ಕನ್ನಡ ಪತ್ರಿಕಾ ಲೋಕ (ಭಾಗ ೧೫೯) - ಮೀಡಿಯಾ ಟೈಮ್ಸ್

ಕನ್ನಡ ಪತ್ರಿಕಾ ಲೋಕ (ಭಾಗ ೧೫೯) - ಮೀಡಿಯಾ ಟೈಮ್ಸ್

ಪ್ರೊ. ಬಿ. ಎಂ. ಇಚ್ಲಂಗೋಡು ಅವರ "ಮೀಡಿಯಾ ಟೈಮ್ಸ್"

ಕವಿ, ಕಥೆಗಾರ, ಲೇಖಕ, ಅಧ್ಯಯನಕಾರ, ಸಂಶೋಧಕ, ಗ್ರಾಹಕ ಹಕ್ಕುಗಳ ಹೋರಾಟಗಾರರಾದ ಪ್ರೊ. ಬಿ. ಎಂ. ಇಚ್ಲಂಗೋಡು ಅವರು ಸುಮಾರು ಒಂದು ದಶಕ ಕಾಲ ನಿರಂತರವಾಗಿ ಮತ್ತು ಪ್ರತೀ ತಿಂಗಳೂ (ಮಾಸಿಕ) ನಿಗದಿತವಾಗಿ ಪ್ರಕಟಿಸಿದ ಪುಸ್ತಕ ಮಾಲಿಕೆ "ಮೀಡಿಯಾ ಟೈಮ್ಸ್". ಹತ್ತು ವರ್ಷಗಳ ಹಿಂದೆ ಆರಂಭಿಸಿದ "ಮೀಡಿಯಾ ಟೈಮ್ಸ್", ನ್ನು ಇಚ್ಲಂಗೋಡು ಅವರು ಕೆಲವು ತಿಂಗಳುಗಳ ಹಿಂದೆ ತಾವು ನಿಧನರಾಗುವವರೆಗೂ ನಡೆಸಿಕೊಂಡು ಬಂದಿದ್ದರು.

ಪ್ರೊ. ಬಿ. ಎಂ. ಇಚ್ಲಂಗೋಡು ಅವರೇ ಸಂಪಾದಕರು ಮತ್ತು ಪ್ರಕಾಶಕರಾಗಿದ್ದವರು. ಮಂಗಳೂರು ನಂದಿಗುಡ್ಡೆಯ ಮೀಡಿಯಾ ಟೈಮ್ಸ್ ಪಬ್ಲಿಕೇಶನ್ಸ್ ವತಿಯಿಂದ ಪ್ರಕಟವಾಗುತ್ತಿದ್ದ "ಮೀಡಿಯಾ ಟೈಮ್ಸ್", ಆರಂಭದ ಕೆಲವು ವರ್ಷ 25 ಪುಟಗಳಲ್ಲಿ ಮತ್ತು ಆನಂತರ 48 ಪುಟಗಳಲ್ಲಿ  ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿತ್ತು. 25 ಪುಟಗಳಿದ್ದಾಗ ಬಿಡಿ ಸಂಚಿಕೆಯ ಬೆಲೆ ಹತ್ತು ರೂಪಾಯಿಗಳಾಗಿತ್ತು. 48 ಪುಟಗಳಾದಾಗ ಬಿಡಿ ಸಂಚಿಕೆಯ ಬೆಲೆ ಐವತ್ತು ರೂಪಾಯಿಗಳಾಗಿತ್ತು. 

ಗ್ರಾಹಕರ ಹಕ್ಕುಗಳು, ಗ್ರಾಹಕ ವಿಚಾರಗಳಿಗೆ ಸಂಬಂಧಿಸಿದ  ನ್ಯಾಯಾಲಯಗಳ ಆದೇಶಗಳು, ಜನಜಾಗೃತಿ ಲೇಖನಗಳು, ಉತ್ತಮ ಆರೋಗ್ಯ ಮತ್ತು ಆಹಾರಕ್ಕೆ ಸಂಬಂಧಪಟ್ಟ ಬರೆಹಗಳು, ವಿವಿಧ ಕಾಯಿದೆಗಳು ಮತ್ತು ಕಾನೂನುಗಳ ಬಗ್ಗೆ ಮಾಹಿತಿ ಇತ್ಯಾದಿಗಳು ಮೀಡಿಯಾ ಟೈಮ್ಸ್ ನಲ್ಲಿ ಪ್ರಕಟವಾಗುತ್ತಿತ್ತು. ಮೀಡಿಯಾ ಟೈಮ್ಸ್ ನ ಪ್ರತೀ ಸಂಚಿಕೆಯೂ ಸಂಗ್ರಹಯೋಗ್ಯವಾಗಿದೆ.

~ ಶ್ರೀರಾಮ ದಿವಾಣ