ಕನ್ನಡ ಪತ್ರಿಕಾ ಲೋಕ (ಭಾಗ ೧೫೦) - ರೈತವಾಣಿ

ಪಿ. ಡಿ' ಮೆಲ್ಲೊ, ನಂದಳಿಕೆ ವಿಠಲದಾಸ್ ಇವರ "ರೈತವಾಣಿ"
1950ರ ದಶಕದಲ್ಲಿ ಮಂಗಳೂರಿನಿಂದ ರೈತರ, ಕಾರ್ಮಿಕರ ಧ್ವನಿಯಾಗಿ ಪ್ರಕಟವಾಗುತ್ತಿದ್ದ ವಾರಪತ್ರಿಕೆ "ರೈತವಾಣಿ". "ರೈತವಾಣಿ" ಆರಂಭವಾದದ್ದು 1949ರ ಡಿಸೆಂಬರ್ ತಿಂಗಳಲ್ಲಿ. ಆಗ ಇದರ ಬಿಡಿ ಸಂಚಿಕೆಯ ಬೆಲೆ ಒಂದಾಣೆ. ಟ್ಯಾಬ್ಲಾಯ್ಡ್ ಮಾದರಿಯ ಆರು ಪುಟಗಳ ಪತ್ರಿಕೆ. (ನಂದಳಿಕೆ) ಎನ್. ವಿಠಲದಾಸ್ ಸಂಪಾದಕರಾಗಿದ್ದರು. ಪಿ. ಡಿ' ಮೆಲ್ಲೊ ಪ್ರಕಾಶಕರಾಗಿದ್ದರು. ಎಂ. ನಾಗೇಂದ್ರ ರಾವ್ ಮಾಲಕತ್ವದ ಶ್ರೀ ಶಾಂತಾ ಪ್ರಿಂಟಿಂಗ್ ವರ್ಕ್ಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿತ್ತು.
ನಂದಳಿಕೆ ವಿಠಲದಾಸ್ ಅವರು ಆಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜಾ ಸೋಶಲಿಸ್ಟ್ ಪಾರ್ಟಿ (ಪಿ ಎಸ್ ಪಿ)ಯ ಮುಂಚೂಣಿ ನಾಯಕರಾಗಿದ್ದರು. ಉಡುಪಿ ಕ್ಷೇತ್ರದಿಂದ ಟಿ. ಎ. ಪೈಗಳು ಚುನಾವಣೆಗೆ ನಿಂತು ಗೆದ್ದಾಗ, ಇವರೆದುರು ಪ್ರಜಾ ಸೋಶಲಿಸ್ಟ್ ಪಾರ್ಟಿ ಅಬ್ಯರ್ಥಿಯಾಗಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಇವರು ಸೋತಿದ್ದರು. ಪಿ. ಡಿ' ಮೆಲ್ಲೋ ಅವರು ಮುಂಬಯಿಯಲ್ಲಿ ಬಹು ಜನಪ್ರಿಯ ಕಾರ್ಮಿಕ ಹೋರಾಟದ ನಾಯಕರಾಗಿದ್ದರು. ಹೋರಾಟದ ಒಂದು ಹಂತದಲ್ಲಿ ಗಡಿಪಾರುಗೊಂಡು ಮಂಗಳೂರಿಗೆ ಬಂದವರು ಇಲ್ಲಿ, ಕರಾವಳಿ ಭಾಗದ ಬಹುಮುಖ್ಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರೂ, ಕಾರ್ಮಿಕ ನಾಯಕರೂ ಆದ ಅಮ್ಮೆಂಬಳ ಬಾಳಪ್ಪ ಅವರ ಜೊತೆಗೆ ಇಲ್ಲಿನ ಹೋರಾಟಕ್ಕೂ ಮಾರ್ಗದರ್ಶನ ಮಾಡಿದವರು. ಗಡಿಪಾರು ವಿರುದ್ಧ ನ್ಯಾಯಾಂಗ ಹೋರಾಟದಲ್ಲಿ ವಿಜಯಿಯಾದ ಪಿ. ಡಿ' ಮೆಲ್ಲೋ ಅವರು ಮತ್ತೆ ಮುಂಬಯಿಗೆ ಕಾರ್ಮಿಕ ನಾಯಕರಾಗಿ ತೆರಳುವ ಸಂದರ್ಭದಲ್ಲಿ ತಮ್ಮ ಶಿಷ್ಯನೂ, ಕಾರ್ಯಕರ್ತರೂ ಆಗಿದ್ದ ಜಾರ್ಜ್ ಫೆರ್ನಾಂಡಿಸ್ ಅವರನ್ನು ಮೆಲ್ಲೊ ಜೊತೆಗೆ ಮುಂಬಯಿಗೆ ಕಳಿಸಿಕೊಟ್ಟಿದ್ದರು. ಬಳಿಕ ಮುಂಬಯಿಯಲ್ಲಿ ಜಾರ್ಜ್ ಫೆರ್ನಾಂಡಿಸ್ ಅವರು ಕಾರ್ಮಿಕ ಹೋರಾಟಗಾರರಾಗಿ ಮೆಲ್ಲೊ ಅವರೊಂದಿಗೆ ಗುರುತಿಸಿಕೊಂಡು ಜನಪ್ರಿಯರಾಗಿದ್ದರು.
