ಕನ್ನಡ ಪತ್ರಿಕಾ ಲೋಕ (ಭಾಗ ೧೩೩) - ಅಧ್ಯಾತ್ಮ ರಹಸ್ಯ

ಕನ್ನಡ ಪತ್ರಿಕಾ ಲೋಕ (ಭಾಗ ೧೩೩) - ಅಧ್ಯಾತ್ಮ ರಹಸ್ಯ

ಎಸ್. ಸತೀಶ್ ಕುಮಾರ್ ಕೋಟೇಶ್ವರ ಇವರ ಸಂಪಾದಕತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಹೊರಬರುತ್ತಿರುವ ಮಾಸ ಪತ್ರಿಕೆ “ಅಧ್ಯಾತ್ಮ ರಹಸ್ಯ". ಹೆಸರೇ ಹೇಳುವಂತೆ ಇದು ಆಧ್ಯಾತ್ಮಿಕ ಬರಹಗಳಿಗೆ ಮೀಸಲಾದ ಪತ್ರಿಕೆ. ಪತ್ರಿಕೆಯ ಆಕಾರ ಟ್ಯಾಬಲಾಯ್ಡ್ ಆಗಿದ್ದು ೧೬ ವರ್ಣರಂಜಿತ ಪುಟಗಳನ್ನು ಒಳಗೊಂಡಿದೆ. ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ಅಕ್ಟೋಬರ್ ೨೦೨೩ರ ಸಂಚಿಕೆ. 

ಈ ಸಂಚಿಕೆಯಲ್ಲಿ ಉಚ್ಚಿಲ ದಸರಾ ಬಗ್ಗೆ ಸಮಗ್ರ ಮಾಹಿತಿ, ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಜನ್ಮದಿನದ ಬಗ್ಗೆ, ಗಣೇಶೋತ್ಸವ ಸಂಭ್ರಮ ಮುಂತಾದ ವಿಷಯಗಳ ಬಗ್ಗೆ ಲೇಖನವಿದೆ.  ಸಂಪಾದಕರಾದ ಸತೀಶ್ ಕುಮಾರ್ ಅವರು ತಮ್ಮ ಸಂಪಾದಕೀಯದಲ್ಲಿ ‘ಅಧ್ಯಾತ್ಮ ಸಮಾಜಕ್ಕೆ ಮತ್ತಷ್ಟು ಗಟ್ಟಿ ಧ್ವನಿಯಾಗಬೇಕು' ಎನ್ನುವ ಲೇಖನ ಬರೆದಿದ್ದಾರೆ. ಇದರೊಂದಿಗೆ ಉಡುಪಿಯ ಅದ್ದೂರಿ ಹಿಂದೂ ಸಮಾಜೋತ್ಸವ, ದಾನ ಧರ್ಮದ ಧರ್ಮಸ್ಥಳ, ಶಿರೂರು ಮೂಲ ಮಠದಲ್ಲಿ ನಡೆದ ರೋಚಕ ಕಥೆ ಮೊದಲಾದ ಬರಹಗಳಿವೆ. ಪತ್ರಿಕೆಯಲ್ಲಿ ಹಲವಾರು ಜಾಹೀರಾತುಗಳಿವೆ.

ಅಧ್ಯಾತ್ಮ ರಹಸ್ಯ ಪತ್ರಿಕೆಯು ಉಡುಪಿ ಜಿಲ್ಲೆಯ ಕೋಟೇಶ್ವರದಲ್ಲಿ ಕಚೇರಿಯನ್ನು ಹೊಂದಿದ್ದು, ಮಂಗಳೂರಿನ ಯೆಯ್ಯಾಡಿಯ ದಿಗಂತ ಮುದ್ರಣದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ ೨೫.೦೦ ಆಗಿದ್ದು, ವಾರ್ಷಿಕ ಚಂದಾ ರೂ. ೨೦೦.೦೦ ಹಾಗೂ ಅಜೀವ ಸದಸ್ಯತ್ವ ರೂ. ೩೦೦೦.೦೦ ಆಗಿರುತ್ತದೆ. ಪತ್ರಿಕೆಯು ಈಗಲೂ ಕ್ಲಪ್ತ ಕಾಲಕ್ಕೆ ಮುದ್ರಿತವಾಗಿ ಮಾರುಕಟ್ಟೆಗೆ ಬರುತ್ತಿದೆ ಎಂಬ ಮಾಹಿತಿ ಇದೆ.