ಕನ್ನಡ ಪತ್ರಿಕಾ ಲೋಕ (ಭಾಗ ೧೩೪) - ಕೃಷಿ ಬಿಂಬ ಪತ್ರಿಕೆ
ಕೃಷಿಕರಲ್ಲಿ ಹೊಸ ಹೊಸ ವಿಚಾರಗಳ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಕಳೆದ ಎರಡು ದಶಕಗಳಿಂದ ಹೊರ ಬರುತ್ತಿರುವ ಮಾಸ ಪತ್ರಿಕೆ “ಕೃಷಿ ಬಿಂಬ ಪತ್ರಿಕೆ". ಪತ್ರಿಕೆಯ ಆಕಾರ ಸುಧಾ/ತರಂಗ ಗಾತ್ರವಾಗಿದ್ದು ೫೨ ಪುಟಗಳನ್ನು ಹೊಂದಿದೆ. ರಕ್ಷಾ ಪುಟಗಳು (೪) ವರ್ಣದಲ್ಲೂ, ಒಳಪುಟಗಳು ಕಪ್ಪು ಬಿಳುಪು ಮುದ್ರಣವಾಗುತ್ತಿದೆ. ಹಿರಿಯ ಪತ್ರಕರ್ತರಾದ ರಾಧಾಕೃಷ್ಣ ತೊಡಿಕಾನ ಅವರು ಈ ಪತ್ರಿಕೆಯ ಸಂಪಾದಕರು. ಕೃಷಿ ಬಿಂಬ ಪ್ರಾರಂಭಿಸುವುದಕ್ಕೂ ಮೊದಲು ಇವರು “ಜನ ಬಿಂಬ" ಎನ್ನುವ ತಾಲೂಕು ಮಟ್ಟದ ಪತ್ರಿಕೆಯನ್ನು ಹುಟ್ಟುಹಾಕಿದ್ದರು. ಸುಮಾರು ಎರಡು ದಶಕಗಳ ಕಾಲ ಆ ಪತ್ರಿಕೆಯನ್ನು ನಡೆಸಿ ನಂತರ ಆರ್ಥಿಕ ಸಮಸ್ಯೆಗಳ ಕಾರಣದಿಂದ ಅದನ್ನು ಮಾರಿದ್ದರು.
ನಮ್ಮ ಸಂಗ್ರಹದಲ್ಲಿರುವ ಕೃಷಿ ಬಿಂಬ ಮೇ ೨೦೨೨ (ಸಂಪುಟ ೨೦, ಸಂಚಿಕೆ ೨) ರ ಸಂಚಿಕೆಯಾಗಿದೆ. ಈ ಸಂಚಿಕೆಯ ಮುಖಪುಟ ಲೇಖನವಾಗಿ ‘ಕೋಟೆ ನಾಡಿನಲ್ಲಿ ಗಟ್ಟಿ ನೆಲೆ ಕಂಡುಕೊಳ್ಳುತ್ತಿದೆ ಸೇಬು' ಎನ್ನುವ ಬರಹ ಇದೆ. ಉಳಿದಂತೆ ಭತ್ತದ ಬೇಸಾಯದಲ್ಲಿ ಡ್ರಮ್ ಸೀಡರ್, ಬಯಲು ಭೂಮಿಗೆ ಹಸಿರು ಹೊದಿಕೆ, ಸೂರ್ಯಕಾಂತಿಯ ಉತ್ಪಾದನಾ ತಾಂತ್ರಿಕತೆಗಳು, ಕೆನೆಭರಿತ ಹಾಲು, ರೈತರಿಗಿಲ್ಲ ಸೋಲು, ಬಿಸಿಲನಾಡಿನಲ್ಲಿ ಜೇನು ಕೃಷಿ, ಕೃಷಿಯಲ್ಲಿ ರೈತೋಪಯೋಗಿ ಆಪ್ ಗಳು, ಸೌರಶಕ್ತಿಚಾಲಿತ ರೊಟ್ಟಿ ತಯಾರಿಕಾ ಯಂತ್ರ, ಅಡಿಕೆ ಮತ್ತು ಗಿಡಮೂಲಿಕೆಗಳಿಂದ ಸೊಳ್ಳೆ ಬತ್ತಿ, ಎಲ್ಲುಂಟು ಈಗ ಸೋಗೆಯ ಛಾವಣಿ?, ನೇಪಿಯರ್ ಹುಲ್ಲು, ಬಾಸುಮತಿ ಅಕ್ಕಿ ಪರಿಮಳದ ಪಂಡನ್ ಸಸ್ಯ, ಗೆರಟೆಯಿಂದ ಅರಳಿದೆ ಅಲಂಕಾರಿಕ ವಸ್ತುಗಳು ಮುಂತಾದ ಮಾಹಿತಿಪೂರ್ಣ ಲೇಖನಗಳಿವೆ. ಪತ್ರಿಕೆಯಲ್ಲಿ ಜಾಹೀರಾತುಗಳಿಗೆ ಅವಕಾಶ ನೀಡಿದ್ದಾರೆ.
ಸಂಪಾದಕರಾದ ರಾಧಾಕೃಷ್ಣ ತೊಡಿಕಾನ ಇವರ ಜೊತೆಯಲ್ಲಿ ಸಹ ಸಂಪಾದಕರಾಗಿ ಡಾ. ವಿಜಯ ಕುಮಾರ್ ಎನ್, ಒಳಪುಟ ವಿನ್ಯಾಸಕರಾಗಿ ಪ್ರವೀಣ್ ಕುಮಾರ್ ಪಡು, ಮುಖಪುಟ ವಿನ್ಯಾಸಕರಾಗಿ ಚಂದ್ರನಾಥ ಬಜಗೋಳಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಪತ್ರಿಕೆಯ ಕಚೇರಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿದೆ. ಮುದ್ರಣಾಲಯದ ಬಗ್ಗೆ ಮಾಹಿತಿ ನೀಡಿಲ್ಲ. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ ೨೫.೦೦. ವಾರ್ಷಿಕ ಚಂದಾ ರೂ. ೩೦೦.೦೦ ಆಗಿರುತ್ತದೆ. ಕೃಷಿ ಬಿಂಬ ಪತ್ರಿಕೆಯು ಕೆಲವು ಕಾರಣಾಂತರಗಳಿಂದ ಎರಡು ತಿಂಗಳಿಗೊಮ್ಮೆ ಮಾರುಕಟ್ಟೆಗೆ ಬರುತ್ತಿತ್ತು. ಈಗ ಮತ್ತೆ ಕ್ಲಪ್ತಕಾಲಕ್ಕೆ ಮಾರುಕಟ್ಟೆಗೆ ಬರುತ್ತಿದೆ ಎನ್ನುವ ಬಗ್ಗೆ ಮಾಹಿತಿ ಇದೆ.