ಕನ್ನಡ ಪತ್ರಿಕಾ ಲೋಕ (ಭಾಗ ೧೧೦) - ಚಿತ್ರ ಚಿತ್ತಾರ
ಕನ್ನಡ ಸಿನೆಮಾ ಲೋಕದ ಸ್ವಾರಸ್ಯಕರ ಸಂಗತಿಗಳನ್ನು ತಿಳಿಸುತ್ತಿದ್ದ ವಾರ ಪತ್ರಿಕೆ ‘ಚಿತ್ರ ಚಿತ್ತಾರ'. ಕನ್ನಡ ಸಿನೆಮಾ ರಂಗದ ಸಮಗ್ರ ಮಾಹಿತಿಯನ್ನು ನೀಡುವ ದೃಷ್ಟಿಯಿಂದ ಪ್ರಾರಂಭಗೊಂಡ ವಾರ ಪತ್ರಿಕೆಯೇ ‘ಚಿತ್ರ ಚಿತ್ತಾರ'. ವಾರ್ತಾ ಪತ್ರಿಕೆಯ ಆಕಾರದ ೧೨ ವರ್ಣಮಯ ಪುಟಗಳು. ಪತ್ರಿಕೆಯ ಮುದ್ರಕ, ಪ್ರಕಾಶಕ ಹಾಗೂ ಸಂಪಾದಕರಾಗಿ ಪರಮೇಶ್ವರ ಆರ್ ಹಾಗೂ ಕಾರ್ಯ ನಿರ್ವಾಹಕ ಸಂಪಾದಕರಾಗಿ ಭೀಮರಾಯ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆಯು ಜನವರಿ ೩, ೨೦೧೯ರ (ದ್ವಿತೀಯ ಸಂಚಿಕೆ) ಸಂಚಿಕೆಯಾಗಿದೆ. ಈ ಪತ್ರಿಕೆಯ ಹೊಸ ಪ್ರಯೋಗ ಎಂಬಂತೆ ಖ್ಯಾತ ನಟ ರಮೇಶ್ ಅರವಿಂದ್ ಅವರು ಆ ವಾರದ ಗೌರವ ಸಂಪಾದಕರಾಗಿದ್ದಾರೆ. ಸಂಪಾದಕ ಸ್ಥಾನದಲ್ಲಿ ಕುಳಿತು ಅವರು ‘ಸಿನೆಮಾ ಪತ್ರಿಕೆಗಳು ಗ್ಲಾಮರಸ್ಸಾಗಿರಬೇಕು' ಎನ್ನುವ ಸೊಗಸಾದ ಸಂಪಾದಕೀಯವನ್ನು ಬರೆದಿದ್ದಾರೆ. ಪ್ರಥಮ ಸಂಚಿಕೆಗೆ ಓದುಗರಿಂದ ಸಿಕ್ಕ ಪ್ರತಿಕ್ರಿಯೆಗಳ ಬಗ್ಗೆ ಕಾರ್ಯ ನಿರ್ವಾಹಕ ಸಂಪಾದಕರಾದ ಭೀಮರಾಯ ಇವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದ್ದಾರೆ.
ಪತ್ರಿಕೆಯ ಎಲ್ಲಾ ಪುಟಗಳಲ್ಲಿ ಸಿನೆಮಾ ಜಗತ್ತಿಗೆ ಸಂಬಂಧಿಸಿದ ಸುದ್ದಿಗಳಿವೆ. ಬೆಲ್ ಬಾಟಂ, ಪ್ರೀಮಿಯರ್ ಪದ್ಮಿನಿ, ಐ ಲವ್ ಯು, ಬೀರಬಲ್, ನಟಸಾರ್ವಭೌಮ ಮೊದಲಾದ ಚಿತ್ರಗಳ ಬಗ್ಗೆ ವಿವರಗಳಿವೆ. 'ಪರಿಚಯದೊಂದಿಗೆ ಪಾತೂರು ಹಾಗೂ ಹರಿ ಪರಾಕ್ ಅಂಕಣಗಳು ಇವೆ. ಹರಿ ಪರಾಕ್ ಅವರು ರೆಬೆಲ್ ಸ್ಟಾರ್ ಅಂಬರೀಷ್ ಬಗ್ಗೆ ‘ಅಮರನ ಚಿತ್ರಕಥೆ' ಬರೆಯುತ್ತಿದ್ದಾರೆ.
ಪತ್ರಿಕೆಯ ಕಚೇರಿ ನಾಗರಭಾವಿ, ಬೆಂಗಳೂರು ಇಲ್ಲಿದ್ದು, ಎಂ ಎನ್ ಎಸ್ ಪ್ರಿಂಟರ್ಸ್ ಪ್ರೈ. ಲಿ. ಬೆಂಗಳೂರು ಇಲ್ಲಿ ಮುದ್ರಿತವಾಗುತ್ತಿತ್ತು. ಪತ್ರಿಕೆಯ ಮುಖ ಬೆಲೆ ರೂ. ೫.೦೦ ಆಗಿದ್ದು, ಚಂದಾ ವಿವರಗಳ ಬಗ್ಗೆ ಮಾಹಿತಿ ಇಲ್ಲ. ನಮಗೆ ಲಭ್ಯವಿರುವ ಮಾಹಿತಿಗಳ ಪ್ರಕಾರ ‘ಚಿತ್ರ ಚಿತ್ತಾರ' ಪತ್ರಿಕೆಯು ತನ್ನ ಪ್ರಕಟಣೆಯನ್ನು ಸ್ಥಗಿತಗೊಳಿಸಿದೆ.