ಕನ್ನಡ ಪತ್ರಿಕಾ ಲೋಕ (ಭಾಗ ೧೧೪) - ಪೊಲೀಸ್ ಮಿರರ್

ಕನ್ನಡ ಪತ್ರಿಕಾ ಲೋಕ (ಭಾಗ ೧೧೪) - ಪೊಲೀಸ್ ಮಿರರ್

ಎಸ್ಸೆನ್ ಕುಂಜಾಲ್ ಸಾರಥ್ಯದಲ್ಲಿ ಕಳೆದ ೩೭ ವರ್ಷಗಳಿಂದ ಹೊರ ಬರುತ್ತಿರುವ ವಾರ ಪತ್ರಿಕೆ ‘ಪೊಲೀಸ್ ಮಿರರ್'. ಇದನ್ನು ಅವರು ‘ರೀಡರ್ಸ್ ಟೈಂಬಾಂಬ್’ ಎಂದು ಹೆಸರಿಸಿದ್ದಾರೆ. ಟ್ಯಾಬಲಾಯ್ಡ್ ಆಕಾರದ ೧೬ ಪುಟಗಳು, ನಾಲ್ಕು ಪುಟಗಳು ವರ್ಣದಲ್ಲೂ, ಉಳಿದ ೧೨ ಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣವಾಗುತ್ತಿದೆ. 

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಸೆಪ್ಟೆಂಬರ್ ೨೦೨೨ (ಸಂಪುಟ ೩೭, ಸಂಚಿಕೆ ೧೧) ರ ಸಂಚಿಕೆಯಾಗಿದೆ. ಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳು, ರಾಜಕೀಯ ಸುದ್ದಿಗಳು, ಕ್ರೈಂ ಸುದ್ದಿಗಳು ಮತ್ತು ಸಿನೆಮಾ ಸುದ್ದಿಗಳಿವೆ. ಪ್ರಧಾನ ಸಂಪಾದಕರಾದ ಎಸ್ಸೆನ್ ಕುಂಜಾಲ್ ಇವರು ‘ಇದ್ದದ್ದು ಇದ್ದಂಗೆ' ಎಂಬ ಹೆಸರಿನಲ್ಲಿ ಸಂಪಾದಕೀಯ ಬರೆಯುತ್ತಾರೆ. ಇದರೊಂದಿಗೆ ‘ಬಿಗ್ ಬೌನ್ಸರ್', ‘ಕಣ್ಣೀರಧಾರೆ ಇದೇಕೆ... ಇದೇಕೆ...', ‘ಓ ಮೈ ಗಾಡ್' ಮತ್ತು ರೀಡರ್ಸ್ ನೀವ್ ಏನಂತೀರಾ? ಎಂಬ ಅಂಕಣಗಳನ್ನೂ ಬರೆಯುತ್ತಾರೆ. ನಮ್ಮಲ್ಲಿರುವ ಪತ್ರಿಕೆಯಲ್ಲಿ ಮುರುಘಾಮಠದ ಲೈಂಗಿಕ ಹಗರಣದ ಬಗ್ಗೆ ಮುಖಪುಟ ಲೇಖನವಿದೆ. ಒಲಿವಿಯಾ ಅವರು ಬರೆದ ‘ಪೋಸ್ಟ್ ಮಾರ್ಟಮ್’ ಮತ್ತು ‘ಕಥೆ ಹೇಳುವೆ ನನ್ನ ಕಥೆ ಹೇಳುವೆ’ ಎಂಬ ಎರಡು ಧಾರವಾಹಿಗಳು ಇವೆ. ಓದುಗರ ಪತ್ರಗಳನ್ನು ‘ಪಬ್ಲಿಕ್ ವಾಯ್ಸ್' ಹೆಸರಿನಲ್ಲಿ ಪ್ರಕಟ ಮಾಡಿದ್ದಾರೆ. 

ಹೆಚ್ ಕೆ ಮಹಾದೇವ ಇವರು ಪತ್ರಿಕೆಯ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರು ಆಗಿದ್ದಾರೆ. ಪತ್ರಿಕೆಯ ಕಚೇರಿ ಬೆಂಗಳೂರಿನ ಕೆಂಪೇಗೌಡ ರಸ್ತೆಯ ಅಲಂಕಾರ್ ಪರ್ಲ್ ಪ್ಲಾಜಾದಲ್ಲಿದೆ. ಬೆಂಗಳೂರಿನ ವಿನಾಯಕ ಪ್ರಿಂಟರ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿದೆ. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ರೂ. ೧೦.೦೦, ಚಂದಾ ವಿವರಗಳು ಲಭ್ಯವಿಲ್ಲ. ಈಗಲೂ ಕ್ಲಪ್ತ ಕಾಲಕ್ಕೆ ಪತ್ರಿಕೆ ಮುದ್ರಣವಾಗುತ್ತಿದೆ ಎಂಬ ಮಾಹಿತಿ ದೊರಕಿದೆ.