ಮಹಾದೇವ ಎಂಬ ಹೆಸರು ಪಡೆದುಕೊಂಡ. ಆ ದಿನ ಆತ ಕೇಳಿದ ಸ್ವಾತಂತ್ರ್ಯ ಸಂಗ್ರಾಮದ ಭಾಷಣವು ಆತನಲ್ಲಿ ವಿದೇಶೀ ವಸ್ತುಗಳ ಮೋಹವನ್ನು ದೂರ ಮಾಡಿತ್ತು. ಸ್ವದೇಶಿ ಸ್ವಾಭಿಮಾನವನ್ನು ಬಡಿದೆಬ್ಬಿಸಿತ್ತು. ಅಂದು ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನ ಪ್ರಾಥಮಿಕ ಶಾಲೆಯಲ್ಲಿ ಮಹಾದೇವನೆಂಬ ಪುಟ್ಟ ಬಾಲಕ ತೋರಿಸಿದ ಈ ಧೈರ್ಯ ಭವಿಷ್ಯದಲ್ಲಿ ಆತನನ್ನು ಸ್ವಾತಂತ್ರ್ಯ ವೀರ ಮೈಲಾರ ಮಹಾದೇವನನ್ನಾಗಿಸಿತು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕಟ್ಟಾ ಅನುಯಾಯಿಯಾಗಿದ್ದ ಮಹಾದೇವರು ಸ್ವದೇಶೀ ಚಳುವಳಿಯ ಹರಿಕಾರನಂತೆ ಬಾಳಿಬದುಕಿದವರು. ನಾವು ಭಗತ್ ಸಿಂಗ್, ಲಾಲಾ ಲಜಪತ್ ರಾಯ್, ಸುಭಾಷ್ ಚಂದ್ರ ಭೋಸ್, ಬಾಲಗಂಗಾಧರ್ ತಿಲಕ್ ಹೀಗೆ ವಿವಿಧ ಸ್ವಾತಂತ್ರ್ಯ ಸೇನಾನಿಗಳ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದೇವೆ. ಆದರೆ ನಮ್ಮದೇ ನಾಡಿನ ಮೈಲಾರ ಮಹಾದೇವರ ಬಗ್ಗೆ ತಿಳಿದುಕೊಂಡಿರುವುದು ಅತ್ಯಲ್ಪ.
ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನ ಮಾರ್ತಾಂಡಪ್ಪ ಹಾಗೂ ಬಸಮ್ಮ ದಂಪತಿಗಳ ಸುಪುತ್ರರಾಗಿ ಮಹಾದೇವರು ೧೯೧೧ರ ಜೂನ್ ೮ರಂದು ಜನಿಸಿದರು. ಇವರದ್ದು ರೈತ ಕುಟುಂಬವಾದರೂ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಇವರ ತಾಯಿ ಬಸಮ್ಮ ಸೆರೆಮನೆ ವಾಸವನ್ನೂ ಅನುಭವಿಸಿದ್ದರು. ಹೀಗೆ ಬಾಲ್ಯದಿಂದಲೇ ಸ್ವಾತಂತ್ರ್ಯದ ಕನಸನ್ನು ಕಾಣುತ್ತಾ ಬೆಳೆದವರು ಮಹಾದೇವರು. ಪ್ರಾಥಮಿಕ ಶಿಕ್ಷಣವನ್ನು ಮೋಟೆಬೆನ್ನೂರಿನಲ್ಲೇ ಮುಗಿಸಿದ ಮಹಾದೇವರು ತಮ್ಮ ಮುಂದಿನ ವ್ಯಾಸಂಗಕ್ಕಾಗಿ ಹಂಸಭಾವಿಯ ಶಾಲೆಯನ್ನು ಸೇರಿಕೊಂಡರು. ಆಗಲೇ ಸ್ವಾತಂತ್ರ್ಯ ಸೇನಾನಿಗಳಾಗಿ ಖ್ಯಾತರಾಗಿದ್ದ ಕೆ.ಎಫ್.ಪಾಟೀಲ ಹಾಗೂ ಟಿ.ಆರ್.ನೇಸ್ವಿಯವರು ಇವರ ಶಾಲಾ ಗುರುಗಳಾಗಿದ್ದರು. ಇವರಿಂದ ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತ ಹೋರಾಟಗಾರರ ಕಥೆಗಳನ್ನು ಕೇಳಿದ ಮಹಾದೇವರು ಬಹಳಷ್ಟು ಪ್ರಭಾವಿತರಾದರು. ಅದೇ ಸಮಯ ಅವರಿಗೆ ಮಹಾತ್ಮಾ ಗಾಂಧಿಯವರ ಸಂಪಾದಕತ್ವದ ಪತ್ರಿಕೆ ‘ಯಂಗ್ ಇಂಡಿಯಾ’ ಓದಲು ಸಿಕ್ಕಿ, ಅದರಲ್ಲಿನ ಬರಹಗಳಿಂದ ಇನ್ನಷ್ಟು ಪ್ರಭಾವಿತರಾದರು. ಗಾಂಧೀಜಿಯವರಂತೆ ತಾನೂ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಬೇಕು, ಸ್ವದೇಶಿ ಆಂದೋಲನ ಮಾಡಬೇಕು, ವಿದೇಶಿ ಶಿಕ್ಷಣವನ್ನು ತ್ಯಜಿಸಬೇಕು ಎಂದು ನಿರ್ಧಾರ ಮಾಡಿ ಶಾಲೆಯ ಶಿಕ್ಷಣಕ್ಕೆ ತಿಲಾಂಜಲಿಯಿತ್ತರು.
