ಕನ್ನಡ ಪತ್ರಿಕಾ ಲೋಕ (ಭಾಗ ೧೪೩) - ಸತ್ಯಾರ್ಥಿ
ಎಂ. ಬಿ. ಮುತ್ತಣ್ಣ ಅವರ ಮಾಸಪತ್ರಿಕೆ "ಸತ್ಯಾರ್ಥಿ"
ಕೊಡಗು ಜಿಲ್ಲೆಯ ಪೊನ್ನಂಪೇಟೆಯಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ "ಸತ್ಯಾರ್ಥಿ". ಎಂ. ಬಿ. ಮುತ್ತಣ್ಣ ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿದ್ದ " ಸತ್ಯಾರ್ಥಿ", ಪೊನ್ನಂಪೇಟೆಯ "ಮುತ್ತು ಪ್ರೆಸ್" ನಲ್ಲಿ ಮುದ್ರಣವಾಗುತ್ತಿತ್ತು. 40 ಪುಟಗಳನ್ನು ಹೊಂದಿದ್ದ, ದ್ವಿವರ್ಣ ಮುಖಪುಟದೊಂದಿಗೆ ಬರುತ್ತಿದ್ದ ಪತ್ರಿಕೆಯಲ್ಲಿ ಕಥೆ, ಕವನ, ನಾಟಕ, ರಾಜಕೀಯ ವಿಶ್ಲೇಷಣೆಗಳ ಸಹಿತ ವೈವಿಧ್ಯಮಯ ಲೇಖನಗಳು ಪ್ರಕಟವಾಗುತ್ತಿದ್ದುವು.
1949ರ ಜನವರಿ ತಿಂಗಳಲ್ಲಿ ಆರಂಭವಾದ ಸತ್ಯಾರ್ಥಿ ಎಷ್ಟು ಕಾಲ ನಡೆಯಿತು ಎಂಬ ಮಾಹಿತಿ ಲಭ್ಯವಿಲ್ಲ. 1951ರ ಅಕ್ಟೋಬರ್ ತಿಂಗಳ ಸಂಚಿಕೆ ಈ ಲೇಖಕನ ಸಂಗ್ರಹದಲ್ಲಿದೆ. ಸೇವ ನಮಿರಾಜ ಮಲ್ಲ, ಜಿ. ಪಿ. ರಾಜರತ್ನಂ, ಯರ್ಮುಂಜ ರಾಮಚಂದ್ರ, ಕೃಷ್ಣ ಕೊಂದಲಕಾನ, ಯಂ. ಬಿ. ಮರಕಿಣಿ, ಮ. ರಾಜೀವ, ಜಿ. ಟಿ. ನಾರಾಯಣ ರಾವ್, ಜಗನ್ನಾಥ ಮೂಡ್ಲಕಟ್ಟೆ, ಅನಂತರಾಮ ಏತಡ್ಕ, ಎಂ. ಎಸ್. ಮೊಣ್ಣಪ್ಪ ಕಾನೂರು, "ಶ್ರೀನಾಸ್ತಿ" ಉಡುಪಿ, ಕೆ. ಎಂ. ರಾಜು, ವಿಚಿತ್ರ ಏತಡ್ಕ, ಎಂ. ಬಿ. ಶಿವರಾಯ ಪೆರಾಜೆ, "ಗೋರಾ", ವಿದ್ವಾನ್ ಅ. ಗೌ. ಕಿನ್ನಿಗೋಳಿ, ಟಿ. ಎಸ್. ಎನ್. ಮೊದಲಾದವರ ಬರೆಹಗಳು "ಸತ್ಯಾರ್ಥಿ"ಯಲ್ಲಿ ಪ್ರಕಟವಾಗುತ್ತಿತ್ತು.
~ ಶ್ರೀರಾಮ ದಿವಾಣ