ಕನ್ನಡ ಪತ್ರಿಕಾ ಲೋಕ (ಭಾಗ ೧೨೯) - ಮಯೂರ

ಕನ್ನಡ ಪತ್ರಿಕಾ ಲೋಕ (ಭಾಗ ೧೨೯) - ಮಯೂರ

ಕನ್ನಡ ಪತ್ರಿಕಾ ಇತಿಹಾಸದ ಹಳೆಯ ಪತ್ರಿಕೆಗಳಲ್ಲಿ ‘ಮಯೂರ' ಮಾಸ ಪತ್ರಿಕೆಯೂ ಒಂದು. ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿ. ಸಂಸ್ಥೆಯ ಮೂಲಕ ಪ್ರಕಾಶಿತಗೊಳ್ಳುತ್ತಿರುವ ಈ ಪತ್ರಿಕೆಗೆ ಈಗ ೫೬ರ ಹರೆಯ. ಕನ್ನಡ ಪತ್ರಿಕಾ ರಂಗದಲ್ಲಿ ಐವತ್ತು ವರ್ಷಗಳನ್ನು ಕಂಡು ಈಗಲೂ ಮುದ್ರಿತವಾಗುತ್ತಿರುವ ಪತ್ರಿಕೆಗಳು ಕೆಲವೇ ಕೆಲವು ಉಳಿದಿವೆ ಎನ್ನಬಹುದಾಗಿದೆ. ಈ ಸಾಲಿಗೆ ಸೇರುವ ಪತ್ರಿಕೆ ‘ಮಯೂರ'.

ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ ಪತ್ರಿಕೆಗಳ ಸಹೋದರಿ ಪತ್ರಿಕೆಯಾದ ಮಯೂರ ಕಥೆ, ಕಾದಂಬರಿಗಳನ್ನು ಓದುವವರಿಗೆ ಅಚ್ಚುಮೆಚ್ಚು. ಪ್ರಸ್ತುತ ಕೆ ಎನ್ ಶಾಂತಕುಮಾರ್ ಇವರು ಪತ್ರಿಕೆಯ ಸಂಪಾದಕರು. ಅವರಿಗಿಂತಲೂ ಮೊದಲು ಅವರ ಅಣ್ಣ ಕೆ ಎನ್ ಹರಿಕುಮಾರ್ ಅವರು ಪತ್ರಿಕೆಯ ಸಂಪಾದಕರಾಗಿದ್ದರು. ಸೊಗಸಾದ ಪೈಂಟಿಂಗ್ ಅಥವಾ ಕರಕುಶಲ ವಸ್ತುಗಳ ಮುಖಪುಟದೊಂದಿಗೆ ಹೊರಬರುವ ಪತ್ರಿಕೆಗೆ ಈಗಲೂ ಸಾಕಷ್ಟು ಓದುಗರಿದ್ದಾರೆ. ಪ್ರತೀ ಸಂಚಿಕೆಯಲ್ಲಿ ಗಣ್ಯವ್ಯಕ್ತಿಯೊಬ್ಬರ ಸಂದರ್ಶನದ ಪೂರ್ಣ ಪಾಠ ಇರುತ್ತದೆ. ಸಂದರ್ಶಕರೂ ಹೆಸರಾಂತ ವ್ಯಕ್ತಿಯೇ ಆಗಿರುವುದರಿಂದ ಸಂದರ್ಶನಕ್ಕೆ ಒಂದು ಮೌಲ್ಯ ಇರುತ್ತದೆ. ಪ್ರತೀ ಸಂಚಿಕೆಯಲ್ಲಿ ಪ್ರಬಂಧ, ಕತೆ, ಕವನಗಳು ಇರುತ್ತವೆ. 