ಗಾಂಧೀಜಿಯವರು ಆಗ ವಿದೇಶೀ ವಸ್ತ್ರಗಳನ್ನು ತ್ಯಜಿಸಿ ದೇಶೀಯ ಖಾದಿ ಬಟ್ಟೆಗಳನ್ನು ತೊಡಲು ಕರೆಕೊಟ್ಟಿದ್ದರು. ಮಹಾದೇವರು ಖಾದಿ ಬಟ್ಟೆಗಳನ್ನು ತಮ್ಮ ತಲೆಯ ಮೇಲೆ ಹೊತ್ತು ಊರೂರು ತಿರುಗಾಡಿ ಮಾರಾಟ ಮಾಡಲು ಪ್ರಾರಂಭ ಮಾಡಿದರು. ತಮ್ಮ ಊರಲ್ಲಿ ಖಾದಿ ಬಟ್ಟೆಯನ್ನು ತಯಾರು ಮಾಡಬೇಕೆಂಬ ಕನಸು ಹೊತ್ತು ಆ ದಿನಗಳಲ್ಲಿ ಖಾದಿ ಬಟ್ಟೆ ತಯಾರಿಸುತ್ತಿದ್ದ ಬಿಜಾಪುರದ ಕಲಾದಗಿ ಗ್ರಾಮಕ್ಕೆ ತೆರಳಿದರು. ಅಲ್ಲಿ ಖಾದಿ ಬಟ್ಟೆಯ ತಯಾರಿಕೆಯ ಕುರಿತು ಕಲಿತು ಅಲ್ಲಿಂದ ಧಾರವಾಡಕ್ಕೆ ಹೋಗಿ ‘ಭಾರತೀಯ ತರುಣ ಸಂಘ' ದ ಸದಸ್ಯರಾದರು. ಈ ಮೂಲಕ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಸಮಾಜಸೇವೆಯನ್ನು ಮಾಡುವ ಮೂಲಕ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಪರಿಚಯ ಮಾಡಿಕೊಂಡರು.