ಪಿ. ಡಿ. ಮೆಲ್ಲೋ ಅವರು ಮಂಗಳೂರಿನಿಂದ ಮುಂಬಯಿಗೆ ಹೋದ ಬಳಿಕ "ರೈತವಾಣಿ" ಆರಂಭಿಸಿದ್ದರು. ಮುಂಬಯಿಯ ಫ್ರೆರಿ ರೋಡ್ ನಲ್ಲಿದ್ದ ಮೆಲ್ಲೋ ಅವರ ಕಚೇರಿಯೇ ಆಗ ರೈತವಾಣಿಯ ಮುಂಬಯಿ ಕಚೇರಿಯಾಗಿತ್ತು. ಸಂಪಾದಕೀಯ ಕಚೇರಿ ಮಂಗಳೂರಿನ ಕಂಕನಾಡಿಯಲ್ಲಿತ್ತು. ಜಾರ್ಜ್ ಫೆರ್ನಾಂಡಿಸ್ ಅವರೂ "ರೈತವಾಣಿ" ಗೆ ಆಗಾಗ ಲೇಖನಗಳನ್ನು ಬರೆದುಕೊಡುತ್ತಿದ್ದರು.
"ರೈತವಾಣಿ" ರೈತರು, ವಿವಿಧ ವರ್ಗಗಳ ಕಾರ್ಮಿಕರ ಪರವಾಗಿ ನಿರಂತರವಾಗಿ ಧ್ವನಿ ಎತ್ತುವ ಪತ್ರಿಕೆಯಾಗಿತ್ತು. ರಾಜಕೀಯ ಲೇಖನಗಳು, ವಿಶ್ಲೇಷಣೆ, ಟೀಕೆ ಟಿಪ್ಪಣಿಗಳು, ಪ್ರಜಾ ಸೋಶಲಿಸ್ಟ್ ಪಾರ್ಟಿಯ ಸಭೆಗಳ ವರದಿಗಳು, ನಾಯಕರ ಸಮಗ್ರ ಭಾಷಣಗಳು, ಕೃಷಿ ಮಾಹಿತಿಗಳು, ಸಣ್ಣ ಕಥೆಗಳೂ ಪ್ರಕಟವಾಗುತ್ತಿತ್ತು. ಅಮ್ಮೆಂಬಳ ಬಾಳಪ್ಪ, ಎಂ. ಜೆ. ಹೆಗ್ಡೆ (ಜಗನ್ನಾಥ ಮೂಡ್ಲಕಟ್ಟೆ), ಡಾ. ಸಂಜೀವನಾಥ ಐಕಳ, ಮ. ರಾಜೀವ, ಅ. ಕುಮಾರ, ಎನ್. ಎಮ್. ರಾಮಕೃಷ್ಣ ರಾವ್, ಎಸ್. ರಾಘವೇಂದ್ರ ರಾವ್, ಅ. ಕ. ಸಂಕಪ್ಪ ರೈ ಮೊದಲಾದವರು "ರೈತವಾಣಿ"ಗೆ ಬರೆಯುತ್ತಿದ್ದರು. " ರೈತವಾಣಿ" ಎಷ್ಟು ವರ್ಷ ಕಾಲ ನಡೆಯಿತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
~ ಶ್ರೀರಾಮ ದಿವಾಣ