ಕನ್ನಡ ಪತ್ರಿಕಾ ಲೋಕ (ಭಾಗ ೧೨೨) - ಕ್ಲಿಕ್

ಪತ್ರಿಕಾ ಛಾಯಾಗ್ರಾಹಕರಾದ ರಮೇಶ್ ಪಂಡಿತ್ ಅವರ ಸಂಪಾದಕತ್ವದಲ್ಲಿ ಮಂಗಳೂರಿನಿಂದ ಹೊರಬರುತ್ತಿರುವ ವಾರ ಪತ್ರಿಕೆ ‘ಕ್ಲಿಕ್'. ತಮ್ಮ ಛಾಯಾಗ್ರಾಹಕ ವೃತ್ತಿಯಲ್ಲಿ ಅತೀ ಹೆಚ್ಚು ಬಳಕೆಯಾಗುವ ‘ಕ್ಲಿಕ್' ಎಂಬ ಪದವನ್ನೇ ಪತ್ರಿಕೆಯ ಶೀರ್ಷಿಕೆಯನ್ನಾಗಿಸಿದ್ದಾರೆ. ಟ್ಯಾಬಲಾಯ್ಡ್ ಆಕಾರದ ೮ ಪುಟಗಳು. ಎಲ್ಲಾ ಪುಟಗಳು ಕಪ್ಪು ಬಿಳುಪು. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಮೇ ೧೦, ೨೦೨೩ (ಸಂಪುಟ ೭, ಸಂಚಿಕೆ ೧೫) ರ ಸಂಚಿಕೆ.
ಚುನಾವಣೆಯ ಕಾಲದ ಸಂಚಿಕೆಯಾದುದರಿಂದ ಪತ್ರಿಕೆಯ ಬಹು ಪುಟಗಳು ಚುನಾವಣೆಯ ಸುದ್ದಿಯನ್ನೇ ತುಂಬಿಕೊಂಡಿದೆ. ಸ್ಥಳೀಯ ರಾಜಕೀಯ ಸುದ್ದಿಗಳು ಪತ್ರಿಕೆಯಲ್ಲಿವೆ. ವೇದವ್ಯಾಸ ಕಾಮತ್ ಮತ್ತು ಜೆ ಆರ್ ಲೋಬೋ ನಡುವಿನ ಚುನಾವಣಾ ಹೋರಾಟ, ಅಜಾತ ಶತ್ರು ಖಾದರ್, ಹಾಲಾಡಿ ಬೌನ್ಸರ್ ಗೆ ನಾಲ್ಕು ವಿಕೆಟ್ ಪತನ ಎಂಬ ಮುಖಪುಟ ಲೇಖನಗಳಿವೆ.
‘ಫ್ಲಾಶ್' ಎಂಬ ಹೆಸರಿನಲ್ಲಿ ಸಂಪಾದಕರಾದ ರಮೇಶ್ ಪಂಡಿತ್ ಅವರು ಸಂಪಾದಕೀಯ ಬರೆಯುತ್ತಾರೆ. ಅದೇ ರೀತಿ ಹಿಂದಿನ ಘಟನೆಗಳನ್ನು ನೆನಪಿಸಿಕೊಳ್ಳುವ ‘ಫ್ಲ್ಯಾಶ್ ಬ್ಯಾಕ್' ಎಂಬ ಅಂಕಣವೂ ಇದೆ. ಜಾಹೀರಾತು ತೀರಾ ಕಡಿಮೆ ಇದೆ. ಪತ್ರಿಕೆಯ ಕಚೇರಿ ಮಂಗಳೂರಿನ ಜೆಪ್ಪಿನಮೊಗರು ಎಂಬಲ್ಲಿದೆ. ಯೆಯ್ಯಾಡಿಯಲ್ಲಿರುವ ದಿಗಂತ ಮುದ್ರಣದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ. ೫.೦೦. ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆಯು ಸರಿಯಾಗಿ ಮುದ್ರಿತವಾಗದೇ ಅಪರೂಪಕ್ಕೆ ಪ್ರಕಟವಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.