ಕನ್ನಡ ಪತ್ರಿಕಾ ಲೋಕ (ಭಾಗ ೧೦೯) - ಚಾಲುಕ್ಯ ಪತ್ರಿಕೆ

ಕನ್ನಡ ಪತ್ರಿಕಾ ಲೋಕ (ಭಾಗ ೧೦೯) - ಚಾಲುಕ್ಯ ಪತ್ರಿಕೆ

ಕುಂದಾಪುರ ತಾಲೂಕಿನಿಂದ ಪ್ರಕಾಶಿತಗೊಳ್ಳುತ್ತಿರುವ 'ಚಾಲುಕ್ಯ ಪತ್ರಿಕೆ' ಈಗ ಹದಿನೈದನೇ ವರ್ಷದ ಸಂಭ್ರಮದಲ್ಲಿದೆ. ಟ್ಯಾಬಲಾಯ್ಡ್ ಆಕಾರದ ೮ ಪುಟಗಳು. ಅದರಲ್ಲಿ ನಾಲ್ಕು ವರ್ಣರಂಜಿತ ಹಾಗೂ ಉಳಿದ ನಾಲ್ಕು ಪುಟಗಳು ಕಪ್ಪು ಬಿಳುಪು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಮಾರ್ಚ್ ೨೫, ೨೦೨೩ (ಸಂಪುಟ ೭, ಸಂಚಿಕೆ ೧೩೬) ರ ಸಂಚಿಕೆ. 

ಈ ಪತ್ರಿಕೆಯಲ್ಲಿ ರಾಜಕೀಯ ಸಂಬಂಧಿ ಸುದ್ದಿಗಳದ್ದೇ ಕಾರುಬಾರು. ಬಹುಷಃ ಚುನಾವಣೆ ಹತ್ತಿರ ಬರುತ್ತಿರುವ ಸಮಯದ ಸಂಚಿಕೆಯಾದುದರಿಂದ ಹೀಗೆ ಆಗಿರಬಹುದು. ಚಂದ್ರಶೇಖರ (ಚಂದ್ರಮ ತಲ್ಲೂರು) ಸಂಪಾದಕ, ಮುದ್ರಕ ಹಾಗೂ ಪ್ರಕಾಶಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಪತ್ರಿಕೆಯು ಮಂಗಳೂರಿನ ಯೆಯ್ಯಾಡಿಯಲ್ಲಿರುವ ದಿಗಂತ ಮುದ್ರಣದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಕಚೇರಿಯು ಕುಂದಾಪುರದ ಮುಖ್ಯರಸ್ತೆಯಲ್ಲಿರುವ ಪಾಪ್ಯುಲರ್ ಬಿಲ್ಡಿಂಗ್ ನಲ್ಲಿದೆ. 

ಚಂದ್ರಮ ತಲ್ಲೂರು ಇವರು ತಮ್ಮ ಸಂಪಾದಕೀಯ ‘ನೇರ ನುಡಿ' ಇಲ್ಲಿ ಬೈಂದೂರು ರಾಜಕೀಯದ ಬಗ್ಗೆ ಬರೆದಿದ್ದಾರೆ. ಉಳಿದಂತೆ ಪತ್ರಿಕೆಯಲ್ಲಿ ಹಲವಾರು ಜಾಹೀರಾತುಗಳಿವೆ. ಪತ್ರಿಕೆಯ ಬಿಡಿ ಪ್ರತಿ ರೂ ೫.೦೦ ಆಗಿದ್ದು. ಚಂದಾ ವಿವರ ಲಭ್ಯವಿಲ್ಲ. ಪತ್ರಿಕೆಯು ಹದಿನೈದು ದಿನಕ್ಕೊಮ್ಮೆ ಮುದ್ರಿತವಾಗಿ ಮಾರುಕಟ್ಟೆಗೆ ಬರುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.