ಕನ್ನಡ ಪತ್ರಿಕಾ ಲೋಕ (ಭಾಗ ೧೧೧) - ಮುಂಜಾನೆ ಎಕ್ಸ್ ಪ್ರೆಸ್
ರಾಜಾಸಾಹೇಬ್ ಎಚ್ ನದಾಫ್ ಯಾನೆ ರಾಜು ನದಾಫ್ ಇವರ ಸಂಪಾದಕತ್ವದಲ್ಲಿ ಕಳೆದ ಏಳು ವರ್ಷಗಳಿಂದ ಬೆಳಗಾವಿಯಿಂದ ಹೊರಬರುತ್ತಿರುವ ಪ್ರಾದೇಶಿಕ ದಿನ ಪತ್ರಿಕೆ ‘ಮುಂಜಾನೆ ಎಕ್ಸ್ ಪ್ರೆಸ್'. ವಾರ್ತಾ ಪತ್ರಿಕೆಯ ಆಕಾರದಲ್ಲಿ ಆರು ಕಪ್ಪು ಬಿಳುಪು ಪುಟಗಳನ್ನು ಹೊಂದಿದೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಎಪ್ರಿಲ್ ೨೯, ೨೦೨೩ (ಸಂಪುಟ ೭, ಸಂಚಿಕೆ ೧೮೧) ರ ಸಂಚಿಕೆ.
ಈ ಪತ್ರಿಕೆಯಲ್ಲಿ ರಾಜ್ಯಮಟ್ಟದ ಸುದ್ದಿಯ ಜೊತೆ ಸ್ಥಳೀಯ ಸುದ್ದಿಗಳಿಗೆ ಅಧಿಕ ಪ್ರಾಶಸ್ತ್ಯ ನೀಡಲಾಗಿದೆ. ಪತ್ರಿಕೆಯು ಬೆಂಗಳೂರು, ಬೆಳಗಾವಿ, ಧಾರವಾಡ, ವಿಜಯಪುರ, ಗದಗ, ಬಾಗಲಕೋಟ, ಕಾರವಾರ, ಕೊಪ್ಪಳ, ಹಾವೇರಿ, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಸಾರವಿದೆ. ಪತ್ರಿಕೆಯಲ್ಲಿ ಸಂಪಾದಕೀಯ ಹಾಗೂ ಯಾವುದೇ ಅಂಕಣ ಬರಹ ಕಂಡು ಬರುವುದಿಲ್ಲ.
‘ಮುಂಜಾನೆ ಎಕ್ಸ್ ಪ್ರೆಸ್’ ಪತ್ರಿಕೆಯ ಸಂಪಾದಕ, ಪ್ರಕಾಶಕ ಹಾಗೂ ಮುದ್ರಕರಾಗಿ ರಾಜು ನದಾಫ್ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಬೆಳಗಾವಿಯ ಸಿವಿಲ್ ಆಸ್ಪತ್ರೆ ರಸ್ತೆಯಲ್ಲಿ ಕಚೇರಿಯನ್ನು ಹೊಂದಿರುವ ಪತ್ರಿಕೆಯು ಬೆಳಗಾವಿಯ ಗೊಂದಹಾಲಿ ಗಲ್ಲಿಯಲ್ಲಿರುವ ಎಲಿಗೆಂಟ್ ಆಫ್ ಸೆಟ್ ಪ್ರಿಂಟರ್ಸ್ ಪ್ರೈ ಲಿ ಇಲ್ಲಿ ಮುದ್ರಣವಾಗುತ್ತಿದೆ. ಪತ್ರಿಕೆಯ ಮುಖ ಬೆಲೆ ರೂ ೨.೦೦ ಆಗಿದ್ದು ಚಂದಾ ವಿವರದ ಬಗ್ಗೆ ಮಾಹಿತಿಯಿಲ್ಲ. ಪತ್ರಿಕೆಯು ಈಗಲೂ ಕ್ಲಪ್ತ ಕಾರ್ಯಕ್ಕೆ ಮುದ್ರಿತವಾಗಿ ಮಾರುಕಟ್ಟೆಗೆ ಬರುತ್ತಿದೆ.