ಕನ್ನಡ ಪತ್ರಿಕಾ ಲೋಕ (ಭಾಗ ೧೧೩) - ನಮ್ಮ ನಾಡಿನ ನವಪರ್ವ

ಕನ್ನಡ ಪತ್ರಿಕಾ ಲೋಕ (ಭಾಗ ೧೧೩) - ನಮ್ಮ ನಾಡಿನ ನವಪರ್ವ

ಜಿ. ಆರ್. ಮೋಹನಕೃಷ್ಣ ನೇತೃತ್ವದಲ್ಲಿ ಹೊರಬರುತ್ತಿರುವ ಪಾಕ್ಷಿಕ ಪತ್ರಿಕೆ ‘ನಮ್ಮ ನಾಡಿನ ನವಪರ್ವ'. ಟ್ಯಾಬಲಾಯ್ಡ್ ಆಕಾರದ ಹದಿನಾರು ಪುಟಗಳು. ಆರು ಪುಟಗಳು ವರ್ಣದಲ್ಲೂ ಉಳಿದ ೧೦ ಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣವಾಗಿದೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಫೆಬ್ರವರಿ ೫, ೨೦೨೩ (ಸಂಪುಟ ೧, ಸಂಚಿಕೆ ೧೯) ರ ಸಂಚಿಕೆ.

ಸಂಚಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳು, ರಾಜಕೀಯ ಸುದ್ದಿಗಳಿಗೆ ಮಹತ್ವ ನೀಡಲಾಗಿದೆ. ಅಗಲಿದ ಗಾನ ಕೋಗಿಲೆ ವಾಣಿ ಜಯರಾಂ ಬಗ್ಗೆಯೂ ಒಂದು ಪುಟ್ಟ ಲೇಖನವಿದೆ. ಕೃಷಿಕನ ಬದುಕಿನ ಆಸರೆಯಾದ ಸಂಸ್ಥೆ ಕ್ಯಾಂಪ್ಕೋ ಬಗ್ಗೆ ಸವಿವರವಾದ ಮಾಹಿತಿ ನೀಡುವ ಮುಖಪುಟ ಬರಹವಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ ಬಗ್ಗೆ ಲೇಖನಗಳಿವೆ. ಇದರ ಜೊತೆಗೆ ಆರೋಗ್ಯ, ಧಾರ್ಮಿಕ, ಹಾಸ್ಯ ಬರಹಗಳಿವೆ.

ಜಿ ಆರ್ ಮೋಹನ್ ಇವರು ತಮ್ಮ ಸಂಪಾದಕೀಯದಲ್ಲಿ ‘ಕಾಂಗ್ರೆಸ್ ಗೆ ಮತ ; ಹಿಂದೂಗಳ ಸರ್ವನಾಶ' ಎಂಬ ವಿಷಯದ ಬಗ್ಗೆ ಲೇಖನ ಬರೆದಿದ್ದಾರೆ. ಪತ್ರಿಕೆಯಲ್ಲಿ ಹಲವಾರು ಜಾಹೀರಾತುಗಳಿವೆ. ಪತ್ರಿಕೆಯ ಕಚೇರಿ ಬೆಂಗಳೂರಿನ ದಾಸರಹಳ್ಳಿಯಲ್ಲಿದ್ದು, ಸಾಯಿ ಪ್ರಿಂಟರ್ಸ್, ಕಾಟನ್ ಪೇಟೆ, ಬೆಂಗಳೂರು ಇಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ ೨೦.೦೦, ವಾರ್ಷಿಕ ಚಂದಾ ರೂ ೭೫೦.೦೦ ಹಾಗೂ ಅಜೀವ ಚಂದಾ ರೂ ೫೦೦೦.೦೦ ಆಗಿರುತ್ತದೆ. ಪತ್ರಿಕೆಯು ಈಗಲೂ ಮುದ್ರಣವಾಗುತ್ತಿದೆಯೋ ಎಂಬ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ.