ಕನ್ನಡ ಪತ್ರಿಕಾ ಲೋಕ (ಭಾಗ ೧೧೨) - ಯಶ ಕರ್ನಾಟಕ
ಕೆ.ವಿ.ಕೃಷ್ಣ ದಾಸ್ ಇವರ ಸಂಪಾದಕತ್ವದಲ್ಲಿ ಕಳೆದ ೧೫ ವರ್ಷಗಳಿಂದ ಹೊರಬರುತ್ತಿರುವ ವಾರ ಪತ್ರಿಕೆ ‘ಯಶ ಕರ್ನಾಟಕ' ವಾರ್ತಾ ಪತ್ರಿಕೆಯ ಆಕಾರದಲ್ಲಿರುವ ೬ ಪುಟಗಳಲ್ಲಿ ನಾಲ್ಕು ಪುಟಗಳು ವರ್ಣರಂಜಿತ ಹಾಗೂ ಎರಡು ಪುಟಗಳು ಕಪ್ಪು ಬಿಳುಪು. ಚುನಾವಣಾ ಸಮಯದ ಸಂಚಿಕೆಯಾಗಿರುವುದರಿಂದ ರಾಜಕೀಯ ಸುದ್ದಿಗಳಿಗೇ ಅಧಿಕ ಪ್ರಾಶಸ್ತ್ಯ ನೀಡಲಾಗಿದೆ. ಪತ್ರಿಕೆಯಲ್ಲಿ ರಾಜಕೀಯ ಸುದ್ದಿಗಳಲ್ಲದೇ, ಪ್ರಚಲಿತ ವಿದ್ಯಮಾನಗಳ, ಹೊಸದಾಗಿ ಬಿಡುಗಡೆಯಾಗಲಿರುವ ಚಲನಚಿತ್ರಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಮೇ ೨೪, ೨೦೨೩ (ಸಂಪುಟ-೧೫, ಸಂಚಿಕೆ-೧) ರ ಸಂಚಿಕೆ. ಈ ಸಂಚಿಕೆಯಲ್ಲಿ ಯಾವುದೇ ಸಂಪಾದಕೀಯ ಕಂಡು ಬರುತ್ತಿಲ್ಲ. ಕ್ರೀಡಾ ಬರಹಗಾರರಾದ ಜಗದೀಶ್ಚಂದ್ರ ಅಂಚನ್ ಅವರ ಕ್ರೀಡಾ ಅಂಕಣವಿದೆ. ಲತಾ ಕೃಷ್ಣ ದಾಸ್ ಇವರು ಪತ್ರಿಕೆಯ ಪ್ರಕಾಶಕರು, ಮಾಲೀಕರು ಮತ್ತು ಮುದ್ರಕರಾಗಿದ್ದಾರೆ. ಪತ್ರಿಕೆಯ ಕಚೇರಿಯು ಮಂಗಳೂರಿನ ಪಡೀಲ್ ನಲ್ಲಿದೆ. ಮಂಗಳೂರಿನ ಬೈಕಂಪಾಡಿಯಲ್ಲಿರುವ ಮೆಟ್ರೋಪೊಲೀಟನ್ ಮೀಡಿಯಾ ಕಂಪೆನಿ ಲಿ. ಇಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ. ೫.೦೦. ಪತ್ರಿಕೆಯ ಚಂದಾ ವಿವರಗಳು ಕಂಡುಬರುತ್ತಿಲ್ಲ. ಪತ್ರಿಕೆ ಈಗಲೂ ಮುದ್ರಿತವಾಗುತ್ತಿದೆ ಎಂಬ ಮಾಹಿತಿ ಇದೆ.