ಗಾಂಧೀಜಿಯವರನ್ನು ಕಾಣಬೇಕೆಂಬ ಅದಮ್ಯ ಆಸೆ ಅವರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಅದೇ ಸಮಯ ಗಾಂಧೀಜಿಯವರು ತಮ್ಮ ಉದ್ದೇಶಿತ ದಂಡಿ ಯಾತ್ರೆ (ಉಪ್ಪಿನ ಸತ್ಯಾಗ್ರಹ) ಯಲ್ಲಿ ಭಾಗವಹಿಸಲು ಉತ್ಸಾಹಿ ಯುವಕರನ್ನು ಕಳುಹಿಸುವಂತೆ ರಂಗನಾಥ ದಿವಾಕರ್ ಅವರಿಗೆ ತಿಳಿಸಿದರು. ಸ್ವಾತಂತ್ರ್ಯ ಸೇನಾನಿಯಾಗಿದ್ದ ರಂಗನಾಥರಿಗೆ ಮಹಾದೇವರ ದೇಶಪ್ರೇಮದ ಬಗ್ಗೆ ತಿಳಿದಿತ್ತು. ಅವರು ಇತರ ಯುವಕರ ಜೊತೆ ಮಹಾದೇವರನ್ನೂ ಸಾಬರಮತಿ ಆಶ್ರಮಕ್ಕೆ ಕಳುಹಿಸಿಕೊಟ್ಟರು. ಈ ಮೂಲಕ ಗಾಂಧಿಯವರನ್ನು ಭೇಟಿಯಾಗಬೇಕೆಂಬ ಮಹಾದೇವರ ಆಸೆ ಈಡೇರಿತು. ಮಹಾದೇವರಿನ್ನೂ ಚಿಕ್ಕ ಹುಡುಗರಾಗಿದ್ದುದನ್ನು ಕಂಡ ಗಾಂಧೀಜಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಆ ಪ್ರಶ್ನೆಗಳಿಗೆ ವೀರಾವೇಷದಿಂದ ಸೂಕ್ತ ಉತ್ತರ ನೀಡಿ ಗಾಂಧೀಜಿಯವರ ಮನಸ್ಸನ್ನು ಗೆದ್ದ ಮಹಾದೇವರಿಗೆ ಸಾಬರಮತಿ ಆಶ್ರಮದಲ್ಲಿ ಉಳಿದುಕೊಳ್ಳುವ ಅನುಮತಿ ನೀಡಲಾಯಿತು.
ಮಾರ್ಚ್ ೧೨, ೧೯೩೦ ಮಹಾದೇವರ ಜೀವನದ ಮಹತ್ವದ ದಿನ. ಆ ದಿನ ಗಾಂಧೀಜಿಯವರು ಸಾಬರಮತಿ ಆಶ್ರಮದಿಂದ ತಮ್ಮ ಉಪ್ಪಿನ ಸತ್ಯಾಗ್ರಹ ಅಥವಾ ದಂಡಿ ಯಾತ್ರೆಯನ್ನು ಪ್ರಾರಂಭಿಸಿದರು. ಅವರ ಜೊತೆ ಹೆಜ್ಜೆ ಹಾಕಿದ ಸುಮಾರು ೭೮ ಮಂದಿ ಸಹಚರರಲ್ಲಿ ಮಹಾದೇವರೂ ಒಬ್ಬರಾಗಿದ್ದರು. ಕರ್ನಾಟಕದಿಂದ ದಂಡಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಏಕೈಕ ವ್ಯಕ್ತಿ ಎಂದರೆ ಮೈಲಾರ ಮಹಾದೇವ ಅವರು. ಸುಮಾರು ೩೮೫ ಕಿ.ಮೀ. ದೂರದ ಹಾದಿಯನ್ನು ೨೫ ದಿನಗಳಲ್ಲಿ ಕ್ರಮಿಸಿದ ಇವರ ಯಾತ್ರೆಯ ಕೊನೆಯಲ್ಲಿ ಉಪ್ಪನ್ನು ಕೈಯಲ್ಲಿ ಹಿಡಿದುಕೊಳ್ಳುವಾಗಲೇ ಬ್ರಿಟೀಷ್ ಪೋಲೀಸರು ಆಗಮಿಸಿ ಸತ್ಯಾಗ್ರಹಿಗಳನ್ನು ಬಂಧಿಸಿದರು. ಆರು ತಿಂಗಳ ಜೈಲುವಾಸ ಅನುಭವಿಸಿ ಹೊರಬಂದಾಗ ಇವರಿಗೆ ಧಾರವಾಡ ಹಾಗೂ ಮೋಟೆಬೆನ್ನೂರಿನಲ್ಲಿ ಅದ್ಭುತ ಸ್ವಾಗತ ದೊರೆಯಿತು. ಇದರಿಂದಾಗಿ ಇವರ ಸ್ವಾತಂತ್ರ್ಯ ಹೋರಾಟದ ಕೆಚ್ಚು ಇನ್ನಷ್ಟು ವೃದ್ಧಿಸಿತು.
