ಕನ್ನಡ ಪತ್ರಿಕಾಲೋಕ (೨೪) - ಜನಸೇವಕ

ಕನ್ನಡ ಪತ್ರಿಕಾಲೋಕ (೨೪) - ಜನಸೇವಕ

ದಿನಕರ ದೇಸಾಯಿ ಹಾಗೂ ಅಮ್ಮೆಂಬಳ ಆನಂದರ "ಜನಸೇವಕ"

ಮುಂಬಯಿಯಲ್ಲಿ ಸಂಸದರಾಗಿದ್ದ, ಕಾರ್ಮಿಕ ನಾಯಕರಾಗಿದ್ದ, ಅಂಕೋಲೆಯವರಾದ " ಚುಟುಕು ಬ್ರಹ್ಮ" ಬಿರುದಾಂಕಿತ ದಿನಕರ ದೇಸಾಯಿಯವರು ತಮ್ಮ 'ಕೆನರಾ ವೆಲ್ ಫೆರ್ ಟ್ರಸ್ಟ್' ನ ಮೂಲಕ ಅಂಕೋಲೆಯಿಂದ ಆರಂಭಿಸಿದ ವಾರಪತ್ರಿಕೆಯಾಗಿದೆ "ಜನಸೇವಕ".

ಮೂಲತಹ ದಕ್ಷಿಣ ಕನ್ನಡ ಜಿಲ್ಲೆಯ ಅಮ್ಮೆಂಬಳದವರಾದ ಅಮ್ಮೆಂಬಳ ಆನಂದರ ಸಂಪಾದಕತ್ವದಲ್ಲಿ ೧೯೫೫ ಜನವರಿ ೨೬ರಂದು ಆರಂಭಗೊಂಡ "ಜನಸೇವಕ" ವಾರಪತ್ರಿಕೆಯು, ಮಧ್ಯೆ ಒಂದೇ ಒಂದು ವಾರವೂ ಬಿಡುವಿಲ್ಲದೆ ೧೯೭೨ರ ಆಗಸ್ಟ್ ೨ರ ವರೆಗೆ ನಿರಂತರವಾಗಿ ಪ್ರಕಟಗೊಂಡು ಬಳಿಕ ಸ್ಥಗಿತಗೊಂಡಿತು. "ಜನಸೇವಕ" ಸ್ಥಗಿತಗೊಂಡಾಗ ನಾಡಿನ ಅನೇಕ ವಲಯಗಳ ಹಲವಾರು ಮಂದಿ ಪ್ರಮುಖರು, ಪತ್ರಿಕೆಗಳು ಸಹಿತ ಮರುಗಿದ್ದು ಕರ್ನಾಟಕದ ಪತ್ರಿಕಾ ಇತಿಹಾಸದಲ್ಲಿಯೇ ಒಂದು ಅಪರೂಪದ ವಿದ್ಯಾಮಾನ, ಇತಿಹಾಸ.

"ಜನಸೇವಕ" ಕ್ಕಾಗಿಯೇ ಕೆನರಾ ವೆಲ್ ಫೆರ್ ಟ್ರಸ್ಟ್ ಅಂಕೋಲೆಯಲ್ಲಿ "ಜನ ಮುದ್ರಣಾಲಯ" ವನ್ನು ಆರಂಭಿಸಿತ್ತು. ಇದೇ ಮುದ್ರಣಾಲಯದಲ್ಲಿ ಮುದ್ರಣಗೊಳ್ಳುತ್ತಿದ್ದ "ಜನಸೇವಕ"ದ ಮುಖಪುಟ ಲೇಖನ ಮತ್ತು ಪ್ರತೀ ಸಂಚಿಕೆಯ ಸಂಪಾದಕೀಯ ಬರಹವನ್ನೂ ಹಾಗೂ ಚುಟುಕುಗಳನ್ನೂ ಮುಂಬಯಿಯಲ್ಲಿದ್ದುಕೊಂಡೇ ದಿನಕರ ದೇಸಾಯಿಯವರು ಬರೆದು ಕಳುಹಿಸುತ್ತಿದ್ದುದು, ಪ್ರಕಟವಾಗುತ್ತಿತ್ತು. ಅಮ್ಮೆಂಬಳ ಆನಂದರು ತಮ್ಮ ಹೆಸರಿನಲ್ಲಿ ಮತ್ತು " ನೇಗಿನ ಯೋಗಿ" ಎಂಬ ಹೆಸರಿನಲ್ಲಿಯೂ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದರು.

