ಕನ್ನಡ ಪತ್ರಿಕಾ ಲೋಕ (ಭಾಗ ೧೫೪) - ವಿಚಾರವಾಣಿ

ಕನ್ನಡ ಪತ್ರಿಕಾ ಲೋಕ (ಭಾಗ ೧೫೪) - ವಿಚಾರವಾಣಿ

ಕೋಟ ರಾಮಕೃಷ್ಣ ಕಾರಂತರ "ವಿಚಾರವಾಣಿ"

ಕೋಟ ರಾಮಕೃಷ್ಣ ಕಾರಂತರು ಆರಂಭಿಸಿದ, ಮಂಗಳೂರಿನಲ್ಲಿ ಮುದ್ರಿಸಿ ಹೊರತರುತ್ತಿದ್ದ ವಾರಪತ್ರಿಕೆ "ವಿಚಾರವಾಣಿ". ಕೋಟ ರಾಮಕೃಷ್ಣ ಕಾರಂತರು ಕೆ. ಆರ್. ಕಾರಂತರೆಂದೇ ಪ್ರಸಿದ್ಧರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ|| ಕೋಟ ಶಿವರಾಮ ಕಾರಂತರ ಅಣ್ಣನಾದ ಕೋಟ ರಾಮಕೃಷ್ಣ ಕಾರಂತರು, 1952ರಲ್ಲಿ ಆಗಿನ ಮದ್ರಾಸ್ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಶಾಸಕರಾಗಿ, ಟಿ. ಪ್ರಕಾಶಂ ನೇತೃತ್ವದ ಸರಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದವರು.

ಶಿವರಾಮ ಕಾರಂತರೂ ಆರಂಭದಲ್ಲಿ ಈ ಪತ್ರಿಕೆಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪತ್ರಿಕೆ ಆರಂಭವಾದ ಕೆಲ ಕಾಲದ ಬಳಿಕ ಕೆಲ ವರ್ಷಗಳ ಕಾಲ ಸೇವ ನಮಿರಾಜ ಮಲ್ಲ (ಪ್ರಸಿದ್ಧ ಬರೆಹಗಾರರು ಹಾಗೂ ನ್ಯಾಯಾಧೀಶರಾಗಿದ್ದವರು) ಹಾಗೂ ಆನಂತರ ಮಂಗಳೂರು ಕುದ್ರೋಳಿಯ ಜನಾರ್ದನ (ಸಿಂಡಿಕೇಟ್ ಬ್ಯಾಂಕ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ಆಗಿದ್ದವರು) ಅವರು "ವಿಚಾರವಾಣಿ" ಗೆ ಸಂಪಾದಕರಾಗಿದ್ದರು.

1950ರಲ್ಲಿ ಆರಂಭವಾದ "ವಿಚಾರವಾಣಿ"ಗೆ ಹಲವು ಪ್ರಸಿದ್ಧ ಬರೆಹಗಾರರು ಬರೆಯುತ್ತಿದ್ದರು. ರಾಜಕೀಯ, ಸಾಮಾಜಿಕ, ಸಾಹಿತ್ಯಿಕ ಬರೆಹಗಳು ಪ್ರಕಟವಾಗುತ್ತಿದ್ದುವು.

~ ಶ್ರೀರಾಮ ದಿವಾಣ