ಮರಳಿ ಸಾಬರಮತಿ ಆಶ್ರಮಕ್ಕೆ ತೆರಳುವಾಗ ತಮ್ಮ ಪತ್ನಿಯಾದ ಸಿದ್ಧಮ್ಮನವರನ್ನೂ ಕರೆದುಕೊಂಡು ಹೋದರು. ಗಾಂಧೀಜಿಯವರು ಸಿದ್ಧಮ್ಮನವರಿಗೂ ಆಶ್ರಮದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದರು. ಸಿದ್ಧಮ್ಮನವರ ಸೇವೆಯಿಂದ ಗಾಂಧೀಜಿಯವರು ಬಹಳ ಪ್ರಸನ್ನರಾಗಿದ್ದರು. ಅವರನ್ನು ಪ್ರೀತಿಯಿಂದ ‘ಸಿದ್ಧಮತಿ' ಎಂದು ಕರೆಯುತ್ತಿದ್ದರು. ತಮ್ಮ ಪತಿಯಿಂದ ಪ್ರೇರಣೆಗೊಂಡು ಸಿದ್ಧಮ್ಮನವರೂ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು. ಮಹಾದೇವರೂ ಹಲವಾರು ಬಾರಿ ಜೈಲುವಾಸ ಅನುಭವಿಸಿದರೂ ಖಾದಿ ವಸ್ತುಗಳ ಪ್ರಚಾರ ಮತ್ತು ದಲಿತೋದ್ಧಾರವನ್ನು ಕೈಬಿಡಲಿಲ್ಲ.
ಖಾದಿ ವಸ್ತ್ರಗಳನ್ನು ತಯಾರಿಸಲು ಕೊರಡೂರಿನಲ್ಲಿ ೧೯೩೭ರಲ್ಲಿ ಒಂದು ಆಶ್ರಮವನ್ನು ಸ್ಥಾಪನೆ ಮಾಡಿದರು. ಅಲ್ಲಿ ತಮ್ಮ ಪತ್ನಿಯಾದ ಸಿದ್ಧಮ್ಮನ ಜೊತೆ ನಿಸರ್ಗ ಚಿಕಿತ್ಸೆ, ಚರಕದಿಂದ ನೂಲು ತೆಗೆಯುವುದು, ಅಕ್ಷರ ಕಲಿಕೆ, ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ತಿಳುವಳಿಕೆ ನೀಡುವುದು ಮುಂತಾದ ಕೆಲಸಗಳನ್ನು ಮಾಡಲು ಪ್ರಾರಂಭಿಸಿದರು. ಅಲ್ಲಿ ತಯಾರಾಗುತ್ತಿದ್ದ ಖಾದಿ ಬಟ್ಟೆಗಳನ್ನು ತಮ್ಮ ತಲೆಯ ಮೇಲೆ ಹೊತ್ತು ಮಾರಾಟ ಮಾಡಿದರು. ಇದರಿಂದಾಗಿ ಆ ಖಾದಿ ಬಟ್ಟೆಗಳಿಗೆ ‘ಮಹಾದೇವನ ಖಾದಿ ವಸ್ತ್ರಗಳು' ಎಂದು ಹೆಸರಾಗಿ, ಖ್ಯಾತಿಯನ್ನು ಗಳಿಸಿತು. ಮಹಾದೇವರು ೧೯೪೦ರಲ್ಲಿ ಹಾವೇರಿ ತಾಲೂಕು ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆಯಾದರು. ತಮ್ಮ ತಾರುಣ್ಯದ ಬದುಕನ್ನು ಬಹುಪಾಲು ಸೆರೆಮನೆಯಲ್ಲೇ ಕಳೆದ ಇವರು ಯಾವತ್ತೂ ಸ್ವಾತಂತ್ರ್ಯದ ಹೋರಾಟದಿಂದ ಹಿಂದೆ ಸರಿಯಲಿಲ್ಲ.