ಗೌರೀಶ ಕಾಯ್ಕಿಣಿಯವರು "ಅಡಿಗೆ ಭಟ್ಟ" , "ವೈಶ್ವಾನರ" ಎಂಬಿತ್ಯಾದಿ ಹೆಸರುಗಳಲ್ಲಿಯೂ ಬರೆದು ಕೊಡುತ್ತಿದ್ದ ಲೇಖನಗಳು ಜನಸೇವಕದಲ್ಲಿ ಪ್ರಕಟವಾಗುತ್ತಿತ್ತು.

ಪ್ರತೀ ವರ್ಷದ ಜನವರಿ ೨೬ರಂದು ವಿಶೇಷಾಂಕ ಪ್ರಕಟಿಸಲಾಗುತ್ತಿತ್ತು. ಇದರಲ್ಲಿ ಶಂಭಾ ಜೋಷಿ, ಬೆಟಗೇರಿ ಕೃಷ್ಣ ಶರ್ಮಾ, ಗೌರೀಶ ಕಾಯ್ಕಿಣಿ, ನಿರಂಜನ, ಕಣವಿ, ಶಿವರುದ್ರಪ್ಪ, ಕಟ್ಟಿಮನಿ, ಯಶವಂತ ಚಿತ್ತಾಲ, ದಾಮೋದರ ಚಿತ್ತಾಲ, ಸುಂದರ ನಾಡಕರ್ಣಿ, ಅವಧಾನಿ, ನಾರಾಯಣ ಕಾಗಾಲ, ಜಿ. ಎಸ್. ಅನ್ನದಾನಿ, ಅರವಿಂದ ನಾಡಕರ್ಣಿ, ವಿ. ಜೆ. ನಾಯಕ, ಎಸ್. ಆರ್. ನಾಯಕ, ಜಿನದೇವ ನಾಯಕ, ಎಸ್. ಜಿ. ಹೂತನ್, ಸೇವ ನೇಮರಾಜ ಮಲ್ಲ ಹೀಗೆ ನಾಡಿನ ಪ್ರಮುಖ ಬರಹಗಾರನೇಕರ ಬರಹಗಳು ಇರುತ್ತಿದ್ದುವು.

ಎಂಟು ಪುಟಗಳ, ಟ್ಯಾಬ್ಲಾಯ್ಡ್ ಮಾದರಿಯ "ಜನಸೇವಕ" ಕ್ಕೆ ೧೯೭೦ರ ದಶಕದಲ್ಲಿ ಇದ್ದ ಬೆಲೆ ೧೫ ಪೈಸೆ. ಕೆನರಾ ವೆಲ್ ಫೆರ್ ಟ್ರಸ್ಟಿನ ಕಾರ್ಯದರ್ಶಿ ದಯಾನಂದ ಎಸ್ ನಾಡಕರ್ಣಿ ಅವರು ಮುದ್ರಕರಾಗಿದ್ದರು. ಶ್ಯಾಮ ಹುದ್ದಾರ ಅವರು ಪತ್ರಿಕಾಲಯದ, ಮುದ್ರಣಾಲಯದ ಮ್ಯಾನೇಜರ್ ಆಗಿದ್ದರು.

~ ಶ್ರೀರಾಮ ದಿವಾಣ