ಹಲವಾರು ದಶಕಗಳಿಂದ ಮಯೂರದಲ್ಲಿ ಮೂಡಿ ಬರುತ್ತಿರುವ ಹಾಸ್ಯದ ಹೊನಲು ಭರಿತ ಅಂಕಣಗಳಾದ ‘ಬುತ್ತಿ ಚಿಗುರು' ಮತ್ತು ‘ಅಂಗೈಯಲ್ಲಿ ಅರಮನೆ' ಈಗಲೂ ಹಲವರ ಆತ್ಮೀಯ ಸಂಗಾತಿ. ಸೊಗಸಾದ ನವಿರಾದ ಹಾಸ್ಯ ಸರ್ವರಿಗೂ ಇಷ್ಟ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಅಕ್ಟೋಬರ್ ೨೦೨೩ (ಸಂಪುಟ ೫೬, ಸಂಚಿಕೆ ೧೦) ರ ಸಂಚಿಕೆಯಲ್ಲಿ ಖ್ಯಾತ ಸಾಹಿತಿ ಸುಮತೀಂದ್ರ ನಾಡಿಗ ಇವರ ಸಂದರ್ಶನವಿದೆ. ೭ ಸಣ್ಣ ಕಥೆಗಳು, ೬ ಕವಿತೆಗಳು, ಎರಡು ಪ್ರಬಂಧಗಳು ಜೊತೆಗೆ ನನ್ನ ಓದು ಅಂಕಣದಲ್ಲಿ ‘ಮಂಪರು' ಎನ್ನುವ ಪುಸ್ತಕದ ಪರಿಚಯವಿದೆ. ೧೬೪ ಪುಟಗಳ ವರ್ಣರಂಜಿತ ಪತ್ರಿಕೆಯ ರಕ್ಷಾಪುಟಗಳಲ್ಲಿ ಆಗಾಗ ಜಾಹೀರಾತು ಕಂಡು ಬರುತ್ತವೆ. ಮಕ್ಕಳಿಗಾಗಿ ಒಂದೆರಡು ಪುಟಗಳು, ಮಾಸ ಭವಿಷ್ಯ, ಓದುಗರ ಪ್ರತಿಕ್ರಿಯೆಗಳ ‘ನವಿಲುಗನ್ನಡಿ’, ‘ನಾಂದಿ ಪದ’ ಎಂಬ ಸಂಪಾದಕೀಯ, ಹೊಸ ಪುಸ್ತಕಗಳನ್ನು ಪರಿಚಯಿಸುವ ‘ಪುಸ್ತಕ ಪರಾಗ’, ‘ಕಲ್ಪನೆ ಕಾವ್ಯ’ ಮೊದಲಾದ ಸ್ಥಿರ ಅಂಕಣಗಳಿವೆ. ಕೆಲವು ವರ್ಷಗಳ ಹಿಂದೆ ಮಯೂರದಲ್ಲಿ ೫೦ ವರ್ಷಗಳ ಹಿಂದೆ ಪ್ರಕಟವಾದ ಕಥೆ, ಕಾದಂಬರಿ, ಲೇಖನಗಳನ್ನು ಮರು ಪ್ರಕಟಿಸುತ್ತಿದ್ದರು.

ಪತ್ರಿಕೆಯ ಕಾರ್ಯ ನಿರ್ವಾಹಕ ಸಂಪಾದಕರಾಗಿ ರಘುನಾಥ ಚ ಹ ಇವರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಪತ್ರಿಕೆಯ ಕಚೇರಿ ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿದೆ. ಬೆಂಗಳೂರಿನ ದಿ. ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ. ಇಲ್ಲಿ ಮುದ್ರಣವಾಗುತ್ತಿದೆ. ಪತ್ರಿಕೆಯ ಮುಖ ಬೆಲೆ ರೂ ೧೫.೦೦. ಚಂದಾ ವಿವರಗಳನ್ನು ಪುಸ್ತಕದಲ್ಲಿ ಮುದ್ರಿಸದಿದ್ದರೂ ಕಚೇರಿಯನ್ನು ಸಂಪರ್ಕಿಸಿದರೆ ಮಾಹಿತಿ ನೀಡುತ್ತಾರೆ.  

Comments

Submitted by shreekant.mishrikoti Mon, 12/04/2023 - 14:32

https://mayuraezine.com/ ತಾಣದಲ್ಲಿ ಇತ್ತೀಚಿನ ಸಂಚಿಕೆಯನ್ನು ಉಚಿತವಾಗಿ ಓದಬಹುದು.