ಕನ್ನಡ ಪತ್ರಿಕಾ ಲೋಕ (ಭಾಗ ೧೩೨) - ಕನ್ನಡ ಜನಾಂತರಂಗ
ಮೂರು ದಶಕಗಳ ಹಿಂದೆ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ದಿ ಕೆನರಾ ಟೈಮ್ಸ್' ಎಂಬ ಇಂಗ್ಲೀಷ್ ಪತ್ರಿಕೆಯ ಸಹೋದರಿ ಪತ್ರಿಕೆಯಾಗಿ ಹೊರಬಂದ ಕನ್ನಡ ದೈನಿಕವೇ “ಕನ್ನಡ ಜನಾಂತರಂಗ". ಪ್ರಾರಂಭದಲ್ಲಿ ಇದರ ಶೀರ್ಷಿಕೆ “ಕನ್ನಡ ಜನ ಅಂತರಂಗ" ಎಂದು ಇದ್ದು, ನಂತರದ ದಿನಗಳಲ್ಲಿ ಕನ್ನಡ ಜನಾಂತರಂಗ ಎಂದು ಬದಲಾಯಿತು. ಮಂಗಳೂರಿನಲ್ಲಿ ಮುಂಜಾನೆಯ ದೈನಿಕವಾಗಿ ಪ್ರಕಟವಾಗುತ್ತಿದ್ದ ಈ ಪತ್ರಿಕೆಗೆ ಬಹಳ ಓದುಗರಿರಲಿಲ್ಲ. ಆದರೆ ಭಾನುವಾರದ ಸಾಪ್ತಾಹಿಕ ಪುರವಣಿಯಲ್ಲಿ ಉತ್ತಮ ಸಾಹಿತ್ಯಕ ಬರಹಗಳು ಮೂಡಿ ಬರುತ್ತಿದ್ದವು.
ಕ್ರಮೇಣ ಪತ್ರಿಕೆಯು ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ವರ್ಗಾಯಿಸಲ್ಪಟ್ಟು ಅಲ್ಲಿಂದ ಮುದ್ರಣವಾಗಲು ಪ್ರಾರಂಭಿಸಿತು. ಪ್ರಾರಂಭದಲ್ಲಿ ಮಂಗಳೂರಿನ ಚಿತ್ರಾ ಪಬ್ಲಿಕೇಷನ್ಸ್ ಪ್ರೈ ಲಿ. ಇವರ ಮುಖಾಂತರ ಪ್ರಕಾಶಿತವಾಗುತ್ತಿದ್ದು, ಪ್ರಸ್ತುತ ಕಾರವಾರದಿಂದ ರಮೇಶ್ ಪೂಜಾರಿ ಇವರು ಪ್ರಕಾಶಿಸುತ್ತಿದ್ದಾರೆ. ಮಂಗಳೂರಿನ ‘ಕರಾವಳಿ ಅಲೆ' ಮತ್ತು ಕನ್ನಡ ಜನಾಂತರಂಗ ಇವುಗಳಲ್ಲಿ ಪ್ರಕಟವಾಗುವ ಲೇಖನಗಳು ಬಹುತೇಕ ಒಂದೇ ಆಗಿರುತ್ತವೆ.
ಕನ್ನಡ ಜನಾಂತರಂಗ ಪತ್ರಿಕೆಯು ವಾರ್ತಾ ಪತ್ರಿಕೆಯ ಆಕಾರದಲ್ಲಿದ್ದು ೮ ಪುಟಗಳನ್ನು ಹೊಂದಿದೆ. ಇದರಲ್ಲಿ ನಾಲ್ಕು ಪುಟ ವರ್ಣದಲ್ಲೂ, ಉಳಿದ ನಾಲ್ಕು ಪುಟಗಳು ಕಪ್ಪು ಬಿಳುಪಿನಲ್ಲೂ ಮುದ್ರಣವಾಗುತ್ತಿವೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ್ಟೋಬರ್ ೧೬, ೨೦೨೩ (ಸಂಪುಟ ೩೧, ಸಂಚಿಕೆ ೨೭) ರ ಸಂಚಿಕೆಯಾಗಿದೆ. ಪತ್ರಿಕೆಯಲ್ಲಿ ಬಹುತೇಕ ಸ್ಥಳೀಯ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ಉತ್ತರಕನ್ನಡ, ಶಿವಮೊಗ್ಗದ ಪ್ರಮುಖ ಸುದ್ದಿಗಳಿವೆ. ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಬೆಳಗಾವಿ, ಹಾಸನ, ಕೊಡಗು, ಕಾಸರಗೋಡು, ಮೈಸೂರು, ಬೆಂಗಳೂರು ಮುಂತಾದ ಊರುಗಳಲ್ಲಿ ಪ್ರಸಾರವಿದೆ. ಪತ್ರಿಕೆಯು ಕುಮಟಾದಲ್ಲಿ ಮುದ್ರಿತವಾಗುತ್ತಿದ್ದು, ಕಾರವಾರದಲ್ಲಿ ಕಚೇರಿಯನ್ನು ಹೊಂದಿದೆ. ರಮೇಶ್ ಪೂಜಾರಿಯವರು ಪತ್ರಿಕೆಯ ಸಂಪಾದಕ, ಮುದ್ರಕ ಮತ್ತು ಪ್ರಕಾಶಕರಾಗಿದ್ದಾರೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ. ೨.೦೦ ಆಗಿದ್ದು, ಚಂದಾ ವಿವರಗಳು ಲಭ್ಯವಿಲ್ಲ. ಪತ್ರಿಕೆಯಲ್ಲಿ ಜಾಹೀರಾತುಗಳಿಗೆ ಅವಕಾಶವಿದೆ. ಪತ್ರಿಕೆಯು ಈಗಲೂ ಪ್ರತೀ ದಿನ ಮುದ್ರಣವಾಗುತ್ತಿದೆ.