ಕನ್ನಡ ಪತ್ರಿಕಾ ಲೋಕ (ಭಾಗ ೧೪೧) - ಚೇತನ

ಕನ್ನಡ ಪತ್ರಿಕಾ ಲೋಕ (ಭಾಗ ೧೪೧) - ಚೇತನ

ಶಂಕರ ಹೆಜ್ಮಾಡಿ ಅವರ "ಚೇತನ" ಮಾಸಿಕ. ಮೂಲತಹ ಉಡುಪಿ ಜಿಲ್ಲೆಯ ಹೆಜಮಾಡಿಯವರಾದ ಲೇಖಕ ಶಂಕರ ಹೆಜ್ಮಾಡಿಯವರು ಮುಂಬಯಿಯಲ್ಲಿ ವಾಸ್ತವ್ಯ ಮತ್ತು ಉದ್ಯೋಗಿಯಾಗಿದ್ದು, ಮುಂಬಯಿನಿಂದ ಪ್ರಕಟಿಸುತ್ತಿದ್ದ ಮಾಸಿಕವಾಗಿದೆ "ಚೇತನ".

1952ರಲ್ಲಿ ಆರಂಭವಾದ "ಚೇತನ" ಪುಸ್ತಕದ ರೂಪದಲ್ಲಿ  ಪ್ರಕಟವಾತ್ತಿತ್ತು. ಬಿಡಿ ಸಂಚಿಕೆಯ ಆಗಿನ ಬೆಲೆ ಎಂಟಾಣೆ. ಶಿವರಾಮ ಡಿ‌. ಕಾಂಚನ್ ಹಾಗೂ ಸಂಜೀವ ಬಿ. ಕುಂದರ್ ಅವರು ಚೇತನದ ಖಾಯಂ ಬರೆಹಗಾರರಾಗಿದ್ದರು. ಜೆ. ಸಿ. ಅಮೀನ್ ಮಾಲಕತ್ವದ ನ್ಯಾಷನಲ್ ಪ್ರಿಂಟರ್ಸ್ ಎಂಡ್ ಎಡ್ವಟೈಸರ್ಸ್ ನಲ್ಲಿ ಚೇತನ ಮುದ್ರಣವಾಗುತ್ತಿತ್ತು. ಜಿ. ಎಂ. ಪೈ  ಮುದ್ರಣಾಲಯದ ವ್ಯವಸ್ಥಾಪಕರಾಗಿದ್ದರು.

1953ರ ಮೇ ತಿಂಗಳ ಸಂಚಿಕೆ (ಸಂಪುಟ 2, ಸಂಚಿಕೆ 1)ಯನ್ನು 68 ಪುಟಗಳಲ್ಲಿ ವಾರ್ಷಿಕ ವಿಶೇಷ ಸಂಚಿಕೆಯನ್ನಾಗಿ ಪ್ರಕಟಿಸಲಾಗಿತ್ತು. ಸಂಗ್ರಹದಲ್ಲಿರುವ ಈ ಸಂಚಿಕೆಯಲ್ಲಿ ಬಿ. ಎ. ಮಾಸ್ಟರ್, ಡಾ. ಡಿ. ಎಸ್. ಕರ್ಕಿ, 'ಎಸ್ಬಿ', ಎಸ್. ವಾಯ್. ಶೀಲವಂತ ಧಾರವಾಡ, 'ನಿರಂಜನ', ಬಿ. ರಾಜೀವಿ ಮಂಗಳೂರು, ಬಿ. ಪದ್ಮಾ ಬಾಳಿಗ ಉಡುಪಿ, ಚಂದ್ರಶೇಖರ ಉಚ್ಚಿಲ, 'ಶ್ರೀರಾಕ', ರಾಧಾ ಚಂದಾವರ ಮುಂಬಯಿ, ಎಂ. ಪಿ. ಮಹಿಷಿ, ಶ್ರೀಮತಿ ಆನಂದಿ ಸದಾಶಿವ ರಾವ್ ಮಂಗಳೂರು ಮೊದಲಾದವರ ವೈವಿಧ್ಯಮಯ ಬರೆಹಗಳಿವೆ.

ಶೇಖರ ಹೆಜ್ಮಾಡಿಯವರು ತಮ್ಮ ಮೂರು ಪುಟಗಳ ಸಂಪಾದಕೀಯ ಬರೆಹದಲ್ಲಿ ಬರೆದ ಕೆಲವು ಸಾಲುಗಳು ಉಲ್ಲೇಖಾರ್ಹ. ಅವು ಈ ಕೆಳಗಿನಂತಿವೆ: "..... ಸರಕಾರ ಮತ್ತು ಜನರ ಅನ್ಯೋನ್ಯ ಸಹಕಾರವನ್ನು ವೃದ್ಧಿಗೊಳಿಸುವುದಕ್ಕೆ "ಚೇತನ" ನೆರವಾಗಲಿದೆ; ಸತ್ಯ ನ್ಯಾಯವನ್ನು ಎತ್ತಿ ಹಿಡಿಯಲು ಸಿದ್ಧವಿದೆ. ಅಸತ್ಯ, ಅನ್ಯಾಯವನ್ನು‌ ನಿರ್ಭಯ, ನಿರ್ದಾಕ್ಷಿಣ್ಯದಿಂದ ಖಂಡಿಸುವುದು "ಚೇತನ"ದ ಕರ್ತವ್ಯ. ಸ್ವಾತಂತ್ರ್ಯವನ್ನು ರಕ್ಷಿಸಿ, ಜನರ ಹಿತವನ್ನು ಸಾಧಿಸುವುದೇ " ಚೇತನ"ದ ಧರ್ಮ. "ಚೇತನ" ವು ಸ್ವತಂತ್ರ ಪತ್ರಿಕೆ. ಯಾರೊಡನೆಯೂ "ಚೇತನ"ವು ಸ್ಪರ್ಧೆಗಿಳಿದಿಲ್ಲ. ಎಲ್ಲ ಭಾಷೆಗಳೂ ವಿಫುಲವಾಗಿ ಬೆಳೆಯುತ್ತಿರಬೇಕು. ಇತರ ಸಾಹಿತ್ಯಗಳೊಡನೆ ಕನ್ನಡವೂ ಮುಂದುವರಿಯುತ್ತಿರಬೇಕೆಂಬುದೇ ನಮ್ಮ ಧ್ಯೇಯ. ಬಾಳಿ ಬದುಕಿಸುವ ಧೋರಣೆ ನಮ್ಮದು".

~ ಶ್ರೀರಾಮ ದಿವಾಣ