ಕನ್ನಡ ಪತ್ರಿಕಾ ಲೋಕ (ಭಾಗ ೧೪೭) - ನೇತ್ರಾವತಿ ಪತ್ರಿಕೆ
ಎಂ. ಹರಿಶ್ಚಂದ್ರ ಹೆಗ್ಗಡೆಯವರ "ನೇತ್ರಾವತಿ ಪತ್ರಿಕೆ"
"ನೇತ್ರಾವತಿ ಪತ್ರಿಕೆ"ಯು ಕಾರ್ಕಳದಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ. ಕಾರ್ಕಳ ತಾಲೂಕಿನವರೇ ಆದ ಎಂ. ಹರಿಶ್ಚಂದ್ರ ಹೆಗ್ಗಡೆಯವರು ಇದರ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿದ್ದರು. 1990 ಮತ್ತು 2000ದ ದಶಕದಲ್ಲಿ ಸುಮಾರು 15ರಿಂದ 20 ವರ್ಷಗಳ ಕಾಲ ನೇತ್ರಾವತಿ ಪತ್ರಿಕೆ ಪ್ರಕಟವಾಗಿದೆ. ಸಂಪಾದಕರಾದ ಹರಿಶ್ಚಂದ್ರ ಹೆಗ್ಗಡೆಯವರ ಸ್ವಂತ ಮುದ್ರಣಾಲಯವಾಗಿದ್ದ 'ಪ್ರಮೋದ್ ಪ್ರಿಂಟರ್ಸ್' ನಲ್ಲಿ ಪತ್ರಿಕೆ ಮುದ್ರಣವಾಗುತ್ತಿತ್ತು. ಈ ಪ್ರಿಂಟಿಂಗ್ ಪ್ರಸ್ ಆಗ ಕಾರ್ಕಳದ ಮಾರ್ಕೆಟ್ ರಸ್ತೆಯಲ್ಲಿತ್ತು.
ಆರು ಪುಟಗಳಲ್ಲಿ ಟ್ಯಾಬ್ಲಾಯ್ಡ್ ಆಕಾರದಲ್ಲಿ ಮುದ್ರಣವಾಗುತ್ತಿದ್ದ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ 3.50 ಆಗಿತ್ತು. ಕಾರ್ಕಳ ತಾಲೂಕಿನ ಮೂಲೆಮೂಲೆಯ ರಹಸ್ಯ ಬೆಳವಣಿಗೆಗಳು, ಘಟನೆಗಳು, ಭ್ರಷ್ಟಾಚಾರ ಹಗರಣಗಳು, ನಾಗರಿಕರ ಸಮಸ್ಯೆಗಳು ಇತ್ಯಾದಿಗಳೆಲ್ಲವೂ ಆದ್ಯತೆಯಲ್ಲಿ ವಿಶೇಷ ವರದಿಗಳಾಗಿ, ತನಿಖಾ ವರದಿಗಳಾಗಿ "ನೇತ್ರಾವತಿ ಪತ್ರಿಕೆ"ಯಲ್ಲಿ ಪ್ರಕಟವಾಗುತ್ತಿದ್ದುವು. ಸಂಪಾದಕರಾದ ಹರಿಶ್ಚಂದ್ರ ಹೆಗ್ಗಡೆಯವರು "ಬೋರನ ರೈಲು" ಎಂಬ ಶೀರ್ಷಿಕೆಯಡಿಯಲ್ಲಿ ಬರೆಯುತ್ತಿದ್ದ ಬರೆಹ ಆಗ ಓದುಗರ ವಿಶೇಷ ಆಕರ್ಷಣೆಗೆ, ಕುತೂಹಲಕ್ಕೆ ಕಾರಣವಾಗಿ ಜನಪ್ರಿಯತೆ ಪಡೆದಿತ್ತು. ಪದ್ಮಾಕರ ಭಟ್ ಅವರೂ ಈ ಪತ್ರಿಕೆಯ ವರದಿಗಾರರಾಗಿದ್ದರು.
ಸಂಪಾದಕರಾಗಿದ್ದ ಎಂ. ಹರಿಶ್ಚಂದ್ರ ಹೆಗ್ಗಡೆಯವರೂ ಸ್ವತಃ ಪತ್ರಿಕೆಯ ವರದಿಗಾರರಾಗಿದ್ದರು. ಕಾರ್ಕಳದ ಬೋಳ ರಘುರಾಮ ಶೆಟ್ಟಿಯವರ "ಕೃಷಿಕರ ಸಂಘಟನೆ" ವಾರಪತ್ರಿಕೆ ಮತ್ತು ಮಂಗಳೂರಿನ ಶಂಕರ ಭಟ್ಟರ " ಅಮೃತ" ವಾರಪತ್ರಿಕೆಯ ವರದಿಗಾರರೂ, ಉಪಸಂಪಾದಕರೂ ಆಗಿದ್ದ ಹರಿಶ್ಚಂದ್ರ ಹೆಗ್ಗಡೆಯವರು, ಹೆಬ್ರಿಯಿಂದ ಪ್ರಕಟವಾಗುತ್ತಿದ್ದ "ಆಶಾಜ್ಯೋತಿ" ವಾರಪತ್ರಿಕೆಯನ್ನೂ (ಸಂಪಾದಕರು: ಡಾ. ಎಂ. ಎ. ಪದ್ಮನಾಭ) ಇದರ ಉಪ ಸಂಪಾದಕರಾಗಿ ಪೂರ್ಣ ಪ್ರಮಾಣದಲ್ಲಿ ರೂಪಿಸುತ್ತಿದ್ದವರಾಗಿದ್ದರು.
~ ಶ್ರೀರಾಮ ದಿವಾಣ