ಕನ್ನಡ ಪತ್ರಿಕಾ ಲೋಕ (ಭಾಗ ೧೦೬) - ಜನಪ್ರತಿನಿಧಿ ಪತ್ರಿಕೆ

ಕನ್ನಡ ಪತ್ರಿಕಾ ಲೋಕ (ಭಾಗ ೧೦೬) - ಜನಪ್ರತಿನಿಧಿ ಪತ್ರಿಕೆ

ಕಳೆದ ೨೭ ವರ್ಷಗಳಿಂದ ನಿರಂತರವಾಗಿ ಕುಂದಾಪುರ ತಾಲೂಕಿನಿಂದ ಪ್ರಕಟವಾಗುತ್ತಿರುವ ವಾರ ಪತ್ರಿಕೆ ‘ಜನಪ್ರತಿನಿಧಿ ಪತ್ರಿಕೆ'. ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ೮ ಪುಟಗಳನ್ನು ಹೊಂದಿದೆ. ನಾಲ್ಕು ಪುಟಗಳು ವರ್ಣರಂಜಿತವಾಗಿಯೂ, ನಾಲ್ಕು ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿದೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಮಾರ್ಚ್ ೯, ೨೦೨೩ರ (ಸಂಪುಟ: ೨೭, ಸಂಚಿಕೆ: ೨೪) ಸಂಚಿಕೆ. ಈ ಪತ್ರಿಕೆಯಲ್ಲಿ ಕುಂದಾಪುರ ತಾಲೂಕಿನ ಸ್ಥಳೀಯ ಸುದ್ಧಿಗಳು, ರಾಜಕೀಯ ವಿದ್ಯಮಾನಗಳು ಅಡಕವಾಗಿವೆ. ಮುಖಪುಟದಲ್ಲಿ ಕೆ ಜಿ ಎಚ್ ಅವರ ‘ಗಿರಿಗಿಂಟಿ' ಎಂಬ ವ್ಯಂಗ್ಯ ಚಿತ್ರವಿದೆ. 

ಒಳಪುಟಗಳಲ್ಲಿ ಕ್ರೀಡಾ ಲೇಖಕರಾದ ಜಗದೀಶಚಂದ್ರ ಅಂಚನ್, ಸೂಟರ್ ಪೇಟೆ ಇವರ ಕ್ರೀಡಾ ಅಂಕಣವಿದೆ. ಕಾವ್ಯ ಬೈರಾಗಿ ಬರೆದ ಸಿನೆಮಾ ಬರಹ, ಯಕ್ಷಪ್ರೇಮಿ ಜಯರಾಮ ಶೆಟ್ಟಿ ಇವರ ಯಕ್ಷಗಾನದ ಕುರಿತಾದ ಬರಹಗಳಿವೆ. ಖ್ಯಾತ ಮನೋವೈದ್ಯರಾದ ಡಾ. ಪಿ.ವಿ.ಭಂಡಾರಿ ಇವರ ‘ಸಿಬ್ಲಿಂಗ್ ರೈವಲ್ರಿ...ಏನಿದು ಸಮಸ್ಯೆ?’ ಎಂಬ ಮನೋವೈಜ್ಞಾನಿಕ ಬರಹವಿದೆ. ಶ್ರೀರಾಜ್ ವಕ್ವಾಡಿ ಇವರು ‘ಸಕಾಲಿನ’ ಎಂಬ ಅಂಕಣ ಬರೆಯುತ್ತಿದ್ದಾರೆ. ಉಳಿದಂತೆ ಪತ್ರಿಕೆಯಲ್ಲಿ ಜಾಹೀರಾತುಗಳಿಗೆ ಜಾಗವಿದೆ.

ಸುಬ್ರಹ್ಮಣ್ಯ ಪಡುಕೋಣೆ ಇವರು ಜನಪ್ರತಿನಿಧಿ ಪತ್ರಿಕೆಯ ಸಂಪಾದಕರು, ಪ್ರಕಾಶಕರು ಹಾಗೂ ಮುದ್ರಕರಾಗಿದ್ದಾರೆ. ಕುಂದಾಪುರದ ಪ್ರತಿನಿಧಿ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್ ವತಿಯಿಂದ ಮಂಗಳೂರಿನ ಯೆಯ್ಯಾಡಿಯಲ್ಲಿರುವ ದಿಗಂತ ಮುದ್ರಣದಲ್ಲಿ ಮುದ್ರಿಸುತ್ತಿದ್ದಾರೆ. ಪತ್ರಿಕೆಯ ಬಿಡಿಪ್ರತಿ ರೂ.೬.೦೦ ಆಗಿದ್ದು, ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆಯು ಈಗಲೂ ನಿಯಮಿತವಾಗಿ ಪ್ರಕಟವಾಗುತ್ತಿದೆ.