ಕನ್ನಡ ಪತ್ರಿಕಾ ಲೋಕ (ಭಾಗ ೧೩೭) - ಅಲ್ ಅನ್ಸಾರ್

ಕನ್ನಡ ಪತ್ರಿಕಾ ಲೋಕ (ಭಾಗ ೧೩೭) - ಅಲ್ ಅನ್ಸಾರ್

ಮುಸ್ಲಿಂ ಸಮಾಜದಲ್ಲಿ ‘ಅರಿವಿನ ಅಕ್ಷರ ಕ್ರಾಂತಿ’ ಯನ್ನು ಮೂಡಿಸುವ ಉದ್ದೇಶದಿಂದ ಕಳೆದ ೩೩ ವರ್ಷಗಳಿಂದ ಪ್ರಕಟವಾಗುತ್ತಿರುವ ಸಾಪ್ತಾಹಿಕ ಪತ್ರಿಕೆ “ಅಲ್ ಅನ್ಸಾರ್". ಪತ್ರಿಕೆಯ ಆಕಾರ ಟ್ಯಾಬಲಾಯ್ಡ್ ಆಗಿದ್ದು, ಎಂಟು ಪುಟಗಳನ್ನು ಹೊಂದಿದೆ. ನಾಲ್ಕು ಪುಟಗಳು ವರ್ಣದಲ್ಲೂ, ನಾಲ್ಕು ಪುಟಗಳು ಏಕವರ್ಣದಲ್ಲೂ ಮುದ್ರಿತವಾಗಿವೆ. 

ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ನವೆಂಬರ್ ೨೦, ೨೦೨೩ (ಸಂಪುಟ: ೩೩, ಸಂಚಿಕೆ ೭) ರ ಸಂಚಿಕೆಯಾಗಿದೆ.  ಪತ್ರಿಕೆಯ ಮುಖಪುಟದಲ್ಲಿ ಖ್ಯಾತ ಉದ್ಯಮಿ ಡಾ. ತುಂಬೆ ಮೊಯ್ದೀನ್ ಅವರ ಉದ್ದಿಮೆಗಳ ಹಾಗೂ ಸಮಾಜಸೇವೆಗಳ ಪರಿಚಯ ಇದೆ. ಪತ್ರಿಕೆಯ ಸಂಪಾದಕರಾದ ಎಸ್ ಪಿ ಹಂಝ ಸಖಾಫಿ ಇವರು ತಮ್ಮ ಸಂಪಾದಕೀಯದಲ್ಲಿ 'ಸಮಾಜ ಸೇವೆಯನ್ನೇ ಉಸಿರಾಗಿಸಿದ ಸೂಫಿ ಸಂತ' ಎನ್ನುವ ಲೇಖನ ಬರೆದಿದ್ದಾರೆ. ಕರ್ಮಸರಣಿ, ಕರ್ಮಶಾಸ್ತ್ರ, ಹದೀಸ್, ಕೇಳಿ ನೋಡಿ, ಜ್ಞಾನ ಸಾಮ್ರಾಟರು, ಜ್ಞಾನ ದಾನ, ಮೊದಲಾದ ಸ್ಥಿರ ಅಂಕಣಗಳಿವೆ. ‘ನಮಾಝ್ ಮತ್ತು ಆರೋಗ್ಯ ವಿಜ್ಞಾನ ಎಂಬ ಮಾಹಿತಿ ಪೂರ್ಣ ಲೇಖನವಿದೆ. ಪ್ರತೀ ತಿಂಗಳಿನ ನಮಾಝ್ ನ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. 

ಇಕ್ಬಾಲ್ ಅಹಮ್ಮದ್ ಮುಯ್ಯುದ್ದೀನ್ ಅವರು ಪತ್ರಿಕೆಯ ಪ್ರಕಾಶಕರು ಮತ್ತು ಮುದ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆಯು ಸನಬಿಲ್ ಪ್ರಿಂಟಿಂಗ್ ಪ್ರೆಸ್, ಕುತ್ತಾರು, ಮಂಗಳೂರು ಇಲ್ಲಿ ಮುದ್ರಣವಾಗುತ್ತಿದೆ. ಪತ್ರಿಕೆಯಲ್ಲಿ ಕೆಲವೊಂದು ಜಾಹೀರಾತುಗಳಿವೆ. ಪತ್ರಿಕೆಯ ಮುಖಬೆಲೆ ರೂ. ೧೫.೦೦. ವಾರ್ಷಿಕ ಚಂದಾ ರೂ.೭೫೦.೦೦. ಗಲ್ಭ್ ರಾಷ್ಟ್ರಗಳಿಗೂ ಪತ್ರಿಕೆಯನ್ನು ಕಳಿಸಲಾಗುತ್ತದೆ. ‘ಅಲ್ ಅನ್ಸಾರ್' ಪತ್ರಿಕೆಯು ಈಗಲೂ ಕ್ಲಪ್ತ ಕಾಲದಲ್ಲಿ ಮುದ್ರಿತವಾಗಿ ಮಾರುಕಟ್ಟೆಗೆ ಬರುತ್ತಿದೆ.