೧೯೪೨ರಲ್ಲಿ ಗಾಂಧೀಜಿಯವರು ‘ಕ್ವಿಟ್ ಇಂಡಿಯಾ’ (ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ) ಚಳುವಳಿಯನ್ನು ಪ್ರಾರಂಭಿಸಿದಾಗ ‘ಮಾಡು ಇಲ್ಲವೇ ಮಡಿ ‘ ಎಂದು ಕರೆಕೊಟ್ಟರು. ಇದರಿಂದ ಪ್ರೇರಣೆಗೊಂಡು ಮಹಾದೇವರು ತಮ್ಮ ಚಳುವಳಿಯನ್ನು ತೀವ್ರಗೊಳಿಸಿದರು. ಈ ನಡುವೆ ಕ್ರಾಂತಿಕಾರಿಯಾದ ಸುಭಾಷ್ ಚಂದ್ರ ಬೋಸ್ ರ ಪರಿಚಯವೂ ಇವರಿಗೆ ಆಗಿತ್ತು. ಆದರೂ ತಮ್ಮ ಅಹಿಂಸಾತ್ಮಕ ಚಳುವಳಿಗಳಿಂದ ಇವರು ಹಿಂದೆ ಸರಿಯಲಿಲ್ಲ. ೧೯೪೩ರ ಎಪ್ರಿಲ್ ೧ರಂದು ಹೊಸರಿತ್ತಿಯ ಕಂದಾಯ ವಸೂಲಿ ಕಚೇರಿಯ ಮೇಲೆ ದಾಳಿ ಮಾಡುವ ಯೋಜನೆ ಮಾಡಿಕೊಂಡಿದ್ದರು. ಆ ಸಮಯ ಬ್ರಿಟೀಷ್ ಸರಕಾರ ಮಹಾದೇವರನ್ನು ಹಿಡಿದುಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿತ್ತು. ಅಲ್ಲಿಯ ಪೋಲೀಸ್ ಇನ್ಸ್ ಪೆಕ್ಟರ್ ಸಹಾ ಮಹಾದೇವರನ್ನು ಸೆರೆಹಿಡಿಯುವೆ ಎಂದು ಪ್ರತಿಜ್ಞೆ ಮಾಡಿದ್ದ.
ಇದಕ್ಕೆಲ್ಲಾ ಸೊಪ್ಪು ಹಾಕದ ಮಹಾದೇವರು ತಮ್ಮ ಸೀಮಿತ ಬೆಂಬಲಿಗರ ಜೊತೆಗೆ ಎಪ್ರಿಲ್ ೧ರಂದು ಬೆಳಿಗ್ಗೆ ೮ ಗಂಟೆಗೆ ಕಂದಾಯ ಕಚೇರಿಗೆ ಮುತ್ತಿಗೆ ಹಾಕಿದರು. ಅಲ್ಲಿದ್ದ ನಾಲ್ವರು ಪೋಲೀಸರನ್ನು ಮಹಾದೇವರು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದರು. ಆ ಕಚೇರಿಯ ಪಕ್ಕದಲ್ಲೇ ವೀರಭದ್ರ ದೇವಸ್ಥಾನವಿತ್ತು. ಅಲ್ಲಿ ಕೆಲವು ಮಂದಿ ಪೋಲೀಸರು ಅಡಗಿಕೊಂಡಿದ್ದರು. ಮಹಾದೇವರು ಕಂದಾಯ ಇಲಾಖೆಯ ತಿಜೋರಿಯ ಬೀಗವನ್ನು ತೆರವುಗೊಳಿಸುತ್ತಿರುವಾಗ ದೇವಾಲಯದಲ್ಲಿ ಅಡಗಿದ್ದ ಪೋಲೀಸರು ಅವರ ಮೇಲೆ ಗುಂಡು ಹಾರಿಸಿದರು. ಆ ಸಮಯದಲ್ಲಿ ಇವರ ಬೆಂಬಲಿಗರು ಮರಳಿ ಪೋಲೀಸರತ್ತ ಗುಂಡು ಹಾರಿಸಲು ತಯಾರಾಗುತ್ತಿರುವಾಗ, ಮಹಾದೇವರು ತಮ್ಮ ನೋವನ್ನೂ ಲೆಕ್ಕಿಸದೆ ‘ಗುಂಡು ಹಾರಿಸಬೇಡಿ, ನಮ್ಮದ್ದು ಅಹಿಂಸಾತ್ಮಕ ಚಳುವಳಿ'ಎಂದು ಹೇಳಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಮಹಾದೇವರ ಬೆಂಬಲಿಗರಾಗಿದ್ದ ವೀರಯ್ಯ ಹಾಗೂ ತಿರಕಪ್ಪ ಮಡಿವಾಳ ಇವರೂ ಪೋಲೀಸರ ಗುಂಡಿಗೆ ಬಲಿಯಾದರು. ಹೀಗೆ ಅಲ್ಪಾಯುವಿನಲ್ಲೇ ಭಾರತ ಮಾತೆಯ ಓರ್ವ ವೀರಪುತ್ರ ಅಮರನಾದ. ಮೈಲಾರ ಮಹಾದೇವರ ತ್ಯಾಗ ಮತ್ತು ಬಲಿದಾನವನ್ನು ಈ ಕನ್ನಡ ನಾಡು ಸದಾ ನೆನಪಿಸಿಕೊಳ್ಳುತ್ತದೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