ಕನ್ನಡ ನಾಡು -ನುಡಿಗಾಗಿ ನಾವೇನು ಮಾಡಬಹುದು?
ಅಂತು ಇಂತು ೨೦೨೦ನೇ ಕೊನೇ ತಿಂಗಳಿಗೆ ನಾವೆಲ್ಲರೂ ಕಾಲಿಟ್ಟಿದ್ದೇವೆ. ನವೆಂಬರ್ ತಿಂಗಳಲ್ಲೇ ನಾನು ಈ ಲೇಖನ ಬರೆಯಬೇಕೆಂದಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಸಂಪದದಲ್ಲಿ ‘ಕನ್ನಡ ನಾಡು, ಭಾಷೆ’ ಬಗ್ಗೆ ಬಂದ ಸರಣಿ ಲೇಖನಗಳಿಗೆ ಪೂರಕವಾಗಿ ನಾನು ಈ ಲೇಖನ ಬರೆಯಲು ಮನಸ್ಸು ಮಾಡಿರುವೆ. ಈ ವರ್ಷ ನಾವೇನು ಮಾಡಿದ್ದೇವೆ ಎಂದು ನಮಗೆ ನಾವೇ ಪ್ರಶ್ನಿಸಿದರೆ, ಏನೂ ಇಲ್ಲ ಎಂಬ ಉತ್ತರ ದೊರೆಯಬಹುದು.'ಕೊರೊನಾ'ಎಂಬ ಮಹಾ ಸಂಕಟಕ್ಕೆ ತುತ್ತಾದ ನಾವುಗಳು, ಹೊರ ಹೋಗುವಂತಿಲ್ಲ. ಮನೆಯಲ್ಲಿರುವ ನಮ್ಮ ಮಕ್ಕಳಿಗೆ ಒಂದಷ್ಟು *ಕನ್ನಡ ಭಾಷೆ*ಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬಹುದಷ್ಟೆ. ಕಥೆ, ಕವನ, ನುಡಿಗಟ್ಟುಗಳ ಪರಿಚಯ, ಅಕ್ಷರಭ್ಯಾಸ, ಅದರಲ್ಲಿನ ವಿಧಗಳು, ನಗೆಹನಿಗಳು, ನಿಯತಕಾಲಿಕೆಗಳನ್ನು ಓದಲು ಪ್ರೋತ್ಸಾಹ ಕೊಡುವುದು, ಮುಖ್ಯವಾಗಿ, ನಾಡು ನುಡಿಯಲ್ಲಿ ಭಾಷಾ ಸಂವಹನ ನಡೆಸುವುದು ಇತ್ಯಾದಿಗಳನ್ನು ಮಾಡಿಸಬಹುದು. ಮಾತೃಭಾಷೆ ಕಲಿಯೋಣ, ವ್ಯವಹಾರಿಕವಾಗಿ ಬೇರೆ ಭಾಷೆಗಳು ನಮಗೆ ಬೇಕೇ ಬೇಕು. ಅನ್ಯ ಭಾಷೆಯನ್ನು ಮೇಲಿಟ್ಟು, ತಾಯಿಭಾಷೆಯನ್ನು ತುಳಿಯದಿರೋಣ, ಕಡೆಗಣಿಸದಿರೋಣ.
ಮುಂದಿನ ದಿನಗಳಲ್ಲಿ ನಮ್ಮ ನಾಡು ನುಡಿ ಭಾಷೆಗಾಗಿ, ನಾಡಿನ ಮಕ್ಕಳಾದ ನಮ್ಮ ಕರ್ತವ್ಯವೇನು?ಎಂದು ಚಿಂತನ -ಮಂಥನ ಮಾಡಬೇಕಾದ್ದು ನಮ್ಮ ಆದ್ಯ ಕರ್ತವ್ಯ. ನಾವೇ ಮರೆತರೆ ಅನ್ಯರಿನ್ನೇನ ಮಾಡುವರು?
