ಕನ್ನಡ ಪತ್ರಿಕಾ ಲೋಕ (ಭಾಗ ೧೩೫) - ಉಳುಮೆ

ಕನ್ನಡ ಪತ್ರಿಕಾ ಲೋಕ (ಭಾಗ ೧೩೫) - ಉಳುಮೆ

ಜಿ. ಸುಬ್ರಾಯ ಭಟ್ ಬಕ್ಕಳ ಅವರ "ಉಳುಮೆ" 

"ಉಳುಮೆ", ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಪ್ರಕಟವಾಗುತ್ತಿದ್ದ ಸಾಹಿತ್ಯ, ಸಂಸ್ಕೃತಿ, ಕಲೆಗೆ ಸಂಬಂಧಿಸಿದ ಮಾಸಪತ್ರಿಕೆ. ಹಿರಿಯ ಪತ್ರಕರ್ತರೂ, ಸಾಹಿತಿಗಳೂ ಆಗಿರುವ ಜಿ. ಸುಬ್ರಾಯ ಭಟ್ ಬಕ್ಕಳ ಅವರು ಉಳುಮೆಯ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರು. 2006, ಡಿಸೆಂಬರ್ ತಿಂಗಳ ಸಂಚಿಕೆಯೊಂದಿಗೆ ಆರಂಭವಾದ ಉಳುಮೆ, ಮೂರು ವರ್ಷಗಳ ಕಾಲ ನಿರಂತರವಾಗಿ ಪ್ರಕಟಗೊಂಡು 2009ರಲ್ಲಿ ಪ್ರಕಟಣೆ ಸ್ಥಗಿತಗೊಳಿಸಿತು.

ಒಂದೊಂದು ತಿಂಗಳ ಸಂಚಿಕೆಯ ನಿರ್ವಹಣೆಯನ್ನು ಒಬ್ಬೊಬ್ಬರು ಹಿರಿಯ ಸಾಹಿತಿ, ಬರೆಹಗಾರರು ನಿರ್ವಹಿಸುತ್ತಿದ್ದುದು ಈ ಮಾಸಪತ್ರಿಕೆಯ ವಿಶೇಷತೆಯಾಗಿತ್ತು. ಸುಮಂಗಲಾ ಹೊನ್ನೆಕೊಪ್ಪ ಪತ್ರಿಕೆಯ ಪುಟ ವಿನ್ಯಾಸ ಮಾಡುತ್ತಿದ್ದರು. ಜಿ. ಎಂ. ಹೆಗಡೆ, ಪ್ರಕಾಶ ಬಕ್ಕಳ, ಜಿ. ಎಂ. ಬೊಮ್ನಳ್ಳಿ ಮುಂತಾದವರು ರಚಿಸಿದ ಕಥೆ, ಕವನ, ಲೇಖನಕ್ಕೆ ಪೂರಕವಾದ ರೇಖಾಚಿತ್ರಗಳು ಪತ್ರಿಕೆಯನ್ನು ಅಲಂಕರಿಸುತ್ತಿದ್ದವು. 100 + 4 ಪುಟಗಳ " ಉಳುಮೆ"ಯ ಬಿಡಿ ಸಂಚಿಕೆಯ ಬೆಲೆ 15 ರೂಪಾಯಿಗಳಾಗಿತ್ತು. ಜಿ. ಸುಬ್ರಾಯ ಭಟ್ ಬಕ್ಕಳ ಅವರು "ಉದ್ಯಮದರ್ಶಿ" ಎಂಬ  ಮಾಸ ಪತ್ರಿಕೆಯನ್ನೂ ದಶಕಗಳ ಕಾಲ ನಡೆಸಿದವರು.

~ ಶ್ರೀರಾಮ ದಿವಾಣ, ಉಡುಪಿ