ಕನ್ನಡ ಪತ್ರಿಕಾ ಲೋಕ (ಭಾಗ ೧೫೩) - ಮಿತ್ರ
ಅಮ್ಮೆಂಬಳ ಬಾಳಪ್ಪರ "ಮಿತ್ರ" ಸಾಪ್ತಾಹಿಕ
ಅಮ್ಮೆಂಬಳ ಬಾಳಪ್ಪ ಅವರು 1952ರಲ್ಲಿ ಒಂದು ವರ್ಷ ಕಾಲ ನಡೆಸಿದ ಸಾಪ್ತಾಹಿಕ "ಮಿತ್ರ". ನಾಲ್ಕು ಪುಟಗಳ "ಮಿತ್ರ" ಟ್ಯಾಬ್ಲಾಯ್ಡ್ ರೂಪದಲ್ಲಿ ಬರುತ್ತಿತ್ತು. ಅಮ್ಮೆಂಬಳ ಬಾಳಪ್ಪರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ "ಮಿತ್ರ"ವನ್ನು ಕೆ. ಮಂಗೇಶ್ ರಾವ್ ಅವರ ಜ್ಯೋತಿ ಪ್ರಿಂಟಿಂಗ್ & ಪಬ್ಲಿಷಿಂಗ್ ಹೌಸ್ ನಲ್ಲಿ ಮುದ್ರಿಸಲಾಗುತ್ತಿತ್ತು. ಟಿ. ವಿಲ್ಸನ್ ಅವರು ಪ್ರಕಾಶಕರಾಗಿದ್ದರು.
ಅಮ್ಮೆಂಬಳ ಬಾಳಪ್ಪ ಅವರು ಬೋಳೂರಿನ ಬಾಡಿಗೆ ಮನೆಯಲ್ಲಿದ್ದಾಗ ಈ ಪತ್ರಿಕೆಯನ್ನು ಹೊರತರುವ ಸಾಹಸವನ್ನು ಮಾಡಿದ್ದಾಗಿದೆ. 1970ರಲ್ಲಿ " ತುಳು ಸಿರಿ" ಎಂಬ ಮೊತ್ತ ಮೊದಲ ತುಳು ಮಾಸಿಕವನ್ನು ಹೊರತಂದ ಕೀರ್ತಿಯೂ ಇವರದಾಗಿದೆ. ಈ ಮಾಸಿಕವನ್ನು ಬಾಳಪ್ಪರು ಮೂರು ವರ್ಷ ಕಾಲ ನಡೆಸಿದ್ದರು. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾಗಿ, ಕಾರ್ಮಿಕ ಚಳುವಳಿಗಾರರಾಗಿ, ಸೋಶಲಿಸ್ಟ್ ಸಮಾಜವಾದಿ ಪಕ್ಷದ ನಾಯಕರಾಗಿ ಅಮ್ಮೆಂಬಳ ಬಾಳಪ್ಪರು ಜನಜನಿತರಾಗಿದ್ದರು.
1950 - 60ರ ದಶಕದ ಪ್ರಸಿದ್ಧ ಬರೆಹಗಾರರಾದ ಮ. ರಾಜೀವ ಅವರ "ಕೊನೆಯ ಕಾಲಂ" ಪ್ರತೀ ಸಂಚಿಕೆಯ ಕೊನೆಯ ಪುಟದಲ್ಲಿ ಪ್ರಕಟವಾಗುತ್ತಿತ್ತು. ಅಮ್ಮೆಂಬಳ ಆನಂದ ಅವರು "ನೇಗಿಲ ಯೋಗಿ" ಎಂಬ ಹೆಸರಲ್ಲಿ ಪ್ರತೀ ವಾರವೂ "ಹಳ್ಳಿಯ ನೋಟಗಳು" ಎಂಬ ಶಿರ್ಷಿಕೆಯಡಿಯಲ್ಲಿ ಲೇಖನ ಬರೆಯುತ್ತಿದ್ದರು. ಡಾ. ಸಂಜೀವನಾಥ ಐಕಳ, ಜಗನ್ನಾಥ ಮೂಡ್ಲಕಟ್ಟೆ (ಎಂ. ಜೆ. ಹೆಗ್ಡೆ) ಸಹಿತ ಇನ್ನೂ ಕೆಲ ಮಂದಿ ಪ್ರಮುಖರು "ಮಿತ್ರ" ಕ್ಕೆ ಆಗಾಗ ಬರೆಯುತ್ತಿದ್ದರು.
ರಾಜಕೀಯ ಮತ್ತು ಕಾರ್ಮಿಕ ಚಳುವಳಿ ಸಂಬಂಧಿತ ವರದಿಗಳು, ರಾಜಕೀಯ, ಸಾಮಾಜಿಕ ವಿಷಯಗಳ ವಿಶ್ಲೇಷಣೆಗಳು, ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ವಿಷಯಗಳ ಅವಲೋಕನಗಳು, ವಿಮರ್ಶೆಗಳು, ನಾಗರಿಕ ಸಮಸ್ಯೆಗಳು ಇತ್ಯಾದಿಗಳು ಪತ್ರಿಕೆಯ ಆದ್ಯತೆಗಳಾಗಿದ್ದವು.
~ ಶ್ರೀರಾಮ ದಿವಾಣ
ಸೂಚನೆ: ‘ಮಿತ್ರ' ಒಂದು ಅಪರೂಪದ ಹಳೆಯ ಪತ್ರಿಕೆಯಾಗಿದ್ದು, ಇದರ ಮುಖ ಪುಟ ಸಮಯದ ಹೊಡೆತಕ್ಕೆ ಹರಿದುಹೋಗಿದೆ. ಈ ಕಾರಣದಿಂದ ನಮ್ಮಲ್ಲಿ ಉಳಿದ ಪತ್ರಿಕೆಯ ಭಾಗವನ್ನು ಪ್ರಕಟಿಸಿದ್ದೇವೆ. ಓದುಗರಲ್ಲಿ ಯಾರ ಬಳಿಯಾದರೂ ಈ ಪತ್ರಿಕೆಯ ಪ್ರತಿ ಇದ್ದರೆ ನಮಗೆ ಪ್ರತಿಕ್ರಿಯೆಯಲ್ಲಿ ತಿಳಿಸಬೇಕಾಗಿ ಕೋರಿಕೆ