ಕನ್ನಡ ನಾಡು-ನುಡಿ (೪) : ಸರ್ವಜ್ಞನ ವಚನಗಳು

*ವಚನ* ಎಂದರೆ ಮಾತು-ಹೇಳಿದ್ದು, ಹೇಳಿದ ಹಾಗೆ *ನಡೆದು ಕೊಳ್ಳುವುದು* ಎಂದು ನಾವೆಲ್ಲರೂ ತಿಳಿದ ಸಂಗತಿ. ಇನ್ನೊಂದರ್ಥದಲ್ಲಿ *ಗದ್ಯ ರೂಪವಾದ ಉಕ್ತಿಗಳು, ನೈತಿಕತೆ, ಧಾರ್ಮಿಕ ಭಾವನೆಗಳನ್ನೊಳಗೊಂಡ ನುಡಿಗಳು* ಎಂಬ ಅರ್ಥವೂ ಇದೆ.
ಧರ್ಮ ಪ್ರಾಧಾನ್ಯವಾದ ನಮ್ಮ ಭಾರತ ದೇಶದಲ್ಲಿ, *ಪಾಪ, ಪುಣ್ಯ, ಸ್ವರ್ಗ, ನರಕ, ದೇವರು, ದೈವೀಶಕ್ತಿ, ಪರಲೋಕ* ಇವುಗಳಲ್ಲಿ ನಂಬಿಕೆಯಿಟ್ಟವರು.ಗದ್ಯ ವಚನಗಳಿಗಿಂತ *ಪ್ರಾಸಬದ್ಧವಾಗಿ, ರಚನೆಯಾದ, ಅರ್ಥವತ್ತಾದ್ದೇ, ತ್ರಿಪದಿಗಳು* ಸೊಗಸಾಗಿ, ರಾಗವಾಗಿ ಹಾಡಲು ಇಷ್ಟವಾಗಿ, ಸಮಾಜದಲ್ಲಿ ನೆಲೆಯೂರಿತು. ಜನ ಮೆಚ್ಚಿ ಒಪ್ಪಿಕೊಂಡರು. ಮನಸ್ಸಿಗೆ ನಾಟುವಂತೆ, ತಿದ್ದುವಂತೆ ಈ ತ್ರಿಪದಿಗಳ ಸಾರವಿತ್ತು. 'ಅಜ್ಞಾನವೆಂಬುದು ಬೆಟ್ಟದಷ್ಟಿದ್ದರೂ, ಜ್ಞಾನ ಸಂಪಾದನೆ ಮಾಡಿ ಪರಿವರ್ತನೆ ಆದಾಗ ಮಂಜಿನಂತೆ, ಅಜ್ಞಾನ ಕರಗಿ ಹೋಗುತ್ತದೆ.
ಆ ಭಗವಂತ ಸರ್ವವ್ಯಾಪಿ,ಎಲ್ಲೆಡೆಯೂ ಇದ್ದಾನೆ.
*ಸಣ್ಣನೆಯ ಮಹಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣಿಸಿ ಬರೆವ ಪಟದೊಳಗೆ ಇರುವಾತ
ತನ್ನೊಳಗೆ ಇರನೆ ಸರ್ವಜ್ಞ//
ಎಷ್ಟು ಸಾರವಿದೆ ಕೇವಲ ಮೂರು ಸಾಲುಗಳಲ್ಲಿ.
ಕಲ್ಲಿನಲಿ ದೇವರನು ಕಾಣುತಿಹರಲ್ಲ,ತನ್ನಲ್ಲೇ ಪರಮಾತ್ಮ ಅಡಕವಾಗಿದ್ದಾನೆಂದು ಅಲ್ಪಮತಿ ಮಾನವಗರಿಯದೇ?
