ಕನ್ನಡ ಪತ್ರಿಕಾ ಲೋಕ (ಭಾಗ ೧೨೪) - ಶಂಕರಕೃಪಾ

ಕನ್ನಡ ಪತ್ರಿಕಾ ಲೋಕ (ಭಾಗ ೧೨೪) - ಶಂಕರಕೃಪಾ

ದಕ್ಷಿಣಾಮ್ನಾಯ ಶೃಂಗಗಿರಿ ಶ್ರೀ ಶಾರದಾಪೀಠಾಧೀಶ್ವರರಾದ ಜಗದ್ಗುರು ಶ್ರೀ ಶ್ರೀಭಾರತೀತೀರ್ಥ ಮಹಾಸ್ವಾಮಿಗಳವರ ಕೃಪಾಶೀರ್ವಾದದಿಂದ ಪ್ರಸಾರವಾಗುತ್ತಿರುವ ಕನ್ನಡ ಆಧ್ಯಾತ್ಮಿಕ ಮಾಸ ಪತ್ರಿಕೆಯೇ “ಶಂಕರಕೃಪಾ”. ಪತ್ರಿಕೆಯು ಕಳೆದ ೨೫ ವರ್ಷಗಳಿಂದ (ನೋಂದಾವಣೆಗೊಂಡು) ನಿರಂತರವಾಗಿ ಪ್ರಕಟಣೆಗೊಳ್ಳುತ್ತಾ ಬಂದಿದ್ದು ತನ್ನ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಪತ್ರಿಕೆಯು ಪ್ರಾರಂಭವಾಗಿ ಸುಮಾರು ಐವತ್ತು ವರ್ಷಗಳೇ ಕಳೆದಿವೆಯಾದರೂ ಅಧಿಕೃತವಾಗಿ ನೋಂದಾಯಿಸಲ್ಪಟ್ಟು ಪತ್ರಿಕೆ ಮುದ್ರಣವಾಗುತ್ತಿರುವುದು ಕಳೆದ ೨೫ ವರ್ಷಗಳಿಂದ. ಪತ್ರಿಕೆಯ ಆಕಾರ ಮಯೂರ/ತುಷಾರ ಪತ್ರಿಕೆಯ ಹಾಗಿದೆ. ೫೨ ಪುಟಗಳು ಅದರಲ್ಲಿ ರಕ್ಷಾಪುಟಗಳು (೪) ವರ್ಣದಲ್ಲಿ ಹಾಗೂ ಒಳಪುಟಗಳು (೪೮) ಕಪ್ಪು ಬಿಳುಪು ಮುದ್ರಣದಲ್ಲಿ ಹೊರಬರುತ್ತಿವೆ. 

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಜೂನ್ ೨೦೨೨ರ (ಸಂಪುಟ ೨೪, ಸಂಚಿಕೆ ೬) ತಿಂಗಳ ಸಂಚಿಕೆಯಾಗಿದೆ. ಈ ಸಂಚಿಕೆಯಲ್ಲಿ ಸಂಪಾದಕರ ಮಾತು, ಅನುಗ್ರಹ ಸಂದೇಶ, ಅವನಿ ಕ್ಷೇತ್ರ ವೈಭವ, ಶ್ರೀಕೃಷ್ಣಚರಿತ್ರೆಯ ಅಲೌಕಿಕತೆ, ಶೃಂಗಗಿರಿಯ ಸಂತಶ್ರೇಷ್ಟ, ಶೃಂಗೇರಿ ಕ್ಷೇತ್ರ ವಾರ್ತೆಗಳು, ಮಾಸ ಪಂಚಾಂಗ ಮೊದಲಾದ ಲೇಖನಗಳನ್ನು ಒಳಗೊಂಡಿದೆ.

ಪತ್ರಿಕೆಯ ಸಂಪಾದಕರಾಗಿ ಡಾ. ಎನ್ ಎಸ್ ಸುರೇಶ್ ಹಾಗೂ ಪ್ರಕಾಶಕರಾಗಿ ಪದ್ಮಶ್ರೀ ಪುರಸ್ಕೃತ ಡಾ ವಿ ಆರ್ ಗೌರೀಶಂಕರ್ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಪತ್ರಿಕೆಯ ಬಿಡಿ ಪ್ರತಿಯ ಬೆಲೆ ಕೇವಲ ಐದು ರೂಪಾಯಿ ಮಾತ್ರ. ವಾರ್ಷಿಕ ಚಂದಾ ೫೦.೦೦, ದ್ವೈಚಾರ್ಷಿಕ ೧೦೦.೦೦ ಹಾಗೂ ಆಜೀವ ಚಂದಾ ವೆಚ್ಚ ರೂ. ೧೫೦೦.೦೦ ಆಗಿದೆ. ಪತ್ರಿಕೆಯು ಅಖಿಲ ಭಾರತೀಯ ಶಂಕರ ಸೇವಾ ಸಮಿತಿ, ಬೆಂಗಳೂರು ಇಲ್ಲಿಂದ ಪ್ರಕಾಶಿತಗೊಳ್ಳುತ್ತಿದೆ. ಬೆಂಗಳೂರಿನ ವಿದ್ಯಾ ಭಾರತಿ ಪ್ರೆಸ್ ನಲ್ಲಿ ಮುದ್ರಣಗೊಳ್ಳುತ್ತಿದೆ. ಪತ್ರಿಕೆಯು ಈಗಲೂ ಕ್ಲಪ್ತ ಕಾಲಕ್ಕೆ ಮುದ್ರಣಗೊಂಡು ಆಧ್ಯಾತ್ಮದಲ್ಲಿ ಒಲವುಳ್ಳ ಓದುಗರ ಕೈಸೇರುತ್ತಿದೆ.