ಕನ್ನಡ ಪತ್ರಿಕಾ ಲೋಕ (ಭಾಗ ೧೫೫) - ವಿಮರ್ಶಕ
ನಂದಳಿಕೆ ವಿಠಲದಾಸ್ ಅವರ "ವಿಮರ್ಶಕ"
1950ರ ದಶಕದಲ್ಲಿ ಉಡುಪಿಯಿಂದ ಪ್ರಕಟವಾಗುತ್ತಿದ್ದ ರಾಜಕೀಯ ಮಾಸಪತ್ರಿಕೆ "ವಿಮರ್ಶಕ". 1950ರ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾದ "ವಿಮರ್ಶಕ"ದ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು ಎನ್. ವಿಠಲದಾಸ್ (ನಂದಳಿಕೆ). ಎಸ್. ಎಲ್. ನಾರಾಯಣ ಭಟ್ ಅವರ ಉಡುಪಿಯ ಕಲ್ಯಾಣಪುರ್ ಪ್ರೆಸ್ ಲಿ. ನಲ್ಲಿ ಪತ್ರಿಕೆ ಮುದ್ರಣವಾಗುತ್ತಿತ್ತು.
ಪ್ರಜಾ ಸೋಶಲಿಸ್ಟ್ ಪಾರ್ಟಿ ಮತ್ತು ಉಡುಪಿ ತಾಲೂಕು ರೈತ ಸಂಘದ ನಾಯಕರಾಗಿದ್ದ ನಂದಳಿಕೆ ವಿಠಲದಾಸ್ ಅವರು ಒಂದು ಬಾರಿ ಚುನಾವಣೆಗೂ ಸ್ಪರ್ಧಿಸಿದ್ದರು. "ರಾಜಕೀಯ" ಮತ್ತು "ರೈತವಾಣಿ" ಎಂಬ ಎರಡು ಮಾಸ ಪತ್ರಿಕೆಗಳನ್ನೂ ನಡೆಸುತ್ತಿದ್ದರು.
32 ಪುಟಗಳ "ವಿಮರ್ಶಕ" ಪುಸ್ತಕ ರೂಪದಲ್ಲಿ ಬರುತ್ತಿತ್ತು. ಬಿಡಿ ಸಂಚಿಕೆಯ ಬೆಲೆ ನಾಲ್ಕಾಣೆ ಆಗಿತ್ತು. ವಾರ್ಷಿಕ ಚಂದಾ ಮೊತ್ತ ಮೂರು ರೂಪಾಯಿ. ಪತ್ರಿಕೆಯಲ್ಲಿ ರಾಜಕೀಯ ವಿಶ್ಲೇಷಣೆ, ಅವಲೋಕನ, ಸುದ್ಧಿಗಳಿಗೆ ಆದ್ಯತೆ ನೀಡಲಾಗುತ್ತಿತ್ತಾದರೂ ಕಥೆ, ಕವನಗಳ ಸಹಿತ ಇತರ ವೈವಿಧ್ಯಮಯ ಬೃಹಗಳೂ ಪ್ರಕಟವಾಗುತ್ತಿದ್ದುವು.
ಉಡುಪಿ ಸಂಸ್ಕೃತ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಕೌಲಗಿ ಶೇಷಾಚಾರ್ಯ, ಪ್ರಸಿದ್ಧ ಬರೆಹಗಾರರಾದ ಮ. ರಾಜೀವ, ವಿ. ಶ್ರೀನಿವಾಸ ಸೆಟ್ಟಿ, ನಾರಾಯಣ ಮಯ್ಯ ಉಡುಪಿ, 'ಆಜಾದ್', ಕು. ಶಿ. ಹರಿದಾಸ ಭಟ್ಟ, ಜಿ. ಎಂ. ಸೆಟ್ಟಿ, ಬಸವರಾಜ ಕಟ್ಟೀಮನಿ ಧಾರವಾಡ, ಎಂ. ಮೋಹನ್, ವಿದ್ವಾನ್ ಧರ್ಮಪಾಲ ಜೆ., ಹ. ಸ. ಯೋಗೀಶ ದಾವಣಗೆರೆ, ರಾಮನಂದನ ಮಿಶ್ರಾ, ಬಿ. ವಿ. ಮೂರ್ತಿ, ಮಹಾಬಲೇಶ್ವರ ಹೆಗಡೆ ಸಿದ್ಧಾಪುರ, 'ಅಜಾತಶತ್ರು', 'ಎಸ್ಸೆಲ್', ಕಾರ್ತಿಕೇಯ, ಕೆ. ದೊಡ್ಡಣ್ಣ ಶೆಟ್ಟಿ, ಕೆ. ಜಿ. ಶಿವಸ್ವಾಮಿ, ಖಾದ್ರಿ ಶಾಮಣ್ಣ, ದಿನಕರ ದೇಸಾಯಿ, ಬಿ. ಯೋಗೀಶ್ವರ ಹೊಳ್ಳ, ಎಂ. ಜೆ. ಹೆಗ್ಡೆ, ಎಂ. ವಿ. ಹೆಗ್ಡೆ, ಕಯ್ಯಾರ ಕಿಞ್ಞಣ್ಣ ರೈ, ಮ. ಗ. ಶೆಟ್ಟಿ, ಎಸ್. ಎಲ್. ನಾರಾಯಣ ಭಟ್ಟ, ಡಾ. ಜಿ. ಡಿ. ಬೋಝ್ ಮೊದಲಾದ ಅನೇಕರು "ವಿಮರ್ಶಕ" ಕ್ಕೆ ಬರೆಯುತ್ತಿದ್ದರು.
~ ಶ್ರೀರಾಮ ದಿವಾಣ