ಕನ್ನಡ ಪತ್ರಿಕಾ ಲೋಕ (ಭಾಗ ೧೧೫) - ಜನಮಾಧ್ಯಮ

ಕಳೆದ ಮೂರು ದಶಕಗಳಿಗೂ ಅಧಿಕ ಸಮಯದಿಂದ ಹೊರಬರುತ್ತಿರುವ ದಿನ ಪತ್ರಿಕೆ ‘ಜನಮಾಧ್ಯಮ'. ವಾರ್ತಾ ಪತ್ರಿಕೆಯ ಆಕಾರದ ೮ ಪುಟಗಳು. ನಾಲ್ಕು ಪುಟಗಳು ವರ್ಣದಲ್ಲೂ ಮತ್ತು ನಾಲ್ಕು ಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣಗೊಂಡಿದೆ. ಪ್ರಧಾನ ಸಂಪಾದಕರಾಗಿ ಅಶೋಕ್ ಹಾಸ್ಯಗಾರ, ಪ್ರಕಾಶಕರಾಗಿ ಶ್ರೀಕೃಷ್ಣ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಮಾರ್ಚ್ ೩, ೨೦೧೮ ((ಸಂಪುಟ ೩೦, ಸಂಚಿಕೆ ೩) ರ ಸಂಚಿಕೆ. ಈ ಸಂಚಿಕೆಯಲ್ಲಿ ಸ್ಥಳೀಯ ಸುದ್ದಿಗಳ ಜೊತೆಗೆ ರಾಜ್ಯ, ರಾಷ್ಟ್ರೀಯ ಸುದ್ದಿಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ. ಲೇಖಕ ರೋಹಿತ್ ಚಕ್ರತೀರ್ಥ ಅವರ ‘ಕಥನ ಕಾರಣ' ಹಾಗೂ ಶುಭಾ ಗಿರಣಿಮನೆ ಅವರ ‘ಸ್ತ್ರೀ ಸೂಕ್ತ' ಅಂಕಣಗಳು ಈ ಸಂಚಿಕೆಯಲ್ಲಿವೆ. ಸಂಪಾದಕೀಯ, ಕಾಕನ ಕಿಂಡಿ, ಇಂದಿನ ಪಂಚಾಂಗ, ಕೃಷಿ ಧಾರಣೆ ಮೊದಲಾದ ಬರಹಗಳು ಇವೆ. ಹೋಳಿ ಹಬ್ಬದ ಬಗ್ಗೆ ಬರಹವಿದೆ. ಜಾಹೀರಾತುಗಳೂ ಇವೆ.
ಪತ್ರಿಕೆಯು ಎಂ ಎನ್ ಎಸ್ ಪ್ರಿಂಟರ್ಸ್ ಹುಬ್ಬಳ್ಳಿ ಹಾಗೂ ಧಾರವಾಡ ಇಲ್ಲಿ ಮುದ್ರಣವಾಗುತ್ತಿದೆ. ಪತ್ರಿಕೆಯ ಕಚೇರಿ ಕುಮಟಾ ಹಾಗೂ ಸಿರಸಿಯಲ್ಲಿದೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ.೨.೦೦ ಆಗಿದ್ದು, ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆಯು ಈಗಲೂ ಕ್ಲಪ್ತ ಕಾಲಕ್ಕೆ ಮುದ್ರಿತವಾಗಿ ಮಾರುಕಟ್ಟೆಗೆ ಬರುತ್ತಿದೆ ಎಂಬ ಮಾಹಿತಿ ಲಭ್ಯವಿದೆ.