*ಕಲ್ಲುಕಲ್ಲನೆ ಒಟ್ಟಿ ಕಲ್ಲಿನಲಿ ಮನೆಕಟ್ಟಿ
ಕಲ್ಲ ಮೇಲ್ಕಲ್ಲ ಕೊಳುವ ಮಾನವರೆಲ್ಲ
ಕಲ್ಲಿನಂತಿಹರು ಸರ್ವಜ್ಞ//*
ಬರೇ ತೋರಿಕೆಯ ,ಆಡಂಬರದ ಪೂಜೆ ಸಲ್ಲದು. ಭಕ್ತಿ, ಶೃದ್ಧೆ, ನಿಷ್ಠೆ, ಏಕಾಗ್ರತೆ, ದೃಢತೆ, ಚಿತ್ತಶುದ್ಧಿಯಲಿ ಭಜಿಸದ, ಬಾಹ್ಯಾಚಾರಗಳಿಂದೇನು ಪ್ರಯೋಜನ,ಇವೆಲ್ಲವೂ ವ್ಯರ್ಥ.
*ಚಿತ್ತವಿಲ್ಲದೆ ಗುಡಿಯ ಸುತ್ತಿದಡೆ ಫಲವೇನು
ಎತ್ತು ಗಾಣವನು ಹೊತ್ತು ತಾ ನಿತ್ಯದಿ
ಸುತ್ತಿ ಬಂದಂತೆ ಸರ್ವಜ್ಞ//*
ಕೆಲವು ಮಂದಿಯ ಸ್ವಭಾವ *ಬಾಯಿ ಬಿಟ್ಟರೆ ಬಣ್ಣ ಗೇಡು*ಎಂಬಂತೆ.
ಮಾತಿನಾ ಬೊಮ್ಮವು ತೂತಾದ ಮಡಕೆಯೂ
ಪಾತಕದ ನೆರೆಯ ಇವು ಮೂರು ಲೋಕದೊ
ಳೇತಕ್ಕು ಬೇಡ ಸರ್ವಜ್ಞ//
ತಾನೇ ಎಲ್ಲವನ್ನೂ ತಿಳಿದವನು ಎಂಬ ಅಹಂ ಯಾಕೆ?
ಬಲ್ಲೆನೆಂಬುವ ಮಾತು ಎಲ್ಲವೂ ಹುಸಿ ಕಾಣೊ
ಬಲ್ಲರೆ ಬಲ್ಲೆನೆನಬೇಡ ಸುಮ್ಮನಿರು
ಬಲ್ಲವನೆ ಬಲ್ಲ ಸರ್ವಜ್ಞ//
ತನ್ನನ್ನೇ ಎಲ್ಲರೂ ನೋಡಬೇಕು,ತನ್ನ ಮಾತುಗಳನ್ನೇ ಕೇಳಬೇಕು,ನಾನೇ ಎಲ್ಲರನ್ನೂ ಉದ್ಧಾರ ಮಾಡುವವ ಈ ಭಾವನೆ ಸಲ್ಲದು.
*ತನ್ನ ನೋಡಲಿ ಎಂದು ಕನ್ನಡಿಯು ಕರೆವುದೇ?
ತನ್ನಲ್ಲಿ ಜ್ಞಾನವುದಿಸಿದ ಮಹಾತ್ಮನು
ಕನ್ನಡಿಯಂತೆ ಸರ್ವಜ್ಞ//*
ಹೀಗೆ ನೂರಾರು *ತ್ರಿಪದಿ*ಗಳ ಮೂಲಕ ಜನರಿಗೆ ಉತ್ತಮ ಸಂದೇಶಗಳನ್ನು, ಜೀವನ ಮಾರ್ಗವನ್ನು ನೀಡಿದ ಸರ್ವಜ್ಞನ ತ್ರಿಪದಿಗಳು ಯಾವಕಾಲಕ್ಕೂ ಸತ್ಯಾಂಶಗಳನ್ನು ಬಿತ್ತರಿಸುವ *ತುಂಬಿದ ಕೊಡ*.
-ರತ್ನಾಭಟ್ ತಲಂಜೇರಿ
ಆಧಾರ:ಸರ್ವಜ್ಞ ಕವಿ (ಒಂದಾಣೆ ಮಾಲೆ ಪುಸ್ತಕ)