ಕನ್ನಡ ಪತ್ರಿಕಾ ಲೋಕ (ಭಾಗ ೧೦೪) - ಪರಶು - ಓದುಗರ ಆಯುಧ

ಕನ್ನಡ ಪತ್ರಿಕಾ ಲೋಕ (ಭಾಗ ೧೦೪) - ಪರಶು - ಓದುಗರ ಆಯುಧ

“ಪರಶು-ಓದುಗರ ಆಯುಧ" ಎಂಬ ಹೆಸರಿನಲ್ಲಿ ನೊಂದಾಯಿಸಲಾಗಿರುವ ಈ ಕನ್ನಡ ವಾರಪತ್ರಿಕೆಯು ಬೆಂಗಳೂರಿನಿಂದ ಪ್ರಕಾಶಿತವಾಗುತ್ತಿದೆ. ಪರಶುರಾಮ ಯಾನೆ ಪಿ. ರಾಮ ಎಂಬವರು ಈ ಪತ್ರಿಕೆಯ ಪ್ರಕಾಶಕ, ಸಂಪಾದಕ ಹಾಗೂ ಮುದ್ರಕರಾಗಿದ್ದಾರೆ. ಬೆಂಗಳೂರಿನ ವಿಜಯನಗರದಲ್ಲಿ ಪತ್ರಿಕಾ ಕಚೇರಿ ಇದೆ. ಲಾವಣ್ಯ ಮುದ್ರಣ, ಬೆಂಗಳೂರು ಇಲ್ಲಿ ಮುದ್ರಿತವಾಗುತ್ತಿದೆ. 

ಟ್ಯಾಬಲಾಯ್ಡ್ ಗಾತ್ರದ ೧೬ ಪುಟಗಳು. ೧೨ ಪುಟಗಳು ಕಪ್ಪು ಬಿಳುಪು ಹಾಗೂ ನಾಲ್ಕು ಪುಟಗಳು ವರ್ಣರಂಜಿತ. ಈ ಪತ್ರಿಕೆಯಲ್ಲಿ ಬಹುತೇಕ ಟ್ಯಾಬಲಾಯ್ಡ್ ಪತ್ರಿಕೆಗಳಂತೆ ಸಿನೆಮಾ, ರಾಜಕೀಯ ಮತ್ತು ಕ್ರೈಂ ಸುದ್ದಿಗಳಿವೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯು ಅಕ್ಟೋಬರ್ ೫, ೨೦೧೫ (ಸಂಪುಟ ೪, ಸಂಚಿಕೆ ೩೫) ಸಂಚಿಕೆ ಆಗಿದೆ. ಇದರ ಮುಖಪುಟ ಲೇಖನವಾಗಿ ‘ಪುಲಿ ಎದುರು ಗೆಲ್ತಾನಾ ಸ್ಯಾಂಡಲ್ ವುಡ್ ಸಲಗ' ಎಂಬ ದರ್ಶನ್ ಸಿನೆಮಾದ ಬಗ್ಗೆ ವಿವರಗಳಿವೆ. ಸಂಪಾದಕರಾದ ಪಿ.ರಾಮ್ ಅವರು ‘ಓಪನ್ ಟಾಕ್ ಮುಕ್ತ..ಮುಕ್ತ' ಎಂಬ ಹೆಸರಿನ ಸಂಪಾದಕೀಯವನ್ನೂ, ನವಿಲುಗರಿ ಎಂಬ ಅಂಕಣವನ್ನೂ ಬರೆದಿದ್ದಾರೆ. ಈ ಪತ್ರಿಕೆಗೆ ರಾಘವ್ ಹಾಗೂ ಪ್ರಥ್ವಿ ಎಂಬ ವರದಿಗಾರರು ಇದ್ದು, ಅವರ ಲೇಖನಗಳು ಕಂಡುಬರುತ್ತವೆ. ಎಸ್ಸೆನ್ ಎಂಬವರು ‘ಓ ಮೈ ಗಾಡ್' ಎಂಬ ಅಂಕಣ ಬರೆದಿದ್ದಾರೆ. ಆರೋಗ್ಯಧಾಮ ಅಂಕಣದಲ್ಲಿ ಕೊಬ್ಬು ಕರಗಿಸುವ ವಿಧಾನಗಳ ಬಗ್ಗೆ ತಿಳಿಸಿಕೊಡಲಾಗಿದೆ. ಹಿಂಬದಿ ಪುಟದಲ್ಲಿ ಜಾಹೀರಾತು ಇದೆ.

ಪತ್ರಿಕೆಯ ಬಿಡಿ ಪ್ರತಿಯ ಬೆಲೆ ರೂ ೧೦.೦೦ ಆಗಿದ್ದು ಚಂದಾ ಅವಧಿಯ ಬಗ್ಗೆ ಯಾವುದೇ ಮಾಹಿತಿಗಳು ಕಂಡು ಬರುವುದಿಲ್ಲ. ಪತ್ರಿಕೆಯು ಈಗಲೂ ಮುದ್ರಿತವಾಗುತ್ತಿದೆಯೋ ಎಂಬ ಬಗ್ಗೆಯೂ ಮಾಹಿತಿ ಲಭ್ಯವಿಲ್ಲ.