ಕನ್ನಡ ಪತ್ರಿಕಾ ಲೋಕ (ಭಾಗ ೧೦೦) - ಆರಕ್ಷಕ ವಾಣಿ
ಕಳೆದ ನಾಲ್ಕು ವರ್ಷಗಳಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಿಂದ ಪ್ರಕಟವಾಗುತ್ತಿರುವ ಪಾಕ್ಷಿಕ ಪತ್ರಿಕೆ “ಆರಕ್ಷಕ ವಾಣಿ”. ಪತ್ರಿಕೆಯ ಆಕಾರ ಟ್ಯಾಬಲಾಯ್ಡ್ ಗಾತ್ರದಾಗಿದ್ದು, ೧೨ ಪುಟಗಳನ್ನು ಹೊಂದಿದೆ. ನಾಲ್ಕು ಪುಟ ವರ್ಣದಲ್ಲೂ, ಉಳಿದ ಎಂಟು ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿದೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಫ಼ೆಬ್ರವರಿ ೧, ೨೦೨೩ (ಸಂಪುಟ: ೪, ಸಂಚಿಕೆ: ೩) ಆಗಿದೆ.
ಈ ಸಂಚಿಕೆಯಲ್ಲಿ ಕ್ರೈಂ, ರಾಜಕೀಯಕ್ಕೆ, ಸಿನೆಮಾ ರಂಗಕ್ಕೆ ಸಂಬಂಧಿಸಿದ ಪ್ರಮುಖ ಸುದ್ದಿಗಳಿವೆ. “ಒಂದೇ ದಿನದಲ್ಲಿ ಐವತ್ತು ಸಾವಿರ ಕೋಟಿ ಕಳೆದುಕೊಂಡ ಶ್ರೀಮಂತ" “ಮಿತಿ ಮೀರಿದ ಬಿಎಂಟಿಸಿ ಅಧಿಕಾರಿಗಳ ಕಿರುಕುಳ" ಮೊದಲಾದ ಲೇಖನಗಳಿವೆ. ಖಾಲಿಕ್ ಅಹಮ್ಮದ್ ಸಂಪಾದಕ, ಪ್ರಕಾಶಕ ಹಾಗೂ ಮುದ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆಯ ಕಚೇರಿ ಕೋಡಿ ಕ್ಯಾಂಪ್, ತರೀಕೆರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದು, ಅಜ್ಜಂಪುರದ ಪವಿತ್ರ ಪ್ರೆಸ್ ಇಲ್ಲಿ ಮುದ್ರಿತವಾಗುತ್ತಿದೆ.
ಸಂಪಾದಕರಾದ ಖಾಲಿದ್ ಅಹಮ್ಮದ್ ಅವರು “ಸಂಪಾದಕರ ಡೈರಿ" ಎಂಬ ಸಂಪಾದಕೀಯದಲ್ಲಿ ಕೇಂದ್ರ ಬಜೆಟ್ ವಿಷಯವಾಗಿ “ಚುನಾವಣೆ ದೃಷ್ಟಿ ; ಭರಪೂರ ಯೋಜನೆ" ಎಂಬ ಮಾಹಿತಿ ಬರೆದಿದ್ದಾರೆ. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ರೂ. ೧೫.೦೦ ಆಗಿದ್ದು ವಾರ್ಷಿಕ ಚಂದಾ ರೂ.೪೮೦.೦೦ ಹಾಗೂ ಅರ್ಧ ವಾರ್ಷಿಕ ೨೪೦.೦೦ ಆಗಿರುತ್ತದೆ. ಪತ್ರಿಕೆಯಲ್ಲಿ ಜಾಹೀರಾತುಗಳು ಕಂಡು ಬರುತ್ತಿಲ್ಲ. ಪತ್ರಿಕೆಯು ಈಗಲೂ ಸಕಾಲಕ್ಕೆ ಮುದ್ರಿತವಾಗಿ ಹೊರಬರುತ್ತಿದೆ ಎಂಬ ಮಾಹಿತಿ ಇದೆ.