೧-ಕನ್ನಡ ಮಾಧ್ಯಮ ಶಾಲೆಗಳನ್ನು ಆದಷ್ಟೂ ಉಳಿಸಿಕೊಳ್ಳಲು ಯೋಜನೆಗಳನ್ನು, ಯೋಚನೆಗಳನ್ನು ಹಾಕಿಕೊಂಡು , ರೂಪುರೇಶೆಗಳನ್ನು ಈಗಲೇ ಸಿದ್ಧಪಡಿಸಿ ಕೊಳ್ಳುವುದು, ಇದರಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರ ತೆಗೆದುಕೊಳ್ಳುವುದು.
೨-ಆಂಗ್ಲ ಭಾಷೆ (ಮಾಧ್ಯಮ) ಶಾಲೆಗಳಿಗೆ ಹೋದರೆ ಮಾತ್ರ ನಮ್ಮ ಮಕ್ಕಳು ಉದ್ಧಾರ ಆಗುವರೆಂಬ ಭ್ರಮೆಯಿಂದ ಹೊರಬರುವಂತೆ ಹೆತ್ತವರ ಮನವೊಲಿಸುವುದು. ಕನ್ನಡ ಭಾಷೆಯೊಂದಿಗೆ ಆಂಗ್ಲ ಭಾಷೆಯನ್ನೂ ಕಲಿಯಬೇಕು ಎಂಬ ಧೋರಣೆಯ ಬಗ್ಗೆ ಅರಿವು ಮೂಡಿಸುವ ಕೆಲಸ, ಅಲ್ಲಲ್ಲಿ ಆಗಬೇಕು.
೩--ಕನ್ನಡ ನೆಲ-ಜಲದ ಬಗ್ಗೆ, ನಮ್ಮದೆಂಬ ಪ್ರೀತಿ, ಗೌರವ, ಮಮಕಾರ ಮನದಲ್ಲಿ ಮೂಡುವಂತೆ ಜಾಗೃತಿ ಚಟುವಟಿಕೆ ಗಳನ್ನು ಹಮ್ಮಿಕೊಳ್ಳಲು,ಅವಕಾಶ, ಅನುದಾನ ನೀಡುವುದು, ಸಂವಿಧಾನದಲ್ಲೇ ಅದಕ್ಕೆ ಬೇಕಾದ ಪೂರಕ ಮಾಹಿತಿಗಳನ್ನು ಅಳವಡಿಸುವುದು, ಸಂಘ ಸಂಸ್ಥೆಗಳ ಮೂಲಕ ಅನುಷ್ಠಾನ ಗೊಳಿಸುವಲ್ಲಿ, ಸರಕಾರವೇ ಸಹಾಯ ನೀಡುವುದು, ಜನಜಾಗೃತಿಗೊಳಿಸುವುದು, ಸಂಬಂಧಿಸಿದವರ ಗಮನಕ್ಕೆ ತರುವ ಕೆಲಸಗಳನ್ನು ಹಮ್ಮಿಕೊಳ್ಳುವುದು ಮುಂತಾದವುಗಳನ್ನು ಮಾಡಬಹುದು.
೪--ಕನ್ನಡದಲ್ಲಿ, ಕನ್ನಡಕ್ಕಾಗಿ ದುಡಿಯುತ್ತಿರುವ ಮಹನೀಯರನ್ನು, ಸಾಹಿತಿಗಳನ್ನು ಗುರುತಿಸುವ, ಅವರ ಕೆಲಸ, ಬರವಣಿಗೆಗೆ ತಕ್ಕ ಅಭಿನಂದನೆ, ಸನ್ಮಾನಗಳನ್ನು ಆಯೋಜಿಸುವಲ್ಲಿ, ಸಮರ್ಪಕವಾಗಿ ಮತ್ತು ಸಮರ್ಥವಾಗಿ ಚಿಂತನೆಗಳು, ಚರ್ಚೆಗಳು ನಡೆದು, ಯೋಗ್ಯತೆ ಇರುವವರನ್ನು ಆಯ್ಕೆ ಮಾಡುವಂತಾಗಬೇಕು. ಅವರ ಸಾಹಿತ್ಯ ಪ್ರಕಾರಗಳನ್ನು ಮುದ್ರಣ ಮಾಡುವಲ್ಲಿ ಆಸಕ್ತಿ ತೋರಿ, ಅನುಷ್ಠಾನಗೊಳಿಸಬೇಕು. ಆಯಾಯ ಪ್ರದೇಶಕ್ಕೆ ಒಂದಷ್ಟು ಉತ್ಸಾಹಿಗಳನ್ನು ನೇಮಕ ಮಾಡಿ, ಎಲೆಯ ಮರೆಯ ಕಾಯಿಯಂತಿರುವವರನ್ನೂ ಸಹ ಗುರುತಿಸುವ ಕೆಲಸವಾಗಬೇಕಿದೆ. ಕವಿಗೋಷ್ಠಿ, ವಿಚಾರ ಗೋಷ್ಠಿ ಹಾಗೂ ಶಾಲಾ ಕಾಲೇಜುಗಳ ಮಕ್ಕಳಲ್ಲಿ ಸಹ ಸಾಹಿತ್ಯ ಪ್ರಕಾರಗಳನ್ನು ಗುರುತಿಸುವ, ಕಲಿಸುವ, ಪ್ರೋತ್ಸಾಹಿಸುವ ಬಗ್ಗೆ ಶಿಬಿರಗಳ ಆಯೋಜನೆ, ತರಬೇತಿ ನೀಡುವುದು, ಮಕ್ಕಳ ಸಾಹಿತ್ಯ ದಲ್ಲಿ ಸಹ ಉತ್ತಮರಿಗೆ ಅಭಿನಂದನೆ ನೀಡುವ ಕೆಲಸವಾಗಬೇಕಿದೆ.
೫--ಬೀದಿ ನಾಟಕಗಳು, ರೂಪಕಗಳು, ಪ್ರಹಸನಗಳು, ಆಕಾಶವಾಣಿ, ದೂರದರ್ಶನದಲ್ಲೂ ಪ್ರಸಾರ ಮತ್ತು ಪ್ರಚಾರಗಳು ಇವುಗಳಿಗೆ ಆರ್ಥಿಕ ಸಹಾಯವನ್ನು ಬಜೆಟ್ಟಲ್ಲಿಯೇ ಕಾದಿರಿಸುವಂತಾಗಬೇಕು. ವಿಧಾನಸಭಾ ಕ್ಷೇತ್ರದಲ್ಲಿ ಆಯಾಯ ಪ್ರದೇಶ, ಪ್ರಾದೇಶಿಕ ಭಾಷೆಯ ವ್ಯತ್ಯಾಸಗಳಿಗನುಗುಣವಾಗಿ ಪ್ರತಿನಿಧಿಗಳ ನೇಮಕವಾಗಬೇಕು.ಅವರು ವಿಧಾನ ಸಭಾ ಸದಸ್ಯರಿಗೆ ಆಗಾಗ ಮಾಹಿತಿ ನೀಡುವಂತಾಗಬೇಕು.
೬---ಮುಖ್ಯವಾಗಿ *ದಾಖಲೀಕರಣ*ವಾಗಬೇಕಾದ್ದು ಅತ್ಯಂತ ಅವಶ್ಯಕವಾಗಿದೆ. ಹಿಂದಿನ-ಇಂದಿನ ತಲೆಮಾರಿನ ಸಾಹಿತ್ಯ ಪ್ರಕಾರ ಗಳಲ್ಲಿ ರಚನೆಯಾದ ಎಲ್ಲಾ ಸಾಹಿತ್ಯಗಳನ್ನು ಒಗ್ಗೂಡಿಸಿ, ದಾಖಲಿಸುವ ಕೆಲಸವಾದರೆ, ಮುಂದಿನ ತಲೆಮಾರಿಗೆ ಪ್ರಯೋಜನವಾಗಬಹುದು ಹಾಗೆ ಸಾಹಿತಿಗಳ ದಾಖಲೀಕರಣ ಸಹ ಅಷ್ಟೇ ಮುಖ್ಯ. ಕಾಟಾಚಾರಕ್ಕೆ *ರಾಜ್ಯೋತ್ಸವ*ಆಚರಣೆಯಾಗುತ್ತಿದೆ, ನಿಜವಾದ ರಾಜ್ಯೋತ್ಸವದ ಆಚರಣೆ, ಅದರ ಹಿಂದಿನ ಉದ್ಧೇಶ, ಯಾಕೆ, ಏನು? ಎಲ್ಲವೂ ವಿದ್ಯಾರ್ಥಿ ಜೀವನದಲ್ಲಿಯೇ ಅರಿವು ಮೂಡಿಸುವ ಕೆಲಸ ವಾಗಬೇಕಿದೆ.
