ಕನ್ನಡ ಪತ್ರಿಕಾ ಲೋಕ (ಭಾಗ ೧೩೯) - ಪ್ರತಿನಿಧಿ
ಕಳೆದ ಆರು ದಶಕಗಳಿಂದ ನಿರಂತರವಾಗಿ ಹೊರಬರುತ್ತಿರುವ ಕನ್ನಡ ದಿನ ಪತ್ರಿಕೆ ‘ಪ್ರತಿನಿಧಿ'. ಪತ್ರಿಕೆಯು ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರಸಾರವಿದೆ. ಪತ್ರಿಕೆಯ ಗಾತ್ರ ವಾರ್ತಾ ಪತ್ರಿಕೆಯದ್ದಾಗಿದ್ದು ೧೦ ಪುಟಗಳನ್ನು ಹೊಂದಿದೆ. ಎಲ್ಲಾ ಪುಟಗಳು ವರ್ಣದಲ್ಲಿ ಮುದ್ರಿತವಾಗಿದ್ದು ಸೊಗಸಾದ ವಿನ್ಯಾಸವನ್ನು ಹೊಂದಿದೆ.
ನಮ್ಮ ಸಂಗ್ರಹದಲ್ಲಿರುವ ಪತ್ರಿಕೆ ನವೆಂಬರ್ ೨೪, ೨೦೨೩ (ಸಂಫುಟ ೬೩, ಸಂಚಿಕೆ ೩೪೭) ರ ಸಂಚಿಕೆಯಾಗಿದ್ದು, ದಿನನಿತ್ಯದ ರಾಜಕೀಯ ಸುದ್ದಿಗಳು. ಸಾಂಸ್ಕೃತಿಕ ಸುದ್ದಿಗಳು, ಅಪರಾಧ, ಕ್ರೀಡೆ, ಸಿನೆಮಾ ಹಾಗೂ ಜಿಲ್ಲಾವಾರು ಸ್ಥಳೀಯ ಸುದ್ದಿಗಳನ್ನು ಹೊಂದಿದೆ. ‘ಮಂಟಪ’ ಎನ್ನುವ ಶಿರೋನಾಮೆಯನ್ನು ಹೊಂದಿರುವ ಪುಟದಲ್ಲಿ ಸಂಪಾದಕೀಯ, ಸಿನೆಮಾ ಸುದ್ದಿ, ಕೃಪಾಕರ ಸೇನಾನಿಯವರ ವನ್ಯಜೀವಿಗಳ ಬಗ್ಗೆ ಲೇಖನ, ಪುಟ್ಟ ಪುಟ್ಟ ಸುದ್ದಿಗಳು ಇವೆ. ಪತ್ರಿಕೆಯಲ್ಲಿ ಪದಬಂಧ, ಮಹಾಭಾರತದ ಕಥೆ, ಸನ್ನಿಧಾನ, ದಿನ ಭವಿಷ್ಯ ಮೊದಲಾದ ಸ್ಥಿರ ಅಂಕಣಗಳು ಇವೆ. ಜಾಹೀರಾತುಗಳಿಗೂ ಪತ್ರಿಕೆಯಲ್ಲಿ ಜಾಗವಿದೆ.
ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಸಿ.ಕೆ.ಮಹೇಂದ್ರ, ಮುದ್ರಕ, ಪ್ರಕಾಶಕ ಹಾಗೂ ಸಂಪಾದಕರಾಗಿ ನಾರಾಯಣ ಇವರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ನವ ಮಾಧ್ಯಮ ಪ್ರೈ. ಲಿ. ಸಂಸ್ಥೆಯು ‘ಪ್ರತಿನಿಧಿ' ಪತ್ರಿಕೆಯ ಮಾಲೀಕತ್ವವನ್ನು ಹೊಂದಿದೆ. ಪತ್ರಿಕೆಯು ಮೆಟ್ರೋಪಾಲಿಟನ್ ಮೀಡಿಯಾ ಕಂಪೆನಿ ಲಿ, ಮೈಸೂರು ಇಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯ ಪ್ರಧಾನ ಕಚೇರಿಯು ಮೈಸೂರು ಜಿಲ್ಲೆಯ ಕುವೆಂಪು ನಗರದಲ್ಲಿದೆ. ದಿವಂಗತ ಎಸ್ ಎಸ್ ಐಯಂಗಾರ್ ಇವರು ಪತ್ರಿಕೆಯ ಸ್ಥಾಪಕ ಸಂಪಾದಕರು. ಪತ್ರಿಕೆಯ ಬಿಡಿ ಪ್ರತಿ ಬೆಲೆ ರೂ.೪.೦೦ ಆಗಿದ್ದು ಚಂದಾ ವಿವರದ ಬಗ್ಗೆ ಮಾಹಿತಿ ನೀಡಿಲ್ಲ. ಪತ್ರಿಕೆಯು ಈಗಲೂ ಪ್ರತಿ ದಿನ ಮುದ್ರಣಗೊಂಡು ಓದುಗರ ಕೈಸೇರುತ್ತಿದೆ.