ಕನ್ನಡ ಪತ್ರಿಕಾ ಲೋಕ (ಭಾಗ ೧೨೮) - ಸುದ್ದಿ ಉದಯ
ಬೆಳ್ತಂಗಡಿ ತಾಲೂಕಿನಿಂದ ಪ್ರತೀ ವಾರ ಹೊರಬರುತ್ತಿರುವ ಪತ್ರಿಕೆ “ಸುದ್ದಿ ಉದಯ". ಪತ್ರಿಕೆಯ ಆಕಾರ ವೃತ್ತ ಪತ್ರಿಕೆಯದಾಗಿದ್ದು, ೧೬ ಪುಟಗಳನ್ನು ಹೊಂದಿದೆ. ೮ ಪುಟಗಳು ವರ್ಣದಲ್ಲೂ ಉಳಿದ ೮ ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿವೆ. ಬೆಳ್ತಂಗಡಿ ತಾಲೂಕಿನ ಸಮಗ್ರ ರಾಜಕೀಯ, ಸಂಸ್ಕೃತಿಕ, ಕ್ರೀಡೆ, ಉತ್ಸವ, ಅಪರಾಧ ಮುಂತಾದ ಎಲ್ಲಾ ಸುದ್ದಿಗಳನ್ನು ಈ ಪತ್ರಿಕೆಯಲ್ಲಿ ನೀಡಲಾಗಿದೆ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಸೆಪ್ಟೆಂಬರ್ ೬, ೨೦೨೩ (ಸಂಪುಟ ೧, ಸಂಚಿಕೆ ೨೫) ರ ವಾರದ ಸಂಚಿಕೆ. ಈ ಪತ್ರಿಕೆಯಲ್ಲಿ ಬೆಳ್ತಂಗಡಿ ತಾಲುಕಿನ ಸಮಗ್ರ ಸುದ್ದಿಗಳ ನೋಟವಿದೆ. ಕಲೆ, ಸಾಹಿತ್ಯ, ಸಂಸ್ಕೃತಿ ‘ತುಳುನಾಡು' ಎಂಬ ಪುಟದಲ್ಲಿ ನಗೆ ಹನಿ, ಕವನ, ವಾರ ಭವಿಷ್ಯ, ಆರೋಗ್ಯ ಲೇಖನ, ಕಥೆ ಮೊದಲಾದುವುಗಳಿವೆ. ಪತ್ರಿಕೆಯಲ್ಲಿ ಬಹಳಷ್ಟು ಜಾಹೀರಾತುಗಳಿವೆ. ಸಂಪಾದಕೀಯವು ಕಾಣಿಸುವುದಿಲ್ಲ.
ತುಕಾರಾಮ ಬಿ. ಇವರು ಪತ್ರಿಕೆಯ ಮುದ್ರಕರು, ಪ್ರಕಾಶಕರು ಮತ್ತು ಮಾಲಕರಾಗಿದ್ದಾರೆ. ಬಿ. ಶ್ರೀನಿವಾಸ ಕುಲಾಲ್ ಇವರು ಸಂಪಾದಕರಾಗಿಯೂ, ಸಂತೋಷ್ ಪಿ.ಕೋಟ್ಯಾನ್ ಇವರು ಉಪ ಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆಯು ಮಂಗಳೂರಿನ ಯೆಯ್ಯಾಡಿಯ ದಿಗಂತ ಮುದ್ರಣದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಬಿಡಿಪ್ರತಿಯ ಬೆಲೆ ರೂ.೫.೦೦. ಚಂದಾದಾರಿಕೆಯ ಬಗ್ಗೆ ಮಾಹಿತಿಗಳು ಕಂಡು ಬರುವುದಿಲ್ಲ. ಪತ್ರಿಕೆಯು ಈಗಲೂ ಕ್ಲಪ್ತಕಾಲಕ್ಕೆ ಮುದ್ರಿತವಾಗಿ ಹೊರ ಬರುತ್ತಿದೆ ಎಂಬ ಮಾಹಿತಿ ಇದೆ.