೭-- ಕನ್ನಡ ನೆಲವೊಂದೇ, ಜಲವೊಂದೇ ಇದರ ಅನುಷ್ಠಾನದೊಂದಿಗೆ, ಪ್ರದೇಶದಿಂದ ಪ್ರದೇಶಕ್ಕೆ ಭಾಷೆಯಲ್ಲಿ, ನುಡಿಯಲ್ಲಿ, ಆಡುವಲ್ಲಿ ತುಂಬಾ ವ್ಯತ್ಯಾಸವಿದೆ. ನಗೆಪಾಟಲಿಗೆ ಈಡಾಗುವಂಥ ಸಂದರ್ಭ ಎದುರಾಗದಂತೆ *ಭಿನ್ನತೆಯಲ್ಲಿ ಏಕತೆ*ಯನ್ನು, ಭಾಷಾ ಹಿಡಿತವನ್ನು, ಅರ್ಥೈಸಿಕೊಳ್ಳಲು ಸಹಕಾರ ಆಗುವಂತಹ ಕೆಲಸವಾಗಬೇಕಿದೆ. ಆದಷ್ಟೂ ಕನ್ನಡ ನಾಡಿನ ಜನರಿಗೆ ಉದ್ಯೋಗವನ್ನು, ಕನ್ನಡ ನಾಡಿನಲ್ಲಿಯೇ ನೀಡಿದರೆ, ಇನ್ನೂ ಉತ್ತಮ ರೀತಿಯಲ್ಲಿ ಸರಕಾರದ ಆಸೆ ಆಕಾಂಕ್ಷೆಗಳು ಅನುಷ್ಠಾನಗೊಳ್ಳಲು ಸಹಕಾರಿ ಆದೀತು.
೮--ಸರಕಾರಿ ಸಂಸ್ಥೆಯ ಉದ್ಯೋಗಿಗಳ ಮಕ್ಕಳಾದರೂ ಕನ್ನಡ ಮಾಧ್ಯಮದಲ್ಲಿ ಓದಿದರೆ, ಅವರಿಗೆ ರಿಯಾಯಿತಿಗಳನ್ನು ಕೆಲವು ವಿಷಯದಲ್ಲಿ ನೀಡಿದರೆ ಪ್ರಯೋಜನವಾಗಲೂ ಬಹುದು. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಮೀಸಲಾತಿ ಘೋಷಣೆಯಾದರೆ ಅನುಕೂಲವಾದೀತು.
ಒಟ್ಟಾರೆಯಾಗಿ *ಕನ್ನಡ ನೆಲ-ಜಲ*, ಕನ್ನಡ *ನಮ್ಮ ಹೊತ್ತ ಅಮ್ಮ*ಎಂಬ ಅರಿವು, ಕನ್ನಡದ *ಕೈಂಕರ್ಯ*ದಲ್ಲಿ ಕನ್ನಡಿಗರಾದ ನಾವೆಲ್ಲರೂ ಒಗ್ಗೂಡಿ ದುಡಿಯುವಲ್ಲಿ ತೊಡಗಿಸಿಕೊಂಡರೆ, ನಮ್ಮಿಂದಾದ *ಅಳಿಲಸೇವೆ* ತಾಯಿಗೆ ಸಲ್ಲಿಸಿದಂತಾದೀತು ಎಂಬ ಸದಾಶಯದೊಂದಿಗೆ ಒಂದು ಸಣ್ಣ ಪ್ರಯತ್ನ.
ಸಿರಿಗನ್ನಡಂ ಗೆಲ್ಗೆ
-ರತ್ನಾ ಭಟ್ ತಲಂಜೇರಿ
ಚಿತ್ರಕೃಪೆ: ಇಂಟರ್ನೆಟ್ ತಾಣ