ಕನ್ನಡ ನಾಡು-ನುಡಿ (೫) : ದಾಸ ಶ್ರೇಷ್ಠರು

ಕನ್ನಡ ನಾಡು-ನುಡಿ (೫) : ದಾಸ ಶ್ರೇಷ್ಠರು

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅಪಾರ ಸಾಧನೆಯನ್ನು ಮಾಡಿ,*ದಾಸ ಸಾಹಿತ್ಯ*ವನ್ನು ಉಣಬಡಿಸಿದವರಲ್ಲಿ ಅಗ್ರಗಣ್ಯರು *ಪುರಂದರದಾಸರು*. ಕೋಟಿ ಸಂಪತ್ತು ತನ್ನಲ್ಲಿದ್ದರೂ, ಎಲ್ಲವನ್ನೂ ತ್ಯಜಿಸಿ, ವ್ಯಾಸರಾಯರ ಶಿಷ್ಯರಾಗಿ, ದಾಸರಾಗಿ, ಹಾಡುಗಳ ಮೂಲಕ, ಲೋಕದ ಡೊಂಕುಗಳ ತಿದ್ದಲು ಪ್ರಯತ್ನಿಸಿದವರು.ದಾಸಸಾಹಿತ್ಯವನ್ನು ಅತ್ಯಂತ ಮೇಲ್ಮಟ್ಟಕ್ಕೆ ಒಯ್ದುವುದರಲ್ಲಿ ದುಡಿದವರು.

ಶೀನಪ್ಪ ನಾಯಕ ಎಂಬ ಹೆಸರಿದ್ದ ಪುರಂದರ ದಾಸರು, ತನ್ನ ಲೋಭದ ಗುಣವನ್ನು ಶ್ರೀಹರಿಯ ದರ್ಶನ ಭಾಗ್ಯದಿಂದ ತ್ಯಜಿಸಿದರು. ಹಂಪೆಯಲ್ಲಿ *ವ್ಯಾಸತೀರ್ಥ*ರ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿ *ಪುರಂದರ ವಿಠಲ* ಎಂಬ ನಾಮದಿಂದ ಲಕ್ಷಗಟ್ಟಲೆ ಪದ್ಯಗಳನ್ನು ರಚಿಸಿದರೆಂದು ಪ್ರತೀತಿ. ಒಂದೆಡೆಯಲ್ಲಿ ೪.೭೫ ಲಕ್ಷ ಪದ್ಯಗಳೆಂಬ ಮಾಹಿತಿಯಿದೆ. ಅವರ ಗುರುಗಳಾದ ವ್ಯಾಸತೀರ್ಥರು *ದಾಸರೆಂದರೆ ಪುರಂದರ ದಾಸರಯ್ಯ*ಎಂದು ಕೊಂಡಾಡಿದರು.

ತಮ್ಮ ಕೀರ್ತನೆಗಳಲ್ಲಿ ಶ್ರೀಹರಿಯ ಅವತಾರಗಳನ್ನು, ಹನುಮಂತ, ಶಿವ , ಮಧ್ವಾಚಾರ್ಯರ ತತ್ವಗಳನ್ನು, ಶ್ರೀಕೃಷ್ಣನ ಲೀಲೆಗಳನ್ನು, ರಾಮವತಾರದ ಲೀಲೆಗಳನ್ನು, ಗಣಪತಿ, ವೆಂಕಟರಮಣ, ಅಷ್ಟಲಕ್ಷ್ಮಿಯರ ವರ್ಣನೆಗಳು, ಹಿತೋಪದೇಶಗಳು, ನೀತಿ-ರೀತಿಗಳು, ಜನಜಾಗೃತಿ, ಮೂಢನಂಬಿಕೆ, ದಾಸ್ಯಭಾವ, ಜ್ಞಾನ, ಭಕ್ತಿ, ಸಹಕಾರ ಎಲ್ಲದರ ಬಗ್ಗೆಯೂ ತಿಳಿಯ ಹೇಳಿ ಸಮಾಜವನ್ನು ತಿದ್ದುವ ಕಾಯಕವನ್ನು ಮಾಡುವಲ್ಲಿ ತಮ್ಮ *ಅಳಿಲಸೇವೆ* ಸಲ್ಲಿಸಿದವರು.

ಸಂಗೀತ ಶಾಸ್ತ್ರಕ್ಕೆ ಒಂದು ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರು. ರಾಗ, ತಾಳ, ಲಯ, ಭಾವದಿಂದ ಕೂಡಿದ, ಸರಳವಾದ, ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ತಮ್ಮ ಕೀರ್ತನೆಗಳನ್ನು ರಚಿಸಿದರು. ಭಗವಂತನ ಸಾಕ್ಷಾತ್ಕಾರ, ಅಂತರಂಗ ನಿವೇದನೆ, ಧಾರ್ಮಿಕ ಜೀವನದ ಬಗ್ಗೆ ವಿಶೇಷವಾಗಿ ಕಾಳಜಿಯನ್ನು ಪದ್ಯಗಳಲ್ಲಿ ಕಾಣಬಹುದು. ಹಂಪೆಯಲ್ಲಿ ತಮ್ಮ ಕೊನೆಯ ದಿನಗಳನ್ನು ಕಳೆದ ಪುರಂದರ ದಾಸರು ಸುಮಾರು ೮೦ ವರುಷ ಬದುಕಿದರೆಂದೂ, ಅವರು ನೆಲೆಸಿದ್ದ ಸ್ಥಳವೇ ಇಂದಿನ *ಪುರಂದರ ಮಂಟಪ* ವೆಂದೂ ತಿಳಿದು ಬರುತ್ತದೆ. ಅಸಾಮಾನ್ಯರೆನಿಸಿದ ಪುರಂದರ ದಾಸರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇಂದಿಗೂ ನಮ್ಮ ಕಲ್ಪನೆಯ ದಾಸರು *ಕೈಯಲ್ಲಿ ತಂಬೂರಿ* ಹಿಡಿದು ಹಾಡುವವರೇ ಪುರಂದರ ದಾಸರು ಎಂಬುದಾಗಿ. ನಮ್ಮ ಕನ್ನಡ ನಾಡಿನ *ಅಮೂಲ್ಯ* ಆಸ್ತಿ ಶ್ರೀ ಪುರಂದರ ದಾಸರು.

✍️ರತ್ನಾಭಟ್ ತಲಂಜೇರಿ

(ಸಾರ ಸಂಗ್ರಹ) ಚಿತ್ರ ಕೃಪೆ : ಇಂಟರ್ನೆಟ್